ಬೆಂಗಳೂರು: ಆಕೆಗೆ ಮದುವೆಯಾಗಿ (Marriage) ಸುಖ ಸಂಸಾರ ಇತ್ತು. ಆದರೆ ಮಹಿಳೆಗೆ (Woman) ಪರಿಚಯವಾಗಿದ್ದ ಓರ್ವ ವ್ಯಕ್ತಿಯೊಂದಿಗೆ ಆಕೆ ಅಕ್ರಮ ಸಂಬಂಧ ಹೊಂದಿದ್ದಳು. ಇದಕ್ಕೆ ಅಡ್ಡಿಯಾಗಿದ್ದ ಗಂಡನನ್ನು (Husband and Wife) ಕೂಡ ಮುಗಿಸಲು ಮಹಿಳೆ ಪ್ಲ್ಯಾನ್ ಮಾಡಿದ್ದಳು. ಆದರೆ ಅಂತ್ಯದಲ್ಲಿ ಪ್ರಿಯಕರನೇ ಕೊಲೆಯಾದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನ (Bengaluru) ಎಲೆಕ್ಟ್ರಾನಿಕ್ ಸಿಟಿಯಲ್ಲಿ (Electronic City) ನಡೆದಿದೆ. ಅಂದಹಾಗೇ, ನಾವು ಹೇಳ್ತಿರೋದು ಯಾವುದೇ ಸಿನಿಮಾ ಕಥೆಯಲ್ಲ, ಇತ್ತೀಚೆಗಷ್ಟೇ ಬೆಂಗಳೂರಿನ ಹೊಸೂರು (Hosur Road) ರಸ್ತೆಯಲ್ಲಿ ಪತ್ತೆಯಾಗಿದ್ದ ಅನಾಮಿಕ ಮೃತದೇಹದ ಪ್ರಕರಣದ ಹಿಂದಿನ ಕಾರಣವನ್ನು. ಹೌದು, ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಹೊಸೂರು ರಸ್ತೆಯ ಬಳಿ ಪತ್ತೆಯಾಗಿದ್ದ ಮೃತದೇಹದ ಪ್ರಕರಣವನ್ನು ಬೇಧಿಸಿದ್ದು, ಕೇಸ್ನಲ್ಲಿ ಉತ್ತರ ಪ್ರದೇಶ ಮೂಲದ ದಂಪತಿ ಸೇರಿ ಮೂವರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಏನಿದು ಪ್ರಕರಣ?
ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ನಿಬಾಶೀಶ್ ಪಾಲ್ ಕೊಲೆಯಾದ ವ್ಯಕ್ತಿಯಾಗಿದ್ದು, ಪ್ರಕರಣದಲ್ಲಿ ಉತ್ತರ ಪ್ರದೇಶ ಮೂಲದ ರೀನಾ, ಗಂಗೇಶ್ ಹಾಗೂ ಬಿಜೋಯ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ರೀನಾ ಮದುವೆಯ ಬಳಿಕ ಗಂಡ ಗಂಗೇಶ್ ಜೊತೆ ಬೆಂಗಳೂರಿಗೆ ಆಗಮಿಸಿ ನಗರದಲ್ಲೇ ನೆಲೆಸಿದ್ದರು. ಆದರೆ ಮದುವೆಯಾದರೂ ರೀನಾ, ನಿಬಾಶೀಶ್ ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳಂತೆ. ಇಬ್ಬರು ಒಂದಾಗಲು ಗಂಡನನ್ನೇ ಕೊಲೆ ಮಾಡಲು ರೀನಾ ಸ್ಕೆಚ್ ಸಿದ್ದಪಡಿಸಿದ್ದಳಂತೆ. ಆದರೆ ಈ ವಿಚಾರ ತಿಳಿದ ಪತಿ ಗಂಗೇಶ್, ತನ್ನ ಪತ್ನಿಯನ್ನು ನಗರದಲ್ಲೇ ಬಿಟ್ಟು ಉತ್ತರ ಪ್ರದೇಶ ಸ್ವಗ್ರಾಮಕ್ಕೆ ತೆರಳಿದ್ದ. ಇಷ್ಟೇ ಸಾಕು ಅಂದುಕೊಂಡಿದ್ದ ರೀನಾ, ಪ್ರಿಯಕರನೊಂದಿಗೆ ಸುತ್ತಾಡಿಕೊಂಡಿದ್ದಳು.
ಆದರೆ ಕೆಲ ದಿನಗಳ ಬಳಿಕ ತನ್ನ ನೈಜ ಮುಖ ತೋರಿಸಿದ್ದ ಪ್ರಿಯಕರ, ರೀನಾಗೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಲು ಶುರು ಮಾಡಿದ್ದನಂತೆ. ಅಲ್ಲದೇ ಬೇರೆ ಪುರುಷರೊಂದಿಗೆ ಮಲಗಿಕೊಳ್ಳವಂತೆ ಒತ್ತಾಯ ಮಾಡುತ್ತಿದ್ದನಂತೆ.
ಪ್ರಿಯಕರನ ಹಿಂಸೆ ತಾಳಲಾಗದೆ, ಮತ್ತೆ ಗಂಡನ ಪಾದವೇ ಮೇಲು ಎಂದುಕೊಂಡಿದ್ದ ರೀನಾ, ಗಂಗೇಶ್ಗೆ ಕರೆ ಮಾಡಿ ತನಗೆ ಆಗುತ್ತಿದ್ದ ಹಿಂಸೆಗಳನ್ನು ಹೇಳಿಕೊಂಡಿದ್ದಳಂತೆ. ಅಲ್ಲದೇ ಇದೊಂದು ಬಾರಿ ನನ್ನದು ತಪ್ಪಾಗಿದೆ, ದಯವಿಟ್ಟು ಕ್ಷಮಿಸಿ ಬಿಡಿ ಅಂತ ಕೇಳಿಕೊಂಡಿದ್ದಾಳೆ. ಇದರಿಂದ ಮತ್ತೆ ಬೆಂಗಳೂರಿಗೆ ವಾಪಸ್ ಆಗಿದ್ದ ಪತಿ ಗಂಗೇಶ್, ಪತ್ನಿಯನ್ನು ಕರೆತರಲು ಮುಂದಾಗಿದ್ದ. ಆದರೆ ಪ್ರಿಯಕರ ಇದ್ದರೆ ಮತ್ತೆ ಆತ ಹಿಂಸೆ ನೀಡ್ತಾನೆ ಅಂತ ಆತನನ್ನೇ ಮುಗಿಸಲು ದಂಪತಿ ನಿರ್ಧರಿಸಿದ್ದರಂತೆ.
ಪತ್ನಿಯನ್ನು ಕರೆತರಲು ಗಂಗೇಶ್, ಆರೋಪಿ ಬಿಜೋಯ್ ಸಹಾಯ ಪಡೆದುಕೊಂಡಿದ್ದರು. ನಿಬಾಶೀಶ್ ಪಾಲ್ಗೆ ಕುಡಿತದ ಚಟವಿದ್ದ ಕಾರಣ ಆತನಿಗೆ ಕಂಠಪೂರ್ತಿ ಕುಡಿಸಿ ಸೀರೆಯಿಂದ ಕುತ್ತಿಗೆ ಬಿಗಿದು ಜನವರಿ 2ರಂದು ಕೊಲೆ ಮಾಡಿದ್ದರು. ಆ ಬಳಿಕ ಮೃತದೇಹವನ್ನು ಎಸೆದು ಸಾಕ್ಷಿ ನಾಶ ಮಾಡಲು ಮುಂದಾಗಿದ್ದರು.
ಇದನ್ನೂ ಓದಿ: Crime News: ಕಾಮದ ಮೋಹಕ್ಕೆ ಬಿದ್ದು ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಲೆಗೈದ ಪತ್ನಿ! ಮಕ್ಕಳು ಬಿಚ್ಚಿಟ್ಟರು ಘೋರ ಸತ್ಯ
ಇದಕ್ಕಾಗಿ ಸುಮಾರು 3 ರಿಂದ 4 ಗಂಟೆ ಕಾಲ ಬೈಕ್ ಮೇಲೆ ಮೃತದೇಹವನ್ನು ಇಟ್ಟುಕೊಂಡು ಸೂಕ್ತ ಸ್ಥಳಕ್ಕಾಗಿ ಹುಡುಕಾಟ ನಡೆಸಿದ್ದರು. ಆದರೆ ಯಾವುದೇ ಸ್ಥಳ ಸಿಗದ ಕಾರಣ ತಮಿಳುನಾಡಿನ ಹೊಸೂರು ಮಾರ್ಗಕ್ಕೆ ತೆರಳಿ ನಿರ್ಜನ ಪ್ರದೇಶವೊಂದರಲ್ಲಿ ಮೃತದೇಹ ಎಸೆದು ಬಂದಿದ್ದರು.
ಊಟಕ್ಕೆ ಅಮಲು ಬರುವ ಮದ್ದು ಹಾಕಿ ಕೊಲೆ
ಕೊಲೆಗೂ ಮುನ್ನ ಊಟಕ್ಕೆ ಅಮಲು ಬರುವ ಮದ್ದು ಹಾಕಿ ಆತ ಎಚ್ಚರ ತಪ್ಪುವಂತೆ ಮಾಡಿದ್ದರು. ಆ ಬಳಿಕ ಸೀರೆಯಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದರು. ಹೆಣ ಸಾಗಿಸಲು ಸಹಾಯಕ್ಕೆ ಬಂದ ಬಿಜೋಯ್ ಕೂಡ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ. ಇನ್ನು ಶವವನ್ನು ಎಸೆದು ಮನೆಗೆ ಬಂದ ಬಳಿಕ ದಂಪತಿ ಮನೆ ಖಾಲಿ ಮಾಡಿಕೊಂಡು ಟಾಟಾ ಎಸಿ ಆಟೋದಲ್ಲಿ ನಗರ ಬಿಟ್ಟು ತೆರಳಿದ್ದರು.
ಇದನ್ನೂ ಓದಿ: Heart Attack: 6ನೇ ತರಗತಿಯ ವಿದ್ಯಾರ್ಥಿಗೆ ಹೃದಯಾಘಾತ; ಪೋಷಕರ ಮಡಿಲಲ್ಲೇ ಕೊನೆಯುಸಿರೆಳೆದ ಬಾಲಕ
ಇನ್ನು, ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದ ಪೊಲೀಸರು ಸ್ಥಳೀಯ ಸಿಸಿಟಿವಿ ಪರಿಶೀಲನೆ ಮಾಡಿದ ವೇಳೆ ದಂಪತಿ ಟಾಟಾ ಎಸಿ ಆಟೋದಲ್ಲಿ ತೆರಳಿರುವುದು ಬೆಳಕಿಗೆ ಬಂದಿತ್ತು. ಕೂಡಲೇ ಚಾಲಕನನ್ನು ಪತ್ತೆ ಮಾಡಿ ಮಾಹಿತಿ ಪಡೆದುಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ. ಶಿಕಾರಿಪುರದಲ್ಲಿ ರೀನಾ ಮತ್ತ ಆಕೆಯ ಪತಿ ಗಂಗೇಶ್ನನ್ನು ಬಂಧಿಸಿದ್ದಾರೆ. ಇತ್ತ ಹೆಣ ಸಾಗಿಸಲು ಬಂಧಿಸಿದ ಬಿಜೋಯ್ ಕೂಡ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ