ಆನೇಕಲ್: (Anekal) ಬಂಗಾಳ ಕೊಲ್ಲಿಯಲ್ಲಿ (Way Of Bengal) ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ರಾಜ್ಯದ ಹಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದೆ. ಮಳೆಯಿಂದಾಗಿ ಹಲವು ಅವಾಂತರಗಳು ಸೃಷ್ಟಿಯಾಗಿದ್ದು, ರೈತರು ಬೆಳೆದ ಬೆಳೆ (Farmers Crop Collapsed) ತೆಗೆದುಕೊಳ್ಳಲು ಹರಸಾಹಸ ಪಡುವಂತಾಗಿದೆ. ಅದು ರಾಗಿ (Millet) ಕಣಜ ಎಂದೇ ಖ್ಯಾತಿ ಗಳಿಸಿದ ಪ್ರದೇಶ. ಅಲ್ಲಿನ ಬಹುತೇಕ ರೈತರು ಪ್ರಧಾನ ಬೆಳೆಯಾಗಿ ರಾಗಿ ಬೆಳೆಯುತ್ತಾರೆ. ಉತ್ತಮ ಮಳೆಯಿಂದಾಗಿ ರೈತರು ಸಹ ಭರ್ಜರಿ ಫಸಲು ನೀರಿಕ್ಷೆ ಮಾಡಿದ್ದರು. ಆದ್ರೆ ಕಳೆದ ಹಲವು ದಿನಗಳಿಂದ ಸುರಿದ ಅಕಾಲಿಕ ಮಳೆ ರೈತರಲ್ಲಿ ಆತಂಕ ಮೂಡಿಸಿದೆ. ಹೌದು ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನಲ್ಲಿ ಒಂದು ಕಡೆ ಮಳೆ ಎಡೆಬಿಡದೆ ಸುರಿಯುತ್ತಿದೆ. ಮತ್ತೊಂದು ಕಡೆ ಅಕಾಲಿಕ ಮಳೆಯಿಂದಾಗಿ ಕಟಾವಿಗೆ ಬಂದಿದ್ದ ರಾಗಿ ಬೆಳೆ ನೆಲಕಚ್ಚಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ಕರ್ನಾಟಕದಲ್ಲಿಯೂ ಕಳೆದ ಹಲವು ದಿನಗಳಿಂದ ಎಡೆಬಿಡದೆ ಮಳೆ ಸುರಿಯುತ್ತಿದೆ. ಅಕಾಲಿಕ ಮಳೆ ರಾಜ್ಯಾದ್ಯಂತ ಅನೇಕ ಅವಾಂತರಗಳನ್ನು ಸೃಷ್ಟಿಸುತ್ತಿದ್ದು, ರಾಗಿ ಕಣಜ ಖ್ಯಾತಿಯ ಆನೇಕಲ್ ತಾಲ್ಲೂಕಿನ ರೈತರಿಗೂ ಆತಂಕ ಶುರುವಾಗಿದೆ.
ಮಳೆ ಆಧಾರಿತ ಕೃಷಿಯನ್ನು ನೆಚ್ಚಿಕೊಂಡಿರುವ ಆನೇಕಲ್ ತಾಲ್ಲೂಕಿನ ಜನ ಪ್ರಧಾನವಾಗಿ ರಾಗಿ ಬೆಳೆಯನ್ನು ಬೆಳೆಯುತ್ತಿದ್ದಾರೆ. ಈ ಭಾರಿ ಉತ್ತಮ ಮಳೆ ಸಹ ಆಗಿದ್ದು, ಹೊಲಗಳ ತುಂಬಾ ರಾಗಿ ತೆನೆ ತುಂಬಿತ್ತು. ರೈತರು ಸಹ ಬಂಪರ್ ಬೆಳೆ ನಿರೀಕ್ಷೆಯಲ್ಲಿ ಇದ್ದರು. ಆದರೆ ಇತ್ತೀಚೆಗೆ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ರಾಗಿ ಬೆಳೆ ನೆಲಕಚ್ಚಿದ್ದು, ಬೆಳೆ ನಷ್ಟವಾಗುವ ಆತಂಕ ರೈತರಲ್ಲಿ ಮನೆ ಮಾಡಿದೆ. ಇನ್ನು ಒಂದೆರಡು ದಿನ ಇದೇ ರೀತಿ ಮಳೆ ಸುರಿದರೆ ಬೆಳೆ ಸಂಪೂರ್ಣ ಮಳೆಗೆ ಆಹುತಿಯಾಗಲಿದೆ ಎಂದು ರೈತ ಕೃಷ್ಣಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನೂ ಮುಂಗಾರು ಆರಂಭದಲ್ಲಿ ಬಿತ್ತನೆ ಮಾಡಿದ ಹೊಲಗಳಲ್ಲಿ ರಾಗಿ ತೆನೆ ಹಣ್ಣಾಗಿ ಕಟಾವಿಗೆ ಬಂದಿದೆ. ಆದ್ರೆ ಕಟಾವು ಮಾಡಲು ಅಕಾಲಿಕ ಮಳೆ ಬಿಡುತ್ತಿಲ್ಲ. ಬಿಟ್ಟು ಬಿಡದೆ ಕಳೆದೊಂದು ವಾರದಿಂದ ಸುರಿಯುತ್ತಿದ್ದು, ರಾಗಿ ಬೆಳೆ ನೆಲ ಕಚ್ಚುವ ಸ್ಥಿತಿ ತಲುಪಿದ್ದು, ಈಗಾಗಲೇ ತೆನೆ ಹಾಳಾಗುತ್ತಿದೆ. ಕೈಗೆ ಬಂದ ಬೆಳೆ ಬಾಯಿಗೆ ಬರದಂತಾಗಿದೆ. ಇನ್ನೆರಡು ದಿನ ಮಳೆ ಹೀಗೆ ಮುಂದುವರಿದರೆ ಕಟಾವು ಮಾಡಲು ಬಂದಿರುವ ರಾಗಿ ಬೆಳೆ ಸಂಪೂರ್ಣ ಮಳೆಗೆ ಆಹುತಿಯಾಗುವ ಸಾಧ್ಯತೆ ಇದೆ. ಬಹುತೇಕ ರೈತರು ರಾಗಿ ಬೆಳೆಯನ್ನು ನಂಬಿ ಜೀವನ ನಡೆಸುತ್ತಿದ್ದಾರೆ. ಮಳೆಯಿಂದಾಗಿ ಕಟಾವು ಮಾಡಲು ದುಪ್ಪಟ್ಟು ಖರ್ಚಾಗುತ್ತದೆ. ಮಳೆ ಬಂದು ಇಡೀ ರಾಗಿ ಬೆಳೆಯನ್ನು ಮಣ್ಣು ಪಾಲು ಮಾಡಿದ್ದು, ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಬೊಮ್ಮಂಡನಹಳ್ಳಿ ರೈತ ಅಶ್ವಥ್ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಒಟ್ಟಿನಲ್ಲಿ ರೈತ ತಾನು ಬೆಳೆದ ದವಸ ದಾನ್ಯ ಮನೆಗೆ ಬರುವವರೆಗೂ ನೆಮ್ಮದಿಯಿಂದ ಕೂರುವಂತಿಲ್ಲ. ಅನಾವೃಷ್ಠಿ ಅಥವಾ ಅತಿವೃಷ್ಠಿ ಯಾವುದೇ ಆದರೂ ಪರಿಣಾಮ ಬೀರುವುದು ಮಾತ್ರ ರೈತನಿಗೆ. ಸದ್ಯ ರಾಗಿ ಕಣಜ ತುಂಬುವ ಮೊದಲೇ ರೈತ ಬೆಳೆದ ರಾಗಿ ಬೆಳೆ ಹೊಲಗಳಲ್ಲಿ ಮಳೆಯಲ್ಲಿ ತೊಯ್ದು ಕೊಳೆಯುತ್ತಿರುವುದು ಮಾತ್ರ ಅನ್ನದಾತನ ಪಾಲಿಗೆ ದುರಂತವೇ ಸರಿ.
ಇದನ್ನು ಓದಿ: CBI, ED ಅಧಿಕಾರಾವಧಿ 5 ವರ್ಷ ವಿಸ್ತರಣೆಗೆ ಕೇಂದ್ರದ ಒಲವು; ಮುಂದಿನ ಅಧಿವೇಶನದಲ್ಲಿ ಜಾರಿ ಸಾಧ್ಯತೆ
ಇನ್ನೂ ಮೂರು ದಿನ ಮಳೆ
ಮೂರು ದಿನಗಳ ಕಾಲ ಬೆಂಗಳೂರು ಸೇರಿದಂತೆ ರಾಜ್ಯದ್ಯಾಂತ ವ್ಯಾಪಕ ಮಳೆ ಆಗಲಿದೆ. ಕರಾವಳಿ ಜಿಲ್ಲೆಗಳಿಗೆ ಎರಡು ದಿನ ಆರೇಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಸಿಡಿಲು, ಗುಡುಗ ಸಹಿತ ಮಳೆಯಾಗಲಿದೆ. ಉತ್ತರ ಒಳನಾಡಿನಲ್ಲಿ ಮಳೆ ಇರಲಿದೆ. ದ.ಒಳನಾಡಿನಲ್ಲಿ ಮೂರು ದಿನ ಮಳೆ ಆಗಲಿದೆ. ಮೈಸೂರು, ಚಾಮರಾಜನಗರ, ದಾವಣಗೆರೆ, ಪಶ್ಚಿಮಘಟ್ಟ ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ವರದಿ: ಆದೂರು ಚಂದ್ರು
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ಗ್ರಾಮಾಂತರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ