ಆನೇಕಲ್: ಮಾಹಾಮಾರಿ ಕೊರೋನಾ ರೈತರ ಬದುಕಿಗೆ ಕೊಳ್ಳಿ ಇಟ್ಟಿದೆ. ಹೌದು, ಮಹಾಮಾರಿ ಕೊರೋನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಸೋಂಕು ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ತಿಂಗಳುಗಟ್ಟಲೆ ಲಾಕ್ ಡೌನ್ ಘೋಷಿಸಿದೆ. ಇದರ ಪರಿಣಾಮವಾಗಿ ರೈತರು ಬೆಳೆದ ಹೂ, ತರಕಾರಿ ಹಣ್ಣಿಗೆ ಮಾರುಕಟ್ಟೆ ಇಲ್ಲದೆ ಪರದಾಡುವಂತಾಗಿದೆ. ಉತ್ತಮ ಫಸಲು ಬಂದು ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ಭಾರಿ ನಷ್ಟ ಉಂಟಾಗಿದ್ದು, ಬೇರೆ ದಾರಿ ಇಲ್ಲದೆ ತಾನು ಬೆಳೆದ ಬೆಳೆಗಳನ್ನೇ ನಾಶಪಡಿಸುತ್ತಿದ್ದಾರೆ.
ಹೌದು, ಹೀಗೆ ಕಟಾವಿಗೆ ಬಂದ ಟೊಮ್ಯಾಟೊ ಫಸಲನ್ನು ಸ್ವತಃ ರೈತರೇ ಮಣ್ಣಿನ ಗುಂಡಿಗೆ ಕಿತ್ತೆಸೆಯುತ್ತಿದ್ದಾರೆ. ನಳನಳಿಸುತ್ತಿರುವ ಸೇವಂತಿ ಹೂವನ್ನು ರೈತರೇ ನಾಶ ಮಾಡುತ್ತಿದ್ದಾರೆ. ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನಲ್ಲಿ ಬಹುತೇಕ ರೈತರು ತಮ್ಮ ಬೆಳೆಯನ್ನು ತಾವೇ ಮಣ್ಣುಪಾಲು ಮಾಡಿದ್ದಾರೆ. ಆನೇಕಲ್ ತಾಲ್ಲೂಕಿನ ರೈತರು ಹೆಚ್ಚಿನ ಸಂಖ್ಯೆಯಲ್ಲಿ ರಾಗಿ ಬೆಳೆಯನ್ನು ಪ್ರಧಾನವಾಗಿ ಬೆಳೆಯುತ್ತಾರೆ. ಇದರ ನಡುವೆ ಬಹುತೇಕ ರೈತರು ತೋಟಗಾರಿಕಾ ಬೆಳೆಗಳನ್ನು ಬೆಳೆಯುತ್ತಾರೆ. ಆದರೆ ಕೊರೋನಾ ಮಹಾಮಾರಿ ಅಬ್ಬರಕ್ಕೆ ಲಾಕ್ ಡೌನ್ ಪೋಷಣೆ ಮಾಡಲಾಗಿದ್ದು, ಹೂ ಮತ್ತು ತರಕಾರಿ ಕೃಷಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇದನ್ನು ಓದಿ: GST Council Meeting; 43ನೇ ಜಿಎಸ್ಟಿ ಕೌನ್ಸಿಲ್ ಸಭೆ; ರಾಜ್ಯಕ್ಕೆ ಬರಬೇಕಾಗಿರುವ 11 ಸಾವಿರ ಕೋಟಿ ರೂ. ಬಿಡುಗಡೆಗೆ ಮನವಿ
ಕೊರೊನಾ ಎರಡನೇ ಅಲೆ ಇಷ್ಟು ಅಪಾಯಕಾರಿಯಾಗಲಿದೆ ಎಂಬುದು ಸ್ವತಃ ರೈತರಿಗೂ ನಿರೀಕ್ಷೆ ಇರಲಿಲ್ಲ. ಉತ್ತಮ ಇಳುವರಿಯೆನೋ ಬಂದಿದೆ. ಆದರೆ ಬೀನ್ಸ್, ಟೊಮ್ಯಾಟೊ ಸೇರಿದಂತೆ ತರಕಾರಿಗಳನ್ನು ಖರೀದಿಸುವವರು ಇಲ್ಲದೇ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಲಾಭ ಇರಲಿ ಹಾಕಿರುವ ಬಂಡವಾಳ ಸಹ ವಾಪಸ್ ಬರದೇ ರೈತರು ಟೊಮ್ಯಾಟೊ ತಿಪ್ಪೆಗೆ ಎಸೆಯುತ್ತಿದ್ದಾರೆ. ಕಟಾವಿಗೆ ಬಂದಿರುವ ಟೊಮ್ಯಾಟೊ ಕೀಳದಿದ್ದರೆ ರೋಗ ಹೆಚ್ಚಾಗುತ್ತದೆ. ಕಿತ್ತರೆ ಟೊಮ್ಯಾಟೊ ಕೇಳುವವರಿಲ್ಲ ಎಂದು ರೈತ ವೆಂಕಟೇಶ್ ಬೇಸರ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಕ್ರೂರಿ ಕೊರೋನಾ ಸೃಷ್ಟಿಸುತ್ತಿರುವ ಅವಾಂತರ ಒಂದೆರಡು ಅಲ್ಲ. ಎಲ್ಲಾ ಕ್ಷೇತ್ರಗಳಂತೆಯೇ ಕೃಷಿ ಕ್ಷೇತ್ರದ ಮೇಲೆಯೂ ಕೊರೋನಾ ತನ್ನ ಕರಿ ನೆರಳನ್ನು ಚಾಚಿದೆ. ಬಡಪಾಯಿ ರೈತರು ದಿಕ್ಕು ತೋಚದಂತಾಗಿದ್ದು, ಸರ್ಕಾರ ರೈತರ ನೆರವಿಗೆ ಧಾವಿಸಬೇಕಿದೆ.
ವರದಿ: ಆದೂರು ಚಂದ್ರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ