ಬೆಂಗಳೂರು (ಆ. 23): ಹೆಂಡತಿ ರುಚಿಯಾಗಿ ಚಿಕನ್ ಫ್ರೈ (Tasty Chicken Fry) ಮಾಡಿಲ್ಲ ಎಂಬ ಒಂದೇ ಕಾರಣಕ್ಕೆ ಆರಂಭವಾದ ಜಗಳ ಈಗ ಕೊಲೆಯಲ್ಲಿ (Murder) ಅಂತ್ಯವಾಗಿದೆ. ಶಿರೀನ್ ಭಾನು (25) ಕೊಲೆಯಾದ ಗೃಹಿಣಿ. ಹೆಸರಘಟ್ಟ (hesaraghatta) ರಸ್ತೆಯ ತರಬನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕೊಲೆ ಮಾಡಿದ ಪತಿರಾಯ ಮುಬಾರಕ್ (32) ಈಗ ಪೊಲೀಸರ ಮುಂದೆ ಶರಣಾಗಿದ್ದಾನೆ. ಕಳೆದ ಐದು ವರ್ಷಗಳ ಹಿಂದೆ ಪ್ರೀತಿ ಮದುವೆಯಾಗಿದ್ದ ಈ ಜೋಡಿ ಬೆಂಗಳೂರಿನಲ್ಲಿ ಸಂಸಾರ ನಡೆಸುತ್ತಿದ್ದರು. ಅನ್ಯೋನ್ಯವಾಗಿದ್ದ ಇವರ ಜೀವನದಲ್ಲಿ ಚಿಕನ್ ಫ್ರೈಯಮನ ಸ್ವರೂಪಿಯಾಗಿ ಬಂದಿದೆ. ರುಚಿಯಾಗಿ ಅಡುಗೆ ಮಾಡಿಲ್ಲ ಎಂಬ ಒಂದೇ ಕಾರಣದಿಂದ ಇಬ್ಬರ ನಡುವೆ ಆರಂಭವಾದ ಜಗಳ ಕಡೆಗೆ ಹತ್ಯೆಯಲ್ಲಿ ಕೊನೆಗೊಂಡಿದೆ.
ಏನಿದು ಘಟನೆ?
ದಾವಣಗೆರೆ (Davanagere) ಮೂಲದ ಶಿರೀನ್ ಬಾನ್ ಮತ್ತು ಮುಬಾರಕ್ ಇಬ್ಬರು ಒಬ್ಬರನ್ನು ಒಬ್ಬರು ಪ್ರೀತಿಸಿ ಮದುವೆಯಾಗಿದ್ದರು. ಕಳೆದ ಐದು ವರ್ಷಗಳ ಹಿಂದೆ ಮದುವೆಯಾದ ಈ ಜೋಡಿ ಬದುಕು ಕಟ್ಟಿಕೊಳ್ಳುವ ಉದ್ದೇಶದಿಂದ ಕಳೆದೆರಡು ವರ್ಷಗಳ ಹಿಂದೆ ಬೆಂಗಳೂರಿಗೆ ವಲಸೆ ಬಂದಿದ್ದರು. ಹೆಸರಘಟ್ಟದ ತಬರನಹಳ್ಳಿಯಲ್ಲಿ ಮನೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು, ಮುಬಾರಕ್ ಹಾಸಿಗೆ ವ್ಯಾಪಾರ ನಡೆಸುತ್ತಿದ್ದರೆ ಶಿರೀನ್ ಗೃಹಿಣಿಯಾಗಿದ್ದರು.
ಕಳೆದ ಇಪ್ಪತ್ತು ದಿನಗಳ ಹಿಂದೆ ಈ ಜೋಡಿಯ ಮನೆಗೆ ಶಿರೀನ್ ಬಾನ್ ತಂಗಿ ಆಗಮಿಸಿದ್ದರು. ಈ ವೇಳೆ ಮನೆಯಲ್ಲಿ ವಿಶೇಷವಾಗಿ ಚಿಕನ್ ಅಡುಗೆ ಮಾಡಲಾಗಿತ್ತು. ಆದರೆ, ಶಿರೀನ್ ಬಾನ್ ಚಿಕನ್ ಫ್ರೈ ಅನ್ನು ರುಚಿಯಾಗಿ ಮಾಡಿರಲಿಲ್ಲ ಎಂದು ಮುಬಾರಕ್ ನಾದಿನಿಯ ಎದುರೆ ಹೆಂಡತಿಗೆ ಬೈದಿದ್ದ. ಅಲ್ಲದೇ, ಅಡುಗೆ ಮಾಡಲು ಬರುವುದಿಲ್ಲವೇ ಎಂದು ಹಂಗಿಸಿದ್ದ. ಇದರಿಂದ ಶಿರೀನ್ ಬಾನು ಕೋಪಗೊಂಡಿದ್ದಳು. ಶಿರೀನ್ ಬಾನು ತಂಗಿ ಊರಿಗೆ ಮರಳಿದ ಬಳಿಕ ಇದೇ ವಿಚಾರಕ್ಕೆ ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿತ್ತು.
ಇದನ್ನು ಓದಿ: ಅಮಿತಾಭ್ ಬಚ್ಚನ್ ಹೆಸರಲ್ಲಿದ್ದ ರೋಲ್ಸ್ ರಾಯ್ಸ್ ಸೇರಿ ದೊಡ್ಡೋರ ಲಕ್ಸುರಿ ಕಾರುಗಳು ಬೆಂಗಳೂರು ಪೊಲೀಸರ ವಶಕ್ಕೆ
ತಂಗಿಯ ಮುಂದೆ ಹಂಗಿಸಿದ್ದ ಮುಬಾರಕ್ ವರ್ತನೆಯಿಂದ ಕೆರಳಿದ ಶಿರೀನ್ ಬಾನ್ ಮಾತಿಗೆ ಮಾತು ಬೆಳೆಸಿ, ಕೂಗಾಡಿದ್ದಳು. ಈ ವೇಳೆ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ಹೋಗಿತ್ತು. ಈ ಸಂದರ್ಭದಲ್ಲಿ ಮುಬಾರಕ್ ದೊಣ್ಣೆಯಿಂದ ಹೆಂಡತಿ ಮೇಲೆ ಹಲ್ಲೆ ನಡೆಸಿದ್ದ. ಜೋರಾಗಿ ಬಿದ್ದ ಪೆಟ್ಟಿನಿಂದ ಶಿರೀನ್ ಅಸುನೀಗಿದ್ದಳು. ಆಕಸ್ಮಿಕವಾಗಿ ನಡೆದ ಈ ಅಪಘಾತದಿಂದ ಭಯಗೊಂಡ ಮುಬಾರಕ್ ಹೆಂಡತಿ ಶವವನ್ನು ಹಾಸಿಗೆಯಲ್ಲಿ ಚಿಕ್ಕಬಾಣಾವಾರ ಕೆರೆಗೆ ಎಸೆದಿದ್ದಾನೆ.
ಕಳೆದ 18 ದಿನಗಳಿಂದ ಮಗಳು ಫೋನಿಗೆ ಸಿಗದಿರುವ ಬಗ್ಗೆ ಶಿರೀನ್ ಬಾನು ಕುಟುಂಬಸ್ಥರು ಆತಂಕ ವ್ಯಕ್ತಪಡಿಸಿದ್ದರು. ಈ ಸಂಬಂಧ ಮುಬಾರಕ್ಗೆ ಕರೆ ಮಾಡಿದಾಗ ಆತ ಕುಂಟು ನೆಪ ಹೇಳುತ್ತಿದ್ದ. ಈ ವೇಳೆ ಜೋರಾಗಿ ಗದರಿ ಕೇಳಿದಾಗ ಭಯಗೊಂಡ ಆತ, ವಕೀಲರೊಂದಿಗೆ ಪೊಲೀಸರ ಮುಂದೆ ಶರಣಾಗಿ ಕೊಲೆ ಮಾಡಿದ ಘಟನೆ ಕುರಿತು ತಿಳಿಸಿದ್ದಾನೆ. ಹಾಸಿಗೆಯಲ್ಲಿ ಸುತ್ತಿ ಶವವನ್ನು ಎಸೆದ ಹಿನ್ನಲೆ 18 ದಿನಗಳು ಕಳೆದರು ಶವ ಮೇಲೆ ಬಂದಿಲ್ಲ. ಈ ಕುರಿತು ಪ್ರಕರಣ ದಾಖಲಿಸಿದ್ದು, ಶವವನ್ನು ಕೆರೆಯಿಂದ ಹುಡುಕಾಟ ನಡೆಸಲಾಗಿದೆ ಎಂದು ಸೋಲದೇವನಹಳ್ಳಿ ಪೊಲೀಸರು ತಿಳಿಸಿದ್ದಾರೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ