ಭಯದ ವಾತಾವರಣ ಸೃಷ್ಟಿಸಿದ ಹಂದಿಜ್ವರ: ಒಂದೇ ವಾರದಲ್ಲಿ 46 ಪ್ರಕರಣ ದಾಖಲು

sushma chakre | news18
Updated:October 8, 2018, 11:33 AM IST
ಭಯದ ವಾತಾವರಣ ಸೃಷ್ಟಿಸಿದ ಹಂದಿಜ್ವರ: ಒಂದೇ ವಾರದಲ್ಲಿ 46 ಪ್ರಕರಣ ದಾಖಲು
  • Advertorial
  • Last Updated: October 8, 2018, 11:33 AM IST
  • Share this:
ನ್ಯೂಸ್​18 ಕನ್ನಡ

ಬೆಂಗಳೂರು (ಅ. 8): ಕಳೆದ ಒಂದೇ ವಾರದಲ್ಲಿ ನಗರದಲ್ಲಿ 46 ಎಚ್​1ಎನ್​1 (ಹಂದಿಜ್ವರ) ಪ್ರಕರಣಗಳು ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ನಿಗಾ ವಹಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಜಾಗೃತಿ ಮೂಡಿಸುತ್ತಿದ್ದಾರೆ.

ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಹಂದಿಜ್ವರ ಪ್ರಕರಣಗಳು ಹೆಚ್ಚು ದಾಖಲಾಗಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಎಚ್​1ಎನ್​1 ಚಿಕಿತ್ಸೆಗೆಂದು ದಾಖಲಾದ ರೋಗಿಗಳ ಬಗ್ಗೆ ಎಲ್ಲೂ ವರದಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ಹಂದಿಜ್ವರದ ಲಕ್ಷಣಗಳು ಕಂಡುಬಂದಲ್ಲಿ ಸೂಕ್ತವಾದ ಚಿಕಿತ್ಸೆ ನೀಡಬೇಕು ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲ ಔಷಧಗಳು ಆಸ್ಪತ್ರೆಯಲ್ಲಿ ಲಭ್ಯವಿರುವಂತೆ ನೋಡಿಕೊಳ್ಳಬೇಕು ಎಂದು ಎಲ್ಲ ಖಾಸಗಿ ಆಸ್ಪತ್ರೆಗಳಿಗೂ ಸೂಚನೆ ನೀಡಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾ ಆರೋಗ್ಯ ಉಸ್ತುವಾರಿ ಅಧಿಕಾರಿ ಡಾ. ಸುನಂದಾ ಟೈಮ್ಸ್​ ಆಫ್​ ಇಂಡಿಯಾಗೆ ತಿಳಿಸಿದ್ದಾರೆ.

ಸೆಪ್ಟೆಂಬರ್​ 27ರವರೆಗೆ ಶಿವಮೊಗ್ಗದಲ್ಲಿ ಹಂದಿಜ್ವರದ 16 ಪ್ರಕರಣಗಳು ದಾಖಲಾಗಿತ್ತು. ಇದುವರೆಗೂ ರಾಜ್ಯದಲ್ಲಿ 3 ಸಾವಿರ ಮನೆಗಳನ್ನು ಸಮೀಕ್ಷೆಗೊಳಪಡಿಸಿ, ಹಂದಿಜ್ವರದ ರೋಗಿಗಳು ಇದ್ದಾರಾ ಎಂದು ಪರಿಶೀಲಿಸಲಾಗಿದೆ. ಹಂದಿಜ್ವರದ ಲಕ್ಷಣಗಳು ಕಂಡುಬಂದ ಕುಟುಂಬದ ಸದಸ್ಯರಿಗೆ ತಮಿಫ್ಲು ಮಾತ್ರೆಗಳನ್ನು ವಿತರಿಸಲಾಗಿದೆ.

ಏನಿದು ಹಂದಿಜ್ವರ?

ಹಂದಿಜ್ವರ ವೈರಸ್​ನಿಂದ ಒಬ್ಬರಿಂದ ಒಬ್ಬರಿಗೆ ಹರಡುವ ರೋಗ. ಸಾಮಾನ್ಯವಾಗಿ ಕೊಳಕಾಗಿರುವ ಹಂದಿಗಳ ಶ್ವಾಸನಳಿಕೆಯಲ್ಲಿ ಬೆಳೆಯುವ ಈ ರೋಗಕ್ಕೆ ಕಾರಣವಾದ ವೈರಸ್​ಗಳು ಬಹಳ ಬೇಗ ದ್ವಿಗುಣಗೊಂಡು ನೀರಿನ ಮೂಲಕ ಮನುಷ್ಯರ ದೇಹವನ್ನು ಸೇರುತ್ತದೆ. ನೀರಿನ ಮೂಲಕ ಈ ವೈರಸ್​ ದೇಹವನ್ನು ಸೇರಿದ ನಂತರ ಕೆಮ್ಮು, ಸುಸ್ತು, ವಾಂತಿ, ವಾಕರಿಕೆ, ಜ್ವರ, ಅತಿಸಾರ, ಮೈಕೈನೋವು ಮೊದಲಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈ ರೋಗಿಯಲ್ಲಿನ ವೈರಸ್​ ಗಾಳಿಯ ಮೂಲಕ ಇನ್ನೊಬ್ಬರಿಗೆ ಹರಡುತ್ತದೆ.

ಮುನ್ನೆಚ್ಚರಿಕಾ ಕ್ರಮಗಳೇನು?ಹಂದಿಜ್ವರ ಒಬ್ಬರಿಂದ ಒಬ್ಬರಿಗೆ ಹರಡುವುದರಿಂದ ಈ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳಿ. ಆದಷ್ಟು ಆರೋಗ್ಯಯುತ ಆಹಾರ ಸೇವಿಸಿ. ಬಿಸಿಯಾದ ನೀರನ್ನೇ ಕುಡಿಯಿರಿ. ನಿಯಮಿತವಾಗಿ ವ್ಯಾಯಾಮ ಮಾಡಿ. ಸೋಂಕು ತಗುಲದಂತೆ ನೋಡಿಕೊಳ್ಳಲು ಕೆಮ್ಮುವಾಗ ಮತ್ತು ಸೀನುವಾಗ ಟಿಶ್ಯೂ ಅಥವಾ ಕರ್ಚೀಫ್​ ಬಳಸಿ. ಹೊರಗೆ ಹೋಗುವುದಾದರೆ ಮಾಸ್ಕ್​ ಹಾಕಿಕೊಂಡು ಹೋಗಿ. ಕೈಗಳನ್ನು ಆಗಾಗ ಸೋಪಿನಿಂದ ತೊಳೆದುಕೊಳ್ಳುತ್ತಿರಿ. ವಿಟಮಿನ್​ ಸಿ ಅಂಶ ಹೆಚ್ಚಿರುವ ಕಿತ್ತಳೆ, ದ್ರಾಕ್ಷಿ, ಕಿವಿ, ಸ್ಟ್ರಾಬೆರಿ ಇತ್ಯಾದಿ ಹಣ್ಣುಗಳನ್ನು ಹೆಚ್ಚು ಬಳಸಿ. ಗಾಳಿ, ಬೆಳಕು ಮನೆಯೊಳಗೆ ಬರುವಂತೆ ನೋಡಿಕೊಳ್ಳಿ. ಹಂದಿಜ್ವರದ ಸೋಂಕು ಇರುವವರಿಂದ ದೂರವಿರಿ, ಒಂದುವೇಳೆ ನಿಮಗೇ ಸೋಂಕು ತಗುಲಿದ್ದರೆ ಇತರರಿಂದ ಅಂತರ ಕಾಯ್ದುಕೊಂಡು ಅವರಿಗೆ ವೈರಸ್​ ಹರಡದಂತೆ ನೋಡಿಕೊಳ್ಳಿ.

 

First published:October 8, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ