ದೇವನಹಳ್ಳಿ: ಮೌಂಟ್ ಬ್ಯಾಟನ್ ದೇಶ ವಿಭಜನೆಗೆ ಕಾರಣ ಕರ್ತೃ. ದೇಶಕ್ಕಾಗಿ ಯಾರಾದರೂ ಒಬ್ಬರಾದರೂ ಬಿಜೆಪಿಯವರು ಪ್ರಾಣ ಕೊಟ್ಟಿದ್ದಾರಾ. ಬಿಜೆಪಿಯವರು ಸಾವರ್ಕರ್ ಹೆಸರು ಕೂಗುತ್ತಾರೆ. ಆದರೆ ಸಾವರ್ಕರ್ ಬ್ರಿಟಿಷರಿಗೆ ನಿಮ್ಮ ವಿರುದ್ಧ ಹೋರಾಡಲ್ಲ ಎಂಬ ಮುಚ್ಚಳಿಕೆ ಬರೆದು ಕೊಟ್ಟರು. ಬಾಬಾ ಸಾಹೇಬ್ ಅಂಬೇಡ್ಕರ್ (BR Ambedkar) ಬರೆದಿರುವ ಸಂವಿಧಾನದ (Constitution) ವಿರುದ್ಧ ಇರುವವರು ಈ ಬಿಜೆಪಿಯವರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರು ಬಿಜೆಪಿ ವಿರುದ್ಧ ಕಿಡಿಕಾರಿದರು.
ದೇವನಹಳ್ಳಿಯಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಗಾಂಧಿ ನಡಿಗೆ ಕಾರ್ಯಕ್ರಮದಲ್ಲಿ (Toward Gandhi Step) ಪಾಲ್ಗೊಂಡು ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಅನಂತ್ ಕುಮಾರ್ ಹೆಗ್ಡೆ ಸಂವಿಧಾನ ಬದಲಾವಣೆ ಮಾಡಲು ಹೇಳಿದರು. ಆದರೆ ಅವರ ವಿರುದ್ಧ ಬಿಜೆಪಿಯವರು ಏನಾದರೂ ಕ್ರಮ ತೆಗೆದುಕೊಂಡರಾ. ಇಂದು ಸಂವಿಧಾನದ ಉಳಿವನ್ನು ಕಾಂಗ್ರೆಸ್ ಪಕ್ಷ ಮಾತ್ರ ಮಾಡುವುದು. ಜನರು ಇನ್ನೊಂದು ಸ್ವಾತಂತ್ರ್ಯ ಹೋರಾಟಕ್ಕೆ ಸಜ್ಜಾಗಬೇಕು. ಬಿಜೆಪಿ ಸಾರ್ವಜನಿಕರ, ಮಹಿಳೆಯರ, ಯುವಕರ ವಿರೋಧಿ ಎಂದು ಆರೋಪಿಸಿದರು.
ಮೋದಿ ಚುನಾವಣೆಗೆ ಮುನ್ನ ಜನರಲ್ಲಿ ಭ್ರಮೆ ಹುಟ್ಟಿ ಹಾಕಿದರು. ಅಚ್ಚೇ ದಿನ್ ಆಯೆಗಾ ಅಚ್ಚೇ ದಿನ್ ಆಯೇಗಾ ಎಂದು ಹೇಳಿದರು. ಇನ್ನೂ ಅಚ್ಚೇ ದಿನ್ ಬಂದಿಲ್ಲ. ಎಲ್ಲರ ಖಾತೆಗೆ 15 ಲಕ್ಷ ಹಾಕುತ್ತೇನೆ ಎಂದರಲ್ಲಾ, ಯಾರಿಗಾದರೂ 15 ಪೈಸೆ ಹಾಕಿದ್ದಾರಾ? ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡುತ್ತೇನೆ ಎಂದರು. 7 ವರ್ಷದಿಂದ 14 ಕೋಟಿ ಉದ್ಯೋಗ ಕೊಡಬೇಕಿತ್ತು. ಆದರೆ ಈಗ ಇದ್ದ ಉದ್ಯೋಗವನ್ನೇ ಕಿತ್ತು ಕೊಂಡರು. ಯುವಕರಿಗೆ ಉದ್ಯೋಗ ಕೇಳಿದರೆ ಪಕೋಡ ಮಾರಲು ಹೇಳುತ್ತಾರೆ. ಆದರೆ ಈಗ ಅಡುಗೆ ಎಣ್ಣೆ 200 ರೂಪಾಯಿ ಆಗಿದೆ. ಪಕೋಡ ಮಾರಲು ಸಹ ಸಾಧ್ಯವಾಗುತ್ತಿಲ್ಲ. ಮೋದಿ ದೇಶವನ್ನು ನಾಶ ಮಾಡುತ್ತಿದ್ದಾರೆ ಎಂದು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಭಾಷಣದ ಮಧ್ಯೆ ಕಾಂಗ್ರೆಸ್ ಮುಖಂಡರಿಗೆ ಕ್ಲಾಸ್ ತೆಗೆದುಕೊಂಡ ಸಿದ್ದರಾಮಯ್ಯ
ಭಾಷಣದ ಮಧ್ಯೆ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಮುಖಂಡರಿಗೆ ಕ್ಲಾಸ್ ತೆಗೆದುಕೊಂಡರು. 1 ಕೋಟಿ 23 ಲಕ್ಷ ಕುಟುಂಬಗಳಿಗೆ 4.5 ಕೋಟಿ ಜನರಿಗೆ ಉಚಿತವಾಗಿ ಅಕ್ಕಿ ವಿತರಣೆ ಮಾಡಿದ್ದೇವೆ. ಇದನ್ನು ಮನೆ ಮನೆಗೆ ಹೇಳಿದ್ದರೆ, ಇಂದು ದೇವನಹಳ್ಳಿ ಮತ್ತು ಚಿಕ್ಕಬಳ್ಳಾಪುರದಲ್ಲಿ ನಾವು ಸೋಲುತ್ತಿರಲಿಲ್ಲ. ನಾನು ಅಕ್ಕಿ ಕೊಟ್ಟಿರುವುದನ್ನು ಜನರಿಗೆ ಸರಿಯಾಗಿ ಹೇಳಿಲ್ಲ. ಇನ್ನೂ ಮೋದಿ ಮಾಡಿರುವುದನ್ಬು ಎಲ್ಲಿ ಹೇಳುತ್ತೀರಾ. ಹೇಳಿದ್ದರೆ ನಮಗೆ ಈ ಸ್ಥಿತಿ ಬರುತ್ತಿರಲಿಲ್ಲ ಎಂದು ಸ್ವಪಕ್ಷದ ಮುಖಂಡರ ವಿರುದ್ಧ ಅಸಮಾಧಾನ ಹೊರಹಾಕಿದರು.
ನಾನು ಅಕ್ಕಿ ಕೊಟ್ಟಿರುವುದು ಸುಳ್ಳಾ? ನಿಜಾನಾ? ಅನ್ನೊದನ್ನು ಜನರನ್ನು ಕೇಳಿ. ಕುಮಾರಸ್ವಾಮಿ ಸಿಎಂ ಆಗಿದ್ದು 2018 ರಲ್ಲಿ ಜೆಡಿಎಸ್ ಸರ್ಕಾರದಿಂದ ಅಲ್ಲ, ಅದು ಸಮ್ಮಿಶ್ರ ಸರ್ಕಾರದ ಬಲದಿಂದ ಆಗಿದ್ದು. ನಾವು 80 ಜನ ಸಪೋರ್ಟ್ ಮಾಡಿದ್ದರಿಂದಲೆ ಅವರು ಸಿಎಂ ಆಗಿದ್ದು. ಕುಮಾರಸ್ವಾಮಿ ಅವರು ಸುಳ್ಳು ಹೇಳಿಕೊಂಡು ಓಡಾಡ್ತಿದ್ದಾರೆ. ಸುಳ್ಳು ಬಿಟ್ಟು ಬೇರೆನೂ ಅವರು ಹೇಳೋದಿಲ್ಲ. 2013 ರಿಂದ 18 ರವರೆಗೂ ಮೊದಲ ಒಂದು ವರ್ಷ ಕೆಜಿಗೆ 1 ರೂ ನಂತೆ, ನಂತರ 2 ವರ್ಷ ಫ್ರೀಯಾಗಿ ಅಕ್ಕಿ ಕೊಟ್ಟೆ, ಮತ್ತೆ 2 ವರ್ಷ ತಲಾ 7 ಕೆಜಿಯಂತೆ ಅಕ್ಕಿಕೊಟ್ಟೆ ಎಂದು ಸಿದ್ದರಾಮಯ್ಯ ಅವರು ಹೇಳುವ ಮೂಲಕ ಎಚ್.ಡಿ. ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದರು.
ಸಿದ್ದರಾಮಯ್ಯ ಮಾತನಾಡಿಸಲು ಮುಗಿ ಬಿದ್ದ ಮಹಿಳಾ ಕಾರ್ಯಕರ್ತೆಯರು
ದೇವನಹಳ್ಳಿಯಲ್ಲಿ ಆಯೋಜಿಸಿರುವ ಗಾಂಧಿ ನಡಿಗೆ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಅವರು ಒಂದು ಗಂಟೆ ತಡವಾಗಿ ಆಗಮಿಸಿದರು. ವೇದಿಕೆಗೆ ಬಂದ ತಕ್ಷಣ ಸಿದ್ದರಾಮಯ್ಯ ಅವರನ್ನು ಮಹಿಳಾ ಕಾರ್ಯಕರ್ತೆಯರು ಸುತ್ತುವರಿದು ಮಾತನಾಡಿಸಲು ಮುಂದಾದರು. ಬಳಿಕ ಮಹಿಳೆಯರನ್ನು ಕೆಳಗಿಳಿಸಲು ಮುಖಂಡರು ಹರಸಾಹಸ ಪಡಬೇಕಾಯಿತು.
ಇದನ್ನು ಓದಿ: HD Kumaraswamy: ಸುಳ್ಳಿನ ಶೂರ ಸಿದ್ದರಾಮಯ್ಯನವರೇ, ಇನ್ನಾದರೂ ನಿಮ್ಮ ಸುಳ್ಳಿನ ʼಸಿದ್ದಕಲೆʼಗೆ ಕೊನೆ ಹಾಡಿ; ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ
ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್, ಯೂತ್ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ಭಾಗಿಯಾಗಿದ್ದರು.
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ಗ್ರಾಮಾಂತರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ