ಹೊಸಕೇಟೆ: ಅವರು ಕಳೆದ ಐದಾರು ವರ್ಷಗಳಿಂದ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಇತ್ತೀಚೆಗೆ ಆಕೆ ಮಾತ್ರ ಬೇರೊಂದು ಕಂಪನಿಗೆ ಕೆಲಸಕ್ಕೆ ಸೇರಿದ್ದಳು. ಜೊತೆಗೆ ಮದುವೆ ಕೂಡ ನಿಶ್ಚಯವಾಗಿತ್ತು. ಆತ ಮಾತ್ರ ಅದೇ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಈ ನಡುವೆ ನಡೆಯಬಾರದ ಘಟನೆ ನಡೆದುಹೋಗಿದೆ. ಆಕೆ ಕೊಲೆಯಾಗಿದ್ದರೆ, ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ (Bangalore Murder and Suicide Case). ಅಷ್ಟಕ್ಕೂ ಇಬ್ಬರ ಸಾವಿಗೆ ಕಾರಣವಾದ್ರೂ ಏನೂ ಅಂತೀರಾ...? ಈ ಸ್ಟೋರಿ ಓದಿ.
ಹೌದು ಹೀಗೆ ತಾನು ವಾಸವಾಗಿದ್ದ ಕೊಠಡಿಯಲ್ಲಿ ಕೊಲೆಯಾಗಿರುವ ಯುವತಿಯ ಹೆಸರು ಅಂಕೋಲಾ ಮೂಲದ ಉಷಾಗೌಡ. ಕೆರೆಯೊಂದರ ಬಳಿ ಶವವಾಗಿ ಪತ್ತೆಯಾಗಿರುವ ವ್ಯಕ್ತಿಯ ಹೆಸರು ತಮಿಳುನಾಡು (Tamil Nadu) ಮೂಲದ ಗೋಪಾಲಕೃಷ್ಣ. ಇಬ್ಬರು ಹೊಸಕೋಟೆ (Hoskote) ಸಮೀಪದ ಪ್ಲಿಪ್ ಕಾರ್ಟ್ (Flipkart) ಕಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮೃತ ಉಷಾ ಸೆಕ್ಯೂರಿಟಿ ಗಾರ್ಡ್ ಆಗಿದ್ದರೆ ಗೋಪಾಲಕೃಷ್ಣ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ. ನೋಡಲು ಸುಂದರವಾಗಿದ್ದ ಉಷಾಳನ್ನು ಗೋಪಾಲಕೃಷ್ಣನಿಗೆ ಪ್ರೀತಿಸುತ್ತಿದ್ದ.
ಉಷಾ ಪ್ರೀತಿಸುತ್ತಿರಲಿಲ್ಲ:
ಆದರೆ ಉಷಾ ಮಾತ್ರ ಕೇವಲ ಸ್ನೇಹಕ್ಕೆ ಮಾತ್ರ ಸೀಮಿತವಾಗಿದ್ದಳು. ಒಂದೆರಡು ಬಾರಿ ಗೋಪಾಲಕೃಷ್ಣ ವಾಸವಿದ್ದ ಚಿಕ್ಕಮ್ಮನ ಮನೆ ಗೆದ್ದಲಾಪುರಕ್ಕೆ ಹೋಗಿ ಬಂದಿರುತ್ತಾಳೆ. ಮಾತ್ರವಲ್ಲದೆ ಆಕೆಯ ಅಣ್ಣನು ಸಹ ಒಮ್ಮೆ ಹೋಗಿ ಬಂದಿರುತ್ತಾನೆ. ಎಲ್ಲವೂ ಚೆನ್ನಾಗಿರುವಾಗಲೇ ಉಷಾಗೆ ಮದುವೆ ನಿಶ್ಚಯವಾಗಿದೆ. ಜೊತೆಗೆ ಆಕೆ ಪ್ಲಿಪ್ ಕಾರ್ಟ್ ಕಂಪನಿಯ ಕೆಲಸಕ್ಕೆ ಗುಡ್ ಬೈ ಹೇಳಿ ಮತ್ತೊಂದು ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದಾಳೆ. ಅಂದಹಾಗೆ ಗೋಪಾಲಕೃಷ್ಣ ತನ್ನನ್ನು ಪ್ರೀತಿ ಮಾಡುತ್ತಿರುವ ವಿಚಾರ ತಿಳಿದು ಬೇರೊಂದು ಕಂಪನಿಗೆ ಉಷಾ ಸೇರಿಕೊಂಡಿದ್ದಳು ಎನ್ನಲಾಗಿದೆ.
ಪ್ರೇಮಿಯಿಂದ ಕಡೆಯ ಬಾರಿ ಯತ್ನ:
ಇದರಿಂದ ಗೋಪಾಲಕೃಷ್ಣ ಮನನೊಂದಿದ್ದ ಗೋಪಾಲಕೃಷ್ಣ ನಿನ್ನೆ ರಾತ್ರಿ ಉಷಾಳ ಬಳಿ ಅಂತಿಮವಾಗಿ ಮಾತನಾಡಲು ಆಕೆ ವಾಸವಿದ್ದ ಲಿಂಗಧೀರ ಮಲ್ಲಸಂದ್ರ ಗ್ರಾಮಕ್ಕೆ ಹೋಗಿದ್ದ ಎನ್ನಲಾಗಿದೆ. ಕೆಲಸಕ್ಕೆ ಹೋಗಿದ್ದ ಉಷಾಳನ್ನು ಮಾತನಾಡಲು ಆಕೆ ಕೊಠಡಿಗೆ ಕರೆಸಿಕೊಂಡಿದ್ದ ಗೋಪಾಲಕೃಷ್ಣ ತನ್ನ ಪ್ರೇಮವನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸಿದ್ದಾನೆ. ಆದರೆ ಉಷಾ ಮಾತ್ರ ಕೇವಲ ಸ್ನೇಹ ಎಂದು ನಯವಾಗಿ ತಿರಸ್ಕರಿಸಿದ್ದಳು ಎನ್ನಲಾಗಿದೆ.
ಇದರಿಂದ ಆಕ್ರೋಶಗೊಂಡ ಗೋಪಾಲಕೃಷ್ಣ ಅಲ್ಲಿಯೇ ಇದ್ದ ತಲೆ ದಿಂಬಿನಿಂದ ಉಷಾಳ ಮುಖಕ್ಕೆ ಒತ್ತಿ ಉಸಿರುಗಟ್ಟಿಸಿ ಕೊಂದು ಪರಾರಿಯಾಗಿರುವ ಸಾಧ್ಯತೆ ಇದೆ ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಕೆ ವಂಶಿಕೃಷ್ಣ ತಿಳಿಸಿದ್ದಾರೆ.
ಇನ್ನೂ ಪ್ರೇಯಸಿಯನ್ನು ಕೊಂದು ತಾನು ವಾಸವಿದ್ದ ಚಿಕ್ಕಮ್ಮನ ಮನೆ ಬಳಿ ಮುಂಜಾನೆ ಆರು ಗಂಟೆ ಸುಮಾರಿಗೆ ಜೋರಾಗಿ ಬಾಗಿಲು ಬಡಿದಿದ್ದಾನೆ. ಚಿಕ್ಕಮ್ಮ ನಿದ್ದೆಗಣ್ಣಿನಲ್ಲಿ ಬಾಗಿಲು ತೆಗೆದಿದ್ದಾಳೆ. ಮನೆಗೆ ಬಂದವನು ಬ್ಯಾಗನ್ನು ಒಂದು ಮೂಲೆಗೆಸೆದು ಒಂದು ಲೀಟರ್ ವಾಟರ್ ಬಾಟಲ್ ಮತ್ತು ಡಬ್ಬಿಯೊಂದನ್ನು ತೆಗೆದುಕೊಂಡು ಕೆರೆಯ ಕಡೆ ಹೋಗಿದ್ದಾನೆ. ಎಷ್ಟೊತ್ತಾದರು ಮನೆಗೆ ಬರದಿದ್ದಾಗ ಚಿಕ್ಕಮ್ಮ ಸುತ್ತಮುತ್ತಲು ಹುಡುಕಿದ್ದಾಳೆ. ಗೋಪಾಲಕೃಷ್ಣ ಕೆರೆ ಬಳಿ ಬಿದ್ದಿರುವುದು ಕಂಡು ಬಂದರು ಮುಖ ಕಪ್ಪಾಗಿದ್ದರಿಂದ ನಮ್ಮ ಹುಡುಗನಲ್ಲ ಎಂದು ಸುಮ್ಮನಾಗಿದ್ದಾಳೆ. ಪೋಲೀಸರು ಉಷಾಳ ಕೊಲೆ ಪ್ರಕರಣದ ಜಾಡು ಹಿಡಿದು ಸ್ಥಳಕ್ಕೆ ಬಂದಾಗ ಗೋಪಾಲಕೃಷ್ಣ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ ಎಂದು ಸ್ಥಳೀಯರಾದ ರಾಮಣ್ಣ ತಿಳಿಸಿದ್ದಾರೆ.
ಒಟ್ಟಿನಲ್ಲಿ ಮೃತ ಗೋಪಾಲಕೃಷ್ಣನಿಗೆ ಈ ಮೊದಲು ಮದುವೆಯಾಗಿದ್ದು, ಹೆಂಡತಿ ಸತ್ತ ಬಳಿಕ ಚಿಕ್ಕಮ್ಮನ ಮನೆಯಲ್ಲಿ ಕಳೆದ ಐದಾರು ವರ್ಷಗಳಿಂದ ವಾಸವಿದ್ದ ಎನ್ನಲಾಗಿದೆ. ಈತನಿಗೆ ಮೊದಲು ಮದುವೆಯಾಗಿರುವ ವಿಚಾರ ತಿಳಿದು ಉಷಾ ಈತನಿಂದ ಅಂತರ ಕಾಯ್ದುಕೊಂಡಿದ್ದಳಾ ಅಥವಾ ಬೇರಾವ ಉದ್ದೇಶಕ್ಕೆ ದೂರವಾಗಿ ಈ ರೀತಿ ದುರಂತ ಅಂತ್ಯ ಕಂಡರು ಎಂಬದು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ. ಸದ್ಯ ಉಷಾ ಹತ್ಯೆ ಸಂಬಂಧ ಅನುಗೊಂಡನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗೋಪಾಲಕೃಷ್ಣ ಆತ್ಮಹತ್ಯೆ ಪ್ರಕರಣ ತಿರುಮಲಶೆಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಿರಿಯ ಅಧಿಕಾರಿಗಳು, ವಿಧಿ ವಿಜ್ಞಾನ ಪ್ರಯೋಗಾಲಯ ತಜ್ಞರು ಸ್ಥಳ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರಿಸಿದ್ದಾರೆ.