ಬೆಂಗಳೂರು (ಜೂನ್ 26); ರಾಜ್ಯ ರಾಜಧಾನಿ ಬೆಂಗಳೂರು ಇತಿಹಾಸದಲ್ಲೇ ನಿನ್ನೆ ದಾಖಲೆಯ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಈ ಹಿಂದೆ 2017 ಆಗಸ್ಟ್ 15ರಂದು 182 ಮಿ.ಮೀ. ದಾಖಲೆಯ ಮಳೆಯಾಗಿತ್ತು. ಆದರೆ, ನಿನ್ನೆ ಒಂದೇ ದಿನ ನಗರದಲ್ಲಿ 185.5 ಮಿ.ಮೀಟರ್ ಮಳೆಯಾಗುವ ಮೂಲಕ ಹಳೆಯ ಎಲ್ಲಾ ದಾಖಲೆಗಳು ಇದೀಗ ಇತಿಹಾಸದ ಪುಟ ಸೇರಿವೆ.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ನಿನ್ನೆ ಬೆಂಗಳೂರು ಸೇರಿದಂತೆ ಹಲವೆಡೆ ಭಾರೀ ಪ್ರಮಾಣದಲ್ಲಿ ಮಳೆಯಾಗಿತ್ತು. ಕೆಂಗೇರಿ ಹಾಗೂ ರಾಜರಾಜೇಶ್ವರಿ ನಗರದಲ್ಲಿ ಅತಿ ಹೆಚ್ಚು ಮಳೆ ದಾಖಲಾಗಿತ್ತು. ಆದರೆ, ಇಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್ ಶ್ರೀನಿವಾಸ ರೆಡ್ಡಿ ಮಾಹಿತಿ ನೀಡಿದ್ದು, "ಒಂದೇ ದಿನ ಬೆಂಗಳೂರಿನಲ್ಲಿ ಇಷ್ಟು ಪ್ರಮಾಣದಲ್ಲಿ ಮಳೆಯಾಗಿಲ್ಲ" ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿಗರೇ ಎಚ್ಚರ ಎಚ್ಚರ!
ಇನ್ನು ಮುಂದಿನ 3-4 ದಿನಗಳ ಕಾಲ ಬೆಂಗಳೂರಿನಲ್ಲಿ ಸಂಜೆ ವೇಳೆ ಭಾರಿ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಬೆಂಗಳೂರಿನ ಜನ ಸಂಜೆ ವೇಳೆಯಲ್ಲಿ ಎಚ್ಚರಿಕೆಯಿಂದ ರಸ್ತೆಗೆ ಇಳಿಯುವಂತೆ ಹವಾಮಾನ ಇಲಾಖೆ ಸೂಚನೆ ನೀಡಿದೆ.
ಇದಲ್ಲದೆ, "ಜೂನ್. 29 ರಿಂದ ಮತ್ತೆ ರಾಜ್ಯದಲ್ಲಿ ಮಳೆ ಪ್ರಮಾಣ ಹೆಚ್ಚಾಗಲಿದೆ ದಕ್ಷಿಣ ಒಳನಾಡಿನಲ್ಲಿ ಹೆಚ್ಚು ಮಳೆಯಾಗಿಲ್ಲ. ಉತ್ತರ ಒಳನಾಡಿನಲ್ಲಿ ಮಳೆ ಪ್ರಮಾಣ ಅಧಿಕವಾಗಿದೆ. ನಿನ್ನೆ ಪ್ರಮಾಣ ನೋಡಿದಾಗ ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಹೆಚ್ಚು ಪ್ರಮಾಣದಲ್ಲಿ ಮಳೆಯಾಗಿಲ್ಲ. ಈ ಭಾಗದಲ್ಲಿ ಇದೇ 29 ರ ನಂತರ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ
ಇದನ್ನೂ ಓದಿ : ಕಾರ್ಮಿಕರ ’ಭವಿಷ್ಯ ನಿಧಿ’ ಮೇಲಿನ ಬಡ್ಡಿದರ ಮತ್ತಷ್ಟು ಕಡಿತ; ದುಡಿಯುವ ವರ್ಗಕ್ಕೆ ಮತ್ತೊಂದು ಬರೆ
ಮುಂದಿನ ಒಂದು ವಾರ ರಾಜ್ಯದಲ್ಲಿ ಅಲ್ಲಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಸಂಜೆ ವೇಳೆ ಹೆಚ್ಚಾಗಿ ಮಳೆ ಬರಲಿದೆ. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳಿಗೂ ಮಾಹಿತಿ ಕೊಟ್ಟಿದ್ದೇವೆ. ಮಳೆ ಬಂದ ಸಂದರ್ಭದಲ್ಲಿ ಜನ ಎಚ್ಚರದಿಂದ ಇರಬೇಕಾಗುತ್ತೆ. ಮುಂಗಾರು ಮಳೆಯಲ್ಲಿ ಗಾಳಿಯ ತೀವ್ರತೆಯೂ ಕಡಿಮೆ ಇರಲಿದೆ" ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್ ಶ್ರೀನಿವಾಸ ರೆಡ್ಡಿ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ