ಬೆಂಗಳೂರು: ಕೋಟ್ಯಂತರ ರೂಪಾಯಿ ಲಂಚ ಪಡೆದಿರುವ (Bribery Case) ಪ್ರಕರಣದ ಆರೋಪಿ ಚನ್ನಗಿರಿ ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಮಾಡಾಳ್ (Virupakshappa Madal) ಅವರಿಗೆ ನ್ಯಾಯಾಲಯ (High Court of Karnataka) ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿರುವ ಬಗ್ಗೆ ಬೆಂಗಳೂರು ವಕೀಲರ ಸಂಘ ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ಬಗ್ಗೆ ಚೀಫ್ ಜಸ್ಟೀಸ್ ಆಫ್ ಇಂಡಿಯಾಗೆ ಬೆಂಗಳೂರು ವಕೀಲರ ಸಂಘದಿಂದ ಅಧಿಕೃತವಾಗಿ ದೂರು ಸಲ್ಲಿಕೆಯಾಗಿದ್ದು, ಮಾಡಾಳ್ ವಿರೂಪಾಕ್ಷಪ್ಪ ಪ್ರಕರಣದ ಜಾಮೀನು ಅರ್ಜಿಯನ್ನು ಒಂದೇ ದಿನಕ್ಕೆ ಕೈಗೆತ್ತಿಕೊಂಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ತುರ್ತು ಸಭೆ ನಡೆಸಿದ ಬೆಂಗಳೂರು ವಕೀಲರ ಸಂಘ, ಅರ್ಜಿಯನ್ನು ಒಂದೇ ದಿನದಲ್ಲಿ ವಿಚಾರಣೆ ನಡೆಸಿ ಮಾನ್ಯ ಮಾಡಿರುವ ನ್ಯಾಯಾಂಗ ಪ್ರಕ್ರಿಯೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತ್ತು. ತುರ್ತು ಸಭೆಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಟಿ.ಜಿ.ರವಿ ಮತ್ತು ಖಜಾಂಚಿ ಎಂ.ಟಿ.ಹರೀಶ್ ಅವರು, ಮಾರ್ಚ್ 7ರಂದು ನ್ಯಾ.ಕೆ.ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ನಡೆಸಿರುವ ಪ್ರಕ್ರಿಯೆ ನ್ಯಾಯಾಂಗದ ಬಗ್ಗೆ ಶ್ರೀಸಾಮಾನ್ಯರಿಗಿರುವ ನಂಬಿಕೆಯನ್ನು ಹುಸಿ ಮಾಡಿದೆ ಎಂದು ಹೇಳಿದ್ದರು.
'ಜನರು ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಕಳೆದುಕೊಳ್ಳುತ್ತಾರೆ'
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹಾಗೂ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಬರೆದಿರುವ ಪತ್ರದಲ್ಲಿ, ನಿರೀಕ್ಷಣಾ ಜಾಮೀನಿನಂತಹ ಹೊಸ ಪ್ರಕರಣಗಳು ದಾಖಲಾದರೆ, ಅವುಗಳ ವಿಚಾರಣೆಯು ಒಂದು ವಾರ ಸಮಯ ತೆಗೆದುಕೊಳ್ಳುತ್ತವೆ ಎಂಬುದು ಕರ್ನಾಟಕದ ಹೈಕೋರ್ಟ್‌ನಲ್ಲಿ ಸಾಮಾನ್ಯ ಅಭ್ಯಾಸವಾಗಿದೆ. ಆದರೆ, ದೊಡ್ಡವರ ಪ್ರಕರಣಗಳನ್ನು ಮಾತ್ರ ಒಂದೇ ದಿನದೊಳಗೆ ಮಾನ್ಯ ಮಾಡಲಾಗುತ್ತಿದೆ. ಈ ಪದ್ಧತಿಯಿಂದ ಸಾಮಾನ್ಯ ಜನರು ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಕಳೆದುಕೊಳ್ಳುತ್ತಾರೆ ಎಂದು ಉಲ್ಲೇಖಿಸಿದ್ದಾರೆ.
ಆರೋಪಿತ ಶಾಸಕರನ್ನ ಸಾಮಾನ್ಯ ವ್ಯಕ್ತಿಯಾಗಿ ಪರಿಗಣಿಸುವುದು ಅತ್ಯಂತ ಮಹತ್ವ
ಅಲ್ಲದೇ, ‘ಈ ಪ್ರಕರಣದಲ್ಲಿ ಆರೋಪಿತ ಶಾಸಕರನ್ನ ಸಾಮಾನ್ಯ ವ್ಯಕ್ತಿಯಾಗಿ ಪರಿಗಣಿಸುವುದು ಅತ್ಯಂತ ಮಹತ್ವದ್ದಾಗಿದೆ. ಇಲ್ಲವಾದರೆ, ಮಂಗಳವಾರ ಶಾಸಕ ವಿರೂಪಾಕ್ಷಪ್ಪ ಅವರ ಅರ್ಜಿ ವಿಚಾರಣೆಯಲ್ಲಿ ಕೈಗೊಂಡ ನಿಲುವನ್ನೇ ಶ್ರೀಸಾಮಾನ್ಯರ ವಿಷಯದಲ್ಲೂ ಅನುಸರಿಸುವಂತಾಗಬೇಕು. ಸದ್ಯ ಹೈಕೋರ್ಟ್‍ನಲ್ಲಿ ವಿಚಾರಣೆಗೆ ಬಾಕಿ ಇರುವ ಎಲ್ಲ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ಒಂದೇ ದಿನದಲ್ಲಿ ನ್ಯಾಯಪೀಠದ ಎದುರು ವಿಚಾರಣೆಗೆ ನಿಗದಿಯಾಗುವಂತೆ ಮಾಡಲು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ರಿಜಿಸ್ಟ್ರಾರ್ ಕಚೇರಿಗೆ ನಿರ್ದೇಶಿಸುವಂತಾಗಬೇಕು’ ಎಂದು ಚೀಫ್ ಜಸ್ಟೀಸ್ ಆಫ್ ಇಂಡಿಯಾಗೆ ಸಲ್ಲಿಸಿರುವ ದೂರಿನಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: Madalu Virupakshappa: ಬಿಜೆಪಿಯಿಂದ ಮಾಡಾಳು ವಿರೂಪಾಕ್ಷಪ್ಪ ಉಚ್ಛಾಟನೆ; ಪಕ್ಷದ ನಿರ್ಣಯದ ಕುರಿತಂತೆ ಶಾಸಕರ ಶಾಕಿಂಗ್ ಹೇಳಿಕೆ!
ಇನ್ನು, ನ್ಯಾಯಾಲಯವು ಎಲ್ಲರಿಗೂ ಸಮಾನವಾಗಿರಬೇಕು ಮತ್ತು ಯಾವುದೇ ವಿಐಪಿ ಕೂಡ ನ್ಯಾಯಾಲಯದ ಎದುರು ಸಾಮಾನ್ಯರಂತೆ ಕಾಯಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.
ನಿನ್ನೆ ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ಪೀಠ ಲಂಚ ಪ್ರಕರಣದಲ್ಲಿ ಚನ್ನಗಿರಿ ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಮಾಡಾಳ್ ಅವರಿಗೆ ಷರತ್ತು ಬದ್ಧ ಜಾಮೀನು ನೀಡಿತ್ತು. ಆದೇಶದಲ್ಲಿ 48 ಗಂಟೆಯೊಳಗೆ ವಿಚಾರಣಾಧಿಕಾರಿ ಅವರ ಮುಂದೆ ಭಾಗಿಯಾಗಬೇಕು. ಜೊತೆಗೆ 5 ಲಕ್ಷ ರೂಪಾಯಿ ಬಾಂಡ್ ನೀಡಬೇಕು ಎಂದು ಹೇಳಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ