ಬೆಂಗಳೂರು (ಡಿ. 27): ಹೊಸ ವರ್ಷವನ್ನು ಬರಮಾಡಿಕೊಳ್ಳಲು ಇಡೀ ದೇಶವೇ ಸಜ್ಜಾಗುತ್ತಿದೆ. 2020ಕ್ಕೆ ಕಾಲಿಡಲು ಕೇವಲ 4 ದಿನಗಳು ಬಾಕಿ ಇವೆ. ದೇಶಾದ್ಯಂತ ಡಿ. 31ರ ರಾತ್ರಿ ಸಂಭ್ರಮಾಚಾರಣೆ ಮುಗಿಲು ಮುಟ್ಟಿರುತ್ತದೆ. ಅದಕ್ಕೆ ಬೆಂಗಳೂರು ಕೂಡ ಹೊರತಾಗಿಲ್ಲ. ಪ್ರತಿವರ್ಷ ಬೆಂಗಳೂರಿನಲ್ಲಿ ಹೊಸ ವರ್ಷವನ್ನು ವಿಶೇಷವಾಗಿ, ರಾತ್ರಿಯಿಡೀ ಕುಣಿದು, ಪಾರ್ಟಿ ಮಾಡಿ ಸಂಭ್ರಮಿಸುವ ಮೂಲಕ ಆಹ್ವಾನಿಸಲಾಗುತ್ತದೆ. ಈ ಬಾರಿ ಕೂಡ ಡಿ. 31ರಂದು ಹೊಸ ವರ್ಷಾಚರಣೆ ಜೋರಾಗೇ ಇರುವುದರಿಂದ ಜನರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ರಾತ್ರಿ 2 ಗಂಟೆಯವರೆಗೆ ನಮ್ಮ ಮೆಟ್ರೋಗಳು ಸಂಚರಿಸಲಿವೆ.
ಸಾಮಾನ್ಯವಾಗಿ ಹೊಸ ವರ್ಷದ ದಿನ ರಾತ್ರಿ ರಸ್ತೆ ಮಧ್ಯದಲ್ಲಿ ಟ್ರಾಫಿಕ್ ಪೊಲೀಸರು ವಾಹನಗಳಿಗೆ ಅಡ್ಡ ಹಾಕಿ ಅವರು ಕುಡಿದಿದ್ದಾರೆಯೇ ಎಂಬುದನ್ನು ಪರೀಕ್ಷಿಸುತ್ತಾರೆ. ಈ ಕಾರಣಕ್ಕೆ ಹೊಸ ವರ್ಷದ ಹಿಂದಿನ ರಾತ್ರಿ ಸಂಚಾರ ಪೊಲೀಸರಿಗೆ ಭಾರೀ ದಂಡ ಸಂಗ್ರಹವಾಗುತ್ತದೆ. ಆದರೆ, ಮೆಟ್ರೋದಲ್ಲಿ ಸಂಚರಿಸುವವರು ಹೊಸ ವರ್ಷದ ರಾತ್ರಿ ಮದ್ಯಸೇವನೆ ಮಾಡಬಾರದು ಎಂಬ ನಿಯಮವೇನಿಲ್ಲ. ಪಾರ್ಟಿ ಮುಗಿಸಿದವರು ಸುರಕ್ಷಿತವಾಗಿ ಮನೆಗೆ ತೆರಳಲಿ ಎಂಬ ಕಾರಣಕ್ಕೆ ಮೆಟ್ರೋ ಸಂಚಾರದ ಸಮಯವನ್ನು ವಿಸ್ತರಿಸಲಾಗಿದೆ. ಪ್ರಯಾಣಿಕರು ಕುಡಿದು ಸಂಚರಿಸಬಾರದು ಎಂಬ ಯಾವುದೇ ನಿರ್ಬಂಧವಿಲ್ಲ. ಆದರೆ, ಕುಡಿದು ಮೆಟ್ರೋ ನಿಲ್ದಾಣದಲ್ಲಿ ಅಸಭ್ಯವಾಗಿ ವರ್ತಿಸುವಂತಿಲ್ಲ ಎಂಬ ನಿಯಮ ಜಾರಿ ಮಾಡಲಾಗಿದೆ.
ಗೋಲಿಬಾರ್ ಸಮರ್ಥನೆಗೆ ಮಂಗಳೂರು ಪೊಲೀಸರಿಂದ ವಿಡಿಯೋ ಬಿಡುಗಡೆ; ಮುಂದುವರೆದ ಪರ-ವಿರೋಧದ ಚರ್ಚೆ
ಈ ಬಾರಿ ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರು ಮದ್ಯಸೇವನೆ ಮಾಡಿದ್ದಾರಾ? ಎಂದು ಮಷಿನ್ಗಳ ಮೂಲಕ ಪರೀಕ್ಷೆ ಮಾಡುವುದಿಲ್ಲ. ಆದರೆ, ಕುಡಿದು ಗಲಾಟೆ ಮಾಡುವವರನ್ನು, ಬೇರೆ ಪ್ರಯಾಣಿಕರಿಗೆ ತೊಂದರೆ ನೀಡುವವರನ್ನು ಮುಲಾಜಿಲ್ಲದೆ ಹೊರಗೆ ಹಾಕಲಾಗುವುದು. ಹಾಗೇ, ಮದ್ಯದ ಬಾಟಲಿಗಳನ್ನು ಮೆಟ್ರೋದಲ್ಲಿ ಕೊಂಡೊಯ್ಯಲು ಅವಕಾಶ ನೀಡುವುದಿಲ್ಲ ಎಂದು ಟೈಮ್ಸ್ ಆಫ್ ಇಂಡಿಯಾಗೆ ಬಿಎಂಆರ್ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಡಿ. 31ರಂದು ಮಧ್ಯರಾತ್ರಿ ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆ ಬಳಿ ಸಂಭ್ರಮಾಚರಣೆಗೆ ಸಾವಿರಾರು ಜನ ಸೇರುತ್ತಾರೆ. ಈ ಸಮಯದಲ್ಲಿ ಸಾಕಷ್ಟು ಜನ ಮೆಟ್ರೋದಲ್ಲೇ ಪ್ರಯಾಣಿಸುತ್ತಾರೆ. ಹೀಗಾಗಿ ಟ್ರಿನಿಟಿ ಮೆಟ್ರೋ ಸ್ಟೇಷನ್, ಎಂಜಿ ರಸ್ತೆ, ಕಬ್ಬನ್ ಪಾರ್ಕಿನಲ್ಲಿ ಜನಸಂದಣಿ ಹೆಚ್ಚಾಗಿರುವುದರಿಂದ ಈ ಮೂರು ಮೆಟ್ರೋ ನಿಲ್ದಾಣಗಳಲ್ಲಿ ಭದ್ರತೆ ಹೆಚ್ಚು ಮಾಡಲಾಗಿದೆ. ಮಹಿಳಾ ಪ್ರಯಾಣಿಕರು ಹೊಸ ವರ್ಷದ ಹಿಂದಿನ ರಾತ್ರಿ ಸುರಕ್ಷತಾ ದೃಷ್ಟಿಯಿಂದ ಮಹಿಳೆಯರಿಗೆ ಮೀಸಲಾಗಿರುವ ಬೋಗಿಗಳಲ್ಲಿ ಸಂಚರಿಸಬಹುದು. ಒಂದುವೇಳೆ ಆ ಬೋಗಿಗಳಲ್ಲಿ ಜಾಗ ಇಲ್ಲದಿದ್ದರೆ ಮುಂದಿನ ರೈಲು ಬರುವವರೆಗೆ ಕಾಯಬಹುದು. ಹೊಸ ವರ್ಷದ ಹಿನ್ನೆಲೆ ಕೆಲವೇ ನಿಮಿಷಗಳ ಅಂತರದಲ್ಲಿ ಮೆಟ್ರೋ ರೈಲುಗಳು ಸಂಚರಿಸಲಿವೆ. ಹೀಗಾಗಿ, ಹೆಚ್ಚು ಹೊತ್ತು ಕಾಯಬೇಕಾದ ಅಗತ್ಯವೂ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳೂರು ಗೋಲಿಬಾರ್ಗೆ ಬಲಿಯಾದವರ ವಿರುದ್ಧವೇ ಎಫ್ಐಆರ್; ವಿವಾದಕ್ಕೆ ಕಾರಣವಾಯ್ತು ಪೊಲೀಸರ ನಡೆ
ರಾತ್ರಿ ಪಾರ್ಟಿ ತೆರಳುವವರಿಗೆ ಈ ಬಾರಿ ಪೇಪರ್ ಟಿಕೆಟ್ ನೀಡಲು ಬಿಎಂಆರ್ಸಿಎಲ್ ನಿರ್ಧರಿಸಿದೆ. ಹೆಚ್ಚಿನ ಪ್ರಯಾಣಿಕರು ಒಮ್ಮೆಲೇ ಸಂಚರಿಸುವುದರಿಂದ ಟೋಕನ್ ನೀಡಲು ಸಮಸ್ಯೆಯಾಗುತ್ತದೆ ಎಂದು ಈ ರೀತಿ ಮಾಡಲಾಗುತ್ತದೆ. ಡಿ. 31ರಂದು ಸಂಜೆ 4 ಗಂಟೆಗೆ ಎಲ್ಲ ಮೆಟ್ರೋ ಸ್ಟೇಷನ್ ನಲ್ಲಿ ಪೇಪರ್ ಟಿಕೆಟ್ ಕೊಡಲಾಗುತ್ತದೆ.
ಡಿ. 31ರ ರಾತ್ರಿ ಹೊಸ ವರ್ಷಾಚರಣೆಯನ್ನು ಬ್ಯಾನ್ ಮಾಡಿ ಎಂದು ಈಗಾಗಲೇ ಹಿಂದು ಜನಜಾಗೃತಿ ಸಮಿತಿ ಪೊಲೀಸರಿಗೆ ಮನವಿ ಸಲ್ಲಿಸಿವೆ. ಎಂಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಯಲ್ಲಿ ಹೊಸ ವರ್ಷಾಚರಣೆಗೆ ಅವಕಾಶ ನೀಡಬೇಡಿ ಎಂದು ಮನವಿ ಮಾಡಿರುವ ಹಿಂದು ಜನಜಾಗೃತಿ ಸಮಿತಿ ಸದಸ್ಯರು ಮದ್ಯಸೇವನೆ, ಧೂಮಪಾನ, ಪಾರ್ಟಿಯ ಮೇಲೆ ನಿರ್ಬಂಧ ಹೇರಿ ಎಂದು ಆಗ್ರಹಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ