• Home
  • »
  • News
  • »
  • state
  • »
  • ಸಿಲಿಕಾನ್ ಸಿಟಿ ಜನರ ಸಮಸ್ಯೆ ಆಲಿಸಲು ಮುಂದಾದ ಖಾಕಿ; ಪ್ರತಿ ಶನಿವಾರ ಮಾಸಿಕ ಜನ ಸಂಪರ್ಕ ದಿವಸ ಆಯೋಜನೆ‌‌

ಸಿಲಿಕಾನ್ ಸಿಟಿ ಜನರ ಸಮಸ್ಯೆ ಆಲಿಸಲು ಮುಂದಾದ ಖಾಕಿ; ಪ್ರತಿ ಶನಿವಾರ ಮಾಸಿಕ ಜನ ಸಂಪರ್ಕ ದಿವಸ ಆಯೋಜನೆ‌‌

ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್

ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್

ಇಂದು ನಗರದಾದ್ಯಂತ ಹಲವು ಠಾಣೆಗಳಲ್ಲಿ ಮಾಸಿಕ ಜನ ಸಂಪರ್ಕ ದಿವಸ ಕಾರ್ಯಕ್ರಮ ಆರಂಭವಾಗಿದ್ದು, ಸಾವಿರಾರು ಜನ ತಮ್ಮ ದೂರುಗಳನ್ನು ಪೊಲೀಸರ ಮುಂದೆ ದಾಖಲು ಮಾಡಿದ್ದಾರೆ. 

  • Share this:

ಬೆಂಗಳೂರು; ಸಿಲಿಕಾನ್ ಸಿಟಿ ಜನರ ಕಷ್ಟ, ದುಃಖ ದುಮ್ಮಾನಗಳು, ಸ್ಥಳೀಯ ಸಮಸ್ಯೆಗಳನ್ನು ಆಲಿಸಲು ಖಾಕಿ ಪಡೆ ಮುಂದಾಗಿದೆ. ನಗರದ ಪ್ರತಿ ವಾರ್ಡ್ ನ ಪ್ರತಿ ಏರಿಯಾದ ಸಮಸ್ಯೆಗಳನ್ನು ಪತ್ತೆ ಹಚ್ಚಿ ಕಾನೂನಾತ್ಮಕವಾಗಿ ಬಗೆಹರಿಸಲು ಪೊಲೀಸರು ಮುಂದಾಗಿದ್ದು ಅದಕ್ಕಾಗಿ ಮಾಸಿಕ ಜನ ಸಂಪರ್ಕ ದಿವಸ ಎಂಬ ನೂತನ ಕಾರ್ಯಕ್ರಮವನ್ನು ಬೆಂಗಳೂರು ನಗರದಲ್ಲಿ ಆರಂಭಿಸಿದ್ದಾರೆ.


ನಗರದಲ್ಲಿ ಇತ್ತೀಚೆಗೆ ಗಾಂಜಾ, ಡ್ರಗ್ ಸೇವನೆ ಮಾಡಿ ದುಷ್ಕರ್ಮಿಗಳು ರಸ್ತೆಗಳಲ್ಲಿ ಸಾರ್ವಜನಿಕರಿಗೆ ಕಿರಿಕಿರಿ ಕೊಡುತ್ತಿದ್ದಾರೆ. ಇನ್ನೂ ಕೆಲವೆಡೆ ಬೈಕ್ ಗಳಲ್ಲಿ ಯರ್ರಾಬಿರ್ರಿ ವಾಹನ ಚಲಾಯಿಸಿ ರಸ್ತೆಗಳಲ್ಲಿ ತೊಂದರೆ ಕೊಡುವ ಪ್ರಕರಣಗಳು ಸಹ ವರದಿಯಾಗುತ್ತಿವೆ. ಕಿಡಿಗೇಡಿಗಳ ಉಪಟಳ ಹತ್ತಿಕ್ಕುವ ಸಲುವಾಗಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೊಸ ಕಾರ್ಯಕ್ರಮ ಅನುಷ್ಠಾನಕ್ಕೆ ತಂದಿದ್ದಾರೆ. ನಗರದ ಪುಲಿಕೇಶಿನಗರ ಪೊಲೀಸ್ ಠಾಣೆಯಲ್ಲಿ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಕಮೀಷನರ್ ಕಮಲ್ ಪಂತ್, ನಗರದಲ್ಲಿ ಅಪರಾಧ ಚಟುವಟಿಕೆಗಳು, ಕಿರುಕುಳ, ತೊಂದರೆ, ಪಾರ್ಕಿಂಗ್ ಸೇರಿದಂತೆ ಹಲವಾರು ಸಮಸ್ಯೆಗಳಿದ್ದು ಕೆಲವರು ಅಂತಹ ಸಮಸ್ಯೆಗಳನ್ನ ಹೇಳಿಕೊಳ್ಳಲು ಮುಂದೆ ಬರುವುದಿಲ್ಲ. ಆದ್ದರಿಂದ ಪ್ರತಿ ಶನಿವಾರ ಮಾಸಿಕ ಜನ ಸಂಪರ್ಕ ದಿವಸ ಕಾರ್ಯಕ್ರಮ ಮೂಲಕ ಅವರ ಸಮಸ್ಯೆಗಳು, ದೂರುಗಳನ್ನು ಆಲಿಸಿ ಪರಿಹರಿಸಲಾಗುವುದು ಎಂದರು.


ಇದನ್ನು ಓದಿ: ಕೋವಿಡ್ ಲಸಿಕೆ ಹಾಕಲು ದಡಾರ ನಿಯಂತ್ರಣ ಮಾದರಿ ಅನುಕರಣೆಗೆ ಮುಂದಾದ ಬಿಬಿಎಂಪಿ


ಇನ್ನೂ ಪುಲಿಕೇಶಿ ನಗರ ಸುತ್ತಮುತ್ತಲಿನ ನೂರಾರು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಏರಿಯಾಗಳಲ್ಲಿ ಗಾಂಜಾ ಸೇವಿಸಿ ಕಿರುಕುಳ ಕೊಡುವುದು. ಮನೆಗಳ ಪಾರ್ಕಿಂಗ್ ಮಾಡುವುದು. ಕುಡಿದು ಗಲಾಟೆ ಮಾಡುವುದು ಸೇರಿ ಹತ್ತಾರು ಸಮಸ್ಯೆಗಳನ್ನ ಕಮೀಷನರ್ ಮುಂದೆ ಇಟ್ಟರು. ಸಾರ್ವಜನಿಕರ ದೂರುಗಳನ್ನ ಪಡೆದ ಪೊಲೀಸರು ಮುಂದಿನ ವಾರದೊಳಗೆ ದೂರುಗಳಿಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.


ಇನ್ನೂ ಪೊಲೀಸರ ವಿನೂತನ ಕಾರ್ಯಕ್ರಮದಲ್ಲಿ ನಿವೃತ್ತ ಡಿಜಿಪಿ ಅಜಯ್ ಕುಮಾರ್ ಸಿಂಗ್ ಭಾಗವಹಿಸಿ ಪೊಲೀಸರ ಕೆಲಸ ಕಾರ್ಯ, ಶ್ರದ್ಧೆ ನಿಷ್ಠೆ ಬಗ್ಗೆ ಕೆಲವು ಹಿತನುಡಿಗಳನ್ನ ಹೇಳಿದರು. ಹಾಗೂ ಲಾಕ್ ಡೌನ್ ಮತ್ತು ಕೊರೋನಾ ವೇಳೆ ಕಾರ್ಯನಿರ್ವಹಿಸಿದ ಪೊಲೀಸರನ್ನು ಗೌರವಿಸಲಾಯಿತು. ಇಂದು ನಗರದಾದ್ಯಂತ ಹಲವು ಠಾಣೆಗಳಲ್ಲಿ ಮಾಸಿಕ ಜನ ಸಂಪರ್ಕ ದಿವಸ ಕಾರ್ಯಕ್ರಮ ಆರಂಭವಾಗಿದ್ದು, ಸಾವಿರಾರು ಜನ ತಮ್ಮ ದೂರುಗಳನ್ನು ಪೊಲೀಸರ ಮುಂದೆ ದಾಖಲು ಮಾಡಿದ್ದಾರೆ.

Published by:HR Ramesh
First published: