ಬೆಂಗಳೂರು: ಚೈತ್ರ ಪೌರ್ಣಿಮೆಯ ಬೆಳದಿಂಗಳ ಬೆಳಕಲ್ಲಿ ನಡೆಯುವ ಐತಿಹಾಸಿಕ ಬೆಂಗಳೂರು ಕರಗ (Bengaluru Karaga) ಮಹೋತ್ಸವ ನಿನ್ನೆ ತಡರಾತ್ರಿ ಅದ್ಧೂರಿಯಾಗಿ ನಡೆಯಿತು. ಬೆಂಗಳೂರಿನ ಈ ಉತ್ಸವವನ್ನು ಕಣ್ತುಂಬಿಕೊಳ್ಳಲು ಬೆಂಗಳೂರು ಮಾತ್ರವಲ್ಲದೇ ಬೇರೆ ಬೇರೆ ಊರುಗಳಿಂದಲೂ ಸಾಗರೋಪಾದಿಯಲ್ಲಿ ಜನಸ್ತೋಮ ಬಂದಿತ್ತು. ಸದಾ ಟ್ರಾಫಿಕ್ ಜಾಮ್, ವಾಹನಗಳ ಸದ್ದಿನೊಂದಿಗೆ ಗುಂಯ್‌ಗುಟ್ಟುತ್ತಿದ್ದ ರಾಜ್ಯ ರಾಜಧಾನಿ ಬೆಂಗಳೂರು (Bangalore) ನಿನ್ನೆ ಮಧ್ಯರಾತ್ರಿ ಮಾತ್ರ ಭಕ್ತಿಯ ಭಾವದಲ್ಲಿ ಮಿಂದೆದ್ದಿತ್ತು.
ಕರಗ ಮಹೋತ್ಸವ ಆರಂಭವಾಗುವ ಪ್ರಸಿದ್ಧ ಧರ್ಮರಾಯ ಸ್ವಾಮಿ ದೇಗುಲ ಮತ್ತು ರಥವನ್ನು ವಿವಿಧ ಹೂವುಗಳಿಂದ ಮಧುವಣಗಿತ್ತಿಯಂತೆ ಸಿಂಗಾರಗೊಳಿಸಲಾಗಿತ್ತು. ರಾತ್ರಿ 1.30ಕ್ಕೆ ದ್ರೌಪದಿ ದೇವಿಯ ಕರಗ ಉತ್ಸವಕ್ಕೆ ಚಾಲನೆ ಮಾಡಲು ದೇವಾಲಯ ಅರ್ಚಕರು ಸಿದ್ದತೆ ಮಾಡುತ್ತಿದ್ರೆ, ಇತ್ತ ಕರಗ ಮಹೋತ್ಸವದ ಪೂಜಾ ವಿಧಾನದ ಪ್ರತೀತಿ ಇರುವ ಹಿನ್ನೆಲೆ ಹಾಗೂ ಪೂಜಾರಿ ಅಲಂಕಾರವಾಗುವ ಸ್ಥಳವಾದ ಸಂಪಂಗಿ ರಾಮನಗರದ ಕಲ್ಯಾಣಿ ಬಳಿಗೆ ಪೂಜಾರಿ ಆಗಮಿಸಿದರು.
ಇದನ್ನೂ ಓದಿ: Bengaluru Karaga: ವಿಶ್ವವಿಖ್ಯಾತ ಕರಗ ಮಹೋತ್ಸವ ವೇಳೆ ಅಗ್ನಿ ಅವಘಡ; ಕರ್ಪೂರದ ಶಾಖಕ್ಕೆ ಹೊತ್ತಿ ಉರಿದ ವಾಹನಗಳು!
ಧರ್ಮಸ್ಥಳದ ಧರ್ಮಾಧಿಕಾರಿ ಭಾಗಿ
ಇನ್ನು ಈ ಬಾರಿಯ ಕರಗ ಮಹೋತ್ಸವದ ವಿಶೇಷ ಅಂದ್ರೆ ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ರಾಜ್ಯಸಭಾ ಸದಸ್ಯ ಡಿ ವೀರೇಂದ್ರ ಹೆಗ್ಗಡೆ ಭಾಗಿಯಾಗಿರೋದು. ಇದೇ ಮೊದಲ ಬಾರಿಗೆ ವೀರೇಂದ್ರ ಹೆಗ್ಗಡೆ ಅವರು ದ್ರೌಪದಿ ದೇವಿಯ ಕರಗ ಮಹೋತ್ಸವವನ್ನು ಕಣ್ತುಂಬಿಸಿಕೊಂಡರು. ಕರಗದ ಕುಂಟೆಯಿಂದ ಪೂಜೆ ಮುಗಿಸಿ ಪೂಜಾರಿ ಜ್ಞಾನೇಂದ್ರ ಅವರು ದೇವಾಲಯ ತಲುಪಿದಾಗ ದೇವಾಲಯದ ಒಳಗೆ ಪೂಜಾ ವಿಧಿ ವಿಧಾನಗಳನ್ನು ಆರಂಭ ಮಾಡಲಾಯಿತು. ಈ ವೇಳೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ವೇದಿಕೆಗೆ ಆಗಮಿಸಿದರು. ದೇವಾಲಯದಲ್ಲಿ ಪೂಜೆ ನಡೆದ ನಂತರ ಪೂಜಾರಿ ಜ್ಞಾನೇಂದ್ರ ಅವರು ಕರಗವನ್ನು ಹೊತ್ತು ರಾಜಬೀದಿಯಲ್ಲಿ ಉತ್ಸವ ಸಾಗಿದರು. ದ್ರೌಪದಿ ದೇವಿಯ ಕರಗವನ್ನು ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದ ಅಸಂಖ್ಯ ಭಕ್ತರು ಜಯಕಾರವನ್ನೂ ಹಾಕಿದರು.
ಇನ್ನು, ದೇವಾಲಯದ ಗರ್ಭಗುಡಿಯ ಒಳಗೆ ಕರಗದ ಪೂಜಾ ವಿಧಿ ವಿಧಾನ ನಡೆಯುತ್ತಿದ್ರೆ ಇತ್ತ ದಿಗ್ ದೀ ದಿಗ್ ದೀ ಎಂದು ಘೋಷಣೆ ಕೂಗುತ್ತ ಕೈಯಲ್ಲಿ ಕತ್ತಿ ಹಿಡಿದು ಕರಗದ ಜೊತೆಯಲ್ಲಿ ಹಲಗು ಸೇವೆ ಮಾಡುತ್ತಾ ಸಾಗಲು ಸಾವಿರಾರು ವೀರ ಕುಮಾರರು ತಯಾರಾಗಿದ್ದರು.
ಇದನ್ನೂ ಓದಿ: Bengaluru Karaga: ಕರುನಾಡಿನ ಐತಿಹಾಸಿಕ ಆಚರಣೆ ಕರಗದ ಬಗ್ಗೆ ಇಲ್ಲಿದೆ ಕುತೂಹಲಕಾರಿ ಮಾಹಿತಿ
ಪೊಲೀಸ್ ಬಂದೋಬಸ್ತ್!
ಇನ್ನು ಐತಿಹಾಸಿಕ ಕರಗ ಮಹೋತ್ಸವದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ 700 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು. ಧರ್ಮರಾಯ ಸ್ವಾಮಿ ದೇವಾಲಯ, ಕರಗ ಶಕ್ತ್ಯೋತ್ಸವ ಸೇರಿದಂತೆ ವಿವಿಧ ಸಂಚಾರ ಸ್ಥಳಗಳಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು. ಇದಕ್ಕಾಗಿ ಇಬ್ಬರು ಡಿಸಿಪಿ, 16 ಎಸಿಪಿ, 20 ಇನ್ಸ್ ಪೆಕ್ಟರ್, 40 ಪಿಎಸ್ಐ, 200 ಹೆಚ್‌ಸಿ, 500 ಪಿಸಿ ಸೇರಿದಂತೆ 700ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿತ್ತು.
12ನೇ ಬಾರಿ ಕರಗ ಹೊತ್ತ ಜ್ಞಾನೇಂದ್ರ
ಇನ್ನು ದೇವಾಲಯದ ಮುಂದಿನಿಂದ ಪಾಂಡವರ ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ದ್ರೌಪದಿ ಕರಗ ಹೊತ್ತು ಪೂಜಾರಿ ದೇವಾಲಯಕ್ಕೆ ಮೂರು ಸುತ್ತು ಪ್ರದಕ್ಷಿಣೆ ಹಾಕಿದರು. ಈ ಬಾರಿಯ ವಿಶೇಷ ಅಂದ್ರೆ ಕರಗ ಹೊತ್ತ ಜ್ಞಾನೇಂದ್ರ ಅವರು ಯಶಸ್ವಿಯಾಗಿ 12ನೇ ಬಾರಿ ಕರಗ ಹೊತ್ತರು. ದೇವಾಲಯದಲ್ಲಿ ಯಶಸ್ವಿಯಾಗಿ ಕರಗ ಹೊತ್ತ ಬಳಿಕ ದೇವಾಲಯದ ಅಕ್ಕಪಕ್ಕದಲ್ಲಿರುವ ಭಕ್ತರ ಮನೆಗೆ ಭೇಟಿ ನೀಡಿ ಆಶೀರ್ವಾದಿಸಲಾಯಿತು. ಈ ಮಧ್ಯೆ ರಾಮನ ದೇವಾಲಯದಲ್ಲಿ ನಮಸ್ಕರಿಸಿ ಗಣ್ಯರು ಕುಳಿತಿದ್ದ ವೇದಿಕಯತ್ತ ಆಗಮಿಸಿದ ಕರಗ ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆ ಸೇರಿದಂತೆ ಗಣ್ಯರಿಗೆ ಆಶೀರ್ವದಿಸಿ ನಿಂಬೆ ಹಣ್ಣು ನೀಡಿತು.
ನಂತರ ರಾತ್ರಿ 2 ಗಂಟೆ-24 ನಿಮಿಷಕ್ಕೆ ಕುಂಬಾರಪೇಟೆ ರಸ್ತೆಯಲ್ಲಿ ಹೊರಟ ಕರಗ ಮೆರವಣಿಗೆ ಹಜರತ್ ತವಕ್ಕಲ್ ಮಸ್ತಾನ್ ಷಾ ದರ್ಗಾಗೆ ಆಗಮಿಸಿ ಭಾವೈಕ್ಯತೆಯ ಸಂದೇಶವನ್ನು ಸಾರಿತು. ಪ್ರತಿವರ್ಷದಂತೆ ಈ ಬಾರಿಯೂ ಕಾಟನ್ ಪೇಟೆಯ ಹಜರತ್ ತವಕ್ಕಲ್ ಮಸ್ತಾನ್ ಷಾ ದರ್ಗಾಗೆ ಆಗಮಿಸಿ ಹಲಗು ಸೇವೆ ನಡೆಸಲಾಯಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ