ಇಬ್ಬರೂ ಮಕ್ಕಳಿಗೆ ಸದಾ ರಕ್ತ ಹಾಕಿಸಬೇಕಾದ ಅಪರೂಪದ ಕಾಯಿಲೆ: ನೆರವಿಗಾಗಿ ಪೋಷಕರ ಮನವಿ

ಒಂದು ವೇಳೆ ಮಕ್ಕಳಿಗೆ ರಕ್ತ ಕೊಡಿಸದಿದ್ದರೆ ಆಹಾರ ಸೇರುವುದಿಲ್ಲ. ಮಂಕಾಗುತ್ತಾರೆ. ಜ್ವರ, ಭೇದಿ, ವಾಂತಿ ಕೊನೆಗೆ ಸಾವು ಕೂಡ ಸಂಭವಿಸಬಹುದು.

ಸಂಕಷ್ಟದಲ್ಲಿರುವ ಕುಟುಂಬ

ಸಂಕಷ್ಟದಲ್ಲಿರುವ ಕುಟುಂಬ

  • Share this:
    ಆನೇಕಲ್ : ಅವರದು ಕುಗ್ರಾಮವೊಂದರ ಬಡ ಕುಟುಂಬ.  ದುಡಿದು ತಂದರೆ ಮಾತ್ರ ಒಪ್ಪೊತ್ತಿನ ಊಟ. ಅಂತಹ ಬಡ ಕುಟುಂಬಕ್ಕೆ ಭಗವಂತ  ಮುದ್ದಾದ ಇಬ್ಬರು ಮಕ್ಕಳನ್ನು ಕರುಣಿಸಿದ್ದಾನೆ. ಆದ್ರೆ ಆ ಇಬ್ಬರು ಮಕ್ಕಳಿಗೆ ಅಪರೂಪದಲ್ಲಿ ಅಪರೂಪವಾದ ವಿಚಿತ್ರ ರೋಗ ಕಾಣಿಸಿಕೊಂಡಿದ್ದು, ಆ ಕುಟುಂಬ ಮಕ್ಕಳ ಚಿಕಿತ್ಸೆಗಾಗಿ ಪಡಬಾರದ ಸಂಕಷ್ಟ ಅನುಭವಿಸುತ್ತಿದ್ದಾರೆ.  ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಮೈಸೂರಮ್ಮನದೊಡ್ಡಿ ಗ್ರಾಮದ ವಾಸಿಗಳಾದ ಕಾಳ ನಾಯ್ಕ ಮತ್ತು ಶಿಲ್ಪಾಬಾಯಿ ದಂಪತಿಯ ಮಕ್ಕಳಾದ ಪವನ್ ಮತ್ತು ಮದನ್ ಇಬ್ಬರು ಸಹ ಅಪರೂಪದ ತಲೆಸ್ಸೇಮಿಯಾ ಕಾಲೆಯಿಂದ ನರಳುತ್ತಿದ್ದಾರೆ.

    ಹುಟ್ಟಿನಿಂದಲೇ ಅಪರೂಪದ ಕಾಯಿಲೆಯನ್ನು ಹೊತ್ತು ತಂದಿರುವ ಈ ಮಕ್ಕಳು ವೈದ್ಯ ಲೋಕಕ್ಕೆ ಸವಾಲಾಗಿದ್ದಾರೆ. ಸದ್ಯ ಈ ರೋಗಕ್ಕೆ ಯಾವುದೇ ನಿರ್ದಿಷ್ಟವಾದ ಚಿಕಿತ್ಸೆ ಇಲ್ಲವಾಗಿದೆ. ಆದರೆ ನಿಯಮಿತವಾಗಿ ಪ್ರತಿ ತಿಂಗಳು ಇಂತಿಷ್ಟು ದಿನಕ್ಕೆ ರಕ್ತ ಕೊಡಿಸಬೇಕು. ಅಗತ್ಯ ಔಷಧಿಗಳನ್ನು ಜೀವನಪರ್ಯಂತವಾಗಿ ಪಡೆದುಕೊಳ್ಳಬೇಕು. ಆದ್ರೆ ಔಷಧಿ ಮತ್ತು ರಕ್ತ ಕೊಡಿಸಲು ಕನಿಷ್ಠ ತಿಂಗಳಿಗೆ ಹತ್ತರಿಂದ ಹನ್ನೆರಡು ಸಾವಿರ ಖರ್ಚಾಗುತ್ತದೆ. ಒಂದು ವೇಳೆ ಮಕ್ಕಳಿಗೆ ರಕ್ತ ಕೊಡಿಸದಿದ್ದರೆ ಆಹಾರ ಸೇರುವುದಿಲ್ಲ. ಮಂಕಾಗುತ್ತಾರೆ. ಜ್ವರ, ಭೇದಿ, ವಾಂತಿ ಕೊನೆಗೆ ಸಾವು ಕೂಡ ಸಂಭವಿಸಬಹುದು.

    ಕಾರ್ಖಾನೆಯೊಂದರಲ್ಲಿ ದುಡಿದು ಬರುವ ಹಣದ ಜೊತೆಗೆ ಸಾಲ ಮಾಡಿ ಇಲ್ಲಿಯವರೆಗೆ ಮಕ್ಕಳಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕೊರೊನಾ ಬಂದ ಬಳಿಕ ಕೈಯಲ್ಲಿದ್ದ ಕೆಲಸವೂ ಇಲ್ಲದಾಗಿದೆ. ಜೊತೆಗೆ ಸರ್ಕಾರ ಸಹ ಉಚಿತವಾಗಿ ಔಷಧ ಮತ್ತು ರಕ್ತ ನೀಡುವುದನ್ನು ಸ್ಥಗಿತಗೊಳಿಸಿದೆ. ಇದರಿಂದ ಮಕ್ಕಳಿಗೆ ರಕ್ತ ಮತ್ತು ಔಷಧಿ ಕೊಡಿಸುವುದು ತುಂಬಾ ಕಷ್ಟ ಮತ್ತು ದುಬಾರಿಯಾಗುತ್ತಿದೆ. ಆಗ್ಗಿಂದಾಗ್ಗೆ ಸಿ ಟಿ ಸ್ಕ್ಯಾನ್ ಸಹ ಮಾಡಿಸಬೇಕು. ಅದಕ್ಕೂ ಸಹ ಹಣವಿಲ್ಲದೆ ಮಾಡಿಸಲಾಗದ ಸ್ಥಿತಿ. ನೆರೆ ರಾಜ್ಯ ಆಂದ್ರಪ್ರದೇಶ ಸರ್ಕಾರ ತಲೆಸ್ಸೇಮಿಯಾ ಪೀಡಿತರಿಗೆ ತಿಂಗಳಿಗೆ 10 ಸಾವಿರ ನೀಡುತ್ತಿದೆ. ಹಾಗಾಗಿ ಸರ್ಕಾರ ತಲೆಸ್ಸೇಮಿಯಾ ಪೀಡಿತ ಮಕ್ಕಳಿಗೆ ಔಷಧ ಮತ್ತು ಚಿಕಿತ್ಸೆ ಉಚಿತ ಮಾಡಬೇಕು. ಮಕ್ಕಳ ಪಾಲನೆ ದೃಷ್ಟಿಯಿಂದ ವಿಶೇಷ ಚೇತನ ಮಕ್ಕಳಂತೆ ಮಸಾಶನ ನೀಡಬೇಕು. ಸಂಘ ಸಂಸ್ಥೆಗಳು ಮಕ್ಕಳ ಪಾಲನೆ ಪೋಷಣೆಗೆ ನೆರವಿನ ಹಸ್ತ ಚಾಚಬೇಕು ಎಂದು ಮಕ್ಕಳ ಪೋಷಕರಾದ ಕಾಳ ನಾಯ್ಕ ಮನವಿ ಮಾಡಿದ್ದಾರೆ.

    ಇದನ್ನೂ ಓದಿ: Covid in Children: ಹಾಸನ ಜಿಲ್ಲೆಯಲ್ಲಿ ಒಂದೇ ತಿಂಗಳಲ್ಲಿ ಸಾವಿರ ಚಿಣ್ಣರಿಗೆ ಸೋಂಕು; ಪೋಷಕರಲ್ಲಿ ಹೆಚ್ಚುತ್ತಿದೆ ಆತಂಕ

    ಇನ್ನೂ ಇಬ್ಬರು ಮಕ್ಕಳ ಪೋಷಣೆಯೇ ನಮಗೆ ಸವಾಲು. ನಮ್ಮ ದುಡಿಮೆ ಮಕ್ಕಳ ಚಿಕಿತ್ಸೆಗೆ ಸಾಕಾಗುವುದಿಲ್ಲ. ಮಕ್ಕಳಿಗೆ ಪ್ರತಿ ತಿಂಗಳು ರಕ್ತ ಕೊಡಿಸುವುದರಿಂದ ಯಾವಾಗ ಯಾವಾ ರಿಯಾಕ್ಷನ್ ಆಗುತ್ತದೆ ಗೊತ್ತಾಗುವುದಿಲ್ಲ. ಹಾಗಾಗಿ ಸದಾ ಕಾಲ ಮಕ್ಕಳ ಜೊತೆ ನಾವುಗಳು ಇರಬೇಕಾಗುತ್ತದೆ. ದುಡಿಮೆಗೆ ಹೋಗಲು ಆಗದ ಸ್ಥಿತಿ ಇದೆ. ಮಕ್ಕಳನ್ನು ಜೀವಂತವಾಗಿ ಉಳಿಸಿಕೊಳ್ಳಲು ಜೀವನವನ್ನೇ ಮುಡುಪಾಗಿಟ್ಟಿದ್ದೇವೆ. ಕೊರೊನಾ ಬೇರೆ ಎಲ್ಲಾ ಕಡೆ ವ್ಯಾಪಿಸಿದ್ದು, ಕೊರೊನಾ ಸಂದರ್ಭದಲ್ಲಿ ಮಕ್ಕಳನ್ನು ಕಾಪಾಡಿಕೊಳ್ಳುವುದು ಸವಾಲಾಗಿತ್ತು. ಹೇಗೋ ಮಕ್ಕಳನ್ನು ಕಷ್ಟಪಟ್ಟು ಬದುಕಿಸಿಕೊಳ್ಳುತ್ತಿದ್ದೆವೆ ಎಂದು ಮಕ್ಕಳ ತಾಯಿ ಶಿಲ್ಪಾಬಾಯಿ ಗದ್ಗದಿತರಾಗಿದ್ದಾರೆ.

    ಮುದ್ದು ಮುದ್ದಾಗಿರುವ ಪುಟ್ಟ ಕಂದಮ್ಮಗಳನ್ನು ಕಂಡರೆ ಎಂತಹವರಿಗೂ ಒಂದು ಕ್ಷಣ ಬೇಸರ ಮೂಡದಿರದು. ಏನೂ ಅರಿಯದ ಅಮಾಯಕ ಕಂದಮ್ಮಗಳಿಗೆ ಇದೆಂತಹ ಶಿಕ್ಷೆ. ಮಕ್ಕಳನ್ನು ಬದುಕಿಸಲು ಪೋಷಕರ ಹರಸಾಹಸ ಅಷ್ಟಿಷ್ಟಲ್ಲ. ಮಕ್ಕಳ ಚಿಕಿತ್ಸೆಗೆ ನೆರವು ನೀಡಬಯಸುವವರು ದೂರವಾಣಿ ಸಂಖ್ಯೆಗೆ 8050750311 ಸಂಪರ್ಕಿಸಿ ನೆರವು ನೀಡಬಹುದು.

    ವರದಿ : ಆದೂರು ಚಂದ್ರು
    Published by:Kavya V
    First published: