Student Suicide: ಕಾಲೇಜ್ ಮಹಡಿಯಿಂದ ಹಾರಿ ವಿದ್ಯಾರ್ಥಿನಿ ಸೂಸೈಡ್! ರೊಚ್ಚಿಗೆದ್ದು ದಾಂಧಲೆ ನಡೆಸಿದ ಸ್ಟೂಡೆಂಟ್ಸ್
ಉಗಾಂಡಾ ವಿದ್ಯಾರ್ಥಿನಿ ಹಸೀನಾ ಆತ್ಮಹತ್ಯೆ ಅನುಮಾನಕ್ಕೆ ಕಾರಣವಾಗಿದೆ. ಆಕೆ 6ನೇ ಮಹಡಿಗೆ ರಾತ್ರಿ ಯಾಕೆ ಹೋದಳು, ಆತ್ಮಹತ್ಯೆಗೆ ಶರಣಾಗಿದ್ದು ಯಾಕೆ? ಅಥವಾ ಕಾಲು ಜಾರಿ ಬಿದ್ದಳೋ, ಬೇರೆ ಇನ್ನೇನು ಕಾರಣವಿದೆಯೇ ಅನ್ನೋ ಅನುಮಾನ ವ್ಯಕ್ತವಾಗಿದೆ.
ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿರುವ (Doddaballapur) ಗೀತಂ ಯೂನಿವರ್ಸಿಟಿ (Gitam University) ಮತ್ತೆ ಸುದ್ದಿಯಲ್ಲಿದೆ. ಕೆಲ ದಿನಗಳ ಹಿಂದಷ್ಟೇ ಇಲ್ಲಿ ಆಂಧ್ರ (Andhra) ಹಾಗೂ ಕರ್ನಾಟಕದ (Karnataka) ವಿದ್ಯಾರ್ಥಿಗಳು (Students) ಕಿತ್ತಾಡಿಕೊಂಡಿದ್ದರು. ಕ್ಷುಲ್ಲಕ ಕಾರಣಕ್ಕೆ ಕೈ-ಕೈ ಮಿಲಾಯಿಸಿ, ದಾಂಧಲೆ ಮಾಡಿದ್ದರು. ಇದೀಗ ಮತ್ತೊಮ್ಮೆ ಅದೇ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ದಾಂಧಲೆ ಮಾಡಿದ್ದಾರೆ. ಅದಕ್ಕೆ ಕಾರಣ ವಿದ್ಯಾರ್ಥಿನಿ ಆತ್ಮಹತ್ಯೆ (Student Suicide). ಹೌದು, ಅದೇ ಯೂನಿವರ್ಸಿಟಿಯಲ್ಲಿ ಓದುತ್ತಿದ್ದ ಉಗಾಂಡಾ (Uganda) ಮೂಲದ ವಿದ್ಯಾರ್ಥಿನಿಯೊಬ್ಬಳು ಯೂನಿವರ್ಸಿಟಿ ಕಟ್ಟಡದಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇದೀಗ ಕಾಲೇಜ್ನಲ್ಲಿ (College) ಪರಿಸ್ಥಿತಿ ಉದ್ವಿಗ್ನಗೊಂಡಿದೆ.
ಕಾಲೇಜ್ನಲ್ಲೇ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ನಾಗದೇನಹಳ್ಳಿಯಲ್ಲಿರುವ ಗೀತಂ ವಿವಿಯಲ್ಲಿ ನಿನ್ನೆ ರಾತ್ರಿ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಉಗಾಂಡಾ ಮೂಲದ 24 ವರ್ಷದ ವಿದ್ಯಾರ್ಥಿನಿ ಹಸೀನಾ ಎಂಬಾಕೆ ಸೂಸೈಡ್ ಮಾಡಿಕೊಂಡಿದ್ದಾಳೆ. ಅಂತಿಮ ವರ್ಷದ ಇಂಜಿನಿಯರಿಂಗ್ ಓದುತ್ತಿದ್ದ ಹಸೀನಾ, ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಗೀತಂ ವಿವಿ ಕಟ್ಟಡದ 6ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಆಸ್ಪತ್ರೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರು
ವಿದ್ಯಾರ್ಥಿನಿ ಹಸೀನಾ 6ನೇ ಮಹಡಿಯಿಂದ ಕೆಳಕ್ಕೆ ಬೀಳುತ್ತಿದ್ದಂತೆ ಅಲ್ಲಿದ್ದ ಸಿಬ್ಬಂದಿ ಅಲ್ಲಿಗೆ ಓಡಿ ಬಂದಿದ್ದಾರೆ. ವಿದ್ಯಾರ್ಥಿಗಳು, ಸಿಬ್ಬಂದಿ ಸೇರಿ ಆಕೆಯನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಆಸ್ಪತ್ರೆ ತಲುಪುವ ಮುನ್ನ, ಮಾರ್ಗಮಧ್ಯೆಯೇ ಹಸೀನಾ ಕೊನೆಯುಸಿರೆಳೆದಿದ್ದಾಳೆ.
ಉಗಾಂಡಾ ವಿದ್ಯಾರ್ಥಿನಿ ಹಸೀನಾ ಆತ್ಮಹತ್ಯೆ ಅನುಮಾನಕ್ಕೆ ಕಾರಣವಾಗಿದೆ. ಆಕೆ 6ನೇ ಮಹಡಿಗೆ ರಾತ್ರಿ ಯಾಕೆ ಹೋದಳು, ಆತ್ಮಹತ್ಯೆಗೆ ಶರಣಾಗಿದ್ದು ಯಾಕೆ? ಅಥವಾ ಕಾಲು ಜಾರಿ ಬಿದ್ದಳೋ, ಬೇರೆ ಇನ್ನೇನು ಕಾರಣವಿದೆಯೇ ಅನ್ನೋ ಅನುಮಾನ ವ್ಯಕ್ತವಾಗಿದೆ.
ವಿದ್ಯಾರ್ಥಿಗಳಿಂದ ಕಾಲೇಜ್ನಲ್ಲಿ ದಾಂಧಲೆ
ವಿದ್ಯಾರ್ಥಿನಿ ಹಸೀನಾ ಸಾವಿನಿಂದ ಅಲ್ಲಿನ ಕಾಲೇಜ್ ಹಾಗೂ ಹಾಗೂ ಹಾಸ್ಟೆಲ್ ವಿದ್ಯಾರ್ಥಿಗಳು ರೊಚ್ಚಿಗೆದ್ದಿದ್ದಾರೆ. ಕಲ್ಲು ಮತ್ತು ಕೈಗೆ ಸಿಕ್ಕ ವಸ್ತುಗಳನ್ನು ಯೂವಿವರ್ಸಿಟಿ ಕಟ್ಟಡದ ಮೇಲೆ ಎಸೆದಿದ್ದಾರೆ. ಇದರಿಂದ ಕಾಲೇಜ್ ಕಟ್ಟಡದ ಗಾಜುಗಳು ಪುಡಿ ಪುಡಿಯಾಗಿವೆ. ಸದ್ಯ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಅಲ್ಲೇ ಮೊಕ್ಕಾಂ ಹೂಡಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ವಿದ್ಯಾರ್ಥಿಗಳ ಗಲಾಟೆ
ಕಳೆಗ ಭಾನುವಾರವಷ್ಟೇ ಇದೇ ಯೂನಿವರ್ಸಿಟಿಯಲ್ಲಿ ವಿದ್ಯಾರ್ಥಿಗಳು ಗಲಾಟೆ ಮಾಡಿದ್ದರು. ಭಾನುವಾರ ರಾತ್ರಿ ಕಂಪ್ಯೂಟರ್ ಸೈನ್ಸ್ ವಿಭಾಗದ ಹತ್ತಕ್ಕೂ ಹೆಚ್ಚು ಕರ್ನಾಟಕದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದಿತ್ತು, ಆಂಧ್ರದ ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದಾರೆ ಎನ್ನಲಾಗಿತ್ತು. ಗಾಯಗೊಂಡ ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬಳಿಕ ಪೊಲೀಸರು ಆಂಧ್ರದ ನಾಲ್ವರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿದ್ದರು.
ಸಂಪೂರ್ಣ ತೆಲುಗುಮವಾಗಿದೆಯಾ ಕಾಲೇಜ್?
ಗೀತಂ ವಿವಿ ಸಂಪೂರ್ಣ ತೆಲುಗು ಮಯವಾಗಿದ್ದು, ಕನ್ನಡ ರಾಜ್ಯೋತ್ಸವ ಆಚರಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೆ ಕಾರ್ಯಕ್ರಮಗಳಲ್ಲಿ ಚಂದ್ರಬಾಬು ನಾಯ್ಡು, ಜಗಮೊಹನ ರೆಡ್ಡಿ ಸೇರಿದಂತೆ ತೆಲುಗು ನಟರ ಗುಣಗಾನ ಮಾಡುತ್ತಾರೆ. ಆದರೆ ನಟ ದಿ.ಪುನೀತ್ ರಾಜ್ಕುಮಾರ್ ಭಾವಚಿತ್ರವನ್ನು ಕಾರ್ಯಕ್ರಮದಲ್ಲಿ ಅಳವಡಿಸಲು ಅವಕಾಶ ನೀಡಲಿಲ್ಲ ಎಂದು ವಿದ್ಯಾರ್ಥಿಗಳ ಅಳಲು ತೋಡಿಕೊಂಡಿದ್ದಾರೆ.
ಈ ಗೀತಂ ವಿವಿಯಲ್ಲಿ ಶೇ.90ರಷ್ಟು ಆಂಧ್ರದ ವಿದ್ಯಾರ್ಥಿಗಳಿದ್ದು, ಸ್ಥಳೀಯ ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಹಲ್ಲೆ ನಡೆಸುತ್ತಿದ್ದಾರೆ. ಈ ವೇಳೆ ಆಡಳಿತ ಮಂಡಳಿಯಾಗಲಿ, ಸೆಕ್ಯುರಿಟಿಯವರಾಗಲಿ ರಕ್ಷಣೆಗೆ ಬರುತ್ತಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.