Nandi Hills: ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಕಡಿಮೆಯಾಗುತ್ತಿದ್ದಂತೆ ಜನರ ಸುತ್ತಾಟ ಹೆಚ್ಚಾಗುತ್ತಿದೆ. ರಾಜ್ಯದ ಪ್ರವಾಸಿ ಸ್ಥಳಗಳಿಗೆ ಜನ ಲಗ್ಗೆ ಇಡುತ್ತಿದ್ದಾರೆ. ಅದರಲ್ಲೂ ಬೆಂಗಳೂರು ಸುತ್ತಮುತ್ತಲಿನ ನಂದಿ ಬೆಟ್ಟ ಮುಂತಾದ ಪ್ರವಾಸಿ ಸ್ಥಳಗಳಂತೂ ಜನಸಂದಣಿಯಿಂದ ಕೂಡಿರುತ್ತೆ. ಈ ಪೈಕಿ ನಂದಿ ಹಿಲ್ಸ್ ಸಹ ಒಂದು. ವೀಕೆಂಡ್ ಕರ್ಫ್ಯೂ ರಾಜ್ಯದಲ್ಲಿ ತೆಗೆದ ಮೊದಲ ಶನಿವಾರ ಹಾಗೂ ಭಾನುವಾರ ನಂದಿ ಬೆಟ್ಟಕ್ಕೆ ಸಾವಿರಾರು ವಾಹನಗಳಲ್ಲಿ ಪ್ರವಾಸಿಗರು ದಾಂಗುಡಿ ಇಟ್ಟಿದ್ದರು. ನಂತರ ಕೊರೊನಾ ಹೆಚ್ಚಾಗಬಹುದೆಂಬ ಭೀತಿಯಿಂದಲೇ ನಂದಿ ಬೆಟ್ಟದಲ್ಲಿ ವೀಕೆಂಡ್‌ನಲ್ಲಿ ಪ್ರವೇಶ ನಿಷೇಧ ಮಾಡಲಾಗಿದೆ. ಆದ್ರೆ, ಇನ್ಮುಂದೆ ವಾರದ ದಿನಗಳಲ್ಲೂ ನೀವು ನಂದಿ ಬೆಟ್ಟಕ್ಕೆ ಹೋಗ್ಬೇಕು ಅಂದ್ರೆ ಪಾರ್ಕಿಂಗ್ ಸ್ಥಳ ಇದ್ರೆ ಮಾತ್ರ ಹೋಗ್ಬೇಕು. ಇಲ್ಲ ಅಂದ್ರೆ ಪ್ರವೇಶ ನೀಡದಿರಲು ಸರ್ಕಾರ ನಿರ್ಧರಿಸಿದೆ. ಬೆಟ್ಟದವರೆಗೂ ಹೋಗಿ ವಾಪಸ್ ಬರಬೇಕಾಗುತ್ತೆ ಹುಷಾರ್..! ಇದೇನು ಹೊಸ ರೂಲ್ಸ್ ಅಂತೀರಾ..? ಮುಂದೆ ಓದಿ..
ಈ ಮೊದಲು ಬೆಟ್ಟದ ಮೇಲಿರುವ ಮುಖ್ಯ ದ್ವಾರದವರೆಗೆ ಎಲ್ಲಾ ವಾಹನಗಳಿಗೆ ಪ್ರಯಾಣಿಸಲು ಅವಕಾಶವಿತ್ತು. ಪಾರ್ಕಿಂಗ್ ಸ್ಥಳವು 310 ಕಾರುಗಳು ಮತ್ತು 550 ಬೈಕುಗಳನ್ನು ಮೇಲ್ಭಾಗದಲ್ಲಿ ನಿಲ್ಲಿಸಲು ಅನುವು ಮಾಡಿಕೊಡುತ್ತದೆ. ಕೌಂಟರ್‌ನಿಂದ ಟಿಕೆಟ್ ಖರೀದಿಸಲು ಬೈಕ್ ಸವಾರರು ಗೊತ್ತುಪಡಿಸಿದ ಸ್ಥಳಗಳಲ್ಲಿ ನಿಲುಗಡೆ ಮಾಡಬೇಕಾಗಿದ್ದರೆ, ಕಾರುಗಳಲ್ಲಿ ಪ್ರಯಾಣಿಸುವವರಿಗೆ ಮುಖ್ಯ ದ್ವಾರದಲ್ಲಿ ಸ್ಪಾಟ್ ಟಿಕೆಟ್ ನೀಡಲಾಗುತ್ತಿತ್ತು ಮತ್ತು ಅಂಚೆ ಕಚೇರಿ ಕಟ್ಟಡದವರೆಗೆ ವಾಹನ ಚಲಾಯಿಸಲು ಅವಕಾಶ ನೀಡಲಾಗುತ್ತಿತ್ತು. ಆದರೆ, ಹೊಸ ನಿಯಮಗಳ ಪ್ರಕಾರ, ಪ್ರವೇಶ ಟಿಕೆಟ್‌ಗಳನ್ನು ಈಗ ನಂದಿ ಬೆಟ್ಟದ ತಪ್ಪಲಿನಲ್ಲಿ ನೀಡಲಾಗುತ್ತದೆ.
ಪಾರ್ಕಿಂಗ್ ಸ್ಥಳವನ್ನು ಆಧರಿಸಿ ವಾಹನಗಳನ್ನು ಅನುಮತಿಸುವ ಆಲೋಚನೆ ಇಲ್ಲಿಯವರೆಗೆ ಯಶಸ್ವಿ ಪ್ರಯೋಗವಾಗಿದೆ ಎಂದು ನಂದಿ ಬೆಟ್ಟದ ಉಸ್ತುವಾರಿ ಅಧಿಕಾರಿಗಳು ಹೇಳುತ್ತಾರೆ. ಅನುಷ್ಠಾನದ ಆಧಾರದ ಮೇಲೆ, ವಾರಾಂತ್ಯದಲ್ಲಿ ಸಹ ವಾಹನಗಳು ಮೇಲಕ್ಕೆ ಹೋಗಲು ಅವರು ಅನುಮತಿಸುತ್ತಾರೆ. ಅಲ್ಲದೆ, ಆನ್‌ಲೈನ್ ಟಿಕೆಟಿಂಗ್ ಪರಿಚಯಿಸುವ ಯೋಜನೆಯೂ ಪ್ರಗತಿಯಲ್ಲಿದೆ.
ಈ ಸಂಬಂಧ ಮಾಹಿತಿ ನೀಡಿದ ಅಧಿಕಾರಿಯೊಬ್ಬರು ''ನಾವು ನಂದಿ ಬೆಟ್ಟದ ತಪ್ಪಲಿನಲ್ಲಿ ಪ್ರವೇಶವನ್ನು ನಿಯಂತ್ರಿಸಲು ನಿರ್ಧರಿಸಿದ್ದೇವೆ. ಪಾರ್ಕಿಂಗ್ ಸ್ಥಳವನ್ನು ಪರಿಶೀಲಿಸಲು ಮೇಲ್ಭಾಗದಲ್ಲಿ ನಿಂತಿರುವ ಸಿಬ್ಬಂದಿಗಳೊಂದಿಗೆ ನಾವು ನಿರಂತರ ಸಂಪರ್ಕದಲ್ಲಿರುತ್ತೇವೆ. ಸ್ಥಳಾವಕಾಶವಿದ್ದರೆ, ನಾವು ವಾಹನಗಳನ್ನು ಅನುಮತಿಸುತ್ತೇವೆ, ಇಲ್ಲದಿದ್ದರೆ ನಾವು ಬೆಟ್ಟದ ತಪ್ಪಲಿನಲ್ಲೇ ವಾಪಸ್ ಕಳುಹಿಸುತ್ತೇವೆ'' ಎಂದು ಹೇಳಿದ್ದಾರೆ.
ಆದರೆ, ಆನ್‌ಲೈನ್ ಟಿಕೆಟ್ ಬುಕ್ ಮಾಡಿ ಹೋಗೋಣ ಅನ್ಕೊಂಡ್ರೆ, ಆ ಯೋಜನೆ ಇನ್ನೂ ಜಾರಿಗೆ ಬಂದಿಲ್ಲ. ಆನ್‌ಲೈನ್‌ನಲ್ಲಿ ಟಿಕೆಟ್ ಖರೀದಿಸಲು ಯೋಜಿಸುವವರು ಸ್ವಲ್ಪ ಸಮಯ ಕಾಯಬೇಕಾಗುತ್ತದೆ. ಪ್ರವಾಸೋದ್ಯಮ ಇಲಾಖೆಯು ಅಪ್ಲಿಕೇಶನ್ ಅಥವಾ ವೆಬ್ ಆಧಾರಿತ ಬುಕಿಂಗ್ ಅನ್ನು ಪರಿಚಯಿಸಲು ಯೋಜಿಸುತ್ತಿರುವುದರಿಂದ ಇದು ಪ್ರಸ್ತುತ ಪ್ರಾಯೋಗಿಕ ಯೋಜನೆಯಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಈ ಹಿನ್ನೆಲೆ ಅನೇಕ ಪ್ರವಾಸಿಗರು ಆಫ್‌ಲೈನ್ ಮೋಡ್‌ನಲ್ಲಿ ಈ ಹೊಸ ನಿಯಮ ಮಾಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
“ಬೆಂಗಳೂರಿನಲ್ಲಿ ಕುಳಿತು ಎಷ್ಟು ಮಂದಿ ನಂದಿ ಬೆಟ್ಟಗಳಿಗೆ ಭೇಟಿ ನೀಡುತ್ತಿದ್ದೇವೆ ಎಂದು ನಮಗೆ ಹೇಗೆ ತಿಳಿಯುತ್ತದೆ? ಪಾರ್ಕಿಂಗ್ ಸ್ಥಳವಿದೆಯೇ ಎಂದು ತಿಳಿಯಲು 50 ಕಿ.ಮೀ ವಾಹನ ಓಡಿಸುವುದು ತರ್ಕಬದ್ಧವಲ್ಲ. ಹೊಸ ಯೋಜನೆಯನ್ನು ಪರಿಚಯಿಸುವ ಮೊದಲು ಅಧಿಕಾರಿಗಳು ಆನ್‌ಲೈನ್ ಮೋಡ್ ಮಾಡಬೇಕಾಗಿತ್ತು'' ಎಂದು ಟೆಕ್ಕಿ ಮತ್ತು ನಂದಿ ಬೆಟ್ಟಗಳಿಗೆ ಆಗಾಗ್ಗೆ ಭೇಟಿ ನೀಡುವ ಶ್ಯಾಮಾ. ಕೆ ಎಂಬುವರು ಹೇಳಿದರು.
“ನಂದಿ ಬೆಟ್ಟದಲ್ಲಿ ಮುಂಜಾನೆ ಮಂಜನ್ನು ನೋಡಲು ಹಲವರು ತಮ್ಮ ಮನೆಗಳಿಂದ ಹೊರಟು ಹೋಗುತ್ತಾರೆ. ಸಾಮಾನ್ಯವಾಗಿ ಬೆಳಗ್ಗೆ 4 ರಿಂದ ಬೆಳಗ್ಗೆ 6 ರವರೆಗೆ ಬೆಟ್ಟದ ತಪ್ಪಲಿನಲ್ಲಿ ಕ್ಯೂ ಇರುತ್ತದೆ. ಆಫ್‌ಲೈನ್ ಮೋಡ್‌ನೊಂದಿಗೆ, ಒಬ್ಬರನ್ನು ಮೇಲಕ್ಕೆ ಹೋಗಲು ಅನುಮತಿಸಲಾಗುವುದು ಎಂಬ ಖಾತರಿಯಿಲ್ಲ; ಇದರಿಂದ ಸಮಯ ಹಾಗೂ ಇಂಧನ ವ್ಯರ್ಥವಾಗುತ್ತದೆ. ಆನ್‌ಲೈನ್ ಟಿಕೆಟಿಂಗ್ ಪರಿಚಯಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ನಾನು ಅಧಿಕಾರಿಗಳನ್ನು ಕೋರುತ್ತೇನೆ” ಎಂದು ಕಾಲೇಜು ವಿದ್ಯಾರ್ಥಿನಿ ದೇವಿಕಾ ಎಸ್ ಹೇಳಿದರು.
ಆದರೆ, ಅಧಿಕಾರಿಗಳ ಪ್ರಕಾರ, ಆನ್‌ಲೈನ್ ವ್ಯವಸ್ಥೆಯನ್ನು ಜಾರಿಗೆ ತರಲು ಅವರಿಗೆ ಸಮಯ ಬೇಕಾಗುತ್ತದೆ. ಸಂಚಾರವನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರೆ, ಪ್ರಸಿದ್ಧ ಗಿರಿಧಾಮವನ್ನು ವಾರಾಂತ್ಯದಲ್ಲಿಯೂ ಸಾರ್ವಜನಿಕರಿಗೆ ತೆರೆಯಲಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ, ಬೆಟ್ಟದವರೆಗೆ ನಡೆಯಲು ಅನುಮತಿಸುವ ಚಾರಣಿಗರಿಗೆ ಹೊಸ ನಿಯಮ ಅನ್ವಯಿಸುವುದಿಲ್ಲ ಎಂದು ತಿಳಿದುಬಂದಿದೆ.
ಆನ್‌ಲೈನ್ ಪ್ರಕ್ರಿಯೆಯಲ್ಲಿ ಪಾರ್ಕಿಂಗ್ ಸ್ಲಾಟ್‌ಗಳನ್ನು ತೆರೆಯಲು ಅಧಿಕಾರಿಗಳು ಬಯಸುತ್ತಾರೆ. ಅಲ್ಲಿ ಶೇಕಡಾ 50 ರಷ್ಟು ಪಾಸ್‌ಗಳು ಆನ್‌ಲೈನ್‌ನಲ್ಲಿ ಲಭ್ಯವಾಗುತ್ತವೆ ಮತ್ತು ಉಳಿದವು ಆಫ್‌ಲೈನ್‌ನಲ್ಲಿರುತ್ತವೆ. ವಾರಾಂತ್ಯದಲ್ಲಿ, 5,000 ರಿಂದ 10,000 ವಾಹನಗಳು ಬೆಟ್ಟದ ಬಳಿ ಬರುತ್ತವೆ ಮತ್ತು ವಾರದ ದಿನಗಳಲ್ಲಿ ಸುಮಾರು 500 ವಾಹನಗಳು ತೆರಳುತ್ತದೆ ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ