ಬೆಂಗಳೂರು: ಅದು ಮೂರು ವರ್ಷದ ಹಿಂದಿನ ಪ್ರಕರಣ. ಎಟಿಎಂಗೆ ಹಣ ಹಾಕಲು ಹೋಗಿದ್ದ ಕಂಟೋಡಿಯನ್ ಹಾಗೂ ಡ್ರೈವರ್ ಸುಮಾರು 75 ಲಕ್ಷ ಹಣ ಎಗರಿಸಿಕೊಂಡು ಹೋಗಿದ್ದಾರೆ ಅಂತ ಆ್ಯಕ್ಸಿಸ್ ಬ್ಯಾಂಕ್ ಮ್ಯಾನೇಜರ್ ದೂರು ನೀಡಿದ್ದರು. ದೂರಿನನ್ವಯ ಕೆ.ಜಿ ಹಳ್ಳಿ ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆ ಮಾಡಿದರೂ ಯಾವುದೇ ಕ್ಲೂ ಇಲ್ಲದೆ ಪೊಲೀಸರು ಸುಮ್ಮನಾಗಿಬಿಟ್ಟಿದ್ದರು. ಯಾವಾಗ ಗೋವಿಂದಪುರ ಠಾಣೆ ಹೊಸದಾಗಿ ಓಪನ್ ಆಯ್ತೋ ಆಗ್ಲೆ ಡಿಸಿಪಿ ಶರಣಪ್ಪ, ಗೋವಿಂದಪುರ ಇನ್ಸ್ಪೆಕ್ಟರ್ ಪ್ರಕಾಶ್ ತನಿಖೆಯನ್ನು ಹೊಸದಾಗಿ ಮಾಡುವಂತೆ ಸೂಚನೆ ಕೊಟ್ರು. ತಕ್ಷಣವೇ ಎಸಿಪಿ ಜಗದೀಶ್ ಇನ್ಸ್ಪೆಕ್ಟರ್ ಪ್ರಕಾಶ್ ನೇತೃತ್ವದಲ್ಲಿ ತಂಡ ರಚನೆ ಮಾಡಿ ಲಾಕ್ ಡೌನ್ ನಲ್ಲಿಯೂ ಕೆಲಸ ಮಾಡಿ ಮೂರು ವರ್ಷಗಳ ಪ್ರಕರಣ ಭೇದಿಸಿದ್ದಾರೆ. ಆದರೆ ಈ ಪ್ರಕರಣದಲ್ಲಿ ಮೇಜರ್ ಟ್ವಿಸ್ಟ್ ಅಂದ್ರೆ ಹಣ ಕಳ್ಳತನ ಮಾಡಿಕೊಂಡು ಹೋಗಿದ್ದ ಡ್ರೈವರ್ ಅಬ್ದುಲ್ ಶಾಹಿದ್ ಪೊಲೀಸ್ ತನಿಖೆಯಲ್ಲಿ ಕೊಲೆ ಆಗಿರೋದು ಪತ್ತೆಯಾಗಿದೆ.
ಘಟನೆ ನಡೆದಿದ್ದು ಹೇಗೆ..?
2018 ರಲ್ಲಿ ಅಬ್ದುಲ್ ಶಾಹಿದ್ ಹಾಗೂ ಮಂಡ್ಯ ಮೂಲದ ಪ್ರಸನ್ನ ಕೆಜಿ ಹಳ್ಳಿ ಠಾಣಾ ವ್ಯಾಪ್ತಿಯ ಆ್ಯಕ್ಸಿಸ್ ಬ್ಯಾಂಕ್ ಗೆ ಹಣ ಹಾಕಲು ಹೋಗಿದ್ದರು. ಈ ವೇಳೆ ಪ್ರಸನ್ನ ಮಾಸ್ಟರ್ ಪ್ಲಾನ್ ಮಾಡಿ ಎಟಿಎಂಗೆ ಹಣ ತುಂಬದೆ ತನ್ನ ಸ್ನೇಹಿತರಾದ ಮಧುಸೂದನ್ ಹಾಗೂ ಮಹೇಶ್ ಮೂಲಕ ಖಾಸಗಿ ಕಾರಿನಲ್ಲಿ ಹಣದ ಸಮೇತ ಎಸ್ಕೇಪ್ ಆಗಿದ್ದರು. ಈ ವೇಳೆ ಅವರ ಜೊತೆಯಲ್ಲಿಯೇ ಇದ್ದ ಕಾರು ಚಾಲಕ ಅಬ್ದುಲ್ ಶಾಹಿದ್ ನನ್ನು 5 ಲಕ್ಷ ಹಣ ಕೊಡ್ತೀನಿ ಯಾರಿಗೂ ಹೇಳದಂತೆ ಪ್ರಸನ್ನ ಹೆದರಿಸಿದ್ದ. ಆದರೆ ಆರೋಪಿಗಳು ಸಕಲೇಶಪುರ ಬಳಿ ಹೋಗುವಾಗ ಡ್ರೈವರ್ ಶಾಹಿದ್ ನನಗೆ ಹಣವೂ ಏನು ಬೇಡ ವಾಪಸ್ ಹೋಗ್ತೀನಿ ಅಂತೇಳಿದಾಗ ಈತ ಹೊರಗಡೆ ಹೋದ್ರೆ ನಮ್ ಬಗ್ಗೆ ಹೇಳ್ತಾನೆ ಅಂತೇಳಿ ಕೊಲೆ ಮಾಡಿ ಮೃತದೇಹವನ್ನು ಸಕಲೇಶಪುರದ ಬ್ಯೂಟಿ ಸ್ಪಾಟ್ ಬಳಿ ಬಿಸಾಕಿ ಎಸ್ಕೇಪ್ ಆಗಿದ್ದರು. ಇತ್ತ ಕೊಲೆಯಾದ ಕಾರು ಚಾಲಕನೇ ಹಣ ಪಡೆದು ಎಸ್ಕೇಪ್ ಆಗಿದ್ದಾರೆ ಅಂತೇಳಿ ಪೋಲೀಸರು ತನಿಖೆ ಮಾಡ್ತಾ ಇದ್ದರು. ಹೀಗಾಗಿ ಯಾವುದೇ ಸುಳಿವು ಸಿಗದೆ ಸುಮ್ಮನಾಗಿ ಬಿಟ್ಟಿದ್ದರು.
ಸಿಸಿ ಕ್ಯಾಮರಾ ಕೊಡ್ತು ಆರೋಪಿಗಳ ಸುಳಿವು..!
ಇತ್ತ ಪ್ರಕರಣದಲ್ಲಿ ಏನು ಕ್ಲೂ ಇಲ್ಲ ಅಂತ ಸುಮ್ಮನಾಗಿದ್ದ ಕೇಸನ್ನು ಇನ್ಸ್ಪೆಕ್ಟರ್ ಪ್ರಕಾಶ್ ಕೈಗೆತ್ತಿಕೊಂಡರು. ಘಟನೆ ನಡೆದ ಸ್ಥಳದ ಸುತ್ತಮುತ್ತ ಸಿಸಿ ಕ್ಯಾಮರಾ ಹುಡುಕಾಡಿದಾಗ ಆರೋಪಿಗಳು ಕಾರಿನ ಒಳಗೆ ಹಣ ಇಡುವ ದೃಶ್ಯಾವಳಿ ಸಿಕ್ಕಿದವು. ತಕ್ಷಣವೇ ಅದರಲ್ಲಿ ಇರೋರು ಯಾರು ಅಂತ ವಿಚಾರಣೆ ಮಾಡಿದಾಗ ಮಂಡ್ಯ ಮೂಲದ ಪ್ರಸನ್ನ ಅನ್ನೋದು ಗೊತ್ತಾಯ್ತು. ತಕ್ಷಣವೇ ಮಂಡ್ಯಕ್ಕೆ ಹೋಗಿ ಪ್ರಸನ್ನನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬಾಯಿಬಿಟ್ಟಿದ್ದಾರೆ, ಈ ವೇಳೆ ಶಾಹಿದ್ ನ ಕೊಲೆ ಆಗಿರೋದು ಪತ್ತೆಯಾಗಿದೆ. ಇನ್ನು ಈತ ನೀಡಿದ ಮಾಹಿತಿ ಮೇಲೆ ಮಹೇಶ್ ಹಾಗೂ ಮಧುಸೂದನ್ ಹಾಗೂ ಕುಮಾರ್ ಎಂಬುವವರನ್ನು ಬಂಧಿಸಿದ್ದು 25 ಲಕ್ಷ ಹಣ ಸೀಜ್ ಮಾಡಿದ್ದಾರೆ.
ಇದನ್ನು ಓದಿ: Sputnik V: ಭಾರತದಲ್ಲಿ ಆಗಸ್ಟ್ನಿಂದ ರಷ್ಯಾದ ಸ್ಪುಟ್ನಿಕ್ ವಿ ಲಸಿಕೆ ತಯಾರಿಕೆ; ಮೇ ಅಂತ್ಯಕ್ಕೆ 3 ಮಿಲಿಯನ್ ಡೋಸ್ ಪೂರೈಕೆ
ಕಳ್ಳತನದ ಹಣದಲ್ಲಿ ಬಿಸಿನೆಸ್ ಮಾಡ್ತಿದ್ದ ಆರೋಪಿಗಳು..!
ಇತ್ತ ಎಟಿಎಂಗೆ ಹಾಕೋ ಹಣ ಕಳ್ಳತನ ಮಾಡಿ, ಜೊತೆಗೆ ಚಾಲಕ ಶಾಹಿದ್ ಕೊಲೆ ಮಾಡಿ ಆರೋಪಿಗಳು ಹಣ ಹಂಚಿಕೊಂಡು ಅದರಲ್ಲಿ ಬಿಸಿನೆಸ್ ಮಾಡಲು ಶುರು ಮಾಡಿದ್ದರು. ಅದರಲ್ಲೂ ಪ್ರಸನ್ನ 25 ಲಕ್ಷ ತಗೊಂಡಿದ್ದು ಎಳನೀರು ವ್ಯಾಪಾರವನ್ನು ಮೈಸೂರಿನಿಂದ ಮಂಡ್ಯ ವರೆಗೂ ವಿಸ್ತರಿಸಿದ್ದ. ಇನ್ನು ಉಳಿದ ಆರೋಪಿಗಳು ಮೆಡಿಕಲ್, ರಿಯಲ್ ಎಸ್ಟೇಟ್ ಅಂತೇಳಿ ಹಣವನ್ನು ಹೂಡಿಕೆ ಮಾಡಿದ್ದರು. ಇನ್ನು ಕೆಲ ಹಣವನ್ನು ದುಂದುವೆಚ್ಚ ಮಾಡಿ ಕಳೆದಿರೋದು ಪೊಲೀಸ್ ತನಿಖೆ ವೇಳೆ ಬಯಲಾಗಿದೆ.
ಪೊಲೀಸರ ಕಾರ್ಯಕ್ಕೆ ಡಿಸಿಪಿ ಶರಣಪ್ಪ ಶ್ಲಾಘನೆ..!
ಇನ್ನೂ ಮೂರು ವರ್ಷಗಳ ಹಿಂದಿನ ಕೇಸ್ ನಲ್ಲಿ ಏನೂ ಸುಳಿವು ಇಲ್ಲದ ಪ್ರಕರಣದಲ್ಲಿ ಸಿಸಿ ಕ್ಯಾಮರಾ ದೃಶ್ಯಾವಳಿ ಹಾಗೂ ಕೆಲ ಟೆಕ್ನಿಕಲ್ ಎವಿಡೆನ್ಸ್ ಕಲೆಹಾಕಿದ್ದ ಇನ್ಸ್ಪೆಕ್ಟರ್ ಪ್ರಕಾಶ್, ಎಸಿಪಿ ಜಗದೀಶ್, ಸಬ್ ಇನ್ಸ್ಪೆಕ್ಟರ್ ಲೊಕೇಶ್ ಹಾಗೂ ಸಿಬ್ಬಂದಿಗೆ ಡಿಸಿಪಿ ಶರಣಪ್ಪ ಪ್ರಶಂಸೆ ವ್ಯಕ್ತಪಡಿಸಿ ಪ್ರಶಂಸಾ ಪತ್ರ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಇನ್ನು ಆರೋಪಿಗಳ ಬಳಿ ಹಣ ರಿಕವರಿ ಮಾಡೋದಿದ್ದು ಅದರ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಡಿಸಿಪಿ ಶರಣಪ್ಪ ನ್ಯೂಸ್ 18 ಕನ್ನಡಕ್ಕೆ ಮಾಹಿತಿ ನೀಡಿದ್ದಾರೆ.
ವರದಿ: ಮಂಜುನಾಥ್ ಎನ್ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ