ರಾಜ್ಯ ಸರ್ಕಾರ ನೊಂದವರ ಮೇಲೆ ಸವಾರಿ ಮಾಡುತ್ತಿದೆ, ಸರ್ಕಾರದ ವಿರುದ್ಧ ಸಂಸದ ಡಿಕೆ ಸುರೇಶ್ ಕಿಡಿ

ಒಂದು ಐಸಿಯು ಬೆಡ್ ಖಾಲಿಯಾದರೆ 50 ಜನ ಸರತಿ ಸಾಲಿನಲ್ಲಿ ಸೋಂಕಿತರು ನಿಲ್ಲುತ್ತಿದ್ದಾರೆ. ಉಸಿರಾಟಕ್ಕೆ ತೊಂದರೆ ಆಗುತ್ತಿದೆ ಎಂದರೆ ಅವರಿಗೆ ಬೇಕಾಗಿರುವುದನ್ನು ಕೊಡಬೇಕು. ಸಾಮಾನ್ಯ ಬೆಡ್ ನೀಡಿದರೆ ಉಸಿರಾಟದ ತೊಂದರೆ ಇರುವವರು ಜೀವ ಕಳೆದುಕೊಳ್ಳಬೇಕಾಗುತ್ತದೆ. ಇದು ರಾಜ್ಯ ಸರ್ಕಾರದ ಮಂತ್ರಿಗಳಿಗೆ ಅರ್ಥ ಆಗುತ್ತಿಲ್ಲ. ಈಗಾಗಲೇ ಜನ ನೊಂದು ಹೋಗಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.

ಡಿಕೆ ಸುರೇಶ್

ಡಿಕೆ ಸುರೇಶ್

  • Share this:
ಆನೇಕಲ್ : ರಾಜ್ಯ ಸರ್ಕಾರ ನೊಂದವರ ಮೇಲೆ ಸವಾರಿ ಮಾಡುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಬೆಂಗಳೂರು ಗ್ರಾಮಾಂತರ ಸಂಸದ ಡಿಕೆ ಸುರೇಶ್ ಕಿಡಿಕಾರಿದ್ದಾರೆ. ಬೆಂಗಳೂರು ಹೊರವಲಯ ಹುಲಿಮಂಗಲ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡ ಹೆಚ್.ಪಿ ರಾಜಗೋಪಾಲ ರೆಡ್ಡಿಯವರು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕೊರೋನಾ ಸೋಂಕಿತರನ್ನು ಆಸ್ಪತ್ರೆಗೆ ತಲುಪಿಸಲು ಮೂರು ಆ್ಯಂಬುಲೆನ್ಸ್ ಗಳನ್ನು ಸಿದ್ದ ಮಾಡಿದ್ದು ಈ ಆ್ಯಂಬುಲೆನ್ಸ್ ಗಳನ್ನು ಉದ್ಘಾಟನೆ ಮಾಡಿ ಸಂಸದ ಡಿಕೆ ಸುರೇಶ್ ಮಾತನಾಡಿದರು.

ಆಕ್ಸಿಜನ್ ಬೆಡ್ ಪೂರೈಕೆ ಮಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಬಡವರ ನೋವು ಇವರಿಗೆ ಅರ್ಥ ಆಗುತ್ತಿಲ್ಲ. ಜನ ಹಾದಿಬೀದಿಯಲ್ಲಿ ಪರದಾಟ ಮಾಡುತ್ತಿದ್ದು, ಜನರ ಗೋಳು ಕೇಳುವವರೇ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಸರ್ಕಾರ ಬೆಡ್ ಖಾಲಿ ಇದೆ ಎಂದು ಸುಳ್ಳು ಹೇಳುವುದೇ ಕಾಯಕವನ್ನಾಗಿ ಮಾಡಿಕೊಂಡಿದೆ. ಜಿಲ್ಲಾ ಮಂತ್ರಿ ಒಂದು ದಿನವೂ ಸಭೆ ಕರೆದಿಲ್ಲ. ಜನರ ಸಮಸ್ಯೆಯನ್ನು ಕೇಳಬೇಕಾದ ಜನಪ್ರತಿನಿಧಿಗಳು ಬೇಜವಾಬ್ದಾರಿಯಿಂದ ವರ್ತಿಸಿದರೆ ಹೇಗೆ ಎಂದು ಪ್ರಶ್ನಿಸಿದರು. ಬೆಡ್ ಅಲಾಟ್ ಮಾಡುತ್ತಾರೆ. ಆದರೆ ರೋಗಿಗಳಿಗೆ ಬೇಕಾಗಿರೋದು ಆಕ್ಸಿಜನ್ ಬೆಡ್ ವ್ಯವಸ್ಥೆ, ಇದರ ಬಗ್ಗೆ ನಮಗೆ ಪ್ರತಿದಿನ ಸಾಕಷ್ಟು ದೂರುಗಳು ಬರುತ್ತಿವೆ. ವೆಂಟಿಲೇಟರ್, ಆಕ್ಸಿಜನ್ , ಐಸಿಯು ಬೆಡ್ ಎಲ್ಲಿಯೂ ಇಲ್ಲ . ಸರ್ಕಾರ ಇದರ ಬಗ್ಗೆ ಮಾತನಾಡದೆ ನಮ್ಮ ಬಳಿ ಬೆಡ್ ಇದೆ ಎಂದು ಬೊಬ್ಬೆ ಹೊಡೆಯುತ್ತಿದೆ. ಅವರೆ ಹೋಗಿ ಬೆಡ್ ಮೇಲೆ ಮಲಗಲಿ. ಆಗ ಗೊತ್ತಾಗುತ್ತದೆ ಉಸಿರಾಟದ ತೊಂದರೆಯಿಂದ ಬಳಲುತ್ತಿರುವವರ ಪಾಡೇನು ಎನ್ನುವುದು ಎಂದು ಸರ್ಕಾರದ ಹರಿಹಾಯ್ದರು.

ಇದನ್ನು ಓದಿ: ಮನೆ ಆರೈಕೆಯಲ್ಲಿರುವವರ ಮೇಲೆ ನಿಗಾ ವಹಿಸಬೇಕು, ಬೂತ್ ಮಟ್ಟದಲ್ಲೇ ಮನೆ ಮನೆ ಸರ್ವೆಗೆ ಸಚಿವ ಸುಧಾಕರ್ ಸೂಚನೆ

ರೆಮ್ಡಿಸಿವಿರ್ ಸ್ಟಾಕ್ ಇದೆ ಎನ್ನುವುದು ಸುಳ್ಳು ಹೇಳಿಕೆ. ಸರ್ಕಾರ ಜನರನ್ನು ದಾರಿ ತಪ್ಪಿಸುತ್ತಿದೆ. ಒಂದು ಐಸಿಯು ಬೆಡ್ ಖಾಲಿಯಾದರೆ 50 ಜನ ಸರತಿ ಸಾಲಿನಲ್ಲಿ ಸೋಂಕಿತರು ನಿಲ್ಲುತ್ತಿದ್ದಾರೆ. ಉಸಿರಾಟಕ್ಕೆ ತೊಂದರೆ ಆಗುತ್ತಿದೆ ಎಂದರೆ ಅವರಿಗೆ ಬೇಕಾಗಿರುವುದನ್ನು ಕೊಡಬೇಕು. ಸಾಮಾನ್ಯ ಬೆಡ್ ನೀಡಿದರೆ ಉಸಿರಾಟದ ತೊಂದರೆ ಇರುವವರು ಜೀವ ಕಳೆದುಕೊಳ್ಳಬೇಕಾಗುತ್ತದೆ. ಇದು ರಾಜ್ಯ ಸರ್ಕಾರದ ಮಂತ್ರಿಗಳಿಗೆ ಅರ್ಥ ಆಗುತ್ತಿಲ್ಲ. ಈಗಾಗಲೇ ಜನ ನೊಂದು ಹೋಗಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.

ಇಡೀ ರಾಜ್ಯದಲ್ಲಿ ಇದೇ ಪರಿಸ್ಥಿತಿ ಇದ್ದು, ರಾಜ್ಯ ಸರ್ಕಾರ ಇನ್ನೂ ಕೂಡ ನಿದ್ದೆಯಿಂದ ಎದ್ದಿಲ್ಲ. ಅದರಲ್ಲು ಆನೇಕಲ್ ತಾಲ್ಲೂಕಿನ ಆಸ್ಪತ್ರೆಗಳನ್ನು ಬೆಂಗಳೂರು ನಗರ ವ್ಯಾಪ್ತಿಗೆ ಸೇರಿಸಿದ್ದು, ಇಲ್ಲಿನ ರೋಗಿಗಳು ನಗರದ ಆಸ್ಪತ್ರೆಳಿಗೆ ಅಲೆದಾಡಬೇಕಾದ ಸ್ಥಿತಿ ಇದೆ. ಈ ಬಗ್ಗೆ ಈಗಾಗಲೇ ಸರ್ಕಾರಕ್ಕೆ ಮನವಿ ಮಾಡಲಾಗಿದೆ.  ಶೀಘ್ರದಲ್ಲಿಯೇ ಸಭೆ ನಡೆಸಿ ಅಧಿಕಾರಿಗಳ ಗಮನಕ್ಕೆ ಕೂಡ ತರಲಾಗುವುದು ಎಂದು ಸಂಸದ ಡಿ ಕೆ ಸುರೇಶ್ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವರದಿ : ಆದೂರು ಚಂದ್ರು
Published by:HR Ramesh
First published: