ಬೆಂಗಳೂರು: ನೀವು ಕೊರೊನಾ ಬೂಸ್ಟರ್ ಡೋಸ್ ಈಗಾಗಲೇ ಪಡೆದುಕೊಂಡಿದ್ದೀರಾ? ಹಾಗಾದ್ರೆ ನೀವು ಕೊರೊನಾ ಹೊಸ ರೂಪಾಂತರಿಯಿಂದ ಸೇಫ್ ಎಂದು ವರದಿ ಹೇಳ್ತಿದೆ. ಹೌದು, ಕೊರೊನಾ ವೈರಸ್ ವೇರಿಯಂಟ್ ಬಿಎಫ್ 7 ( Variant B.F7) ಹಾಗೂ XBB.1.5. ಹೊಸ ರೂಪಾಂತರಿಗಳಿಂದಾಗಿ ಚೀನಾ ಮತ್ತು ಅಮೆರಿಕಾ, ಜಪಾನ್, ಹಾಂಗ್ ಕಾಂಗ್ ಸೇರಿದಂತೆ ಹಲವು ದೇಶಗಳಲ್ಲಿ ಕೊರೊನಾ ಸೋಂಕಿನ ಪ್ರಕರಣ ಹೆಚ್ಚಾಗುತ್ತಿದೆ. ಈ ನಡುವೆ ಭಾರತದಲ್ಲೂ ಹೊಸ ರೂಪಾಂತರಿ ಪ್ರಕರಣಗಳು ಪತ್ತೆಯಾಗಿದ್ದ ಕಾರಣ ಆತಂಕದ ವಾತಾವರಣ ನಿರ್ಮಾಣವಾಗಿದೆ. ಈ ನಡುವೆ ವಿದೇಶಗಳ ಅಂಕಿ-ಅಂಶಗಳನ್ನು ಗಮನಿಸಿ ಎಚ್ಚರಿಕೆ ಹೆಜ್ಜೆ ಇಟ್ಟಿದ್ದ ಕೇಂದ್ರ ಸರ್ಕಾರ, ಕೊರೊನಾ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಾಗಿ ಇರುವಂತೆ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿತ್ತು.
ಅಲ್ಲದೇ ಕೊರೊನಾ ಲಸಿಕೆಯ ಎರಡನೇ ಡೋಸ್ ಪಡೆದು ಬೂಸ್ಟರ್ ಡೋಸ್ ಪಡೆಯಲು ಅರ್ಹರಾಗಿದ್ದವರಿಗೆ ಲಸಿಕೆ ನೀಡಲು ಸೂಚನೆ ನೀಡಿತ್ತು. ಕರ್ನಾಟಕ ಆರೋಗ್ಯ ಇಲಾಖೆಯೂ ಜನವರಿಗೆ ಬೂಸ್ಟರ್ ಡೋಸ್ ಪಡೆದುಕೊಳ್ಳುವಂತೆ ಮನವಿ ಮಾಡಿತ್ತು. ಆದರೆ ಈ ನಡುವೆಯೇ ಕೊರೊನಾ ನಾಲ್ಕನೇ ಡೋಸ್ ಪಡೆಯುವ ಕುರಿತಂತೆ ಸಾಕಷ್ಟು ಚರ್ಚೆ ಕೂಡ ಆಗಿತ್ತು.
ಈ ವಿಚಾರ ಕುರಿತಂತೆ ಬೆಂಗಳೂರಿನ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಸಂಸ್ಥೆಯೂ ವರದಿಯನ್ನು ನೀಡಿದ್ದು, ತನ್ನ ಅಧ್ಯಯನದಲ್ಲಿ ಬೂಸ್ಟರ್ ಡೋಸ್ ಪಡೆದುಕೊಂಡವರಿಗೆ ಸಿಹಿ ಸೂಚಿಯನ್ನು ನೀಡಿದೆ. ಅಲ್ಲದೇ ನಾಲ್ಕನೇ ಡೋಸ್ ಪಡೆಯುವ ಅಗತ್ಯತೆ ಇಲ್ಲ ಎಂದು ತಿಳಿಸಿದೆ.
ಇದನ್ನೂ ಓದಿ: African Swine Fever: ಕೊರೊನಾ ಟೆನ್ಷನ್ ನಡುವೆ ಮತ್ತೊಂದು ಆತಂಕ; ಬಂಡೀಪುರದಲ್ಲಿ ಆಫ್ರಿಕನ್ ಹಂದಿ ಜ್ವರ ಭೀತಿ
ಆರೋಗ್ಯ ಕಾರ್ಯಕರ್ತರು ಎರಡನೇ ಬೂಸ್ಟರ್ ಡೋಸ್ ಪಡೆಯಯಬೇಕೆ?
ಹೌದು, ಕೊರೊನಾ ಹೊಸ ರೂಪಾಂತರಿಗಳ ಹೆಚ್ಚಳದಿಂದಾಗಿ ಚೀನಾ ಕಂಗಾಲಾಗಿದೆ. ಭಾರತದಲ್ಲಿ ಜನವರಿಯಲ್ಲಿ ಸೋಂಕು ಉಲ್ಬಣವಾಗುತ್ತದೆ ಎನ್ನಲಾಗಿತ್ತು. ಕೋವಿಡ್ ಅಲೆ ಬಂದರುವ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಆಸ್ಪತ್ರೆಗಳು ಹಾಗೂ ವೈದ್ಯಕೀಯ ಸಿಬ್ಬಂದಿ, ಆಕ್ಸಿಜನ್ ಸೇರಿದಂತೆ ವೈದ್ಯಕೀಯ ಮೂಲ ಸೌಲಭ್ಯಗಳನ್ನು ಹೆಚ್ಚಿಸಿಕೊಳ್ಳಲು ಕೇಂದ್ರ ಆರೋಗ್ಯ ಇಲಾಖೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಸಾರ್ವಜನಿಕ ವಲಯದಿಂದ ಎರಡನೇ ಬೂಸ್ಟರ್ ಡೋಸ್ ಅಥವಾ ನಾಲ್ಕನೇ ಡೋಸ್ ಲಸಿಕೆ ಪಡೆದುಕೊಳ್ಳುವುದು ಸೂಕ್ತವೇ ಎಂಬ ಪ್ರಶ್ನೆಗಳು ಕೇಳಿ ಬಂದಿತ್ತು.
350ಕ್ಕೂ ಆರೋಗ್ಯ ಕಾರ್ಯಕರ್ತರ ಮೇಲೆ ಅಧ್ಯಯನ
ಈ ಹಿನ್ನೆಲೆಯಲ್ಲಿ ಜಯದೇವ ಆಸ್ಪತ್ರೆಯವರು ನಾಲ್ಕನೇ ಡೋಸ್ ಲಸಿಕೆ ಅಗತ್ಯತೆ ಕುರಿತಂತೆ ಅಧ್ಯಯನವೊಂದನ್ನು ನಡೆದಿದ್ದಾರೆ. ವೈದ್ಯರು, ನರ್ಸ್, ವಾರ್ಡ್ ಹೆಲ್ಪರ್ಸ್, ಆಸ್ಪತ್ರೆಯ ಇತರೆ ಸಿಬ್ಬಂದಿ, ತಾಂತ್ರಿಕ ಸಿಬ್ಬಂದಿ ಸೇರಿದಂತೆ 350 ಸಿಬ್ಬಂದಿಯ ರೋಗನಿರೋಧಕ ಶಕ್ತಿ ವೃದ್ಧಿಸುವ ಪ್ರತಿಕಾಯಗಳ ಕುರಿತಂತೆ ಅಧ್ಯಯನ ನಡೆಸಿದೆ.
2022ರ ಜನವರಿ ತಿಂಗಳಿನಲ್ಲಿ 350 ಸಿಬ್ಬಂದಿ ಕೋವಿಶೀಲ್ಡ್ ವ್ಯಾಕ್ಸಿನ್ ಪಡೆದುಕೊಂಡಿದ್ದರು. ಅಧ್ಯಯನದಲ್ಲಿ ಸಿಬ್ಬಂದಿಯ ದೇಹದಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಸುವ ಪ್ರತಿಕಾಯಗಳ ವೃದ್ಧಿ ಉತ್ತಮವಾಗಿದೆ. 350 ಮಂದಿ ಸಿಬ್ಬಂದಿಯಲ್ಲಿ 148 ಪುರುಷರು, 202 ಮಂದಿ ಮಹಿಳೆಯರಿದ್ದಾರೆ. ಅಲ್ಲದೇ 19 ವರ್ಷದಿಂದ 60 ವರ್ಷ ವಯಸ್ಸಿನವರೆಗೂ ಸೇರಿದ್ದಾರೆ. ಬೂಸ್ಟರ್ ಡೋಸ್ ಲಸಿಕೆ ಪಡೆದ 12 ತಿಂಗಳ ಬಳಿಕವೂ 99.4 ಮಂದಿಯಲ್ಲಿ ರೋಗನಿರೋಧಕ ಶಕ್ತಿಯ ಲೆವೆಲ್ ಉತ್ತಮವಾಗಿದೆ ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ.
ಬೂಸ್ಟರ್ ಡೋಸ್ ಪಡೆದುಕೊಂಡ ವರ್ಷದ ಬಳಿಕವೂ ರೋಗನಿರೋಧಕ ಶಕ್ತಿ ಹೆಚ್ಚು
ಅಧ್ಯಯನದ ವರದಿಯ ಅನ್ವಯ, ಬೂಸ್ಟರ್ ಡೋಸ್ ಪಡೆದಿರುವ ಸಿಬ್ಬಂದಿಯಲ್ಲಿ ಶೇ.99.4 ಮಂದಿಯ ಆರೋಗ್ಯ ಕಾರ್ಯಕರ್ತರ ರೋಗನಿರೋಧಕ ಶಕ್ತಿ ಲೆವೆಲ್ ಉತ್ತಮವಾಗಿದೆ. ಕೊರೊನಾ ಲಸಿಕೆಯ ಬೂಸ್ಟರ್ ಡೋಸ್ ಪಡೆದ ಒಂದು ವರ್ಷದ ಬಳಿಕವೂ ರೋಗನಿರೋಧ ಶಕ್ತಿ ಹೆಚ್ಚಾಗಿರುವುದು ಗುಡ್ನ್ಯೂಸ್.
ಅಧ್ಯಯನದ ಅನ್ವಯ ನಾಲ್ಕನೇ ಡೋಸ್ ಅಥವಾ 2ನೇ ಬೂಸ್ಟರ್ ಡೋಸ್ ಪಡೆದುಕೊಳ್ಳುವ ಅಗತ್ಯತೆ ಇಲ್ಲ ಎಂದು ಹೇಳಬಹುದು. ಆದರೆ ಯಾರು ಇದುವರೆಗೂ ಬೂಸ್ಟರ್ ಡೋಸ್ ಪಡೆದುಕೊಂಡಿಲ್ಲ, ಅವರು ಲಸಿಕೆ ಪಡೆದುಕೊಳ್ಳುವುದು ಉತ್ತಮ ಎಂದು ವರದಿಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: XBB.1.5: ವಿಶ್ವಕ್ಕೆ ಕೊರೊನಾ ಹೊಸ ಅಲೆಯ ಕಂಟಕ, ಇದೆಷ್ಟು ಅಪಾಯಕಾರಿ? WHO ವರದಿ ಹೀಗಿದೆ!
ಕೊರೊನಾ ಹೆಚ್ಚಳ ಹಿನ್ನೆಲೆ ಲಸಿಕೆಗೆ ಬೇಡಿಕೆ
ಇದೀಗ ದೇಶದಲ್ಲಿ ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆ ಲಸಿಕೆಕೆ ಬೇಡಿಕೆ ಹೆಚ್ಚಾಗುತ್ತಿದೆ. ಭಾರತ್ ಬಯೋಟೆಕ್ನ ಇಂಟ್ರಾನಾಸಲ್ ಕೋವಿಡ್ ಲಸಿಕೆ ಇನ್ಕೋವಾಕ್ (iNCOVACC) ಜನವರಿಯಿಂದ ಜನಸಾಮಾನ್ಯರಿಗೆ ಲಭ್ಯವಾಗಲಿದೆ. ಜನವರಿ ನಾಲ್ಕನೇ ವಾರದಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ರೂ. 325 ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ 800 ರೂಪಾಯಿಗೆ ಈ ಲಸಿಕೆ ಲಭ್ಯವಿರಲಿದೆ.
ಕೋವಿನ್ ಅಪ್ಲಿಕೇಷನ್ ನಲ್ಲಿ ಈಗಾಗಲೇ iNCOVACC ಎಂಟ್ರಿಯಾಗಿದ್ದು, 18 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರು ಈ ಲಸಿಕೆಯನ್ನು ಪಡೆಯಬಹುದಾಗಿದೆ. ಆದ್ರೆ ಅವರು ಕೋವಾಕ್ಸಿನ್ ಮತ್ತು ಕೋವಿಶೀಲ್ಡ್ನಂತಹ ಎರಡು ಡೋಸ್ಗಳ ಲಸಿಕೆಗಳನ್ನು ಮೊದಲೇ ಪಡೆದಿರಬೇಕಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ