ಬೆಂಗಳೂರು: ಬೆಂಗಳೂರಿನ ಅನೇಕ ಕೆರೆಗಳಿಗೆ ಪುನರ್ಜೀವನದ ಅವಶ್ಯಕತೆ ಇದೆ. ಬೆಂಗಳೂರಿನ 28.1 ಎಕರೆ ವಿಸ್ತೀರ್ಣದ ಬಿಂಗಿಪುರ ಕೆರೆ (Bingipura Lake) ಕೂಡಾ ಇದರಲ್ಲೊಂದು. ಬೆಂಗಳೂರು ಗ್ರಾಮಾಂತರದ ಆನೇಕಲ್ ತಾಲ್ಲೂಕಿನ ಈ ಕೆರೆಯ ನೀರನ್ನು ವರ್ಷವಿಡೀ ಬಹುಪಯೋಗಕ್ಕೆ ಬಳಸಿಕೊಳ್ಳಬಹುದಾಗಿದೆ. ಆಗಸ್ಟ್ 11ರಂದು ಆರಂಭವಾದ ಈ ಕೆರೆ ಪುನರುಜ್ಜೀವನ ಕೆಲಸ ಇಷ್ಟು ಬೇಗ ಅಂದ್ರೆ ಒಂದು ತಿಂಗಳೊಳಗಾಗಿ ಮುಗಿದಿದ್ದು ಸುತ್ತಮುತ್ತಲ ಸಿವಾಸಿಗಳಿಗೆ ಭಾರೀ ಅಚ್ಚರಿಯ ಜೊತೆಗೆ ಖುಷಿ ತಂದಿದೆ. ಈ ಯೋಜನೆಯಡಿ ಕೆರೆಯ ನೀರಿನಲ್ಲಿರುವ ಮಲಿನವನ್ನು ತೆಗೆದುಹಾಕುವುದು, ಹೂಳು ತೆಗೆಯುವುದು ಮತ್ತು ಸ್ಟ್ರೀಂಗಳನ್ನು ಸ್ವಚ್ಛಗೊಳಿಸುವ ಮೂಲಕ ಕೆರೆಗೆ ಸರಾಗವಾಗಿ ನೀರು ಹರಿಯುವಂತೆ ಮಾಡಲಾಗಿದೆ. ಇದರಿಂದಾಗಿ ಮಳೆನೀರು ಸಮರ್ಪಕವಾಗಿ (Rain Water Storage) ಕೆರೆಯಲ್ಲಿ ಸಂಗ್ರಹವಾಗುತ್ತದೆ. ಇದಲ್ಲದೇ, ಹೂಳನ್ನು ಶಕ್ತಿಯುತವಾದ ಬಂಡುಗಳನ್ನು ನಿರ್ಮಾಣ ಮಾಡಲು ಬಳಸಲಾಗಿದ್ದು, ಸುತ್ತಮುತ್ತಲಿನ ನಾಗರಿಕರಿಗೆ ಒಂದು ಉತ್ತಮವಾದ ವಾಕಿಂಗ್ ಪಥ ನಿರ್ಮಾಣವಾಗುವ ಜತೆಗೆ ಒತ್ತುವರಿ ತಪ್ಪಿದಂತಾಗಿದೆ.
ಇದೀಗ ಕೆರೆಯು ಅತ್ಯಂತ ಸುರಕ್ಷಿತವಾಗಿದೆ ಮತ್ತು ಮಕ್ಕಳು ಹಾಗೂ ಸಾಕು ಪ್ರಾಣಿಗಳಿಗೆ ಸೂಕ್ತವಾದ ತಾಣವಾಗಿದೆ. ಏಕೆಂದರೆ, ಇದರ ಆಳವಿಲ್ಲದ ಮಟ್ಟದಿಂದಾಗಿ ಸುತ್ತಮುತ್ತಲಿನ ನಿವಾಸಿಗಳಿಗೆ ಯಾವುದೇ ಅಡ್ಡಿ ಉಂಟಾಗುವುದಿಲ್ಲ.
ಅಂದ್ಹಾಗೆ ಬಿಂಗಿಪುರ ಕೆರೆಯು 4.5 ಲಕ್ಷದಿಂದ 4.75 ಲಕ್ಷ ಕ್ಯೂಬಿಕ್ ಮೀಟರ್ ನಷ್ಟು ನೀರು ಶೇಖರಣೆ ಸಾಮರ್ಥ್ಯವನ್ನು ಹೊಂದಿದೆ. ಇದರ ಪುನರುಜ್ಜೀವನದ ನಂತರ 4 ರಿಂದ 5 ಕಿಲೋಮೀಟರ್ ಸುತ್ತಮುತ್ತ ಇರುವ 200 ರಿಂದ 300 ಬೋರ್ ವೆಲ್ ಗಳ ಅಂತರ್ಜಲ ಮಟ್ಟ ಸುಧಾರಣೆಯಾಗಲಿದೆ. ನಾಲ್ಕು ಗ್ರಾಮಗಳ 5500 ಕ್ಕೂ ಹೆಚ್ಚು ಜನರಿಗೆ ಪ್ರಯೋಜನವಾಗಲಿದೆ ಮತ್ತು ಅವರಿಗೆ ಉತ್ತಮ ಗುಣಮಟ್ಟದ ಕುಡಿಯುವ ನೀರು ಲಭ್ಯವಾಗಲಿದೆ. ಸಂಸ್ಕರಿತ ತ್ಯಾಜ್ಯ ನೀರನ್ನು ಕೆರೆಯಿಂದ ಹೊರ ಬಿಡಲಿದ್ದು, ಇದರಿಂದ 50 ರಿಂದ 75 ಎಕರೆಯಲ್ಲಿ ಕೃಷಿ ಬಳಕೆ ಮಾಡಿಕೊಳ್ಳಬಹುದಾಗಿದೆ.
ಇದನ್ನೂ ಓದಿ: Justice Satish Chandra Sharma; ಕರ್ನಾಟಕ ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಸತೀಶ್ ಚಂದ್ರ ಶರ್ಮಾ ನೇಮಕ
ವಿಶೇಷವೆಂದರೆ, ಬಿಂಗಿಪುರ ಕೆರೆಯನ್ನು ಟೆಕ್ನಾಲಜಿ ಸಹಾಯದಿಂದ ಪರಿಸರ ಸ್ನೇಹಿಯಾಗಿ ಪುನರುಜ್ಜೀವನಗೊಳಿಸಲಾಗುತ್ತಿದೆ. ಇದರೊಂದಿಗೆ ಅತ್ಯಾಧುನಿಕ ಪ್ರಾಕೃತಿಕ ತ್ಯಾಜ್ಯ ಸಂಸ್ಕರಣೆ ವ್ಯವಸ್ಥೆಯನ್ನು ಕೈಗೊಳ್ಳಲಾಗುತ್ತಿದೆ. ಇಲ್ಲಿ ಯಾವುದೇ ಕಲ್ಲು ಗೋಡೆ ಕಟ್ಟುವುದಾಗಲೀ, ಕಾಂಕ್ರೀಟ್, ಸ್ಟೀಲ್ ಅಥವಾ ಯಾವುದೇ ಆಧುನಿಕ ಉತ್ಪನ್ನಗಳನ್ನು ಬಳಕೆ ಮಾಡಲಾಗುತ್ತಿಲ್ಲ. ಅದೇ ರೀತಿ, ಈ ಕಾಮಗಾರಿಗಾಗಿ ವಿದ್ಯುತ್, ರಾಸಾಯನಿಕಗಳು ಅಥವಾ ಯಂತ್ರೋಪಕರಣಗಳನ್ನು ಬಳಕೆ ಮಾಡುತ್ತಿಲ್ಲ. ಇದರಿಂದ ಕಾರ್ಬನ್ ಪ್ರಮಾಣವು ಕಡಿಮೆಯಾಗಲಿದೆ ಮತ್ತು ಕೆರೆಯನ್ನು ಸಂಪೂರ್ಣವಾಗಿ ಪರಿಸರಸ್ನೇಹಿ ತಂತ್ರಗಳ ಮೂಲಕ ಪುನರುಜ್ಜೀವನಗೊಳಿಸಲಾಗುತ್ತಿದೆ ಹಾಗೂ ಕೆರೆಯ ಮೂಲವನ್ನು ಕಾಪಾಡಿಕೊಳ್ಳಲಾಗುತ್ತಿದೆ.
ಹುಲಿಮಂಗಲ ಗ್ರಾಮಕ್ಕೆ ಸೇರಿದ ಈ ಕೆರೆ ಬೆಂಗಳೂರು ಗ್ರಾಮಾಂತರ ವ್ಯಾಪ್ತಿಗೆ ಸೇರುತ್ತದೆ. ಈ ಕೆರೆಯ ಕಾಯಕಲ್ಪದ ನಂತರ, ಮಳೆನೀರು ಮತ್ತು ಕೊಳಚೆ ನೀರು ಮಿಶ್ರಣವಾಗುವುದಿಲ್ಲ. ಮಳೆಗಾಲದಲ್ಲಿ ತುಂಬುವ ಕೆರೆಯಲ್ಲಿ ಚಳಿಗಾಲದಲ್ಲಿ ಶೇ.70 ರಷ್ಟು ಮತ್ತು ಬೇಸಿಗೆಕಾಲದಲ್ಲಿ ಶೇ.50 ರಷ್ಟು ನೀರು ಸಂಗ್ರಹವಾಗಿರುತ್ತದೆ. ಈ ಕೆರೆಯ ಪುನರುಜ್ಜೀವನ ಕೆಲಸವನ್ನು ಅಲ್ಲೆರ್ಗನ್ ಸಂಸ್ಥೆ ಗ್ರೀನ್ ಯಾತ್ರ ಟ್ರಸ್ಟ್ ಮತ್ತು ಆನಂದ್ ಮಲ್ಲಿಗವಾಡ್ ಸಂಸ್ಥೆಗಳ ಸಹಭಾಗಿತ್ವದಲ್ಲಿ ಮಾಡಿದೆ. ಇದರ ಜತೆಗೆ ಕೆರೆಯ ಸುತ್ತಮುತ್ತ 1000 ಕ್ಕೂ ಅಧಿಕ ವಿವಿಧ ಜಾತಿಯ ಸಸ್ಯಗಳನ್ನು ನೆಡುವ ಮೂಲಕ ಕೆರೆಯ ಸೌಂದರ್ಯ ಹೆಚ್ಚಾಗುವಂತೆ ಮತ್ತು ಅದರ ಮೂಲ ಸ್ವರೂಪವನ್ನು ಕಾಯ್ದುಕೊಳ್ಳುವಂತೆ ಮಾಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ