ಸೋಂಕಿತನ ಶವ ನೀಡಲು ಬಾಕಿ ಬಿಲ್​ಗಾಗಿ ಒತ್ತಾಯ; ಖಾಸಗಿ ಆಸ್ಪತ್ರೆ ವಿರುದ್ಧ ಮೃತ ಕುಟುಂಬದವರ ಆರೋಪ

ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ ಸತ್ಯಾಸತ್ಯತೆ ತಿಳಿಯಬೇಕಿದೆ. ಒಂದು ವೇಳೆ ಖಾಸಗಿ ಆಸ್ಪತ್ರೆಯವರ ತಪ್ಪು ಕಂಡು ಬಂದಲ್ಲಿ ಆಸ್ಪತ್ರೆ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕಿದೆ.  

ಶ್ರೀಸಾಯಿ ಆಸ್ಪತ್ರೆ.

ಶ್ರೀಸಾಯಿ ಆಸ್ಪತ್ರೆ.

  • Share this:
 ಆನೇಕಲ್: ಈಗಾಗಲೇ ಕೊರೋನಾ ಜನ ಸಾಮಾನ್ಯರನ್ನು ಕಾಡಿಸಿ ಕಂಗೆಡಿಸಿದೆ. ಇದರ ನಡುವೆ ಸೋಂಕಿತರ ಚಿಕಿತ್ಸೆಗಾಗಿ ಕೆಲ ಖಾಸಗಿ ಆಸ್ಪತ್ರೆಗಳು ಲಕ್ಷ ಲಕ್ಷ ಪೀಕುತ್ತಿವೆ. ಜೊತೆಗೆ ಸರ್ಕಾರ ಮೃತ  ಸೋಂಕಿತನ ಶವ ಹಸ್ತಾಂತರಕ್ಕೆ ಖಾಸಗಿ ಆಸ್ಪತ್ರೆಗಳು ಬಿಲ್ ಬಾಕಿ ಹಣಕ್ಕೆ ಒತ್ತಾಯಿಸಬಾರದು ಎಂದು ಆದೇಶ ನೀಡಿದ್ದರೂ, ಕೆಲ ಖಾಸಗಿ ಆಸ್ಪತ್ರೆಗಳ ವಿರುದ್ಧ ಶವ ಹಸ್ತಾಂತರಕ್ಕೆ ಬಾಕಿ ಬಿಲ್ ಪಾವತಿಯಂತಹ ಆರೋಪಗಳು ಆಗ್ಗಿಂದಾಗ್ಗೆ ಕೇಳಿ ಬರುತ್ತಿವೆ.

ಹೌದು, ಹೀಗೆ ಖಾಸಗಿ ಆಸ್ಪತ್ರೆ ಒಂದರ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸುತ್ತಿರುವ ದೃಶ್ಯಗಳು ಕಂಡು ಬಂದದ್ದು ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಗೆಸ್ಟ್ ಲೈನ್ ಸಮೀಪದ ಶ್ರೀ ಸಾಯಿ ಖಾಸಗಿ ಆಸ್ಪತ್ರೆ ಬಳಿ. ಮೃತ ಸೋಂಕಿತನ ಶವ ನೀಡಲು ಬಾಕಿ ಬಿಲ್ ನೀಡುವಂತೆ ಶ್ರೀ ಸಾಯಿ ಆಸ್ಪತ್ರೆ ಆಡಳಿತ ಮಂಡಳಿ ಒತ್ತಾಯಿಸುತ್ತಿದ್ದಾರೆ ಎಂದು ಮೃತ ಗಣೇಶ್ ಸಂಬಂಧಿಕರು ಗಂಭೀರ ಆರೋಪ ಮಾಡಿದ್ದಾರೆ. ಕೇವಲ 15 ದಿನಗಳ ಚಿಕಿತ್ಸೆಗೆ ಬರೋಬ್ಬರಿ 16 ಲಕ್ಷ ರೂ. ಬಿಲ್ ಮಾಡಿದ್ದಾರೆ. ಈಗಾಗಲೇ 6 ಲಕ್ಷ ಹಣ ಪಾವತಿಸಲಾಗಿದೆ. ಹಣ ಹಂತ ಹಂತವಾಗಿ ಪಾವತಿಸುತ್ತಿದ್ದಾಗ ಆಸ್ಪತ್ರೆ ವೈದ್ಯರು ರೋಗಿ ಆರೋಗ್ಯವಾಗಿ ಇದ್ದಾರೆ ಎನ್ನುತ್ತಿದ್ದರು. ಅನುಮಾನಗೊಂಡು ಕಳೆದ ಕೆಲ ದಿನಗಳಿಂದ ಹಣ ಪಾವತಿಸುವುದನ್ನು ನಿಲ್ಲಿಸಿದಾಗ ಬುಧವಾರ ಬೆಳಗ್ಗೆ ಸೋಂಕಿತ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಜೊತೆಗೆ ಉಳಿದ ಬಾಕಿ ಬಿಲ್ ಹಣವನ್ನು ಪಾವತಿಸಿ ಶವವನ್ನು ಕೊಂಡೊಯ್ಯುವಂತೆ ತಿಳಿಸಿದ್ದಾರೆ.

ಇದನ್ನು ಓದಿ: ಕೊರೋನಾ ಲಸಿಕೆ ಖರೀದಿಯ ಸಂಪೂರ್ಣ ಮಾಹಿತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಆದೇಶ

ಮೃತ ಸೋಂಕಿತ ಮೂರ್ನಾಲ್ಕು ದಿನಗಳ ಹಿಂದೆ ಸಾವನ್ನಪ್ಪಿರುವ ಸಾಧ್ಯತೆ ಇದ್ದು, ಬಿಲ್ ಹಣ ಕಟ್ಟಿಸಿಕೊಳ್ಳಲು ಆಸ್ಪತ್ರೆ ಆಡಳಿತ ಮಂಡಳಿಯವರು ನಾಟಕ ಆಡುತ್ತಿದ್ದಾರೆ ಎಂದು ಮೃತನ ಸಂಬಂಧಿ ಕಮಲೇಶ್ ಖಾಸಗಿ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಇನ್ನೂ ಕೊರೋನಾ ರೋಗವನ್ನು ಖಾಸಗಿ ಆಸ್ಪತ್ರೆಗಳು ಹಣ ಮಾಡುವ ದಂಧೆಯನ್ನಾಗಿ ಮಾಡಿಕೊಂಡಿವೆ. ಹಣವಂತರಿಗೆ ರಾಜಕಾರಣಿಗಳಿಗೆ ಎಲ್ಲಾ ಔಷಧಿ ದೊರೆಯುತ್ತದೆ. ಜೊತೆಗೆ ಬೇಗ ಗುಣಮುಖರಾಗುತ್ತಾರೆ. ಆದರೆ ಜನ ಸಾಮಾನ್ಯರು ಮಾತ್ರ ಶವಗಳಾಗಿ ಸ್ಮಶಾನ ಸೇರುತ್ತಿದ್ದಾರೆ. ಕೇವಲ ಹದಿನೈದು ದಿನದ ಚಿಕಿತ್ಸೆಗೆ ಬರೋಬ್ಬರಿ ಹದಿನಾರು ಲಕ್ಷ ಬಿಲ್ ಮಾಡಿದ್ದಾರೆ. ಆದರೂ ರೋಗಿ ಬದುಕುಳಿಯಲಿಲ್ಲ ಹಾಗಾಗಿ ಆಸ್ಪತ್ರೆಯವರಿಗೆ ನಾವು ಯಾಕೆ...? ಬಾಕಿ ಬಿಲ್ ಹಣ ನೀಡಬೇಕು. ಸರ್ಕಾರ ಬಡವರಿಗೆ ಯಾವ ನೆರವು ನೀಡುತ್ತಿದೆ. ಕೊರೋನಾ ಟೆಸ್ಟ್ ಗೆ ಸಾವಿರಾರು ರೂಪಾಯಿ ತೆಗೆದುಕೊಳ್ಳುತ್ತಿದ್ದಾರೆ. ಅಂಬ್ಯುಲೆನ್ಸ್ ಉಚಿತ ಎಂದು ಸರ್ಕಾರ ಹೆರಳುತ್ತದೆ. ಆದ್ರೆ ಕರೆ ಮಾಡಿದರೆ ಒಂದು ಅಂಬ್ಯುಲೆನ್ಸ್ ಸಹ ಸಕಾಲಕ್ಕೆ ಬರುವುದಿಲ್ಲ ಎಂದು ಸರ್ಕಾರದ ವಿರುದ್ಧ ಮೃತನ ಸಂಬಂಧಿ ನವೀನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೂ ಮೃತ ಗಣೇಶ್ ಸಂಬಂಧಿಕರ ಆರೋಪವನ್ನು ಶ್ರೀ ಸಾಯಿ ಆಸ್ಪತ್ರೆ ಆಡಳಿತ ಮಂಡಳಿ ನಿರಾಕರಿಸಿದ್ದು, ನಾವು ಮೃತ ಸೋಂಕಿತನ ಶವ ಹಸ್ತಾಂತರಕ್ಕೆ ಬಾಕಿ ಬಿಲ್ ಹಣ ಕೇಳಿಲ್ಲ. ಬದಲಾಗಿ ಬಾಕಿ ಬಿಲ್ ಹಣ ಪಡೆಯದೇ ಶವ ಹಸ್ತಾಂತರ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ ಸತ್ಯಾಸತ್ಯತೆ ತಿಳಿಯಬೇಕಿದೆ. ಒಂದು ವೇಳೆ ಖಾಸಗಿ ಆಸ್ಪತ್ರೆಯವರ ತಪ್ಪು ಕಂಡು ಬಂದಲ್ಲಿ ಆಸ್ಪತ್ರೆ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕಿದೆ.

ವರದಿ: ಆದೂರು ಚಂದ್ರು 
Published by:HR Ramesh
First published: