Drug Case: ಬೆಂಗಳೂರು ಗ್ರಾಮಾಂತರದಲ್ಲಿ ಹೆಚ್ಚುತ್ತಿವೆ ಡ್ರಗ್ಸ್​​ ಪ್ರಕರಣಗಳು: 13 ಕೆಜಿ ಗಾಂಜಾ ವಶ

ಗ್ರಾಮಾಂತರ ‌ಜಿಲ್ಲೆ ಬೆಂಗಳೂರು ‌,ಆಂಧ್ರದೊಂದಿಗೆ ಗಡಿ ಹಂಚಿಕೊಂಡಿದೆ. ಕಳೆದ ಅನೇಕ ವರ್ಷಗಳಿಂದ ಗಡಿಗಳ ಮೂಲಕ ಗಾಂಜಾ ‌ಜಿಲ್ಲೆಗೆ ಸದ್ದಿಲ್ಲದೆ ಎಂಟ್ರಿಕೊಡುತ್ತಿದೆ.

ವಶಪಡಿಸಿಕೊಂಡ ಡ್ರಗ್ಸ್​

ವಶಪಡಿಸಿಕೊಂಡ ಡ್ರಗ್ಸ್​

 • Share this:
  ಬೆಂಗಳೂರು ಗ್ರಾಮಾಂತರ: ರಾಜಧಾನಿಯೊಂದಿಗೆ ಬೆಸೆದುಕೊಂಡಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಗಾಂಜಾ (Drugs) ಸೇರಿದಂತೆ ಮಾದಕ ವಸ್ತುಗಳ ನಶೆ ಹೆಚ್ಚುತ್ತಿದೆ. ಕಳೆದೈದು ತಿಂಗಳಲ್ಲಿ ಅಬಕಾರಿ ಇಲಾಖೆಯಿಂದ (Excise Department) ನಡೆದ ದಾಳಿಗಳಲ್ಲಿ ಈ ಅಂಶ ಬೆಳಕಿಗೆ ಬಂದಿದ್ದು, ಯುವಜನರು ನಶೆಯ‌ ಮತ್ತಿಗೆ ಬಲಿಯಾಗುತ್ತಿದ್ದಾರೆ. ಜಿಲ್ಲೆಯಲ್ಲಿ ಜನವರಿಯಿಂದ ಜೂನ್ ವರೆಗೆ 13 ಕೆಜಿಯಷ್ಟು ಗಾಂಜಾ ಸಿಕ್ಕಿದ್ದು, ಉಳಿದಂತೆ ಕೆಜಿಗಟ್ಟಲೇ ಮಾದಕ‌ ಪದಾರ್ಥ ದಾಳಿಯಲ್ಲಿ ಪತ್ತೆಯಾಗಿವೆ. ಜಿಲ್ಲೆಯ ಪ್ರಮುಖ ಕಾಲೇಜುಗಳ ಯುವಜನರೇ ಈ ಜಾಲಕ್ಕೆ ಗುರಿಯಾಗುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ.ಜಿಲ್ಲೆಯ ದೇವನಹಳ್ಳಿ 449ಗ್ರಾಂ ಒಣಗಾಂಜಾ, ನೆಲಮಂಗಲ ೭೨೫ ಗ್ರಾಂ ಗಾಂಜಾ, ಹೊಸಕೋಟೆ ೧೩ಕೆಜಿ ಗಾಂಜಾ ಸೇರಿದಂತೆ ಒಟ್ಟು ಐದು ತಿಂಗಳಲ್ಲಿ ಜಿಲ್ಲೆಯಾದ್ಯಂತ ೧೪ ಕೆಜಿ ೧೭೪ಗ್ರಾಂ ಗಾಂಜಾ ಪತ್ತೆಯಾಗಿದೆ.

  ಆಂಧ್ರದಿಂದ ಎಂಟ್ರಿ?

  ಗ್ರಾಮಾಂತರ ‌ಜಿಲ್ಲೆ ಬೆಂಗಳೂರು ‌,ಆಂಧ್ರದೊಂದಿಗೆ ಗಡಿ ಹಂಚಿಕೊಂಡಿದೆ. ಕಳೆದ ಅನೇಕ ವರ್ಷಗಳಿಂದ ಗಡಿಗಳ ಮೂಲಕ ಗಾಂಜಾ ‌ಜಿಲ್ಲೆಗೆ ಸದ್ದಿಲ್ಲದೆ ಎಂಟ್ರಿಕೊಡುತ್ತಿದೆ. ಪೊಲೀಸ್ ಇಲಾಖೆ, ಅಬಕಾರಿ ‌ಇಲಾಖೆ ಇದರ ತಡೆಗೆ ನಾನಾ ಕ್ರಮಗಳನ್ನು ಕೈಗೊಂಡಿದೆ. ಆದರೂ ಕೂಡ ಆಂಧ್ರದ ಮೂಲಕ ಗಾಂಜಾ ಜಿಲ್ಲೆಯ ಯುವಕರ ಕೈಸೇರುತ್ತಿರುವ ಬಗ್ಗೆ ಅನೇಕ ಬಾರಿ ಪ್ರಕರಣ ಬೆಳಕಿಗೆ ಬಂದಿದೆ.  ಸ್ಥಳೀಯ ಹೊಲಗಳೇ ದಾರಿ! 

  ಜಿಲ್ಲೆಗೆ ಬರುವ ಗಾಂಜಾ‌,ಮಾದಕ ವಸ್ತುಗಳಿಗೆ ಅನ್ಯರಾಜ್ಯಗಳೇ ಮೂಲವಾಗಿದೆ.ಆದರೆ ಇದರ ಜತೆಗೆ ಅನೇಕ ಬಾರಿ ದೊಡ್ಡಬಳ್ಳಾಪುರ ಸೇರಿದಂತೆ ಬೇರೆ ತಾಲೂಕಿನ ಹಳ್ಳಿಗಳಲ್ಲಿನ ಹೊಲಗಳ ಮಧ್ಯೆದಲ್ಲಿ ಬೆಳೆದ ಗಾಂಜಾ ಬೆಳೆ ಪತ್ತೆಯಾಗಿತ್ತು.ಗ್ರಾಮಗಳ ತೋಟಗಳು ಹಾಗೂ ಹೆಚ್ಚು ಜನಸಂಚಾರವಿಲ್ಲದ ಜಾಗಗಳಲ್ಲಿ ಗಾಂಜಾ ಬೆಳೆಯುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಹೊಲ, ತೋಟಗಳಲ್ಲಿ ಗಾಂಜಾ ಬೆಳೆಯಲಾಗುತ್ತಿದೆ. ರೈತರು ಅರಿವಿದ್ದೋ, ಇಲ್ಲದೆಯೋ ಹಣದಾಸೆಗೆ ಸಿಲುಕಿ ಗಾಂಜಾ ಬೆಳೆದು ಜೈಲು ಸೇರುತ್ತಿದ್ದಾರೆ. ಕಾಡಂಚಿನ ಗ್ರಾಮಗಳಲ್ಲಿರುವ ಬಡ ರೈತರನ್ನು ಗುರುತಿಸುವ ಕೆಲ ಬ್ರೋಕರ್‌ಗಳು ಗಾಂಜಾ ಬೀಜವನ್ನು ನೀಡಿ, ಗಾಂಜಾ ಬೆಳೆಯುವಂತೆ ಪ್ರಚೋದಿಸುತ್ತಿದ್ದಾರೆ. ಕೆಲವು ಮುಗ್ಧ ರೈತರು ಹಣದಾಸೆಗೆ ಬಲಿಯಾಗಿ ಗುಡ್ಡ ಪ್ರದೇಶ ಹಾಗೂ ಹೊಲಗಳಲ್ಲಿ ಬೆಳೆಗಳ ನಡುವಿನಲ್ಲಿ ಗುಟ್ಟಾಗಿ ಗಾಂಜಾ ಬೆಳೆದ ಪ್ರಕರಣ ಬೆಳಕಿಗೆ ಬಂದಿತ್ತು.ಇಲಾಖೆ ಈ ಬಗ್ಗೆ ಪ್ರಕರಣಗಳಿಗೆ ಕ್ರಮಕ್ಕೆ ಮುಂದಾಗಿದೆ.

  ಎಷ್ಟೆಷ್ಟು ದಾಳಿ?

  ಜಿಲ್ಲೆಯಲ್ಲಿ ಅಬಕಾರಿ ಇಲಾಖೆ ಅನೇಕ ‌ದಾಳಿ ಮಾಡಿ ಗಾಂಜಾ ಪತ್ತೆಯಾಗಿದೆ.೨೦೨೨ ಜನವರಿ ತಿಂಗಳಿಂದ ಜೂನ್ ವರೆಗೆ  ದೊಡ್ಡಬಳ್ಳಾಪುರದಲ್ಲಿ ಯಾವುದೇ ಗಾಂಜಾ ‌ಪತ್ತೆಯಾಗಿಲ್ಲ.ನೆಲಮಂಗಲದಲ್ಲಿ ೭೨೫ ಗ್ರಾಂ ಗಾಂಜಾ ಹಾಗೂ ೪೭೦ ಗ್ರಾಂ ಬುಕ್ಕಿ ಪೌಡರ್ ಪತ್ತೆಯಾಗಿದೆ. ದೇವನಹಳ್ಳಿ ಯಲ್ಲಿ ೪೪೯ಗ್ರಾಂ ಒಣಗಾಂಜಾ ಪತ್ತೆಯಾಗಿದೆ.ಹೊಸಕೋಟೆ ವಲಯದಲ್ಲಿ ೧೩ ಕೆಜಿ ಒಣಗಾಂಜಾ ಪತ್ತೆಯಾಗಿದೆ.ಒಟ್ಟು ಜಿಲ್ಲೆಯಾದ್ಯಂತ ೫ ತಿಂಗಳ ಅವಧಿಯಲ್ಲಿ ೧೪ ಕೆಜಿ ೧೭೪ ಗ್ರಾಂ ಗಾಂಜಾ ಹಾಗೂ ೪೭೦ ಗ್ರಾಂ ಬುಕ್ಕಿ ಪೌಡರ್ ಪತ್ತೆಯಾಗಿದೆ.

  ಕಾಲೇಜುಗಳೇ ಟಾರ್ಗೆಟ್​​

  ಅನೇಕ ಪ್ರತಿಷ್ಠಿತ ಕಾಲೇಜುಗಳು ಕಾರ್ಯನಿರ್ವಹಿಸುತ್ತಿದೆ.ಈ ಕಾಲೇಜುಗಳಲ್ಲಿ ಅನ್ಯ ಜಿಲ್ಲೆ,ರಾಜ್ಯ,ದೇಶದ ವಿದ್ಯಾರ್ಥಿಗಳು ವ್ಯಾಸಂಗ‌ ಮಾಡುತ್ತಿದ್ದಾರೆ. ಇದನ್ನೇ ಗುರಿಯಾಗಿಸಿಕೊಂಡ ಕೆಲ ಮಧ್ಯವರ್ತಿಗಳು ಇಂತಹ ವಿದ್ಯಾರ್ಥಿಗಳಿಗೆ ಗಾಂಜಾದಂತಹ ಮಾದಕ ವಸ್ತುಗಳನ್ನು ತಲುಪಿಸುತ್ತಿದ್ದು ಅನೇಕ ಅನಾಹುತಗಳಿಗೆ ಕಾರಣವಾಗುತ್ತಿದೆ.ಇದಕ್ಕೆ ಬ್ರೇಕ್ ಹಾಕಿದಿದ್ದರೆ ಇನ್ನಷ್ಟು ವಿದ್ಯಾರ್ಥಿಗಳು ಈ ಜಾಲಕ್ಕೆ ಬೀಳುವ ಸಂಭವವಿದ್ದು ಎಚ್ಚರವಹಿಸಬೇಕಾಗಿದೆ.

  ಜಿಲ್ಲೆಯಲ್ಲಿ ಜನವರಿಯಿಂದ ಜೂನ್ ವರೆಗೆ ನಡೆದ ದಾಳಿಯಲ್ಲಿ ೧೪ ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ.ಜಿಲ್ಲೆಯಾದ್ಯಂತ ಖಚಿತ ಮಾಹಿತಿ ಅನುಸಾರ ದಾಳಿ ಮಾಡಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗುತ್ತಿದೆ.ಈ ಬಗ್ಗೆ ಗಮನಕ್ಕೆ ಬಂದರೆ ಸಾರ್ವಜನಿಕರು ಮಾಹಿತಿ ತಿಳಿಸಬಹುದಾಗಿದೆ ಎಂದು ಆಯುಕ್ತರು ,ಅಬಕಾರಿ ಇಲಾಖೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರವೀಂದ್ರ ಹೇಳಿದರು.

  ವರದಿ: ಮನುಕುಮಾರ ಹೆಚ್ ಕೆ 
  Published by:Kavya V
  First published: