• Home
  • »
  • News
  • »
  • state
  • »
  • ಕೊರೋನಾ ನಡುವೆ ಕಾಡಾನೆಗಳ ಹಾವಳಿ; ಗಜಪಡೆ ದಾಳಿಗೆ 2 ಎಕರೆ ಬಾಳೆ ಬೆಳೆ ಸಂಪೂರ್ಣ ನಾಶ!

ಕೊರೋನಾ ನಡುವೆ ಕಾಡಾನೆಗಳ ಹಾವಳಿ; ಗಜಪಡೆ ದಾಳಿಗೆ 2 ಎಕರೆ ಬಾಳೆ ಬೆಳೆ ಸಂಪೂರ್ಣ ನಾಶ!

ಕಾಡಾನೆಗಳ ದಾಳಿದಿಂದ ನಾಶವಾಗಿರುವ ಬಾಳೆ ಬೆಳೆ.

ಕಾಡಾನೆಗಳ ದಾಳಿದಿಂದ ನಾಶವಾಗಿರುವ ಬಾಳೆ ಬೆಳೆ.

ಕೊರೋನಾ ಕರಿನೆರಳ ನಡುವೆ ಕಷ್ಟಪಟ್ಟು ಬೆಳೆದ ಬೆಳೆ ಕಾಡಾನೆಗಳ ಪಾಲಾಗಿದೆ. ಇನ್ನಾದರೂ ಅರಣ್ಯ ಇಲಾಖೆ ಅಧಿಕಾರಿಗಳು ಕಾಡಾನೆಗಳ ಹಾವಳಿಗೆ ಅಂತ್ಯ ಹಾಡಿ ರೈತರಿಗೆ ನೆರವಾಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

  • Share this:

ಆನೇಕಲ್: ಅದು ಮೂಲತಃ ಕೃಷಿಕ‌ ಕುಟುಂಬ.  ಜೀವನಕ್ಕಾಗಿ ಕೃಷಿಯನ್ನೇ ನೆಚ್ಚಿಕೊಂಡಿದ್ದ ಅವರು ಸಾಲ ಮಾಡಿ ಬರಡು ಭೂಮಿಯಲ್ಲಿ ಬಂಗಾರದ ಬೆಳೆ ಬೆಳೆದಿದ್ದರು.  ಎರಡು ಎಕರೆ ಪ್ರದೇಶದಲ್ಲಿ ಬಾಳೆ  ಬೆಳೆದು ನಳನಳಿಸುತ್ತಿತ್ತು . ಆದರೆ ನಡುರಾತ್ರಿಯಲ್ಲಿ ತೋಟಕ್ಕೆ ದಾಂಗುಡಿಯಿಟ್ಟ ಗಜ ಪಡೆ  ಬೆಳಗಾಗುವುದರಲ್ಲಿ ತಿಂದು ಮುಗಿಸಿದ್ದು, ರೈತ ಕಂಗಾಲಾಗಿದ್ದಾನೆ.


ಹೌದು, ಹೀಗೆ ಚೆಲ್ಲಾಪಿಲ್ಲಿಯಾಗಿ ಕಡಿದು ಬಿದ್ದಿರುವ ಬಾಳೆ ಗಿಡಗಳು. ಅವುಗಳನ್ನು ಕಂಡು ಮಮ್ಮಲ ಮರುಗುತ್ತಿರುವ ರೈತ. ಈ ಎಲ್ಲಾ ದೃಶ್ಯಗಳು ಕಂಡುಬಂದದ್ದು ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ಸಮೀಪದ ಹಕ್ಕಿಪಿಕ್ಕಿ ಕಾಲೋನಿ ಬಳಿ. ಇಲ್ಲಿನ ನಿವಾಸಿಯಾದ ರೈತ ಜಯರಾಮ್ ಎರಡು ಎಕರೆ ಪ್ರದೇಶದಲ್ಲಿ ಲಕ್ಷಾಂತರ ರೂಪಾಯಿ ಸಾಲ ಮಾಡಿ ಕಷ್ಟಪಟ್ಟು ಬಾಳೆ ಬೆಳೆ ಬೆಳೆದಿದ್ದರು. ಇನ್ನೇನು ಮೂರ್ನಾಲ್ಕು ತಿಂಗಳಲ್ಲಿ ಭರ್ಜರಿ ಫಸಲು ಬರುವ ನೀರಿಕ್ಷೆ ಇತ್ತು. ಬಾಳೆ ಉತ್ತಮವಾಗಿ ಬೆಳೆ ಬಂದಿತ್ತು. ಆದರೆ ಕಳೆದ ರಾತ್ರಿ ಕಾಡಾನೆಗಳ ಹಿಂಡು ಬಾಳೆ ತೋಟಕ್ಕೆ ನುಗ್ಗಿ ತಿಂದು ತೇಗಿ ನಾಶಪಡಿಸಿವೆ. ಕೈಗೆ ಬಂದ ಬೆಳೆ ಮಣ್ಣುಪಾಲಾಗಿದೆ.


ಈ ಭಾಗದಲ್ಲಿ ಪದೇ ಪದೇ ಕಾಡಾನೆಗಳು ತೋಟಕ್ಕೆ ದಾಳಿಯಿಟ್ಟು ಬೆಳೆ ನಾಶ ಮಾಡುತ್ತಿವೆ. ಇಷ್ಟಾದರೂ ಅರಣ್ಯ ಅಧಿಕಾರಿಗಳು ಕಾಡಾನೆ ಹಾವಳಿ ತಡೆಯುವಲ್ಲಿ ವಿಫಲವಾಗಿದ್ದಾರೆ. ಜೊತೆಗೆ ಬೆಳೆ ನಾಶವಾದರೂ ಕನಿಷ್ಠ ಸ್ಥಳಕ್ಕೆ ಭೇಟಿ ನೀಡಿಲ್ಲ. ಮೊದಲೇ ಕೊರೋನಾ ಸಂಕಷ್ಟದಲ್ಲಿದ್ದು , ಸರ್ಕಾರ  ಸೂಕ್ತ ಪರಿಹಾರ ನೀಡಬೇಕು ಎಂದು ನೊಂದ  ರೈತ ಜಯರಾಮ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಇದನ್ನು ಓದಿ: CBI Director: ಸಿಬಿಐ ಅಧ್ಯಕ್ಷರ ಆಯ್ಕೆಗೆ ಪ್ರಧಾನಿ ನಿವಾಸದಲ್ಲಿ ಉನ್ನತಾಧಿಕಾರ ಸಮಿತಿ ಸಭೆ; ಸುಪ್ರೀಂಕೋರ್ಟ್ ಸಿಜೆಐ ಭಾಗಿ


ಇದನ್ನು ಓದಿ: Amphotericin B:19,420 ವಯಲ್ಸ್ ಎಂಫೋಟೆರಿಸಿನ್-ಬಿ ಹಂಚಿಕೆ, ಮೇ ಒಳಗೆ 3.63 ಲಕ್ಷ ವಯಲ್ಸ್ ಆಮದಿಗೆ ಕ್ರಮ: ಕೇಂದ್ರ ಸಚಿವ ಸದಾನಂದ ಗೌಡ


ಇನ್ನು ರೈತರ ಬೆಳೆ ನಾಶ ಮಾಡುವ ಕಾಡಾನೆಗಳು ಜನರ ಮೇಲೆಯೂ ಸಹ ಆಗ್ಗಿಂದಾಗ್ಗೆ ದಾಳಿ ಮಾಡಿತ್ತಿವೆ. ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಕಾಡಂಚಿನ ಜನ ಜೀವ ಭಯದಲ್ಲಿಯೇ ಜೀವನ ನಡೆಸುವಂತಾಗಿದೆ. ಇನ್ನು ಬನ್ನೇರುಘಟ್ಟ ಅರಣ್ಯಕ್ಕೆ ಹೊಂದಿಕೊಂಡಂತೆ ಹಳ್ಳಿಗಳಿದ್ದು, ಸಂಜೆಯಾದರೆ ಸಾಕು ಜನರು ಮನೆಯಿಂದ ಹೊರಬರಲು ಹೆದುರುವಂತಹ ಪರಿಸ್ಥಿತಿ ನಿರ್ಮಾಣ ಆಗಿದೆ. ಕಾಡಾನೆ  ಹಾವಳಿ ಸಮಸ್ಯೆ ಬಗ್ಗೆ ಆನೇಕ ಬಾರಿ ಅರಣ್ಯ ಅಧಿಕಾರಿಗಳಿಗೆ ದೂರು ನೀಡಿದರೂ ಈವರೆಗೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಸ್ಥಳೀಯರು ಸಹ ಬೇಸರ ವ್ಯಕ್ತಪಡಿಸಿದ್ದಾರೆ.


ಒಟ್ಟಿನಲ್ಲಿ ದೇಶದ ಬೆನ್ನೆಲುಬು ರೈತ ಅಂತಾರೆ. ಆದರೆ ಸಂಕಷ್ಟದಲ್ಲಿ ಇರುವ ರೈತನಿಗೆ ಮಾತ್ರ ಅರಣ್ಯ ಇಲಾಖೆ ಅಧಿಕಾರಿಗಳು ನೆರವು ನೀಡುತ್ತಿಲ್ಲ. ಅದರಲ್ಲೂ ಕೊರೋನಾ ಕರಿನೆರಳ ನಡುವೆ ಕಷ್ಟಪಟ್ಟು ಬೆಳೆದ ಬೆಳೆ ಕಾಡಾನೆಗಳ ಪಾಲಾಗಿದೆ. ಇನ್ನಾದರೂ ಅರಣ್ಯ ಇಲಾಖೆ ಅಧಿಕಾರಿಗಳು ಕಾಡಾನೆಗಳ ಹಾವಳಿಗೆ ಅಂತ್ಯ ಹಾಡಿ ರೈತರಿಗೆ ನೆರವಾಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.


ವರದಿ : ಆದೂರು ಚಂದ್ರು

Published by:HR Ramesh
First published: