ಅವ್ಯವಸ್ಥೆಗಳ ಆಗರವಾದ ಆನೇಕಲ್ ಆಸ್ಪತ್ರೆ; ಶವಗಳನ್ನು ಅದಲು-ಬದಲು ಮಾಡಿ ಕೆಂಗಣ್ಣಿಗೆ ಗುರಿಯಾದ ಸಿಬ್ಬಂದಿ!

ಹಿಲಲಿಗೆ ಗ್ರಾಮದ ವ್ಯಕ್ತಿಯ ಶವ ನಿಮಗೆ ನೀಡಲಾಗಿದೆ. ಶವ ಅದಲು ಬದಲು ಆಗಿದ್ದು, ಇಪ್ಪತ್ತು ಸಾವಿರ ನೀಡಿ ನಿಮ್ಮ ಶವ ತೆಗೆದುಕೊಂಡು ಹೋಗಿ ಎಂದು ಆನೇಕಲ್ ಸರ್ಕಾರಿ ಆಸ್ಪತ್ರೆಯವರು ಹೇಳಿದ್ದಾರೆ. ಇದು ಆನೇಕಲ್ ಸರ್ಕಾರಿ ಆಸ್ಪತ್ರೆ ವೈದ್ಯರುಗಳ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಆನೇಕಲ್ : ರಾಜ್ಯದಲ್ಲಿ ಕೊರೊನಾ ಸೋಂಕಿತರ ಪರದಾಟ ಮುಂದುವರೆದಿದೆ. ಸಕಾಲಕ್ಕೆ ಅಕ್ಸಿಜನ್ ಸೇರಿದಂತೆ ಅಗತ್ಯ ವೈದ್ಯಕೀಯ ಸೇವೆ ಸಿಗದೇ ಸೋಂಕಿತರ ಸಾವನ್ನಪ್ಪುತ್ತಿದ್ದಾರೆ. ಬೆಂಗಳೂರು ಹೊರವಲಯ ಆನೇಕಲ್​​ನಲ್ಲಿ ಕೊರೊನಾ ಸೋಂಕಿತರ ಪರದಾಟ ಮುಂದುವರಿದಿದೆ. ಸಕಾಲಕ್ಕೆ ಬೆಡ್ ಮತ್ತು ಚಿಕಿತ್ಸೆ ದೊರೆಯದೇ ವ್ಯಕ್ತಿ ಮೃತಪಟ್ಟಿದ್ದಾರೆ. ಇಷ್ಟೆ ಅಲ್ಲದೇ ಆನೇಕಲ್ ಸಾರ್ವಜನಿಕ ಆಸ್ಪತ್ರೆ ವೈದ್ಯರ ಯಡವಟ್ಟಿನಿಂದ ಮೃತರ ಶವಗಳು ಸಹ ಅದಲು ಬದಲು ಆಗಿದ್ದು, ಜನ ಸರ್ಕಾರಕ್ಕೆ ಹಿಡಿಶಾಪ ಹಾಕಿದ್ದಾರೆ.

ಆನೇಕಲ್ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮುಂಭಾಗ ಸೋಂಕಿತರ ಸಂಬಂಧಿಕರು ಮತ್ತು ಸಾರ್ವಜನಿಕರು ಸರ್ಕಾರ ಮತ್ತು ವೈದ್ಯರುಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆನೇಕಲ್ ತಾಲ್ಲೂಕಿನ ಬಂಡಾಪುರ ವಾಸಿ ಬಸವರಾಜು ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದರು. ಆನೇಕಲ್ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆತಂದಾಗ  ವೈದ್ಯರು ಮತ್ತು ಸಿಬ್ಬಂಸಿ ಕೂಡಲೇ ಚಿಕಿತ್ಸೆ ಕೊಟ್ಟಿಲ್ಲ. ಹೀಗಾಗಿ ಕೊರೊನಾ ಸೋಂಕಿತ ಮೃತಪಟ್ಟಿದ್ದಾರೆ. ಕನಿಷ್ಠ ರೋಗಿಯನ್ನು ವೈದ್ಯರು ಮತ್ತು ಸಿಬ್ಬಂದಿ ತಪಾಸಣೆ ಮಾಡಲಿಲ್ಲ. ವೈದ್ಯರು ಮತ್ತು ಸಿಬ್ಬಂದಿ ನಿರ್ಲಕ್ಷ್ಯದಿಂದ ಕೊರೊನಾ ಸೋಂಕಿತ ಸಾವನ್ನಪ್ಪಿದ್ದಾನೆ ಎಂದು ಮೃತನ ಸಂಬಂಧಿಕರಾದ ಮಂಜುನಾಥ್ ಆರೋಪಿಸಿದ್ದಾರೆ.

ಇನ್ನು ಆನೇಕಲ್ ಸರ್ಕಾರಿ ಆಸ್ಪತ್ರೆ ವೈದ್ಯರುಗಳ ವಿರುದ್ಧ ನಿರ್ಲಕ್ಷ್ಯ ಜೊತೆಗೆ ಕೊರೊನಾ ಸೋಂಕಿತರ ಶವಗಳ ಅದಲು ಬದಲು ಆರೋಪ ಸಹ ಕೇಳಿ ಬಂದಿದೆ. ಸರ್ಕಾರ ಮತ್ತು ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ಮೃತನ ಸಂಬಂಧಿಕರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ತಿಂಗಳ 5ನೇ ತಾರೀಖು ಮುತ್ತುಗಟ್ಟಿ ವಾಸಿ ಮಂಜುನಾಥ್ ಎಂಬುವವರು ಕೊರೊನಾ ಸೋಂಕಿತರಾಗಿ ಆನೇಕಲ್ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಕೊರೊನಾದಿಂದ ಮೃತಪಟ್ಟಿರುವುದಾಗಿ ಸಂಬಂಧಿಕರಿಗೆ ಆಸ್ಪತ್ರೆ ಸಿಬ್ಬಂದಿ ಶವ ಹಸ್ತಾಂತರ ಮಾಡಿದ್ದಾರೆ.  ಸಂಬಂಧಿಕರು ಸಹ ಶವ ಸಂಸ್ಕಾರ ನೆರವೇರಿಸಿದ್ದಾರೆ. ಆದರೆ ಸಂಜೆ ಹೊತ್ತಿಗೆ ಉಲ್ಟಾ ಹೊಡೆದ ಆಸ್ಪತ್ರೆ ಸಿಬ್ಬಂದಿ ನಿಮ್ಮ ಶವ ಆಸ್ಪತ್ರೆಯಲ್ಲಿಯೇ ಇದೆ ಎಂದಿದ್ದಾರೆ.

ಹಿಲಲಿಗೆ ಗ್ರಾಮದ ವ್ಯಕ್ತಿಯ ಶವ ನಿಮಗೆ ನೀಡಲಾಗಿದೆ. ಶವ ಅದಲು ಬದಲು ಆಗಿದ್ದು, ಇಪ್ಪತ್ತು ಸಾವಿರ ನೀಡಿ ನಿಮ್ಮ ಶವ ತೆಗೆದುಕೊಂಡು ಹೋಗಿ ಎಂದು ಆನೇಕಲ್ ಸರ್ಕಾರಿ ಆಸ್ಪತ್ರೆಯವರು ಹೇಳಿದ್ದಾರೆ. ಇದು ಆನೇಕಲ್ ಸರ್ಕಾರಿ ಆಸ್ಪತ್ರೆ ವೈದ್ಯರುಗಳ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿ. ಮೃತ ಶವಗಳ ಗತಿ ಹೀಗಾದರೆ. ಇನ್ನೂ ಕೊರೊನಾ ರೋಗಿಗಳ ಗತಿ ಏನು...? ಸರ್ಕಾರ ಜನರ ಜೀವ ಉಳಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಇನ್ನಾದರೂ ತಪ್ಪಿತಸ್ಥರ ಮೇಲೆ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಮೃತನ ಸಂಬಂಧಿಕರಾದ ಕೃಷ್ಣಪ್ಪ ಮತ್ತು ಅಂಬರೀಶ್ ಒತ್ತಾಯಿಸಿದ್ದಾರೆ.

ಇದೆಲ್ಲದರ ನಡುವೆ ಆನೇಕಲ್ ತಾಲ್ಲೂಕಿನ ಬೇಗಿಹಳ್ಳಿ ವಾಸಿ ಸೀತಾರಾಮ್ ಎಂಬುವವರು ಕೊರೊನಾ ಸೋಂಕಿತರ ಶವ ಸಂಸ್ಕಾರ ಅವ್ಯವಸ್ಥೆಯನ್ನು ಕಂಡು ರೋಸಿ ಹೋಗಿದ್ದಾರೆ. ಕೊರೊನಾ ಸೋಂಕಿನಿಂದ ಮೃತಪಟ್ಟ ತನ್ನ ತಾಯಿ ರತ್ನಮ್ಮಳ ಶವವನ್ನು ಮನೆ ಬಳಿಯೇ ಸಂಸ್ಕಾರ ಮಾಡಲು ಮುಂದಾಗಿದ್ದಾನೆ. ಆದ್ರೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ ಸ್ಥಳೀಯ ಬನ್ನೇರುಘಟ್ಟ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಬನ್ನೇರುಘಟ್ಟ ಪೊಲೀಸರು ಸೀತಾರಾಮ್ ಮನವೊಲಿಸಿದ್ದು, ಅಂತಿಮವಾಗಿ ತೋಟದಲ್ಲಿ ಶವ ಸಂಸ್ಕಾರ ನೆರವೇರಿಸಿದ್ದಾರೆ. ಒಟ್ನಲ್ಲಿ ಸರ್ಕಾರ ಕೊರೊನಾ ವಿರುದ್ಧದ ಹೋರಾಟದಲ್ಲಿ ಎಷ್ಟೇ ತ್ವರಿತ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಕೊರೊನಾ ಸೋಂಕಿತರಿಗೆ ಅಕ್ಸಿಜನ್, ಬೆಡ್, ಶವ ಸಂಸ್ಕಾರಕ್ಕಾಗಿ ಪರದಾಟ ನಡೆಸಬೇಕಾದ ಸ್ಥಿತಿ ಮಾತ್ರ ಮುಂದುವರಿದಿದ್ದು, ಅದ್ಯಾವಾಗ ಕೊರೊನಾ ಕಾಟಕ್ಕೆ ಮುಕ್ತಿ ದೊರೆಯುತ್ತೋ ದೇವರೇ ಬಲ್ಲ.

ವರದಿ : ಆದೂರು ಚಂದ್ರು
Published by:Kavya V
First published: