ಬೆಂಗಳೂರು(ಅ. 01): ಮಾನವೀಯ ಸಂಬಂಧಗಳೇ ಮರೆಯಾಗುತ್ತಿರುವ ಇಂಥ ಹೊತ್ತಲ್ಲಿ ಅಪರೂಪದಲ್ಲಿ ಅಪರೂಪದ ಘಟನೆಗೆ ಬೆಂಗಳೂರಿನ ಸಂಚಾರಿ ಪೊಲೀಸರು ಕಾರಣರಾಗಿದ್ದಾರೆ. ಗೊತ್ತು-ಗುರಿ ಇಲ್ಲದ, ಸಂಬಂಧಿಕನೋ ಅಥವಾ ಕನಿಷ್ಠ ಪರಿಚಯವೂ ಇಲ್ಲದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ಮಗುವಿನಂತೆ ನೋಡಿಕೊಂಡಿದ್ದಾರೆ. ಅಪಘಾತವಾಗಿ ನರಳಾಡುತ್ತಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದ ಓಲ್ಡ್ ಏರ್ಪೋರ್ಟ್ ಸಂಚಾರಿ ಪೊಲೀಸರು ಆ ವ್ಯಕ್ತಿ ಕೋಮಾದಿಂದ ಹೊರಬರುವವರೆಗೂ ಕಾದು ಆರೈಕೆ ಮಾಡಿದ್ದಾರೆ.
ಕಳೆದ ಆಗಸ್ಟ್ 16ರಂದು ಮಾರತ್ ಹಳ್ಳಿ ಬಳಿ ನಡೆದುಕೊಂಡು ಹೋಗುತ್ತಿದ್ದ ಸಂಜಯ್ ಅವರಿಗೆ ವೇಗವಾಗಿ ಬಂದ ಬೈಕ್ವೊಂದು ಹಠಾತ್ತನೇ ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ತಲೆಗೆ ಗಂಭೀರ ಗಾಯಗಳಾಗಿ ಸಂಜಯ್ ನಡುರಸ್ತೆಯಲ್ಲೇ ನರಳಾಡಿಕೊಂಡು ಬಿದ್ದಿದ್ದ. ಯಾರೊಬ್ಬರೂ ಸಹಾಯಕ್ಕೆ ಧಾವಿಸದೆ ಮೌನವಾಗಿದ್ದಂತೆಯೇ ದೇವರಂತೆ ಬಂದವರು ಸಂಚಾರಿ ಪೊಲೀಸ್ ಠಾಣೆಯ ಕಾನ್ಸ್ಟೆಬಲ್ಗಳಾದ ಕಾಶಪ್ಪ, ಚೀರಂಜಿವಿ ಮತ್ತು ಇನ್ನಿತರ ಸಿಬ್ಬಂದಿ.
ಇದನ್ನೂ ಓದಿ: ಕೊಪ್ಪಳ : ಹಳ್ಳದಲ್ಲಿ ಕೊಚ್ಚಿ ಹೋದ ಟ್ರ್ಯಾಕ್ಟರ್ ; ಕುಸಿದು ಬಿದ್ದ ಮನೆ ಗೋಡೆ
ಚನ್ನೇಶ್ ನೇತೃತ್ವದಲ್ಲಿ ಪೊಲೀಸರು ಆ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದರು. ತಲೆಗೆ ತೀವ್ರ ಪೆಟ್ಟಾಗಿ ಸಂಜಯ್ ಅದಾಗಲೇ ಕೋಮಾ ಹಂತ ತಲುಪಿದ್ದ. ಕೋಮಾಗೆ ಹೋಗಿದ್ದರಿಂದ ಸಂಜಯ್ಗೆ ಶಸ್ತ್ರ ಚಿಕಿತ್ಸೆ ಅನಿವಾರ್ಯವಾಗಿತ್ತು. ಕೂಡಲೇ ಸ್ಥಳೀಯ ಆಸ್ಪತ್ರೆಯಿಂದ ನಿಮ್ಹಾನ್ಸ್ಗೆ ಕರೆತಂದ ಪೊಲೀಸರು, ಸಂಜಯ್ ತಲೆಯಲ್ಲಿ ಹೆಪ್ಪುಗಟ್ಟಿದ್ದ ರಕ್ತದ ಗಡ್ಡೆಯನ್ನ ಶಸ್ತ್ರಚಿಕಿತ್ಸೆ ಮೂಲಕ ತೆಗೆದರು. ಆದರೆ, ಸಂಜಯ್ ಮಾತ್ರ ಕೋಮಾದಿಂದ ಎದ್ದಿರಲಿಲ್ಲ. ಕೊನೆಗೆ ಸಂಜಯ್ನ ಹಿನ್ನೆಲೆ ಕಲೆಹಾಕಿದ ಪೊಲೀಸರಿಗೆ ಸಂಜಯ್ ಮಹಾರಾಷ್ಟ್ರ ಮೂಲದವವೆಂಬುದು ತಿಳಿದು ಬಂದಿತು.
ಇದನ್ನೂ ಓದಿ: ಮೈತ್ರಿಗೆ ಕಾಂಗ್ರೆಸ್ ಯೋಗ್ಯ ಪಕ್ಷವಲ್ಲ: ಹೆಚ್.ಡಿ. ಕುಮಾರಸ್ವಾಮಿ
ಈ ವೇಳೆ, 15ದಿನಗಳ ಕಾಲ ಸಂಜಯ್ ಮಾತ್ರ ಆಸ್ಪತ್ರೆಯಲ್ಲಿ ಕೋಮಾ ಸ್ಥಿತಿಯಲ್ಲೇ ದಿನದೂಡಿದ್ದ. ಸಂಜಯ್ ಕೋಮಾ ಸ್ಥಿತಿಯಲ್ಲಿ ಆಸ್ಪತ್ರೆಯ ಬೆಡ್ನಲ್ಲಿ ಪವಡಿಸಿದ್ದರೆ, ಇತ್ತ ಅವನಿಗಾಗಿ ಬಂದವರ್ಯಾರೂ ಇಲ್ಲ. ಆಗೆಲ್ಲಾ ಜೊತೆಯಾಗಿದ್ದು ರಾತ್ರಿ ಹಗಲೆನ್ನದೆ ಸಂಜಯ್ನ ಆರೈಕೆ ಮಾಡಿದ್ದು ಪೊಲೀಸರೇ. ಆಸ್ಪತ್ರೆಯಲ್ಲಿ ಒಂದು ತಿಂಗಳವರೆಗೂ ಪಾಳಿಯಂತೆ ಕಾನ್ಸ್ಟೆಬಲ್ಗಳಾದ ಕಾಶಪ್ಪ, ಚೀರಂಜೀವಿ ಹಾಗೂ ಶ್ರೀಕಾಂತ್ ಮತ್ತು ಇತರ ಸಿಬ್ಬಂದಿ ಸಂಜಯ್ ಗುಣಮುಖನಾಗುವವರೆಗೂ ಕಾದು ಉಪಚರಿಸಿದ್ದಾರೆ. ಸಂಪೂರ್ಣ ಗುಣಮುಖನಾದ ಮೇಲೆಯೇ ಸಂಜಯ್ ಅವರನ್ನು ಪೊಲೀಸರು ಮಹಾರಾಷ್ಟ್ರಕ್ಕೆ ಹೋಗಲು ಟಿಕೆಟ್ಗೆ ಹಣ ಕೊಟ್ಟು ಕಳುಹಿಸಿದ್ದಾರೆ.
ಇದೀಗ ಪೊಲೀಸರ ಈ ಮಾನವೀಯತೆ ಕಂಡು ಹಿರಿಯ ಅಧಿಕಾರಿಗಳೇ ತಲೆ ಬಾಗಿದ್ದಾರೆ. ಸಾರ್ವಜನಿಕ ವಲಯದಲ್ಲೂ ಪೊಲೀಸರಿಗೆ ಮೆಚ್ಚುಗೆ ಸಿಕ್ಕಿದೆ. ಇವರ ಆರೈಕೆ ಉಂಡ ಸಂಜಯ್ನ ಕಣ್ಣುಗಳಲ್ಲಿ ಕೃತಜ್ಞತೆಯ ಭಾವ ಮೂಡಿದೆ.
ವರದಿ: ಗಂಗಾಧರ ವಾಗಟ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ