• Home
 • »
 • News
 • »
 • state
 • »
 • Metro Pillar Accident: “ಒಂದು ಕೋಟಿ ಕೊಟ್ರೆ ನನ್ನ ಮಗಳು, ಮೊಮ್ಮಗನನ್ನು ಮರಳಿ ಕೊಡ್ತೀರಾ?” ಮೆಟ್ರೋ​ ಅಪಘಾತದಲ್ಲಿ ನೊಂದ ತಂದೆಯ ಪ್ರಶ್ನೆ

Metro Pillar Accident: “ಒಂದು ಕೋಟಿ ಕೊಟ್ರೆ ನನ್ನ ಮಗಳು, ಮೊಮ್ಮಗನನ್ನು ಮರಳಿ ಕೊಡ್ತೀರಾ?” ಮೆಟ್ರೋ​ ಅಪಘಾತದಲ್ಲಿ ನೊಂದ ತಂದೆಯ ಪ್ರಶ್ನೆ

ಮೆಟ್ರೋ ಪಿಲ್ಲರ್ ಅಪಘಾತ

ಮೆಟ್ರೋ ಪಿಲ್ಲರ್ ಅಪಘಾತ

ಬೆಂಗಳೂರಿನ ನಾಗವಾರ ಬಳಿಯ ಹೆಚ್‌ಬಿಆರ್‌ ಲೇಔಟ್‌ ಬಳಿ 40 ಅಡಿ ಎತ್ತರದ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್‌ ದಿಢೀರ್‌ ಕುಸಿತದಿಂದಾಗಿ ತಾಯಿ ಹಾಗೂ ಮಗು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿತ್ತು.

 • News18 Kannada
 • 4-MIN READ
 • Last Updated :
 • Bangalore [Bangalore], India
 • Share this:

“ನಿಮಗೆ ಒಂದು ಕೋಟಿ ಕೊಡುತ್ತೇನೆ. ನನ್ನ ಮಗಳು ಹಾಗೂ ಮೊಮ್ಮಗನನ್ನು ಮರಳಿ ಕರೆತರುವಿರಾ?” ನೊಂದ ತಂದೆ ಹೀಗೊಂದು ಪ್ರಶ್ನೆ ಮಾಡಿದ್ದಾರೆ. ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್‌ ಬಿದ್ದು ಸಾವನ್ನಪ್ಪಿದ್ದ ಮಹಿಳೆಯ ತಂದೆ ಇಂಥದ್ದೊಂದು ಮನಮಿಡಿಯುವ ಪ್ರಶ್ನೆ ಕೇಳಿದ್ದಾರೆ. ಕಳೆದ ಬುಧವಾದ ಬೆಂಗಳೂರು ಮೆಟ್ರೋದ (Bengaluru Namma Metro)  ನಿರ್ಮಾಣ ಹಂತದಲ್ಲಿದ್ದ ಪಿಲ್ಲರ್‌ (Metro Pillar Accident) ಬಿದ್ದ ಪರಿಣಾಮ ಪುಟ್ಟ ಮಗನೊಂದಿಗೆ ಸಾವನ್ನಪ್ಪಿದ ಮಹಿಳೆಯ ತಂದೆ ಅಪಘಾತಕ್ಕೆ ಕಾರಣರಾದವರನ್ನು ಶಿಕ್ಷಿಸುವಂತೆ ಸರ್ಕಾವನ್ನು ಕೇಳಿಕೊಂಡಿದ್ದಾರೆ.


ಬೆಂಗಳೂರಿನ ನಾಗವಾರ ಬಳಿಯ ಹೆಚ್‌ಬಿಆರ್‌ ಲೇಔಟ್‌ ಬಳಿ 40 ಅಡಿ ಎತ್ತರದ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್‌ ದಿಢೀರ್‌ ಕುಸಿತದಿಂದಾಗಿ ತಾಯಿ ಹಾಗೂ ಮಗು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿತ್ತು. ಸಾಫ್ಟ್‌ವೇರ್‌ ಎಂಜಿನಿಯರ್‌ ತೇಜಸ್ವಿನಿ (28) ಮತ್ತು ಅವರ ಪುತ್ರ ವಿಹಾನ್‌ (2.5) ಮೃತಪಟ್ಟಿದ್ದರು.


ತೇಜಸ್ವಿನಿ ತಮ್ಮ ಪತಿ ಲೋಹಿತ್ ಜೊತೆಗೆ ಆಫೀಸಿಗೆ ತೆರಳುತ್ತಿದ್ದರು. ಅಲ್ಲಿಯೇ ಅವಳಿ ಮಕ್ಕಳಾದ ಮಗಳು ವಿಸ್ಮಿತಾ ಮತ್ತು ಮಗ ವಿಹಾನ್‌ನನ್ನು ಪ್ಲೇಸ್ಕೂಲ್‌ಗೆ ಬಿಡುತ್ತಿದ್ದರು. ಆಫೀಸಿಗೆ ತೆರಳುವ ದಾರಿ ಮಧ್ಯೆ ಇಂಥದ್ದೊಂದು ಅಪಘಾತ ನಡೆದಿದ್ದು ಪತಿ ಹಾಗೂ ವಿಸ್ಮಿತಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ.


ಬಿಎಂಆರ್‌ಸಿಎಲ್‌, ಸರ್ಕಾರದಿಂದ ಪರಿಹಾರ ಘೋಷಣೆ
ಈ ಮಧ್ಯೆ ತಾಯಿ ಹಾಗೂ ಮಗುವಿನ ಕುಟುಂಬಕ್ಕೆ BMRCL 20 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂಪಾಯಿಗಳನ್ನು ನೀಡುವುದಾಗಿ ಹೇಳಿದ್ದಾರೆ.


ಪರಿಹಾರ ನೀಡಿದರೆ ಮಗಳು, ಮೊಮ್ಮಗ ವಾಪಸ್‌ ಬರುತ್ತಾರಾ?
ಈ ವೇಳೆ ಮಾತನಾಡಿರುವ ತೇಜಸ್ವಿನಿ ಅವರ ತಂದೆ ಮದನ್, ಇದು ಪರಿಹಾರದ ಬಗ್ಗೆ ಅಲ್ಲ. “ನನಗೆ ಅವರ ಪರಿಹಾರದ ಅಗತ್ಯವಿಲ್ಲ. ನಾನು ಅವರಿಗೆ 1 ಕೋಟಿ ರೂ.ನೀಡುತ್ತೇನೆ. ಅವರು ನನ್ನ ಮಗಳು ಮತ್ತು ಮೊಮ್ಮಗನ ಜೀವವನ್ನು ಮರಳಿ ತರಬಹುದೇ?


ಇದು ಹಣದ ಬಗ್ಗೆ ಅಲ್ಲ. ಬಿಎಂಆರ್‌ಸಿಎಲ್ ಮತ್ತು ಗುತ್ತಿಗೆದಾರ ನಾಗಾರ್ಜುನ ಕನ್‌ಸ್ಟ್ರಕ್ಷನ್ ಕಂಪನಿ ಲಿಮಿಟೆಡ್ (ಎನ್‌ಸಿಸಿ) ಲೋಪ ಸ್ಪಷ್ಟವಾಗಿ ಕಾಣುತ್ತದೆ" ಎಂದು ಹೇಳಿದ್ದಾರೆ.


ಅಲ್ಲದೇ, “ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಯಲು ಮತ್ತು ಜೀವಗಳನ್ನು ಉಳಿಸುವಂತೆ ನಾನು ಸರ್ಕಾರವನ್ನು ಕೇಳಿಕೊಳ್ಳುತ್ತೇನೆ. ಸರ್ಕಾರ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ಅಧಿಕಾರಿಗಳನ್ನು ಬಂಧಿಸಬೇಕು. ಮುಖ್ಯಮಂತ್ರಿಗಳು ಯಾವುದೇ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗದಿದ್ದರೆ ನೂರಾರು ಜನಜೀವನ ಅಪಾಯಕ್ಕೆ ಸಿಲುಕಲಿದೆ" ಎಂದು ಮೃತ ಮಹಿಳೆಯ ತಂದೆ ನೋವು ತೋಡಿಕೊಂಡಿದ್ದಾರೆ.


ಕ್ರಮ ಕೈಗೊಳ್ಳಲಾಗಿದೆ: ಅರಗ ಜ್ಞಾನೇಂದ್ರ
ಈ ಮಧ್ಯೆ, ಬಿಎಂಆರ್‌ಸಿಎಲ್ ಮತ್ತು ಎನ್‌ಸಿಸಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ. ಎನ್‌ಸಿಸಿಯ ಜೂನಿಯರ್ ಇಂಜಿನಿಯರ್ ಪ್ರಭಾಕರ್, ನಿರ್ದೇಶಕ ಚೈತನ್ಯ, ವಿಶೇಷ ಯೋಜನಾ ವ್ಯವಸ್ಥಾಪಕ ಮಥಾಯ್, ಪ್ರಾಜೆಕ್ಟ್ ಮ್ಯಾನೇಜರ್ ವಿಕಾಸ್ ಸಿಂಗ್, ಮೇಲ್ವಿಚಾರಕ ಲಕ್ಷ್ಮಿಪತ್ತು, ಬಿಎಂಆರ್‌ಸಿಎಲ್‌ನ ಕಾರ್ಯನಿರ್ವಾಹಕ ಎಂಜಿನಿಯರ್ ಮಹೇಶ್ ಬೆಂಡೇಕರಿ ಮತ್ತು ಉಪ ಮುಖ್ಯ ಎಂಜಿನಿಯರ್ ವೆಂಕಟೇಶ್ ಶೆಟ್ಟಿ ಅವರ ಹೆಸರುಗಳನ್ನು ಎಫ್‌ಐಆರ್‌ನಲ್ಲಿ ಸೇರಿಸಲಾಗಿದೆ ಎಂದಿದ್ದಾರೆ.


ಇದನ್ನೂ ಓದಿ: Bengaluru Traffic: ಬೆಂಗಳೂರಿನ ಪ್ರಮುಖ ಫ್ಲೈಓವರ್ ಮೇಲೆ ಸಂಚಾರ ನಿರ್ಬಂಧ


ಇನ್ನು, ಬುಧವಾರವೂ ಯೋಜನೆಯ ಹೊಣೆ ಹೊತ್ತಿರುವ ಅಧಿಕಾರಿಗಳ ವಿವರ ಸಂಗ್ರಹಿಸಲಾಗಿದೆ. ಒಟ್ಟಾರೆ, ಯಾರದ್ದೋ ತಪ್ಪಿಗೆ ಅಮಾಯಕ ತಾಯಿ ಹಾಗೂ ಮಗುವಿನ ಜೀವ ಬಲಿಯಾದದ್ದು ಮಾತ್ರ ದುರಂತ. ಇಬ್ಬರನ್ನೂ ಕಳೆದುಕೊಂಡ ಕುಟುಂಬದವರಿಗೆ ಆ ದುಃಖವನ್ನು ಭರಿಸುವ ಶಕ್ತಿಯನ್ನು ದೇವರೇ ನೀಡಬೇಕಷ್ಟೇ.


ಇದನ್ನೂ ಓದಿ: Bengaluru: ಬ್ರಿಗೇಡ್ ರೋಡ್​​ನಲ್ಲಿ ಏಕಾಏಕಿ ಬಾಯ್ತೆರೆದ ರಸ್ತೆ; ಹಳಕ್ಕೆ ಬಿದ್ದು ಇಬ್ಬರು ಬೈಕ್​ ಸವಾರರಿಗೆ ಗಾಯ


ಆದ್ರೆ ಘಟನೆಗೆ ಕಾರಣರಾದವರನ್ನು ಶಿಕ್ಷಿಸಿ, ಮುಂದೆ ಇಂಥ ದುರಂತಗಳಾಗದಂತೆ ಎಚ್ಚರಿಕೆ ವಹಿಸೋದು ಮಾತ್ರ ಅತ್ಯಂತ ಅಗತ್ಯ. ದಿನವೂ ಇಂಥ ರಸ್ತೆಗಳಲ್ಲಿ ಸಾವಿರಾರು ವಾಹನಗಳು ಓಡಾಡುತ್ತಿರುತ್ತವೆ. ಆದ್ದರಿಂದ ಸರಿಯಾದ ಮೇಲುಸ್ತುವಾರಿ ವಹಿಸುವುದು ಅಗತ್ಯ ಎಂಬುದನ್ನು ಮನಗಾಣಬೇಕಿದೆ.

Published by:ಗುರುಗಣೇಶ ಡಬ್ಗುಳಿ
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು