Dalit Farmers: ದಲಿತರ ಭೂಮಿ‌ ಅಕ್ರಮವಾಗಿ ಕಬಳಿಸಿದ ಶಾಸಕ!? ಶಾಸಕರ ಮೇಲೆ ರೈತರ ಗಂಭೀರ ಆರೋಪ

ಜನರಿಗೆ ಸಂಕಷ್ಟ ಎದುರಾದಾಗ ನೆರವಿಗೆ ನಿಲ್ಲಬೇಕಾದ ಶಾಸಕರೇ ತಮ್ಮದೇ ಸಮುದಾಯದ ಜನರಿಗೆ ದ್ರೋಹ ಎಸಗಿದ್ದು, ಶಾಸಕರ ವಂಚನೆ ವಿರುದ್ದ ಮುಖ್ಯಮಂತ್ರಿಗಳು, ಗೃಹಸಚಿವರು, ಕಂದಾಯ ಸಚಿವರು ಸೇರಿದಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರಿಗೂ ಸಂತ್ರಸ್ತ ರೈತ ಕುಟುಂಬಗಳು ದೂರು ಸಲ್ಲಿಸಿವೆ.

ಭೂಮಿಯ ದಾಖಲೆ ಪತ್ರಗಳನ್ನು ಹಿಡಿದು ಜಮೀನಿನಲ್ಲಿ ನಿಂತಿರುವ ದಲಿತ ಕುಟುಂಬಗಳು.

ಭೂಮಿಯ ದಾಖಲೆ ಪತ್ರಗಳನ್ನು ಹಿಡಿದು ಜಮೀನಿನಲ್ಲಿ ನಿಂತಿರುವ ದಲಿತ ಕುಟುಂಬಗಳು.

  • Share this:
ಬೆಂಗಳೂರು: (Bengaluru Rural) ಇದು ಬೇಲಿಯೇ ಎದ್ದು ಹೊಲ ಮೇಯುವಂತೆ ಆಗಿದೆ. ತಮ್ಮ ಸಮುದಾಯದವರ ನೆರವಿಗೆ ನಿಲ್ಲಬೇಕಾದ ಶಾಸಕರೇ ಸಮುದಾಯದ ಜನರ ಕತ್ತು ಹಿಸುಕುವಂತಹ ಕೆಲಸ ಮಾಡಿದ್ದಾರೆ ಎನ್ನಲಾಗಿದೆ. ಸರ್ಕಾರದಿಂದ ಮಂಜೂರಾದ ಭೂಮಿಯನ್ನೇ ಶಾಸಕರು ಕಬಳಿಸಿ ಬಿಟ್ಟಿದ್ದಾರೆ (Dalit MLA Acquire Land Illegally) ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ. ಆ ಕೃಷಿ ಕಾಯಕ ಮಾಡಿರೋ ರೈತಾಪಿ ಕುಟುಂಬದವರು, ತಲೆಮಾರುಗಳಿಂದ ಈ ಭೂಮಿ ಕೃಷಿ ಮಾಡಿಕೊಂಡು ಬಂದಿದ್ದರು. ಆದರೆ ಈಗ ಈ ಭೂಮಿ ಅವರದ್ದಲ್ಲ ಎನ್ನುವ ಸುದ್ದಿ ಅವರಿಗೆ ಬರಸಿಡಿಲು ಬಡಿದಂತಾಗಿದೆ. ತಮ್ಮ ಭೂಮಿಯ ಕಾಗದ ಪತ್ರಗಳನ್ನ ಕೈಯಲ್ಲಿಡಿದು ಅವರೆಲ್ಲಾ ಶಾಸಕರಿಗೆ ಶಾಪ ಹಾಕುತ್ತಿದ್ದಾರೆ. 

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ‌ ಕೆಂಪಲಿಂಗನಹಳ್ಳಿ ಸರ್ವೆ ನಂ 53/2 ರ ಜಮೀನು ಈಗ ವಿವಾದದ ಕೇಂದ್ರದ ಬಿಂದುವಾಗಿದೆ. ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇರುವ ಕೋಟಿ ಕೋಟಿ ಬೆಲೆ ಬಾಳುವ ದಲಿತರ ಜಮೀನನನ್ನ ಶಾಸಕರು ಕಬಳಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಇದು ಬರೀ ಆರೋಪ ಅಷ್ಟೆ ಅಲ್ಲ ಶಾಸಕರು ಬೇನಾಮಿ ಹೆಸರಿನಲ್ಲಿ ಆಸ್ತಿ ಕಬಳಿಸಿದ್ದಲ್ಲ ಅಸಲಿಗೆ ತಮ್ಮ ಹೆಸರಿನಲ್ಲಿಯೇ ನೋಂದಣಿ ಮಾಡಿಸಿಕೊಂಡು ಖಾತೆ, ಪಹಣಿ ಸಹ ಸಿದ್ದಪಡಿಸಿ ಕೊಂಡಿದ್ದಾರೆ ಎನ್ನಲಾಗಿದೆ.

ಕೆಂಪಲಿಂಗನಹಳ್ಳಿಯ ನಿವಾಸಿಗಳಾದ ದಿವಂಗತ ಮುನಿ ಯಲ್ಲಿಗಯ್ಯ, ಗಂಗಯ್ಯ, ಮಾರಯ್ಯ ಸೇರಿದಂತೆ 16 ದಲಿತ ಕುಟುಂಬಗಳಿಗೆ ಜನರಿಗೆ 1981 ಸರ್ಕಾರದಿಂದ ಈ ಭೂಮಿ‌ ಮಂಜೂರಾಗಿದ್ದು ಭೂಮಿ ಮಂಜೂರಾದ ಕೆಲ ವರ್ಷಗಳಲ್ಲೇ ಮಂಜೂರುದಾರರೆಲ್ಲ ಸಾವನ್ನಪ್ಪಿದ್ದಾರೆ. ಭೂಮಿ ದಾಖಲೆಗಳ ಬಗ್ಗೆ ಮಾಹಿತಿ ಇಲ್ಲದ ಕುಟುಂಬದವರೂ ಅಂದಿನಿಂದ ಉತ್ತಿಕೊಂಡು ಬಿತ್ತಿಕೊಂಡು ಬರುತ್ತಿದ್ದಾರೆ. ಆದರೆ ಭೂಗಳ್ಳರು ಮೂಲ‌ ಮಂಜೂರುದಾರುರು ಸಾವನ್ನಪಿದ ನಂತರ ನಕಲಿ ಮಾಲೀಕರನ್ನ ಸೃಷ್ಟಿಸಿ ಮೊದಲಿಗೆ ಶಿವಾಜಿ ರಾವ್ ಎನ್ನುವವರಿಗೆ ಭೂಮಿ ಪರಭಾರೆ ಮಾಡುತ್ತಾರೆ. ಭೂಮಿಯ ನೈಜತೆ ತಿಳಿದ ಶಿವಾಜಿ ರಾವ್ ಪ್ರಕಾಶ್ ಎನ್ನುವ ವ್ಯಕ್ತಿಗೆ ಪರಭಾರೆ ಮಾಡಿದ್ದಾರೆ. ಪ್ರಕಾಶ್ ಉದಯಶಂಕರ್‌ಗೆ ಪರಭಾರೆ ಮಾಡಿದ್ದಾರೆ. ಬಂಡವಾಳ ಹಾಕಿದ್ದ ಉದಯ್ ಶಂಕರ್‌ಗೂ ಸಹ ಭೂಮಿಯ ಬಗ್ಗೆ ತಿಳಿದು ಏನು ಮಾಡಬೇಕೆಂದು ಯೋಚಿಸುತ್ತಿದ್ದಾಗ ಶಾಸಕರು ಈ ಭೂಮಿಗೆ ಕಣ್ಣಾಕಿರುವುದು ದೃಢಪಟ್ಟಿದೆ. ರಿಜಿಸ್ಟರ್ ವೇಳೆ ಭೂಮಿಯ ಮೂಲ ಕ್ರಯ ಪತ್ರಗಳು ಕಾಣೆಯಾಗಿವೆ ಎಂದು ನಮೂದಿಸಿದ್ದು ಪ್ರಭಾವ ಬೀರಿ ನಕಲಿ ದಾಖಲೆಗಳನ್ನ ಸೃಷ್ಟಿಸಿದ್ದಾರೆ ಎನ್ನಲಾಗಿದೆ.

ಇನ್ನೂ ಜಮೀನು ಮಂಜುರಾದ ದಿನದಿಂದ ಇಂದಿನವರೆಗೂ 16 ಕುಟುಂಬಗಳು ಉಳುಮೆ ಮಾಡಿಕೊಂಡು ಬಂದಿದ್ದು ಅಕ್ರಮವಾಗಿ ಕ್ರಯ ಮಾಡಿಕೊಂಡಿರುವ ಬೇನಾಮಿ ಕ್ರಯದಾರರು ಯಾರೂ ಜಮೀನಿನ ಬಳಿ ಸುಳಿದಿಲ್ಲ. ಹೀಗಾಗಿ ಭೂಮಿ ಪರಭಾರೆ ಆಗಿರುವ ವಿಚಾರವೇ ಇವರಿಗೆ ತಿಳಿದಿರಲಿಲ್ಲ. ಇತ್ತೀಚಿನ ಕೆಲ ಬೆಳವಣಿಗೆಗಳ ನಂತರ ಜಮೀನು ಪರಭಾರೆ ವಿಷಯ ತಿಳಿದು ಜನರಿಗೆ ಆತಂಕ ಶುರುವಾಗಿದೆ‌.

ಇನ್ನೂ ಜಮೀನು ಬೇನಾಮಿ ವಾರಸುದಾರನ ಹೆಸರಿಗೆ ರಿಜಿಸ್ಟರ್ ಆಗಿರುವ ವಿಷಯ ತಿಳಿದು ಬಂದಿದ್ದು, ರೈತರು ಕೋರ್ಟ್ ಮೆಟ್ಟಿಲೇರಿದ್ದಾರೆ‌. ಕೇಸ್ ಕೋರ್ಟ್‌ನಲ್ಲಿ ಇರುವಾಗಲೆ ಶಾಸಕರು ತಮ್ಮ ಪ್ರಭಾವ ಬಳಸಿ ರಿಜಿಸ್ಟರ್ ಮಾಡಿಸಿಕೊಂಡಿದ್ದಾರೆ‌. ಅಲ್ಲದೆ ಗ್ರಾಮದಲ್ಲಿ ಕೆಲ ಪುಂಡರಿಂದ ಬೆದರಿಕೆ ಹಾಕಿಸುತ್ತಿದ್ದಾರಂತೆ. ಶಾಸಕರು ರಿಜಿಸ್ಟರ್ ಮಾಡಿಸಿಕೊಂಡಿದ್ದಾರೆ ಸುಮ್ಮನೆ ಸೈನ್ ಹಾಕಿಕೊಡಿ ಎಂದು ಧಮ್ಕಿ ಹಾಕುತ್ತಿದ್ದಾರಂತೆ. ನಮಗೆ ಭೂಮಿ‌ ಉಳಿಸಿಕೊಡಿ ಎಂದು ಭೂಮಿ ಮಾಲೀಕರು ಮನವಿ ಮಾಡಿಕೊಳ್ಳುತ್ತಿದ್ದಾರೆ.

ಇದನ್ನು ಓದಿ: Madikeri Municipality: ಚುನಾವಣೆ ಮುಗಿದು 4 ತಿಂಗಳಾದರೂ ಅಧ್ಯಕ್ಷ - ಉಪಾಧ್ಯಕ್ಷರ ಕಾಣದ ಮಡಿಕೇರಿ ನಗರಸಭೆ!

ಒಟ್ಟಾರೆ ಜನರಿಗೆ ಸಂಕಷ್ಟ ಎದುರಾದಾಗ ನೆರವಿಗೆ ನಿಲ್ಲಬೇಕಾದ ಶಾಸಕರೇ ತಮ್ಮದೇ ಸಮುದಾಯದ ಜನರಿಗೆ ದ್ರೋಹ ಎಸಗಿದ್ದು, ಶಾಸಕರ ವಂಚನೆ ವಿರುದ್ದ ಮುಖ್ಯಮಂತ್ರಿಗಳು, ಗೃಹಸಚಿವರು, ಕಂದಾಯ ಸಚಿವರು ಸೇರಿದಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರಿಗೂ ಸಂತ್ರಸ್ತ ರೈತ ಕುಟುಂಬಗಳು ದೂರು ಸಲ್ಲಿಸಿವೆ.
Published by:HR Ramesh
First published: