ಬೆಂಗಳೂರು (ಮಾ. 24): ನೀವು ಪ್ರತಿದಿನ ಬೆಂಗಳೂರಿನ ಮೆಟ್ರೋ ರೈಲಿನಲ್ಲಿ ಓಡಾಡುತ್ತೀರಾ? ನಿಮ್ಮ ಬಳಿ ಹಳೆಯ ಮೆಟ್ರೋ ಕಾರ್ಡ್ ಇದೆಯಾ? ಒಂದುವೇಳೆ ನಿಮ್ಮ ಬಳಿ ಮೆಟ್ರೋ ಕಾರ್ಡ್ ಇಲ್ಲ ಅಂದ್ರೆ ಮೆಟ್ರೋ ಸ್ಟೇಷನ್ ಗೆ ಹೋಗುವ ಮುನ್ನ ಕೊಂಚ ಯೋಚನೆ ಮಾಡಿ. ಇಲ್ಲವೆಂದರೆ ಮೆಟ್ರೋ ಸ್ಟೇಷನ್ನಿಂದ ವಾಪಾಸ್ ಬರಬೇಕಾಗುತ್ತದೆ. ಕೊರೋನಾ ಬಳಿಕ ತಟಸ್ಥ ಸ್ಥಿತಿಗೆ ಬರ್ತಿರೋ ಬೆಂಗಳೂರಿನ ನಮ್ಮ ಮೆಟ್ರೋ ನಿಗಮದಲ್ಲಿ ಇದೀಗ ಹೊಸದೊಂದು ಸಮಸ್ಯೆ ಶುರುವಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಮೆಟ್ರೋ ಪ್ರಯಾಣಿಕರಿಗೆ ಕೊಡೋದಕ್ಕೆ ಮೆಟ್ರೋ ನಿಗಮದ ಬಳಿ ಮೆಟ್ರೋ ಸ್ಮಾರ್ಟ್ ಕಾರ್ಡ್ ಗಳು ಶಾರ್ಟೇಜ್ ಆಗಿವೆಯಂತೆ. ಹೀಗಂತ ಮೆಟ್ರೋ ಪ್ರಯಾಣಿಕರು ಹಾಗೂ ಮೆಟ್ರೋ ಅಸೋಸಿಯೇಷನ್ ಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಕೊರೊನಾದಿಂದಾಗಿ ನಮ್ಮ ಮೆಟ್ರೋದಲ್ಲಿ ಟೋಕನ್ ವ್ಯವಸ್ಥೆ ರದ್ದು ಮಾಡಲಾಗಿದ್ದು, ಪ್ರಯಾಣಕ್ಕೆ ಸ್ಮಾರ್ಟ್ ಕಾರ್ಡ್ ವ್ಯವಸ್ಥೆ ಮಾಡಲಾಗಿದೆ. ಕೊರೊನಾ ಆರಂಭದಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇದ್ದದ್ದರಿಂದ ಯಾವುದೇ ಸಮಸ್ಯೆ ಆಗುತ್ತಿರಲಿಲ್ಲ. ಆದರೆ, ಈಗ ನಿತ್ಯ 2 ಲಕ್ಷದಷ್ಟು ಪ್ರಯಾಣಿಕರು ಮೆಟ್ರೋದಲ್ಲಿ ಓಡಾಡುತ್ತಿದ್ದಾರೆ. ಹಾಗಾಗಿ ಸ್ಮಾರ್ಟ್ ಕಾರ್ಡ್ಗಳ ಕೊರತೆ ಉಂಟಾಗಿದೆ. ಈ ಸಮಸ್ಯೆಗೆ ಮೆಟ್ರೋ ಅಧಿಕಾರಿಗಳೇ ನೇರ ಹೊಣೆ, ಸ್ಟಾರ್ಟ್ ಕಾರ್ಡ್ ಗಳ ಪೂರೈಕೆ, ನಿರ್ವಹಣೆಯಲ್ಲಿ ಅಧಿಕಾರಿಗಳು ಸೋತಿದ್ದಾರೆ ಎಂದು ನೇರ ಆರೋಪ ಮಾಡುತ್ತಿದ್ದಾರೆ.
ಇದನ್ನೂ ಓದಿ: 6 ಸಚಿವರು ರಾಜೀನಾಮೆ ಕೊಡಬೇಕು, ರಮೇಶ್ ಜಾರಕಿಹೊಳಿ ಮೇಲೆ ಅತ್ಯಾಚಾರದ ಕೇಸ್ ಹಾಕಬೇಕು; ಸಿದ್ದರಾಮಯ್ಯ ಪಟ್ಟು
ಗೊರಗುಂಟೆ ಪಾಳ್ಯ, ನಾಗಸಂದ್ರ, ದಾಸರಹಳ್ಳಿ ಮೆಟ್ರೋ ನಿಲ್ದಾಣಗಳು ಸೇರಿದಂತೆ ಹಲವು ನಿಲ್ದಾಣಗಳಲ್ಲಿ ಸ್ಮಾರ್ಟ್ ಕಾರ್ಡ್ ಕೊರತೆ ಉಂಟಾಗಿದ್ದು ನಿಲ್ದಾಣಕ್ಕೆ ಬಂದ ಪ್ರಯಾಣಿಕರಿಗೆ ಹೊಸ ಮೆಟ್ರೋ ಕಾರ್ಡ್ ಗಳು ಸಿಗದೇ ಪರದಾಡುವಂತಾಗಿದೆ. ಮೆಟ್ರೋ ನಿಲ್ದಾಣದಲ್ಲಿನ ಕೌಂಟರ್ ಗಳಲ್ಲಿ ಕಾರ್ಡ್ ಸಿಗದೇ ಪ್ರಯಾಣಿಕರು ವಾಪಾಸ್ ಹೋಗ್ತಾ ಇದ್ದಾರೆ. ಈ ಸಂಬಂಧ ಸಮಸ್ಯೆಗೆ ಪರಿಹಾರದ ಬಗ್ಗೆ ಮೆಟ್ರೊ ನಿಗಮದ ಅಧಿಕಾರಿಗಳಿಂದ ಸೂಕ್ತ ಪ್ರತಿಕ್ರಿಯೆ ಸಿಗ್ತಿಲ್ಲ. ನಮ್ಮಲ್ಲಿ ಅಂತಹ ಸಮಸ್ಯೆ ಸದ್ಯಕ್ಕೆ ಇಲ್ಲ. ಲಕ್ಷಾಂತರ ಸ್ಮಾರ್ಟ್ ಕಾರ್ಡ್ ಗಳು ಇದೆ, ಇನ್ನೊಂದಷ್ಟು ಸ್ಮಾರ್ಟ್ ಕಾರ್ಡ್ ಗಳನ್ನು ಬುಕ್ ಮಾಡಿಕೊಂಡು ತರಿಸಿಕೊಳ್ತಿದ್ದೇವೆ ಎಂದು ಅಧಿಕಾರಿಗಳು ಉತ್ತರಿಸುತ್ತಿದ್ದಾರೆ.
ಕೊರೊನಾ ಆರಂಭದಲ್ಲಿ ಮೆಟ್ರೋದತ್ತ ಜನ ಮುಖ ಮಾಡುತ್ತಿರಲಿಲ್ಲ. ಇದರಿಂದ ನಿಗಮಕ್ಕೆ ನಷ್ಟದ ಹೊಡೆತ ಜೋರಾಗಿಯೇ ಬಿದ್ದಿತ್ತು. ಆರಂಭಿಕ ಹಂತದಲ್ಲಿ 200 ಕೋಟಿಗೂ ಅಧಿಕ ನಷ್ಟ ನಮ್ಮ ಮೆಟ್ರೋ ಅನುಭವಿಸಿತ್ತು. ಅದಾಗಿಯೂ ಪ್ರಯಾಣಿಕರಿಗೆ ಸಂಪೂರ್ಣವಾಗಿ ಸೇವೆ ಒದಗಿಸಿದ ಹಿನ್ನೆಲೆ ನಷ್ಟದ ಮೇಲೆ ಮತ್ತೆ ನಷ್ಟ ಅನುಭವಿಸಿತ್ತು. ಆದರೀಗ ಪ್ರಯಾಣಿಕರು ಸೇವೆ ಪಡೆದುಕೊಳ್ಳೋಕೆ ಸಿದ್ಧವಿದ್ದರೂ ಸ್ಮಾರ್ಟ್ ಕಾರ್ಡ್ ಸಮಸ್ಯೆ ಎದುರಾಗಿದೆ.
(ವರದಿ: ಆಶಿಕ್ ಮುಲ್ಕಿ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ