HOME » NEWS » State » BENGALURU RURAL NEGLIGENCE ALLEGATIONS ON G PARAMESHWARS SIDDHARTH HOSPITAL KVD

ಸರಿಯಾಗಿ ಚಿಕಿತ್ಸೆ ಕೊಡಲು ಆಗದಿದ್ದರೆ ಆಸ್ಪತ್ರೆ ಮುಚ್ಚಿ: ಜಿ.ಪರಮೇಶ್ವರ್ ಒಡೆತನದ ಆಸ್ಪತ್ರೆ ವಿರುದ್ಧ ಆಕ್ರೋಶ!

ಕೊರೋನಾ ಸಂಕಷ್ಟ ಕಾಲದಲ್ಲಿ ತಮ್ಮ ಒಡೆತನದ ಆಸ್ಪತ್ರೆಗಳ ಮೂಲಕ ಸೋಂಕಿತರಿಗೆ ನೆರವಾಗುವ ನೈತಿಕ ಜವಾಬ್ದಾರಿ ಜನಪ್ರತಿನಿಧಿಗಳ ಮೇಲಿದೆ. ಆದರೆ ಖುದ್ದು ವೈದ್ಯರಾಗಿರುವ ಮಾಜಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್​​ ತಮ್ಮ ಜವಾಬ್ದಾರಿ ಮರೆತಂತಿದೆ.

news18-kannada
Updated:May 9, 2021, 2:50 PM IST
ಸರಿಯಾಗಿ ಚಿಕಿತ್ಸೆ ಕೊಡಲು ಆಗದಿದ್ದರೆ ಆಸ್ಪತ್ರೆ ಮುಚ್ಚಿ: ಜಿ.ಪರಮೇಶ್ವರ್ ಒಡೆತನದ ಆಸ್ಪತ್ರೆ ವಿರುದ್ಧ ಆಕ್ರೋಶ!
ಜಿ.ಪರಮೇಶ್ವರ್​
  • Share this:
ನೆಲಮಂಗಲ: ರಾಜ್ಯದಲ್ಲಿ ನಿತ್ಯ ಸೋಂಕಿತರ ಸಂಖ್ಯೆ ಅರ್ಧ ಲಕ್ಷದಷ್ಟು ಬರುತ್ತಿದೆ. ಬಹುತೇಕ ಆಸ್ಪತ್ರೆಗಳು ಸೋಂಕಿತರಿಂದ ಭರ್ತಿಯಾಗಿದ್ದು, ಬೆಡ್​ಗಾಗಿ ಪರದಾಡುತ್ತಿದ್ದಾರೆ. ಕೆಲ ಜನಪ್ರತಿನಿಧಿಗಳು ತಾತ್ಕಾಲಿಕ ಕೋವಿಡ್ ಕೇರ್​ ಸೆಂಟರ್​ಗಳನ್ನು ನಿರ್ಮಿಸಿ ಸೋಂಕಿತರಿಗೆ ​ನೆರವಾಗುತ್ತಿದ್ದಾರೆ. ಆದರೆ ಮಾಜಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್​​ ಒಡೆತನದ ಸಿದ್ಧಾರ್ಥ ಆಸ್ಪತ್ರೆ ಇದ್ದು ಇಲ್ಲದಂತಾಗಿದೆ. ಆಸ್ಪತ್ರೆ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. 150 ಬೆಡ್​ಗಳ ಸಾಮರ್ಥ್ಯವಿರುವ ಆಸ್ಪತ್ರೆಯಲ್ಲಿ 80ಕ್ಕೂ ಹೆಚ್ಚು ಸೋಂಕಿತರು ದಾಖಲಾಗಿದ್ದಾರೆ. 80ಕ್ಕೂ ಹೆಚ್ಚು ಸೋಂಕಿತರಿಗೆ ಚಿಕಿತ್ಸೆ ನೀಡಲು ಕೇವಲ ಒಬ್ಬರೇ ವೈದ್ಯರಿದ್ದಾರಂತೆ. ಇಬ್ಬರು ನರ್ಸ್​ಗಳು, ಒಬ್ಬರು ಸಹಾಯಕರು ಮಾತ್ರ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ ಎಂದು ರೋಗಿಗಳು ಆರೋಪಿಸುತ್ತಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ತಿಪ್ಪಗೊಂಡನಹಳ್ಳಿಯಲ್ಲಿರುವ ಸಿದ್ದಾರ್ಥ ಮೆಡಿಕಲ್ ಕಾಲೇಜಿನ ಕೊವೀಡ್ ಚಿಕಿತ್ಸಾ ಆಸ್ಪತ್ರೆ ಅವ್ಯವಸ್ಥೆಗಳ ಆಗರವಾಗಿದೆ. ನಿನ್ನೆಯಷ್ಟೇ ಈ ಆಸ್ಪತ್ರೆಗೆ ದಾಖಲಾಗಿದ್ದ ಸೋಂಕಿತ ಯುವತಿ ಒಂದೇ ದಿನಕ್ಕೆ ಆಸ್ಪತ್ರೆಯನ್ನು ಬದಲಾಯಿಸಿದ್ದಾರೆ. ಆಸ್ಪತ್ರೆಗೆ ದಾಖಲಾದಾಗಿನಿಂದಲೂ ಯಾರೊಬ್ಬರು ಬಂದು ಸೋಂಕಿತೆಯನ್ನು ವಿಚಾರಿಸಿಲ್ಲ. ಮಾತ್ರೆ, ಊಟ, ನೀರಿನ ವ್ಯವಸ್ಥೆಯನ್ನೂ ಮಾಡಿಲ್ಲ. ಅಕ್ಕಪಕ್ಕದ ರೋಗಿಗಳು ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯವನ್ನು ತೆರೆದಿಟ್ಟಿದ್ದಾರೆ. ಆಸ್ಪತ್ರೆಯ ವ್ಯವಸ್ಥೆ ಕಂಡು ಭಯಗೊಂಡ ಯುವತಿ ಕುಟುಂಬಸ್ಥರಿಗೆ ಕರೆ ಮಾಡಿ ಕಣ್ಣೀರಿಟ್ಟಿದ್ದಾರೆ.

ನಿನ್ನೆ ಮಧ್ಯೆ ರಾತ್ರಿ ನನ್ನ ಮಗಳು ಕರೆ ಮಾಡಿ ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ಕಣ್ಣೀರು ಹಾಕಿದಳು. ಹೆದರಿದ ನಾನು ಈಗ ಬಂದು ಸೋಂಕಿತ ಮಗಳನ್ನು ಕರೆದೊಯ್ಯುತ್ತಿದ್ದೇನೆ. ಬೇರೆ ಆಸ್ಪತ್ರೆಗೆ ದಾಖಲಿಸಬೇಕಿದೆ ಎಂದು ಸೋಂಕಿತೆಯ ತಂದೆ ಆಕ್ರೋಶ ವ್ಯಕ್ತಪಡಿಸಿದರು. ಕೊರೋನಾ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಕೊಡಲು ಸಾಧ್ಯವಾಗದಿದ್ದರೆ ಮೊದಲೇ ಹೇಳಬೇಕು. ಇಲ್ಲವೇ ಆಸ್ಪತ್ರೆಯನ್ನು ಬಂದ್​ ಮಾಡಲಿ. ಸುಮ್ಮನೆ ಸೋಂಕಿತರನ್ನು ದಾಖಲಿಸಿಕೊಂಡು ನಿರ್ಲಕ್ಷ್ಯ ಮಾಡಿದರೆ ಹೇಗೆ? ಸೋಂಕಿತರ ಜೀವಕ್ಕೆ ಅಪಾಯವಾದರೆ ಯಾರು ಹೊಣೆ ಎಂದು ಸೋಂಕಿತೆಯ ತಂದೆ ಪ್ರಶ್ನಿಸಿದರು.

ಇನ್ನು ಸ್ಥಳೀಯರು ಜಿ.ಪರಮೇಶ್ವರ್​ ಒಡೆತನದ ಆಸ್ಪತ್ರೆ ವಿರುದ್ಧ ಅಸಮಾಧಾನ ಹೊರ ಹಾಕಿದರು. ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ. ಆಸ್ಪತ್ರೆಯಲ್ಲಿ ಶುಚಿತ್ವದ ಕೊರತೆ ಇದೆ. ಆಸ್ಪತ್ರೆಯಲ್ಲಿ ಬೆಡ್​ಗಳು ಖಾಲಿ ಇದ್ದರೂ ಸೋಂಕಿತರು ಅಡ್ಮಿಟ್​ ಆಗುವ ಪರಿಸ್ಥಿತಿ ಇಲ್ಲ. ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಸೋಂಕಿತರ ಆರೋಗ್ಯದಲ್ಲಿ ಏರುಪೇರಾದರೆ ಯಾರು ಜವಾಬ್ದಾರಿ ಎಂದು ಕಿಡಿ ಕಾರಿದರು. ಇನ್ನು ಆಸ್ಪತ್ರೆ ಸುತ್ತಮುತ್ತ ಪಿಪಿಇ ಕಿಟ್​ಗಳನ್ನು ಎಲ್ಲಿಯಂದರಲ್ಲಿ ಬಿಸಾಡಿರುವುದು ಕಂಡು ಬಂತು.

ರಾಜ್ಯದಲ್ಲಿ ಹಲವಾರು ಜನಪ್ರತಿನಿಧಿಗಳು ತಮ್ಮ ಒಡೆತನದಲ್ಲಿ ಆಸ್ಪತ್ರೆಗಳನ್ನು, ಮೆಡಿಕಲ್​ ಕಾಲೇಜುಗಳನ್ನು ನಡೆಸುತ್ತಿದ್ದಾರೆ. ಕೊರೋನಾ ಸಂಕಷ್ಟ ಕಾಲದಲ್ಲಿ ತಮ್ಮ ಒಡೆತನದ ಆಸ್ಪತ್ರೆಗಳ ಮೂಲಕ ಸೋಂಕಿತರಿಗೆ ನೆರವಾಗುವ ನೈತಿಕ ಜವಾಬ್ದಾರಿ ಜನಪ್ರತಿನಿಧಿಗಳ ಮೇಲಿದೆ. ಮಾಜಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್​​ ತಮ್ಮ ಜವಾಬ್ದಾರಿ ಮರೆತಂತಿದೆ. ಇನ್ನಾದರೂ ತಮ್ಮ ಆಸ್ಪತ್ರೆಯ ಅವ್ಯವಸ್ಥೆಯನ್ನು ಸರಿಪಡಿಸಿ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಲು ನೆರವಾಗಬೇಕಿದೆ.
Published by: Kavya V
First published: May 9, 2021, 2:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories