ಆನೇಕಲ್: ಪೊಲೀಸರು ಎಂದಾಕ್ಷಣ ದರ್ಪ, ದಬ್ಬಾಳಿಕೆ, ದೌರ್ಜನ್ಯ ನಡೆಸುತ್ತಾರೆ ಎಂಬ ಮಾತಿದೆ. ಅದರಲ್ಲೂ ಲಾಕ್ ಡೌನ್ ಸಂದರ್ಭದಲ್ಲಿ ಅನಗತ್ಯವಾಗಿ ಅಮಾಯಕರ ಮೇಲೆ ಲಾಠಿ ಬೀಸುತ್ತಾರೆ ಎಂಬುದು ಸಾರ್ವಜನಿಕರ ವಲಯದಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿರುವ ಆರೋಪ. ಆದರೆ ಎಲ್ಲಾ ಪೊಲೀಸರು ಲಾಠಿ ಬೀಸುವುದಿಲ್ಲ. ಪೊಲೀಸರಲ್ಲಿಯು ಮಾನವೀಯ ಮೌಲ್ಯಗಳನ್ನು ಹೊಂದಿರುವವರು ಇದ್ದಾರೆ.
ಹೌದು, ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಜಿಗಣಿ ಠಾಣೆ ಪೊಲೀಸರು ಕೊರೋನಾ ವಾರಿಯರ್ಸ್‌ಗಳಾಗಿ ಕೊರೋನಾ ವಿರುದ್ಧ ಹೋರಾಟ ನಡೆಸುತ್ತಿರುವ ಪೌರ ಕಾರ್ಮಿಕರಿಗೆ ಮತ್ತು ಆಶಾ ಕಾರ್ಯಕರ್ತೆಯರಿಗೆ ದಿನಸಿ ಕಿಟ್ ವಿತರಿಸುವ ಮೂಲಕ ಸಮಾಜಮುಖಿ ಕಾರ್ಯಕ್ಕೆ ಮುಂದಾಗಿದ್ದಾರೆ . ಜಿಗಣಿ ಪುರಸಭೆ ಪೌರ ಕಾರ್ಮಿಕರು ಮತ್ತು ಜಿಗಣಿ ಹೋಬಳಿ ವ್ಯಾಪ್ತಿಯ ಸುಮಾರು ನೂರಕ್ಕೂ ಅಧಿಕ ಆಶಾ ಕಾರ್ಯಕರ್ತೆಯರಿಗೆ ಆನೇಕಲ್ ಉಪ ವಿಭಾಗದ ಡಿವೈಎಸ್ಪಿ ಮಹಾದೇವಪ್ಪ ಮತ್ತು ಜಿಗಣಿ ಠಾಣೆ ಇನ್ಸ್ಪೆಕ್ಟರ್ ಬಿ ಕೆ ಶೇಖರ್ ದಿನಸಿ ಕಿಟ್ ವಿತರಿಸಿದರು.
ಕೊರೋನಾ ವಿರುದ್ಧದ ಹೋರಾಟದಲ್ಲಿ ಪೌರಕಾರ್ಮಿಕರು ಮತ್ತು ಆಶಾ ಕಾರ್ಯಕರ್ತೆಯರ ಸೇವೆ ಶ್ಲಾಘನೀಯವಾದದ್ದು. ತಮ್ಮ ಜೀವವನ್ನು ಲೆಕ್ಕಿಸದೆ ನಿತ್ಯ ಕಾಯಕವೇ ಕೈಲಾಸವೆಂದು ದುಡಿಯುವ ವರ್ಗ ಇವರದು. ಹಾಗಾಗಿ ಇವರಿಗೆ ಸಣ್ಣ ಅಳಿಲು ಸೇವೆ ಮಾಡಲು ಅಕ್ಕಿ, ಉಪ್ಪು, ಆಡುಗೆ ಎಣ್ಣೆ, ಮಸಾಲೆ ಮತ್ತು ದಿನಸಿ ಪದಾರ್ಥಗಳನ್ನು ಕಿಟ್ನಲ್ಲಿದ್ದು, ಕನಿಷ್ಠ ಹತ್ತರಿಂದ ಹದಿನೈದು ದಿನಕ್ಕೆ ಆಗುವಷ್ಟು ದಿನಸಿ ವಿತರಣೆ ಮಾಡಲಾಗಿದೆ.
ಅಂದ ಹಾಗೆ ರಾಮಕೃಷ್ಣ ಮಿಷನ್ ಮತ್ತು ಇನ್ಫೋಸಿಸ್ ಫೌಂಡೇಶನ್ ಸಹಭಾಗಿತ್ವದಲ್ಲಿ ದಿನಸಿ ಕಿಟ್ ವಿತರಣೆ ಮಾಡಲಾಗಿದೆ. ದಿನಸಿ ಕಿಟ್ ಜೊತೆಗೆ ಮುಂದಿನ ದಿನಗಳಲ್ಲಿ ಸ್ಯಾನಿಟೈಸರ್, ಮಾಸ್ಕ್ ಮತ್ತು ಮಾತ್ರೆಗಳನ್ನು ಒಳಗೊಂಡ ಕಿಟ್ ಗಳನ್ನು ವಿತರಿಸುವ ಚಿಂತನೆ ಇದೆ. ವಿಶೇಷವಾಗಿ ಕೊರೋನಾ ಸೋಂಕಿತರಿಗೆ ಮತ್ತು ಆಶಾ ಕಾರ್ಯಕರ್ತೆಯರು ಹಾಗೂ ಪೌರ ಕಾರ್ಮಿಕರಿಗೆ ಅವಶ್ಯವಾದ ಮಾತ್ರೆಗಳನ್ನು ಒಳಗೊಂಡ ಕಿಟ್ ನೀಡುವಂತೆ ಈಗಾಗಲೇ ಕೆಲ ಫಾರ್ಮಾ ಕಂಪನಿಗಳ ಬಳಿ ಮನವಿ ಮಾಡಲಾಗಿದೆ.
ಇದನ್ನು ಓದಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾನವಿಯತೆ ಮೆರೆಯುತ್ತಿರುವ ಸಂಘ ಸಂಸ್ಥೆಗಳು; ಜನರ ಮೆಚ್ಚುಗೆ
ಫಾರ್ಮಾ ಕಂಪನಿಗಳು ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಪ್ಯಾರಾಸೆಟಮೊಲ್ , ಎರಿತ್ರೋಮೈಸಿನ್, ಜಿಂಕ್, ಮಲ್ಟಿ ವಿಟಮಿನ್ ಮಾತ್ರೆ ಸೇರಿದಂತೆ ಅಗತ್ಯ ಔಷಧಗಳ ಕಿಟ್ ನೀಡಲು ಅಗತ್ಯ ತಯಾರಿ ಸಹ ನಡೆದಿದೆ ಎಂದು ಜಿಗಣಿ ಠಾಣೆ ಇನ್ಸ್ಪೆಕ್ಟರ್ ಬಿ ಕೆ ಶೇಖರ್ ತಿಳಿಸಿದ್ದಾರೆ.
ವರದಿ: ಆದೂರು ಚಂದ್ರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ