ನೆಲಮಂಗಲ (ಬೆಂಗಳೂರು ಗ್ರಾಮಾಂತರ): ಕೋವಿಡ್‌ಗೆ ಬಲಿಯಾದ ಎರಡು ದಿನದ ನಂತರ ಖಾಸಗಿ ಫೈನಾನ್ಸ್ ಆ ವ್ಯಕ್ತಿ ತನ್ನಲ್ಲಿ ಅಡಮಾನ ಇಟ್ಟಿದ್ದ ಚಿನ್ನಾಭರಣಗಳನ್ನೆಲ್ಲ ಹರಾಜು ಪ್ರಕ್ರಿಯೆಯಲ್ಲಿ ವಿಲೇವಾರಿ ಮಾಡಿದೆ. ಚಿನ್ನಾಭರಣ ಬಿಡಿಸಿಕೊಳ್ಳಲು ಹೋದ ಮೃತ ಸೋಂಕಿತನ ಕುಟುಂಬಕ್ಕೆ ಈ ವಿಷಯ ತಿಳಿದು, ಇದೀಗ ನ್ಯಾಯಕ್ಕಾಗಿ ಬಾಗಲಗುಂಟೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಬೆಂಗಳೂರಿನ ಬಾಗಲಗುಂಟೆ ನಿವಾಸಿ ಕೆಂಪಣ್ಣ (39) ಕಳೆದ ವರ್ಷ ಡಿಸೆಂಬರ್‌ನಲ್ಲಿ ಕೋವಿಡ್ ಸೋಂಕಿಗೆ ಒಳಗಾಗಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಬಳಿಕ ತಮ್ಮ ಸಂಬಂಧಿಯೊಬ್ಬರ ಚಿಕಿತ್ಸಾ ವೆಚ್ಚ ಭರಿಸಲು ಕೆಂಪಣ್ಣ ತನ್ನ ಬಳಿ ಇದ್ದ ಸುಮಾರು ಮೂರೂವರೆ ಲಕ್ಷ ಮೌಲ್ಯದ 75 ಗ್ರಾಂ ಚಿನ್ನಾಭರಣವನ್ನು ಜಾಲಹಳ್ಳಿ ಕ್ರಾಸ್‌ನಲ್ಲಿರುವ ಮಣ್ಣಪುರಂ ಗೋಲ್ಡ್ ಲೋನ್ ಫೈನಾನ್ಸ್‌ನಲ್ಲಿ ಅಡಮಾನವಿಟ್ಟು ಎರಡು ಲಕ್ಷದ ಮೂವತ್ತು ಸಾವಿರ ಹಣ ಪಡೆದುಕೊಂಡಿದ್ದಾರೆ. ಏಪ್ರಿಲ್ ತಿಂಗಳಿನಲ್ಲಿ ಅಡಮಾನ ಇಟ್ಟಿದ್ದ ಚಿನ್ನಕ್ಕೆ 40 ಸಾವಿರ ಬಡ್ಡಿ ಸಹ ಪಾವತಿ ಮಾಡಿದ್ದಾರೆ. ಕೆಂಪಣ್ಣ ಕೊರೋನಾ ಸೋಂಕಿಗೆ ತುತ್ತಾಗಿ ಕೆಲ ದಿನಗಳ ನಂತರ ಆಸ್ಪತ್ರೆಯಲ್ಲಿ ಮೇ 3ನೇ ತಾರೀಕಿನಂದು ಕೊನೆಯುಸಿರು ಎಳೆದಿದ್ದಾರೆ. ಕೆಂಪಣ್ಣನ ಸಾವಿನಿಂದ ಅವರ ಹೆಂಡತಿ ಹಾಗೂ ಮೂರು ಜನ ಮಕ್ಕಳು ಅನಾಥರಾಗಿದ್ದಾರೆ.
ಸೋಂಕಿತ ಸಂಬಂಧಿ ಚಿಕಿತ್ಸೆಗೆ ಮೃತ ಕೆಂಪಣ್ಣ ಸಹಾಯ ಮಾಡಿದ್ದ ಹಣವನ್ನು ಸಂಬಂಧಿಕರು ವಾಪಸ್ ಮಾಡಿದ್ದರು. ಬಳಿಕ ಮೃತ ಕೆಂಪಣ್ಣನ ಸಂಬಂಧಿಕರು ಜಾಲಹಳ್ಳಿ ಕ್ರಾಸ್ ಬ್ರಾಂಚ್‌ನ ಮಣ್ಣಪುರಂ ಗೋಲ್ಡ್ ಲೋನ್ ಕಂಪನಿ ಬಳಿ ತೆರಳಿ ಅಸಲು ಸಹಿತ ಬಡ್ಡಿ ಹಣ ಕಟ್ಟುತ್ತೇವೆ ನಮ್ಮ ಚಿನ್ನಾಭರಣ ವಾಪಸ್ ಕೊಡಿ ಎಂದಾಗ ಫೈನಾನ್ಸ್ ಸಿಬ್ಬಂದಿ ನಿಮ್ಮ ಚಿನ್ನಾಭರಣ ಹರಾಜು ಹಾಕಲಾಗಿದೆ ಎಂದಿದ್ದಾರೆ. ಮೇ ತಿಂಗಳ ಮೂರನೇ ತಾರೀಕೂ ಕೆಂಪಣ್ಣ ಸಾವನ್ನಪ್ಪಿದ್ದು ಮೇ ಐದರಂದು ಚಿನ್ನಾಭರಣ ಹರಾಜಾಗಿರುವುದು ಮೃತನ ಸಂಬಂಧಿಗಳ ಅನುಮಾನಕ್ಕೆ ಕಾರಣವಾಗಿದೆ.
ನವೀಕರಣ ಮಾಡದಿದ್ದಕ್ಕೆ ಹರಾಜ್: ಈ ಕುರಿತು ನ್ಯೂಸ್ 18 ನೊಂದಿಗೆ ಜಾಲಹಳ್ಳಿ ಬ್ರಾಂಚ್ ಮ್ಯಾನೇಜರ್ ಶಶಿ ಮಾತನಾಡಿ, ಅವರು ಬಡ್ಡಿ ಕಟ್ಟಿದ್ದಾರೆ. ಆದರೆ ನಮ್ಮ ಸಂಸ್ಥೆಯ ನಿಯಮಾವಳಿ ಪ್ರಕಾರ ಪ್ರತಿ ಮೂರು ತಿಂಗಳಿಗೊಮ್ಮೆ ಸಾಲದ ಖಾತೆ ನವೀಕರಣ ಮಾಡಬೇಕು. ಇಲ್ಲವಾದರೆ ಚಿನ್ನ ಹರಾಜು ಪ್ರಕ್ರಿಯೆಯಲ್ಲಿ ವಿಲೇವಾರಿ ಮಾಡಲಾಗುತ್ತದೆ. ಇವರಿಗೂ ನೋಟಿಸ್ ಕಳುಹಿಸಿದ್ದೇವೆ. ಆದರೆ ಅವರಿಗೆ ತಲುಪದೆ ನೋಟಿಸ್ ವಾಪಸ್ ಬಂದಿದೆ. ನಿಯಮದ ಪ್ರಕಾರ ನಾವು ಚಿನ್ನ ಹರಾಜು ಮಾಡಿದ್ದೇವೆ ಎನ್ನುತ್ತಾರೆ.
ನೋಟಿಸ್ ತಲುಪಿಲ್ಲ
ಮೃತ ಕೆಂಪಣ್ಣ ಕೋವಿಡ್ ಸೋಂಕಿಗೆ ಒಳಗಾಗಿದ್ದ ಹಿನ್ನೆಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ವೇಳೆ ಫೈನಾನ್ಸ್ ಕಂಪನಿಯವರು ನೋಟಿಸ್ ಕಳುಹಿಸಿರಬಹುದು. ಆದರೆ ಮೃತ ಕೆಂಪಣ್ಣರಿಗೆ ನೋಟಿಸ್ ತಲುಪದ ಹಿನ್ನೆಲೆ ಚಿನ್ನಾಭರಣ ಹರಾಜು ಮಾಡುವ ವಿಚಾರ ತಿಳಿದಿಲ್ಲ. ಒಂದು ವೇಳೆ ನೋಟಿಸ್ ತಲುಪಿದ್ದರೆ ನಾವು ಖಾತೆ ನವೀಕರಣ ಮಾಡಿ ಚಿನ್ನ ಉಳಿಸಿಕೊಳ್ಳುತ್ತಿದ್ದೆವು ಎನ್ನುತ್ತಾರೆ ಮೃತರ ಸಂಬಂಧಿಕರು.
ಇದನ್ನು ಓದಿ: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ; ಮಗಳ ಹೇಳಿಕೆ ಪರಿಗಣಿಸದಂತೆ ತಂದೆ ಸಲ್ಲಿಸಿದ್ದ ರಿಟ್ ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಲಾಕ್ ಡೌನ್ ವೇಳೆ ನವೀಕರಣ ಹೇಗೆ?
ಮೊದಲೇ ದೇಶದಲ್ಲಿ ಎರಡನೇ ಅಲೆ ಕೋವಿಡ್ ತಾಂಡವವಾಡುತ್ತಿತ್ತು, ಈ ವೇಳೆ ಸೋಂಕು ಹರಡುವುದನ್ನ ನಿಲ್ಲಿಸಲು ಸರ್ಕಾರ ಲಾಕ್‌ಡೌನ್ ವಿಧಿಸಿತ್ತು. ಲಾಕ್ ಡೌನ್ ವೇಳೆ ವಾಹನ ಸಂಚಾರಗಳಿಲ್ಲದೆ ಫೈನಾನ್ಸ್ ಕಚೇರಿ ಹೋಗಿ ಸಾಲದ ಖಾತೆ ನವೀಕರಣ ಮಾಡೋದು ಹೇಗೆ ಅನ್ನೋದು ಯಕ್ಷ ಪ್ರಶ್ನೆಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ