ಮಕ್ಕಳ ಮೇಲೆ ದೌರ್ಜನ್ಯ: 3ನೇ ಸ್ಥಾನದಲ್ಲಿ ಬೆಂಗಳೂರು – ವಾಸ್ತವದಲ್ಲಿ ಸಂಖ್ಯೆ ಇನ್ನೂ ಹೆಚ್ಚೇ?
ಎನ್ಸಿಆರ್ಬಿ ವರದಿ ಪ್ರಕಾರ 2019ರ್ಲಲಿ ಬೆಂಗಳೂರಿನಲ್ಲಿ ಮಕ್ಕಳ ಮೇಲೆ ದೌರ್ಜನ್ಯವಾದ 1,488 ಪ್ರಕರಣಗಳು ದಾಖಲಾಗಿವೆ. ದೆಹಲಿ, ಮುಂಬೈ ಬಿಟ್ಟರೆ ಬೆಂಗಳೂರಿನಲ್ಲಿ ಅತಿ ಹೆಚ್ಚು ಇಂತಹ ಪ್ರಕರಣಗಳು ಬೆಳಕಿಗೆ ಬಂದಿವೆ.
ಬೆಂಗಳೂರು: ಮಕ್ಕಳ ಮೇಲಿನ ದೌರ್ಜನ್ಯ ನಡೆಯುವುದರಲ್ಲಿ ದೇಶದಲ್ಲಿ ಬೆಂಗಳೂರು ಮೂರನೇ ಸ್ಥಾನದಲ್ಲಿದೆ. ಹೀಗೊಂದು ಆತಂಕಕಾರಿ ವರದಿ ಹೊರಬಿದ್ದಿದ್ದು ಸಿಲಿಕಾನ್ ಸಿಟಿಯ ಜನರಲ್ಲಿ ತಲ್ಲಣ ಹೆಚ್ಚಿಸಿದೆ. ದೇಶದ 19 ಮಹಾನಗರಗಳಲ್ಲಿ ನಡೆಯುವ ಅಪರಾಧಗಳ ಕ್ರೋಢೀಕೃತ ವರದಿ ನೀಡಿದೆ ಎನ್ ಸಿ ಆರ್ ಬಿ. ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ ಸಂಸ್ಥೆ 2019ರ ವರ್ಷದಲ್ಲಿ ಸಂಭವಿಸಿದ ಅಪರಾಧ ಪ್ರಕರಣಗಳ ವರದಿ ನೀಡಿದೆ. ಈ ಪಟ್ಟಿಯಲ್ಲಿ ದೆಹಲಿ ಮೊದಲನೇ ಸ್ಥಾನ, ಮುಂಬೈ ಎರಡನೇ ಸ್ಥಾನ, ಬೆಂಗಳೂರಿಗೆ ಮೂರನೇ ಸ್ಥಾನ ಇದೆ.
2017 ರಲ್ಲಿ ಬೆಂಗಳೂರಿನಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳ ಸಂಖ್ಯೆ 1582 ರಷ್ಟಿತ್ತು. 2018ರಲ್ಲಿ ಈ ಸಂಖ್ಯೆ 1815 ಗೆ ಏರಿಕೆಯಾಗಿತ್ತು. 2019 ರಲ್ಲಿ ಸಿಲಿಕಾನ್ ಸಿಟಿಯಲ್ಲಿ ಮಕ್ಕಳ ವಿರುದ್ಧ ನಡೆದ ದೌರ್ಜನ್ಯಗಳಿಗೆ ಸಂಬಂಧಿಸಿದಂತೆ 1488 ಪ್ರಕರಣಗಳು ದಾಖಲಾಗಿವೆ.
ಇದೇ ಸಂಬಂಧ ದೆಹಲಿ ಮತ್ತು ಮುಂಬೈನಲ್ಲಿ 2019ರಲ್ಲಿ 7565 ಮತ್ತು 3640 ಪ್ರಕರಣಗಳು ದಾಖಲಾಗಿವೆ. ಬೆಂಗಳೂರಿನಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗೋಕೆ ಕಾರಣ ಇಲ್ಲಿನ ಜನರಲ್ಲಿರುವ ಜಾಗೃತ ಮನೋಭಾವ ಎನ್ನುತ್ತದೆ ಪೋಲಿಸ್ ಇಲಾಖೆ.
ಮಕ್ಕಳ ಮೇಲಿನ ದೌರ್ಜನ್ಯ ಎಲ್ಲೆಡೆ ನಡೆಯುತ್ತದೆ. ಆದರೆ ಇಲ್ಲಿ ಜನರಿಗೆ ದೂರು ನೀಡುವ ಬಗ್ಗೆ ಮತ್ತು ನ್ಯಾಯದ ಬಗ್ಗೆ ಅರಿವಿದೆ. ಹಾಗಾಗಿ ಹೆಚ್ಚು ಜನ ಧೈರ್ಯದಿಂದ ದೂರು ದಾಖಲಿಸುತ್ತಾರೆ ಎನ್ನಲಾಗಿದೆ. ಬೆಂಗಳೂರಿನಲ್ಲಿ 2019ರಲ್ಲಿ ದಾಖಲಾಗಿರುವ ಮಕ್ಕಳ ಮೇಲಿನ ದೌರ್ಜನ್ಯದ 1488 ಪ್ರಕರಣಗಳಲ್ಲಿ 265 ಲೈಂಗಿಕ ದೌರ್ಜನ್ಯ ಪ್ರಕರಣಗಳೇ ಇವೆ.
ಒಟ್ಟು ಪ್ರಕರಣಗಳ ವಿವರ:
ಅಪಹರಣ 970
ಮಾನವ ಸಾಗಾಣಿಕೆ 16
ಪಾಕ್ಸೊ 265 (263 ಬಾಲಕಿಯರು & 2 ಬಾಲಕರು
ಬಾಲ ಕಾರ್ಮಿಕ ಪದ್ಧತಿ 48
ಇಷ್ಟೆಲ್ಲಾ ಇದ್ದರೂ ಇವರಿಗೆ ನ್ಯಾಯ ಸಿಗುವುದು ಅದಿನ್ಯಾವ ಕಾಲಕ್ಕೋ ಎನ್ನುವ ಪರಿಸ್ಥಿತಿ ಇರುವುದು ದುರಂತ. ಬೆಂಗಳೂರು ಒಂದರಲ್ಲೇ ಮಕ್ಕಳ ಮೇಲಿನ ದೌರ್ಜನ್ಯದ 2627 ಪ್ರಕರಣಗಳು ಇತ್ಯರ್ಥವಾಗಬೇಕಿವೆ.
2019 ರಲ್ಲಿ 472 ಹೊಸಾ ಪ್ರಕರಣಗಳು ಕೋರ್ಟ್ ಮೆಟ್ಟಿಲೇರಿದ್ದವು. ಆದರೆ ಈ ವರದಿಯಲ್ಲಿ ಇರುವುದಕ್ಕಿಂತಲೂ ಹೆಚ್ಚಿನ ಪ್ರಕರಣಗಳಿವೆ ಎನ್ನುತ್ತಾರೆ ಮಕ್ಕಳ ಹಕ್ಕುಗಳ ಕಾರ್ಯಕರ್ತರು. ಮಕ್ಕಳ ಮೇಲಿನ ದೌರ್ಜನ್ಯ ನಿರಂತರವಾಗಿ ನಡೆಯುತ್ತಲೇ ಇದೆ. ಅನೇಕ ಪ್ರಕರಣಗಳು ವರದಿಯಾಗದೇ ಉಳಿದುಹೋಗುತ್ತಿವೆ. ಇಷ್ಟಾಗಿಯೂ ಬೆಂಗಳೂರು ದೇಶಕ್ಕೇ ಮೂರನೇ ಸ್ಥಾನದಲ್ಲಿ ಇರುವುದು ಶೋಚನೀಯ.
ವರದಿ: ಸೌಮ್ಯಾ ಕಳಸ
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ