ಆನೇಕಲ್ : ಲಾಕ್ ಡೌನ್ 2.0 ಪರಿಣಾಮವಾಗಿ ಸ್ಥಗಿತಗೊಳಿಸಲಾಗಿದ್ದ ಬನ್ನೇರುಘಟ್ಟ ಜೈವಿಕ ಉದ್ಯಾನವನ ಬರೋಬ್ಬರಿ 64 ದಿನಗಳ ಬಳಿಕ ಇಂದು ಪುನರ್ ಆರಂಭವಾಗಿದ್ದು, ಕೊರೋನಾ ನಿಯಮ ಪಾಲನೆಯೊಂದಿಗೆ ಉದ್ಯಾನವನ ವೀಕ್ಷಣೆಗೆ ಪ್ರವಾಸಿಗರಿಗೆ ಮುಕ್ತಗೊಳಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕೊರೊನಾ ನಿಯಮಗಳ ಪಾಲನೆಯೊಂದಿಗೆ ಬನ್ನೇರುಘಟ್ಟ ಜೈವಿಕ ಉದ್ಯಾನವನ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.
ಹೌದು ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಜೈವಿಕ ಉದ್ಯಾನವನ ಪ್ರಕೃತಿ ಮಡಿಲಿನಲ್ಲಿ ಕಂಗೊಳಿಸುತ್ತಿರುವ ವನ್ಯಜೀವಿಗಳ ಆಶ್ರಯ ತಾಣ. ಇಲ್ಲಿ ಸಾವಿರಕ್ಕೂ ಅಧಿಕ ಪ್ರಭೇದದ ಜೀವರಾಶಿಗಳಿದ್ದು, ಪ್ರಾಣಿ ಪ್ರಿಯರನ್ನು ತನ್ನತ್ತ ಸೆಳೆಯುವ ಆಕರ್ಷಣೀಯ ತಾಣ. ಆದ್ರೆ ಮಹಾಮಾರಿ ಕೊರೊನಾ ಎರಡನೇ ಅಲೆ ತಡೆಯುವ ಸಲುವಾಗಿ ಎರಡು ತಿಂಗಳಿಗೂ ಅಧಿಕ ಸಮಯ ಪ್ರವಾಸಿಗರ ಭೇಟಿ ನಿಷೇಧಿಸಲಾಗಿತ್ತು. ಇದೀಗ ಇಂದಿನಿಂದ ಹಲವು ಕಟ್ಟುನಿಟ್ಟಿನ ಕ್ರಮಗಳೊಂದಿಗೆ ಉದ್ಯಾನವನ ಪ್ರವಾಸಿಗರಿಗೆ ಮುಕ್ತವಾಗಿದೆ. ಪ್ರವಾಸಿಗರ ಹಿತದೃಷ್ಟಿಯಿಂದ ಮೃಗಾಲಯ, ಚಿಟ್ಟೆ ಉದ್ಯಾನ ಮತ್ತು ಸಫಾರಿಯ ವೀಕ್ಷಕರ ಸಂಖ್ಯೆಯನ್ನು ಮಿತಿಗೊಳಿಸಲಾಗಿದೆ.
ಅಂದಹಾಗೆ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವ ದೃಷ್ಠಿಯಿಂದ ಒಂದು ಕುಟುಂಬದ ಗರಿಷ್ಠ 7 ಮಂದಿಯನ್ನು 1 ಗುಂಪಾಗಿ ಪರಿಗಣಿಸಲಾಗುತ್ತಿದೆ. ಪ್ರತಿ ಗುಂಪು ಕನಿಷ್ಠ 6 ಅಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸಫಾರಿಗೆ ಹವಾನಿಯಂತ್ರಿತವಲ್ಲದ ಬಸ್ಸುಗಳು ಶೇ 50% ಪ್ರವಾಸಿಗರು ಕಿಟಕಿ ಬದಿಯ ಸೀಟುಗಳಲ್ಲಿ ಕೂತು ಪ್ರಾಣಿಗಳನ್ನು ವೀಕ್ಷಿಸಬಹುದಾಗಿದೆ. ಜೊತೆಗೆ ಜೀಪ್ಗಳಲ್ಲಿ ಸಫಾರಿಗೆ ತೆರಳಲು ಕುಟುಂಬಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಆದರೆ ಚಾಲಕ ಮತ್ತು ನಡುವೆ ರಕ್ಷಣಾತ್ಮಕ ಪರದೆ ಅಳವಡಿಸಿದ್ದು, ಜೀಪ್ ಸಫಾರಿ ಕುಟುಂಬ ಗುಂಪಿಗೆ ಮಾತ್ರ ಲಭ್ಯವಿದೆ. ಟಿಕೇಟ್ ಕಾಯ್ದಿರಿಸುವುದು ಸಂಪೂರ್ಣವಾಗಿ ಆನ್ಲೈನ್ಗೊಳಿಸಲಾಗಿದೆ. ಕಡ್ಡಾಯವಾಗಿ ಫೇಸ್ ಮಾಸ್ಕ್ ಧರಿಸುವುದು. ಮೊದಲು ಪ್ರವೇಶದ್ವಾರದಲ್ಲಿ ಡಿಜಿಟಲ್ ಥರ್ಮೋಮೀಟರ್ ಮೂಲಕ ಸ್ಕ್ಯಾನ್ ಮಾಡಲಾಗುವುದು. ಸ್ಯಾನಿಟರೈಸ್, ಹ್ಯಾಂಡ್ ವಾಶ್, ಸೇರಿದಂತೆ ಅಗತ್ಯ ವ್ಯವಸ್ಥೆಯನ್ನು ಎಲ್ಲಾ ಪ್ರವೇಶ ದ್ವಾರ ಮತ್ತು ನಿರ್ಗಮನ ಪ್ರದೇಶದ ಬಳಿ ವ್ಯವಸ್ಥೆ ಮಾಡಲಾಗಿದೆ. ಆದರೆ ಉದ್ಯಾನವನದ ರೆಸ್ಟೋರೆಂಟ್ಗಳಲ್ಲಿ ಊಟ ಉಪಹಾರಕ್ಕೆ ನಿರ್ಬಂಧವಿದ್ದು, ಕೇವಲ, ಬಿಸ್ಕೆಟ್, ನೀರು ಮಾತ್ರ ಪ್ರವಾಸಿಗರಿಗೆ ಒದಗಿಸಲಾಗುತ್ತಿದೆ ಎಂದು ಉದ್ಯಾನವನದ ಕಾರ್ಯ ನಿರ್ವಾಹಕ ನಿರ್ದೇಶಕಿ ವನಶ್ರೀ ವಿಪಿನ್ ಸಿಂಗ್ ತಿಳಿಸಿದ್ದಾರೆ.
ಇದನ್ನು ಓದಿ: ಸಿಗರೇಟ್ ಸೇವನೆಯಿಂದ ಕೋವಿಡ್ಗೆ ತುತ್ತಾಗುವ ಸಾಧ್ಯತೆ ಕಡಿಮೆ ಎಂದು ಹೈಕೋರ್ಟ್ಗೆ ಅರ್ಜಿ ಸಲ್ಲಿಕೆ!
ಇನ್ನೂ ಲಾಕ್ ಡೌನ್ ಬಳಿಕ ಇದೆ ಮೊದಲ ಬಾರಿಗೆ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಭೇಟಿ ನೀಡುತ್ತಿದ್ದೆವೆ. ಮೊದಲು ಪಾರ್ಕಿಂಗ್ ಬಳಿ ವಾಹನಗಳಿಗೆ ಸ್ಯಾನಿಟರೈಸ್, ಬಳಿಕ ಥರ್ಮಲ್ ಸ್ಕ್ರೀನಿಂಗ್ ಪ್ರಮುಖ ಕಡೆ ಸ್ಯಾನಿಟರೈಸ್ ಸಿಂಪಡಣೆ ಸೇರಿದಂತೆ ಉದ್ಯಾನವನ ಸಿಬ್ಬಂದಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಒಳಗೊಂಡಿದೆ. ಶೌಚಾಲಯ, ವಿಶ್ರಾಂತಿ ಸ್ಥಳಗಳು, ಲಗೇಜ್ ರೂಮ್, ಗಾಲಿಕುರ್ಚಿಗಳು, ಬ್ಯಾಟರಿ ಚಾಲಿತ ವಾಹನಗಳ ಸೌಲಭ್ಯವಿದೆ. ವಿಶ್ರಾಂತಿಗಾಗಿ ಉದ್ಯಾನವನದ ಒಳಗಡೆ ಮತ್ತು ಸುತ್ತಮುತ್ತಲು ಕಲ್ಲು ಬೆಂಚುಗಳನ್ನು ಒದಗಿಸಲಾಗಿದೆ. ವಾತಾವರಣ ಸಹ ಪ್ರಶಾಂತವಾಗಿದ್ದು, ಪ್ರಾಣಿಗಳು ಸಹ ಸ್ವಚ್ಛಂದವಾಗಿ ವಿಹರಿಸುತ್ತಿವೆ. ಹಾಗಾಗಿ ಪ್ರಾಣಿಗಳು ಪ್ರಕೃತಿಯನ್ನು ನೋಡಲು ಇಡೀ ಕುಟುಂಬ ಮನೆ ಮಂದಿ ಮಕ್ಕಳೊಂದಿಗೆ ಆಗಮಿಸಿದ್ದು, ಹೆಚ್ಚು ಖುಷಿ ತಂದಿದೆ ಎಂದು ಪ್ರವಾಸಿಗರಾದ ರಂಗಸ್ವಾಮಿ ಸಂತಸ ವ್ಯಕ್ತಪಡಿಸಿದ್ದಾರೆ.
ವರದಿ : ಆದೂರು ಚಂದ್ರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ