ಕಾಳಸಂತೆಯಲ್ಲಿ ರೆಮ್​ಡಿಸಿವಿರ್ ಮಾರಾಟ ದಂಧೆ; ಜಿಗಣಿಯ ಖಾಸಗಿ ಆಸ್ಪತ್ರೆ ಮೇಲೆ ಪೋಲಿಸರ ದಾಳಿ

ರೆಮ್ಡಿಸಿವಿರ್ ಔಷಧಕ್ಕಾಗಿ ಆಸ್ಪತ್ರೆಗೆ ಹೋದ ಬಡ ರೋಗಿಯ ಕುಟುಂಬಸ್ಥರಿಗೆ ಬೆಂಗಳೂರು ಹೊರವಲಯದ ಜಿಗಣಿಯಲ್ಲಿನ ಸುಹಾಸ್ ಆಸ್ಪತ್ರೆಯವರು ಒಂದು ಡೋಸ್ ರೆಮ್ಡಿಸಿವರ್ ಔಷಧಕ್ಕೆ 15 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು.

ರೆಮ್​ಡೆಸಿವಿರ್

ರೆಮ್​ಡೆಸಿವಿರ್

  • Share this:
ಆನೇಕಲ್ : ದೇಶ ಸೇರಿದಂತೆ ರಾಜ್ಯಾದ್ಯಂತ ಈ ಕರೊನಾ ಹೆಮ್ಮಾರಿಯ ಆರ್ಭಟಕ್ಕೆ ಜನ ನಲುಗಿ ಹೋಗಿದ್ದಾರೆ. ಇಂತಹ ತುರ್ತು ಪರಿಸ್ಥಿತಿಯಲ್ಲಿ ಇಲ್ಲೊಂದು ಖಾಸಗಿ ಆಸ್ಪತ್ರೆ ಕೊರೊನಾ ರೋಗಿಗಳಿಗೆ ಸಂಜೀವಿನಿಯಾದ ರೆಮ್ಡಿಸಿವರ್ ಔಷಧವನ್ನು ಕಾಳಸಂತೆಯಲ್ಲಿ ಮಾರಾಟ ದಂಧೆ ನಡೆಸುತ್ತಿದ್ದು, ಖಚಿತ ಮಾಹಿತಿ ಮೇರೆಗೆ ಆಸ್ಪತ್ರೆಯ ಮೇಲೆ ಪೋಲಿಸರು ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ಹೌದು... ಇಡೀ ದೇಶವೇ ಕರೋನಾ ಮಹಾಮಾರಿಯ ಸಂಕಷ್ಟದಿಂದ ಹೊರಬರಲು ಸರ್ಕಾರ ಮತ್ತು ವೈದ್ಯರು ಹರಸಾಹಸ ಪಡುತ್ತಿದ್ದಾರೆ ಆದರೆ ಬೆಂಗಳೂರು ಹೊರವಲಯದ ಜಿಗಣಿಯಲ್ಲಿನ ಸುಹಾಸ್ ಆಸ್ಪತ್ರೆಯು ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ. ರೆಮ್ಡಿಸಿವಿರ್ ಔಷಧಕ್ಕಾಗಿ ಆಸ್ಪತ್ರೆಗೆ ಹೋದ ಬಡ ರೋಗಿಯ ಕುಟುಂಬಸ್ಥರಿಗೆ ಜಿಗಣಿಯ ಸುಹಾಸ್ ಆಸ್ಪತ್ರೆಯವರು ಒಂದು ಡೋಸ್ ರೆಮ್ಡಿಸಿವರ್ ಔಷಧಕ್ಕೆ 15 ಸಾವಿರಕ್ಕೆ ಬೇಡಿಕೆ ಇಟ್ಟಿದ್ದಾರೆ.  ಶಾಂತಿನಗರದಿಂದ ರೆಮ್ಡಿಸಿವರ್ ಔಷಧಿಯನ್ನ ತರಿಸಿಕೊಡುತ್ತೇನೆಂದು ಹೇಳಿ ಎರಡು ಇಂಜೆಕ್ಷನ್​ಗೆ ಬರೋಬ್ಬರಿ 30 ಸಾವಿರ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಖಚಿತ ಮಾಹಿತಿ ಸಿಕ್ಕ ಬೆನ್ನಲ್ಲೇ ಫೀಲ್ಡ್​ಗೆ ಇಳಿದ ಜಿಗಣಿ ಇನ್ಸ್‌ಪೆಕ್ಟರ್ ಶೇಖರ್ ಮಾರ್ಗದರ್ಶನದ ತಂಡ ಸುಹಾಸ್ ಆಸ್ಪತ್ರೆ ಮೇಲೆ ದಾಳಿ ನಡೆಸಿ ಕಾಳಸಂತೆಯಲ್ಲಿ ರೆಮ್ಡಿಸಿವಿರ್ ಮಾರಾಟಕ್ಕೆ ಮುಂದಾಗಿದ್ದ ವೈದ್ಯ ಫಾರ್ಮನ್ ಅಲಿ ಹಾಗೂ ಸಿಬ್ಬಂದಿ ರಕ್ಷಿತ್ ಎನ್ನುವವರನ್ನು ಬಂಧಿಸಿದ್ದಾರೆ.

ಇನ್ನು, ಕಳೆದ ಬಾರಿ ಕೋವಿಡ್ ಬಂದ ಸಮಯದಲ್ಲಿಯೂ ಸಹ ಸುಹಾಸ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡದೆ ಅಮಾಯಕ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎನ್ನುವಂತಹ ಆರೋಪ ಕೇಳಿ ಬಂದಿತ್ತು. ಇದೀಗ ಮತ್ತೊಮ್ಮೆ ಕರೊನಾ ತುರ್ತು ಪರಿಸ್ಥಿತಿ ವೇಳೆ ಕಾಳಸಂತೆಯಲ್ಲಿ ರೆಮಿಡಿಸಿವಿರ್ ಮಾರಾಟ ದಂದೆಗೆ ಸುಹಾಸ್ ಆಸ್ಪತ್ರೆ ಕೈಹಾಕಿದ್ದು, ಜಿಗಣಿಯ ಸುಹಾಸ ಆಸ್ಪತ್ರೆ ಹಾಗೂ ಆಸ್ಪತ್ರೆಯ ಮಾಲೀಕ ಜಗದೀಶ್ ಹಿರೇಮಠ ಮೇಲೆ ಪ್ರಕರಣ ದಾಖಲು ಮಾಡಿದ್ದಾರೆ. ಎರಡು ದಿನದ ಹಿಂದೆ ಕರೋನಾ ಪಾಸಿಟಿವ್ ಆಗಿ ಆಸ್ಪತ್ರೆ ಸೇರಿದ್ದ ಜಿಗಣಿ ಠಾಣೆಯ ಇನ್ಸ್ಪೆಕ್ಟರ್ ಬಿ.ಕೆ ಶೇಖರ್ ಆಸ್ಪತ್ರೆಯಲ್ಲಿದ್ದುಕೊಂಡು ಸಂಪೂರ್ಣ ಮಾಹಿತಿಯನ್ನು ಕಲೆಹಾಕಿ ಬನ್ನೇರುಘಟ್ಟ ಠಾಣೆಯ ಇನ್ಸ್ಪೆಕ್ಟರ್ ಗೋವಿಂದ ಹಾಗೂ ಹೆಬ್ಬಗೋಡಿ ಠಾಣೆಯ ಇನ್ಸ್ಪೆಕ್ಟರ್ ಗೌತಮ್ ನೇತೃತ್ವದಲ್ಲಿ ತಂಡವನ್ನು ರಚನೆ ಮಾಡಿ ಆಸ್ಪತ್ರೆಯಲ್ಲಿ ಆರೋಪಿಗಳು ಹಣವನ್ನು ಪಡೆಯುವ ಸಂದರ್ಭದಲ್ಲಿ ರೆಡ್​ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಇದು ಇಡೀ ದೇಶವೇ ಸಂಕಷ್ಟದ ಸ್ಥಿತಿಯಲ್ಲಿ ಇರುವ ಸಂದರ್ಭ. ವೈದ್ಯ ನಾರಾಯಣೋ ಹರಿ ಅಂತಾರೆ. ಆದರೆ ಸುಹಾಸ್ ಆಸ್ಪತ್ರೆಯ ವೈದ್ಯರು ಬಡವರ ರಕ್ತ ಹೀರುವ ಕೆಲಸವನ್ನು ಮಾಡುತ್ತಿದ್ದಾರೆ. ಕಾಳಸಂತೆಯಲ್ಲಿ ಇಂಜೆಕ್ಷನ್ ಮಾರಾಟ ಮಾಡುವ ಮಾಹಿತಿಯನ್ನು ಕಲೆಹಾಕಿ ಉತ್ತಮ ಕೆಲಸವನ್ನು ಜಿಗಣಿ ಪೊಲೀಸರು ಮಾಡಿದ್ದಾರೆ. ಇಂತಹ ಉತ್ತಮ ಕಾರ್ಯದಲ್ಲಿ ಕೆಲಸ ಮಾಡಿದ ಎಲ್ಲಾ ಪೊಲೀಸರನ್ನು ಅಭಿನಂದಿಸುತ್ತೇನೆ ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ ಚನ್ನಣ್ಣನವರ್ ತಿಳಿಸಿದ್ದಾರೆ.

(ವರದಿ : ಆದೂರು ಚಂದ್ರು)
Published by:Sushma Chakre
First published: