ಬೆಂಗಳೂರು (ಜ. 20): ಪೊಲೀಸ್ ಇಲಾಖೆ ಸೇರಲೇಬೇಕೆಂಬ ಹಠ ತೊಟ್ಟು ಅತಿ ಚಿಕ್ಕ ವಯಸ್ಸಿನಲ್ಲೇ ಐಪಿಎಸ್ ಅಧಿಕಾರಿಯಾಗಿರುವ ಮಧ್ಯಪ್ರದೇಶದ ಇಶಾ ಪಂತ್ 'ಲೇಡಿ ಸಿಂಗಂ' ಎಂದೇ ಹೆಸರಾದವರು. ಇವರಿಂದ ಸ್ಪೂರ್ತಿ ಪಡೆದು ಬಾಲಿವುಡ್ನಲ್ಲಿ 'ಜೈ ಗಂಗಾಜಲ್' ಎಂಬ ಸಿನಿಮಾ ತೆರೆಗೆ ಬಂದಿತ್ತು. ಈ ಸಿನಿಮಾದಲ್ಲಿ ಇಶಾ ಪಂತ್ ಪಾತ್ರವನ್ನು ಪ್ರಿಯಾಂಕಾ ಚೋಪ್ರಾ ನಿರ್ವಹಿಸಿದ್ದರು. ಪ್ರಸ್ತುತ ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿಯಾಗಿರುವ ಇಶಾ ಪಂತ್ ಅವರ ಕನ್ನಡ ಪ್ರೇಮಕ್ಕೆ ಕನ್ನಡಿಗರು ಶಹಬ್ಭಾಸ್ ಎಂದಿದ್ದಾರೆ.
ನಾನಾ ಉದ್ಯೋಗದ ಸಲುವಾಗಿ ಬೆಂಗಳೂರಿಗೆ ಬರುವ ಪರ ಭಾಷಿಗರ ಸಂಖ್ಯೆ ವರ್ಷದಿಂದ ಹೆಚ್ಚುತ್ತಲೇ ಇದೆ. ಆದರೆ, ಅವರಲ್ಲಿ ಬಹುತೇಕ ಮಂದಿ ಕನ್ನಡ ಭಾಷೆಯನ್ನೇ ಕಲಿಯದೆ ಹಿಂದಿ ಅಥವಾ ಇಂಗ್ಲಿಷ್ನಲ್ಲಿ ವ್ಯವಹರಿಸಿ ಬೆಂಗಳೂರಿನಲ್ಲಿ ಸಲೀಸಾಗಿ ಬದುಕುತ್ತಾರೆ. ಹಿಂದಿ, ಇಂಗ್ಲಿಷ್, ತೆಲುಗು, ತಮಿಳು, ಮಲೆಯಾಳಂ ಭಾಷೆಗಳ ಮಧ್ಯೆ ಸಿಲುಕಿರುವ ಕನ್ನಡ ಬೆಂಗಳೂರಿನಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಪರದಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಆದರೆ, ಬೆಂಗಳೂರಿನ ಐಪಿಎಸ್ ಅಧಿಕಾರಿ ಇಶಾ ಪಂತ್ ಮಧ್ಯಪ್ರದೇಶದವರಾದರೂ ಕನ್ನಡ ಭಾಷೆ ಕಲಿತು, ಕನ್ನಡದ ಹಾಡು ಹಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಉತ್ತರ ಭಾರತದವರಾದ ಇಶಾ ಪಂತ್ ಸರಾಗವಾಗಿ ಕನ್ನಡ ಮಾತನಾಡುತ್ತಾರೆ. ಅಷ್ಟೇ ಅಲ್ಲದೆ, ಖಾಸಗಿ ರೆಡಿಯೋ ಕಾರ್ಯಕ್ರಮವೊಂದರಲ್ಲಿ ಶಂಕರ್ನಾಗ್ ಅವರ 'ಗೀತಾ' ಸಿನಿಮಾದ ಸೂಪರ್ ಹಿಟ್ ಗೀತೆಯಾದ 'ಜೊತೆಯಲಿ ಜೊತೆ ಜೊತೆಯಲಿ ' ಹಾಡನ್ನು ಇಂಪಾಗಿ ಹಾಡಿರುವುದು ಕನ್ನಡಿಗರ ಹುಬ್ಬೇರುವಂತೆ ಮಾಡಿದೆ. ಖಡಕ್ ಪೊಲೀಸ್ ಅಧಿಕಾರಿ ಇಶಾ ಪಂತ್ ಇಷ್ಟು ಚೆನ್ನಾಗಿ ಹಾಡಬಲ್ಲರೇ? ಎಂದು ಟ್ವಿಟ್ಟಿಗರು ಅಚ್ಚರಿಪಟ್ಟಿದ್ದಾರೆ.
ವೈರಲ್ ಆಗಿರುವ ತಮ್ಮ ಹಾಡಿನ ವಿಡಿಯೋಗೆ ಪ್ರತಿಕ್ರಿಯೆ ನೀಡಿರುವ ಇಶಾ ಪಂತ್, ಇದು ನನಗೆ ಬಹಳ ಇಷ್ಟವಾದ ಹಾಡು ಎಂದು ಕೂಡ ಹೇಳಿದ್ದಾರೆ.
(ಮಾಹಿತಿ: ಕಿರಣ್ ಕೆ.ಎನ್)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ