news18-kannada Updated:May 24, 2020, 3:52 PM IST
ಸಾಂದರ್ಭಿಕ ಚಿತ್ರ
ಬೆಂಗಳೂರು (ಮೇ 24): ಕೊರೋನಾ ಆರ್ಭಟದಿಂದಾಗಿ ಜನಜೀವನವೇ ಅಸ್ತವ್ಯಸ್ತವಾಗಿದೆ. ಲಾಕ್ಡೌನ್ನಿಂದಾಗಿ ಅತಂತ್ರವಾಗಿರುವ ಜನರು ತಮ್ಮ ಊರು ಸೇರಿಕೊಳ್ಳಲು ಹೆಣಗಾಡುತ್ತಿದ್ದಾರೆ. ಊರು ಸೇರುವ ತವಕದಲ್ಲಿ ಬೆಂಗಳೂರಿನಿಂದ ಉತ್ತರ ಪ್ರದೇಶಕ್ಕೆ ಹೊರಟಿದ್ದ ತುಂಬು ಗರ್ಭಿಣಿಯೊಬ್ಬರು ಚಲಿಸುತ್ತಿದ್ದ ರೈಲಿನಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾರೆ.
ಬೆಂಗಳೂರಿನಿಂದ ಉತ್ತರಪ್ರದೇಶಕ್ಕೆ ಹೊರಟಿದ್ದ ರೈಲಿನಲ್ಲಿ ಮಹಿಳೆಗೆ ಹೆರಿಗೆಯಾಗಿದೆ. ವೈಟ್ಫೀಲ್ಡ್ ಬಳಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕ ದಂಪತಿಯಾದ ಉತ್ತರಪ್ರದೇಶ ಮೂಲದ ಸಂಗೀತಾ ಹಾಗೂ ಸಂದೀಪ್ ಮೇ 21ರಂದು ಶ್ರಮಿಕ್ ರೈಲಿನಲ್ಲಿ ತವರು ರಾಜ್ಯಕ್ಕೆ ಹೊರಟಿದ್ದರು. ಈ ವೇಳೆ ಸಂಗೀತಾ ರೈಲಿನಲ್ಲಿಯೇ ಮುದ್ದಾದ ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಕ್ಷೇಮವಾಗಿ ತವರು ಸೇರಿದ್ದಾರೆ.

ಬೆಂಗಳೂರಿನ ಶ್ರಮಿಕ್ ರೈಲಿನಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ
ಊರಿಗೆ ಹೋಗಲೇಬೇಕೆಂದು ಹಠ ಹಿಡಿದಿದ್ದ ಗರ್ಭಿಣಿಗೆ ರಾಜ್ಯದ ಇಬ್ಬರು ಅಧಿಕಾರಿಗಳು ಸಹಾಯಹಸ್ತ ಚಾಚಿ ಮಾನವೀಯತೆ ಮೆರೆದಿದ್ದಾರೆ. ರಾಜ್ಯದ ಐಪಿಎಸ್ ಹಾಗೂ ಐಎಫ್ಎಸ್ ಆಧಿಕಾರಿಗಳು ಸಹಾಯ ಮಾಡಿದ್ದಾರೆ. ತವರೂರಿಗೆ ಹೋಗಲೇಬೇಕೆಂದು ಹಠ ಹಿಡಿದಿದ್ದ ಮಹಿಳೆ ಗರ್ಭಿಣಿಯಾಗಿದ್ದರಿಂದ ಟ್ರಾವೆಲ್ ಮಾಡೋದು ಬೇಡ ಎಂದು ಮಹಿಳಾ ಐಎಫ್ಎಸ್ ಅಧಿಕಾರಿ ಬುದ್ದಿ ಹೇಳಿದ್ದರು. ಆದರೆ, ಆಧಿಕಾರಿಯ ಮಾತು ಕೇಳದ ಗರ್ಭಿಣಿ ಊರಿಗೆ ಹೊರಡಲು ಹಠ ಹಿಡಿದಿದ್ದರು.
ಇದನ್ನೂ ಓದಿ: ಕರ್ನಾಟಕದಲ್ಲಿಂದು 97 ಕೋವಿಡ್-19 ಕೇಸ್: 2056ಕ್ಕೆ ಏರಿದ ಸೋಂಕಿತರ ಸಂಖ್ಯೆ
ಈ ವೇಳೆ ಸೇವಾಸಿಂದು ಪೋರ್ಟಲ್ನಲ್ಲಿ ದಂಪತಿಗಳ ನೋಂದಣಿ ಮಾಡಿಸಿದ ಡಿಸಿಪಿ ಎಂ.ಎನ್. ಅನುಚೇತ್ ಅವರಿಬ್ಬರಿಗೂ ಟಿಕೆಟ್ ಕೊಡಿಸಿ ರೈಲಿನಲ್ಲಿ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸಿದ್ದರು. ಇದೇ 21ರಂದು ಶ್ರಮಿಕ್ ರೈಲಿನಲ್ಲಿ ಸಂದೀಪ್ ಜೊತೆಗೆ ಊರಿಗೆ ಹೊರಟಿದ್ದ ಸಂಗೀತಾ ಮಾರ್ಗ ಮಧ್ಯೆ ರೈಲಿನಲ್ಲಿ ಮಗುವಿಗೆ ಜನ್ಮ ನೀಡಿದ್ದರು. ನಿನ್ನೆ ಶ್ರಮಿಕ್ ರೈಲು ಉತ್ತರಪ್ರದೇಶ ತಲುಪಿದ್ದು, ಮಗುವಿನೊಂದಿಗೆ ಕ್ಷೇಮವಾಗಿ ಊರು ತಲುಪಿದ್ದಾಗಿ ದಂಪತಿ ವೈಟ್ಫೀಲ್ಡ್ ಡಿಸಿಪಿ ಅನುಚೇತ್ ಅವರಿಗೆ ಪೋಟೋ ಕಳುಹಿಸಿದ್ದಾರೆ. ಡಿಸಿಪಿ ಅನುಚೇತ್ ಹಾಗೂ ಐಎಫ್ಎಸ್ ಅಧಿಕಾರಿಯ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
First published:
May 24, 2020, 3:50 PM IST