ಬೆಂಗಳೂರಲ್ಲಿ ಎಲ್ಲೇ ಅಪರಾಧವಾದರೂ ಪೊಲೀಸರಿಗೆ ನಾವೇ ಟಾರ್ಗೆಟ್: ಈ ಬುಡಕಟ್ಟು ಮಂದಿ ಅಳಲು
ದೊಡ್ಡಬಳ್ಳಾಪುರದಲ್ಲಿರುವ ಬುಟ್ಟಿ ಹೆಣೆಯುವ ಕಸುಬಿನ ಬುಡ್ಗ ಜನಾಂಗದವರು ತಮಗೆ ಪೊಲೀಸರ ಹಿಂಸೆ ತಾಳಲಾಗುತ್ತಿಲ್ಲ. ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಅಲವತ್ತುಕೊಂಡಿದ್ದಾರೆ.
ಬೆಂಗಳೂರು ಗ್ರಾಮಾಂತರ: ಯಾರಿಗೆ ಬಂತು ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ ಅನ್ನೋ ಕ್ರಾಂತಿ ಗೀತೆಯನ್ನ ನೀವೆಲ್ಲ ಕೇಳಿರ್ತೀರ. ಈ ಕ್ರಾಂತಿ ಗೀತೆಯಂತೆ ಅಲ್ಲೊಂದು ಗುಂಪಿನ ಜನರ ಪರಿಸ್ಥಿತಿ ಪ್ರಶ್ನಿಸುವಂತಾಗಿದೆ, ಸ್ವಾತಂತ್ರ್ಯ ಬಂದು 75 ವರ್ಷ ಕಳೆದರು ಪೊಲೀಸರಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿಲ್ಲ ಎನ್ನುತ್ತಿದ್ದಾರೆ ಅಲ್ಲಿ ನೆಲೆಸಿರುವ ಬುಡ್ಗ ಎಂಬ ಬುಡಕಟ್ಟು ಜನಾಂಗದ ಜನರು. ಊರ ಹೊರಗಿನ ಗುಡಿಸಲುಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಜನಾಂಗ ಬುಟ್ಟಿ ಹೆಣೆಯುವಂತಹ ಕುಲಕಸುಬ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದ್ರೆ ಇಲ್ಲಿನ ಗುಡಿಸಲುಗಳಲ್ಲಿ ಗಂಡಸರುಗಳಿಲ್ಲದೆ ಕಣ್ಣೀರಿಡುತ್ತಿದ್ದಾರೆ ಇಲ್ಲಿನ ಮಹಿಳೆಯರು. ಬಡತನದ ಬೇಗೆಯಲ್ಲಿ ಬೇಯುತ್ತಾ ಕಣ್ಣೀರಿಡುತ್ತಿರುವ ಈ ಕುಟುಂಬಗಳ ಪರಿಸ್ಥಿತಿ ನಿಜಕ್ಕೂ ಶೋಚನೀಯ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕು ಮದುರೆ ಶನಿಮಹಾದೇವ ಸನ್ನಿದಿಯ ಸಮೀಪದಲ್ಲೇ ಇರುವ ಕೋಡಿಪಾಳ್ಯ ಗ್ರಾಮದಲ್ಲಿ ನೆಲೆಸಿರುವ ಬುಡ್ಗ ಜನಾಂಗ ಸಮುದಾಯ ಪರಿಸ್ಥಿತಿ ಹೇಳತೀರದಂತಾಗಿದೆ.
ಕಣ್ಣೀರಲ್ಲಿ ಕೈ ತೊಳೆಯುತ್ತಿರುವ ನಿವಾಸಿಗಳು: ಇಲ್ಲಿನ ಕುಟುಂಬಗಳ ಮಹಿಳೆಯರು ಪ್ರತಿನಿತ್ಯ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ ಎಂದರೆ ತಪ್ಪಾಗಲಾರದು, ಇವರ ಕಣ್ಣೀರಿಗೆ ಕಾರಣ ನಮ್ಮ ಪೊಲೀಸ್ ಇಲಾಖೆ ಎಂದು ಇಲ್ಲಿನ ಜನ ಆರೋಪಿಸುತ್ತಿದ್ದಾರೆ. ಪೊಲೀಸರು ನಮ್ಮ ಗಂಡುಮಕ್ಕಳನ್ನ ಕರ್ಕೊಂಡು ಹೋಗಿ ಹಿಂಸಿಸುತ್ತಿರುತ್ತಾರೆ, ಒಂದು ಆಂಬುಲೆನ್ಸ್ ಸೈರನ್ ಬಂದ್ರು ನಮ್ ಮಕ್ಳು ಹೋಡಿ ಹೋಗ್ತಾರೆ, ಮನೆಗಳಿಗೆ ಸರಿಯಾಗಿ ಬರೋದಿಲ್ಲ ಎಂದು ಪ್ರತಿದಿನ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಪ್ರತಿಭಾರಿ ಸಮಸ್ಯೆ ಆದಾಗಲು ಊರಿನ ಮುಖಂಡರು ಇವರ ಸಹಾಯಕ್ಕೆ ನಿಲ್ಲುತ್ತಿದ್ದು, ಯಾರಿಗೆ ಬಂದಿದೆ ಸ್ವಾತಂತ್ರ್ಯ ಎಂದು ಪ್ರಶ್ನಿಸುತ್ತಿದ್ದಾರೆ.
ಅಪರಾಧ ಕೃತ್ಯಗಳು ನಡೆದರೆ ಇವರೇ ಟಾರ್ಗೆಟ್: ಬೆಂಗಳೂರು ನಗರ ಸೇರಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಎಲ್ಲೇ ಮನೆಗಳ್ಳತನ, ಕಳ್ಳತನ, ದರೋಡೆ, ರಾಬರಿ, ಸರಗಳ್ಳತನ ಪ್ರಕರಣಗಳು ನಡೆದರೂ ಮೊದಲು ಪೊಲೀಸರಿಗೆ ಆಹಾರವಾಗೋದು ಈ ಗುಡಿಸಲುವಾಸಿ ಗಂಡಸರೇ. ಆರೋಪಿಗಳ ವಿಚಾರಣೆ ನೆಪದಲ್ಲಿ ಇಲ್ಲಿನ ಯುವಕರನ್ನ ವಾರಾನುಗಟ್ಟಲೆ ಕರೆದುಕೊಂಡು ಹೋಗಿ ಪೊಲೀಸರು ಹಿಂಸಿಸುತ್ತಾರಂತೆ. ನಾವು ತಪ್ಪು ಮಾಡಿಲ್ಲ ಸರ್, ನಮ್ಮನ್ನ ಬಿಟ್ಟು ಬಿಡಿ ಎಂದು ಎಷ್ಟೇ ಕೇಳಿಕೊಂಡರೂ ಬಿಡದೆ ದೈಹಿಕ ಹಾಗೂ ಮಾನಸಿಕವಾಗಿ ಹಿಂಸಿಸುತ್ತಾರೆ ಎನ್ನಲಾಗಿದೆ.
ಜ್ಯುವೆಲರಿ ಶಾಪ್ ತೋರಿಸುವಂತೆ ಒತ್ತಾಯ: ಇಲ್ಲಿನ ಜನರನ್ನ ಕರೆದುಕೊಂಡು ಹೋಗಿ ಒಳ್ಳೊಳ್ಳೆ ಒಡವೆ ಅಂಗಡಿಗಳು, ಸೇಟು ಅಂಗಡಿಗಳನ್ನ ತೋರಿಸು ಎಂದು ಹಿಂಸಿಸುತ್ತಾರಂತೆ. ಅಷ್ಟೆ ಅಲ್ಲ ಅರ್ಧ ರಾತ್ರಿಲಿ ಗುಡಿಸಲುಗಳಿಗೆ ದಾಳಿ ನಡೆಸಿ ಕದ್ದಿರುವ ಚಿನ್ನಾಭರಣ ಎಲ್ಲಿಟ್ಟೀದ್ದೀರೋ ಎಂದು ಚಿತ್ರ ಹಿಂಸೆ ನೀಡುತ್ತಾರಂತೆ. ಊರೂರುಗಳ ಮೇಲೆ ಅಲೆದು ಪಿನ್ನು ಏರ್ಪಿನ್ನು ಮಾರಾಟ ಮಾಡುತ್ತಾ, ಮಿಕ್ಸಿ ಕುಕ್ಕರು ರಿಪೇರಿ ಮಾಡುತ್ತಾ ಜೀವನ ಮಾಡೋ ನಮಗೆ ಪೊಲೀಸರ ಹಿಂದೆ ತಾಳಲು ಆಗುತ್ತಿಲ್ಲ. ನಾವು ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಕಣ್ಣೀರಿಡುತ್ತಿದ್ದಾರೆ.
ಮನೆ ಬಿಡುತ್ತಿರುವ ಯುವಕರು: ಇಲ್ಲಿನ ನಿವಾಸಿ ಗಂಗಮ್ಮ ನ್ಯೂಸ್18 ಕನ್ನಡದ ಜೊತೆ ಮಾತನಾಡಿ, ಪೊಲೀಸರು ಚಿತ್ರ ಹಿಂಸೆ ಕೊಡ್ತಾ ಇದಾರೆ ಸ್ವಾಮಿ, ಒಂದು ಕಾರು ನಮ್ಮ ಹಟ್ಟಿ ಕಡೆ ಬಂದ್ರೆ ನಮ್ಮ ಹುಡುಗರು ವಿಲ ವಿಲನೆ ಒದ್ದಾಡಿಬಿಡ್ತಾರೆ. ಅಷ್ಟೇ ಅಲ್ಲ ಮನೆ ಬಿಟ್ಟು ವಾರಾನುಗಟ್ಟಲೆ ತಲೆಮರೆಸಿಕೊಂಡು ದೂರದೂರುಗಳಿಗೆ ಹೋಗಿ ಬಿಡ್ತಾರೆ. ಈ ಗುಡಿಸಲುಗಳಲ್ಲಿ ಗಂಡಸರು ಇಲ್ಲದೆ ಬರೀ ಹೆಣ್ಣು ಮಕ್ಕಳು ಜೀವನ ಮಾಡೋದು ಹೆಂಗೆ. ನನ್ನ ಮಗ ಒಂದು ವಾರದ ಹಿಂದೆ ಮನೆ ಬಿಟ್ಟಿದ್ದವನು ಇವತ್ತು ಬಂದಿದ್ದಾನೆ. ಇಲ್ಲಿ ಎಲ್ಲರೂ ದುಡಿದು ತಿನ್ನುತ್ತಿದ್ದೇವೆ. ಆದ್ರೆ ಬಡಿದು ತಿನ್ನುತ್ತಿಲ್ಲ ಪೊಲೀಸರು ಇದೇ ರೀತಿ ಹಿಂಸಿಸುತ್ತಿದ್ದರೆ ನಮ್ಮ ಜನಗಳೆಲ್ಲ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಕಣ್ಣೀರಿಟ್ಟರು.
ಸ್ಥಳಿಯ ಜನಪ್ರತಿನಿಧಿಗಳ ನೆರವು: ಯಾವುದೇ ಅಪರಾದ ಕೃತಗಳಲ್ಲಿ ಭಾಗಿಯಾಗದ ಯುವಕರನ್ನ ಪೊಲೀಸರು ವಿಚಾರಣೆ ನೆಪದಲ್ಲಿ ಕರೆದುಕೊಂಡು ಹೋಗಿ ಹಿಂಸಿಸುವ ವೇಳೆ ಇಲ್ಲಿನ ಜನ ಸ್ಥಳೀಯ ಮುಖಂಡರ ಮೊರೆ ಹೋಗುತ್ತಾರಂತೆ. ಆಗ ಬೆಂಗಳೂರಿನ ಯಾವುದೇ ಪೊಲೀಸರು ಇವರನ್ನ ಬಂಧಿಸಿ ಎಳೆದೋಯ್ದಾಗ ಸ್ಥಳೀಯ ಮುಖಂಡರು ಪೊಲೀಸ್ ಠಾಣೆಗಳಿಗೆ ಅಲೆದು ಇವರನ್ನ ಬಿಡಿಸಿಕೊಂಡು ಬರಬೇಕು. ನಮಗಂತೂ ಪೊಲೀಸರಿಂದ ಮಾನಸಿಕವಾಗಿ ತೊಂದರೆಯಾಗುತ್ತಿದೆ. ಇವರಲ್ಲಿ ಕೆಲವರು ನಮ್ಮ ಹೊಲ ಗದ್ದೆ ತೋಟಗಳಲ್ಲಿ ಕೆಲಸ ಮಾಡುತ್ತಾರೆ. ಅವರನ್ನೆಲ್ಲ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದೀರ ಎಂದು ಪೊಲೀಸರು ಎಳೆದುಕೊಂಡು ಹೋಗುತ್ತಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ಗಮನವಹಿಸಿ ಇಲ್ಲಿನ ಬುಡಕಟ್ಟು ಜನಾಂಗದ ನೆರವಿಗೆ ಬರಬೇಕು ಎನ್ನುತ್ತಾರೆ ಸ್ಥಳೀಯ ನಿವಾಸಿ ಪುಷ್ಪಲತಾ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಸಮಸ್ಯೆ ಬಗೆಹರಿಸಲು ಮುಂಗಾದಬೇಕಿದೆ.