Crime News: ಗಮನ ಬೇರೆಡೆ ಸೆಳೆದು ಕಳ್ಳತನ ಮಾಡುತ್ತಿದ್ದ ಕುಖ್ಯಾತ ಓಜಿ ಕುಪ್ಪಂ ಗ್ಯಾಂಗ್‌ ಅರೆಸ್ಟ್‌

ಬಂಧಿತರು ಸುಮಾರು 10ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆರೋಪಿತರಾಗಿರುವುದು ತಿಳಿದುಬಂದಿದೆ. ಬಂಧಿತರಿಂದ 15 ಲಕ್ಷದ 20 ಸಾವಿರ ನಗದು ಹಾಗೂ 3 ಬೈಕ್‌ ಜಪ್ತಿ ಮಾಡಲಾಗಿದೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:
ನೆಲಮಂಗಲ(ಆ.22): ಗಮನ ಬೇರೆಡೆ ಸೆಳೆದು ಹಣ ಚಿನ್ನಾಭರಣ ಲಪಟಾಯಿಸುತ್ತಿದ್ದ ಓಜಿಕುಪ್ಪಂ ಗ್ಯಾಂಗ್ ಒಂದನ್ನ ನೆಲಮಂಗಲ ಗ್ರಾಮಾಂತರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ಟಿ ಬೇಗೂರು ಬಳಿ ಗಸ್ತು ತಿರುಗುತ್ತಿದ್ದ ಪೊಲೀಸರಿಗೆ ಈ ಗ್ಯಾಂಗ್ ಸಿಕ್ಕಿಬಿದ್ದಿದ್ದು, ತನಿಖೆ ವೇಖೆ ದರೋಡೆಗೆ ಸ್ಕೆಚ್ ಹಾಕುತ್ತಿದ್ದೆವು ಎಂದು  ಬಾಯಿ ಬಿಟ್ಟಿದ್ದಾರೆ.‌

ಬಂಧಿತರನ್ನ 26 ವರ್ಷದ ಸ್ಯಾನ್‌ ವೆಲ್‌, 39 ವರ್ಷದ ಗಿರಿ ಕುಮಾರ್, 40ವರ್ಷದ ಗುಡಟ್ಟಿ ಬಾಬು ಹಾಗೂ 50 ವರ್ಷದ ಪಿ.ಕುಮಾರ್ ಎಂದು ಗುರುತಿಸಲಾಗಿದೆ. ಆರೋಪಿಗಳು ಬ್ಯಾಂಕ್‌, ಎಟಿಎಂ ಹಾಗೂ ಫೈನಾನ್ಸ್‌ಗಳಿಂದ ಹಣ ಡ್ರಾ ಮಾಡಿಕೊಂಡು ಬರುವವರ ಗಮನ ಬೇರೆಡೆ ಸೆಳೆದು ದರೋಡೆ ಮಾಡುತ್ತಿದ್ದರು ಎನ್ನಲಾಗಿದ್ದು, ಈ ಗ್ಯಾಂಗ್ ಅನ್ನು‌ ಸದ್ಯ ನೆಲಮಂಗಲ ಗ್ರಾಮಾಂತರ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಇದನ್ನೂ ಓದಿ:ಈ ಜಿಲ್ಲೆಯ ಜನರು ಸೋಂಬೇರಿಗಳು; ಹೊಳೆ ತುಂಬಿದ್ದರೂ ನೀರಾವರಿ ಮಾಡಲ್ಲ: ಮುರಗೇಶ್ ನಿರಾಣಿ

ಓಜಿ ಕುಪ್ಪಂ ಅಂದ್ರೆ ಒಂದು ಕಾಲದಲ್ಲಿ ಇಡೀ ಬೆಂಗಳೂರು ನಡುಗುತ್ತಿತ್ತು. ಗಮನ ಬೇರೆಡೆ ಸೆಳೆದು ಹಣ ಚಿನ್ನಾಭರಣ ದೋಚೋದರಲ್ಲಿ ಈ ಗ್ಯಾಂಗ್‌ ನಿಸ್ಸೀಮರು. ಅಂದ ಹಾಗೆ ಈ ಗ್ಯಾಂಗ್ ನೆರೆ ರಾಜ್ಯ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಓಜಿ ಕುಪ್ಪಂ ಎಂಬ ಒಂದು ಗ್ರಾಮದ್ದು. ಬೆಂಗಳೂರಿನಲ್ಲಿ ಸಾಕಷ್ಟು ಕಳ್ಳತನ ಮಾಡಿ ಸದ್ದು ಮಾಡಿದ್ದ ಈ ಗ್ಯಾಂಗ್‌ನ ಸದಸ್ಯರು, ಓಜಿ ಕುಪ್ಪಂ ಅನ್ನೋ ಒಂದೇ ಊರಿನಿಂದ ಬಂದವರು.

ನೆಲಮಂಗಲ ಗ್ರಾಮಾಂತರ ಪೊಲೀಸರು ಗಸ್ತಿನಲ್ಲಿ ಇದ್ದಾಗ ಟಿ ಬೇಗೂರಿನ ಬ್ಯಾಂಕ್‌ ಆಫ್‌ ಇಂಡಿಯಾ ಬಳಿ 4 ಜನ ಅಪರಿಚಿತರು ಅನುಮಾನಾಸ್ಪದವಾಗಿ ಹೋಡಾಡುತ್ತಿದ್ದು, ಹತ್ತಿರಕ್ಕೆ ಹೋಗುವಷ್ಟರಲ್ಲಿ ಬೈಕ್‌ ಸ್ಟಾರ್ಟ್‌ ಮಾಡಿಕೊಂಡು ಪರಾರಿಯಾಗಲು ಯತ್ನಿಸಿದ್ದರು. ಆ ವೇಳೆ ಪೊಲೀಸರು ಆರೋಪಿಗಳನ್ನ ಬಂಧಿಸಿ ವಿಚಾರಣೆ ನಡೆಸಿದಾಗ ನಾವು ಓ ಜಿ ಕುಪ್ಪಂ ಗ್ಯಾಂಗ್‌ ನವರು ಎಂದು ಬಾಯಿಬಿಟ್ಟಿದ್ದಾರೆ.

ಅಲ್ಲದೆ ನೆಲಮಂಗಲ, ಆನೇಕಲ್, ದೊಡ್ಡಬಳ್ಳಾಪುರ, ಅತ್ತಿಬೆಲೆ, ಹೆಬ್ಬಗೋಡಿ, ಜಿಗಣಿ, ಸೇರಿದಂತೆ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಅಟೆಂಷನ್‌ ಡೈವರ್ಷನ್‌ ಕೇಸ್‌ ಗಳಲ್ಲಿ ಭಾಗಿಯಾಗಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಹಣ ಡ್ರಾ ಮಾಡಿಕೊಂಡು ಬರುವವರ ಬಳಿ ದರೋಡೆ ಮಾಡಲು ಹೊಂಚು ಹಾಕುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ:ಸಿಎಂ ಬೊಮ್ಮಾಯಿ ಅವರಿಂದಲೇ ನೈಟ್ ಕರ್ಫ್ಯೂ ಉಲ್ಲಂಘನೆ; ರಾತ್ರಿ 9ರ ಬಳಿಕವೂ ಜನರಿಂದ ಅಹವಾಲು ಸ್ವೀಕಾರ...!

ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಸ್ಪಿ ಡಾ.ಕೋನವಂಶಿ ಕೃಷ್ಣ ಪತ್ರಿಕಾಗೋಷ್ಠಿಯನ್ನ ಉದ್ದೇಶಿಸಿ ಮಾತನಾಡಿ, ಈ ರೀತಿಯ ಗ್ಯಾಂಗ್ ಜಿಲ್ಲೆಯಾದ್ಯಂತ ಸಕ್ರಿಯವಾಗಿದೆ. ಎಲ್ಲೆ ಯಾರೆ ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಕೂಡಲೇ 112 ಗೆ ಕರೆ ಮಾಡುವ ಮೂಲಕ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ. ಅಪರಾಧ ಕೃತ್ಯಗಳು ನಡೆಯದಂತೆ ಎಚ್ಚರಿಕೆ ವಹಿಸಲು ಸಾರ್ವಜನಿಕರಲ್ಲಿ ಜಾಗೃತಿ‌ ಅವಶ್ಯ ಎಂದು ತಿಳಿಸಿದರು.

ಒಟ್ಟಾರೆ ದರೋಡೆ ಮಾಡುವುದನ್ನೇ ಕಸುಬು ಮಾಡಿಕೊಂಡಿರುವ ಓಜಿ ಕುಪ್ಪಂ ಗ್ಯಾಂಗ್‌ನ ಕೆಲ ಸದಸ್ಯರು ಸದ್ಯ ಪೊಲೀಸರ ಅಥಿಥಿಗಳಾಗಿದ್ದಾರೆ. ಬಂಧಿತರು ಸುಮಾರು 10ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆರೋಪಿತರಾಗಿರುವುದು ತಿಳಿದುಬಂದಿದೆ. ಬಂಧಿತರಿಂದ 15 ಲಕ್ಷದ 20 ಸಾವಿರ ನಗದು ಹಾಗೂ 3 ಬೈಕ್‌ ಜಪ್ತಿ ಮಾಡಲಾಗಿದೆ.
Published by:Latha CG
First published: