ಬೆಂಗಳೂರು: ಮನೆಯಲ್ಲಿ ಹಣ ಅಥವಾ ಒಡವೆ ಇಟ್ಟರೆ ಮನೆ ಮಾಲೀಕರಿಗೆ ಕಳ್ಳರ ಆತಂಕ ಸಹಜವಾಗಿಯೇ ಹೆಚ್ಚಿರುತ್ತದೆ. ಮೆಟ್ರೋ ಸಿಟಿ (Metro City) ಸೇರಿದಂತೆ ಸಾಮಾನ್ಯ ನಗರ ಪ್ರದೇಶಗಳಲ್ಲಿ ವಾಸಿಸುವ ಜನರು, ಕುಟುಂಬಸ್ಥರೊಂದಿಗೆ ಬೇರೆ ಊರಿಗೆ ಅಥವಾ ವಿದೇಶಕ್ಕೆ ತೆರಳಿದ ಸಂದರ್ಭದಲ್ಲಿ ಸುರಕ್ಷತೆಯ ದೃಷ್ಟಿಯಿಂದ ಮನೆಯಲ್ಲಿರೋ ಚಿನ್ನಾಭರಣ (Gold Jewelry), ಹಣವನ್ನು ಬ್ಯಾಂಕ್ನಲ್ಲಿಟ್ಟು ಹೋಗುವುದು ಸಾಮಾನ್ಯ ಸಂಗತಿ. ಆದರೆ ಇಲ್ಲೊಂದು ಪ್ರಕರಣದಲ್ಲಿ ಬ್ಯಾಂಕ್ ಲಾಕರ್ನಲ್ಲಿಟ್ಟ (Bank Locker) ಚಿನ್ನಾಭರಣವೇ ಕಳ್ಳತನ ಆಗಿದ್ದು, ಈ ಸಂಬಂಧ ಪೊಲೀಸ್ ರಾಣೆಗೆ ದೂರು ನೀಡಿದ್ದಾರೆ. ಹಣ, ಒಡವೆ ಮನೆಯಲ್ಲಿದ್ದರೆ ಕಳ್ಳತನವಾಗುತ್ತದೆ ಅಂತ ಬ್ಯಾಂಕ್ ಲಾಕರ್ನಲಿಟ್ಟರೇ, ಬ್ಯಾಂಕ್ನಿಂದಲೇ ಚಿನ್ನಭರಣ ಕಳ್ಳತನ ಆಗಿರುವುದು ಮಾಲೀಕರಿಗೆ ಬಿಗ್ ಶಾಕ್ ನೀಡಿದ್ದು, ಕಳೆದುಕೊಂಡಿರುವ ಚಿನ್ನಾಭರಣವನ್ನು ಹುಡುಕಿಕೊಡುವಂತೆ ಸದ್ಯ ಅವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಬ್ಯಾಂಕ್ ಮ್ಯಾನೇಜರ್ ಹಾಗೂ ಸಿಬ್ಬಂದಿ ವಿರುದ್ಧ ದೂರು ದಾಖಲಿಸಿದ್ದಾರೆ.
ಏನಿದು ಪ್ರಕರಣ?
ಯಲಹಂಕ ನಿವಾಸಿ ಕೃಷ್ಣ ಕುಮಾರ್ ಎಂಬವರು ವಿದೇಶಕ್ಕೆ ಕುಟುಂಬದೊಂದಿಗೆ ಹೋಗ ಬೇಕಿದ್ದ ಕಾರಣ, ಮನೆಯಲ್ಲಿದ್ದ ಚಿನ್ನಾಭರಣವನ್ನು ಯಲಹಂಕದ ಕರ್ನಾಟಕ ಬ್ಯಾಂಕ್ ಲಾಕರ್ನಲ್ಲಿಟ್ಟು ಹೋಗಿದ್ದರು. ಆದರೆ ವಿದೇಶದಿಂದ ವಾಪಸ್ ಬಂದು ಬ್ಯಾಂಕ್ ಲಾಕರ್ನಲ್ಲಿದ್ದ ಚಿನ್ನಾಭರಣ ವಾಪಸ್ ಮನೆಗೆ ತೆಗೆದುಕೊಂಡು ಬರಲು ಹೋಗಿ ನೋಡಿದಾಗ ಲಾಕರ್ನಲ್ಲಿದ್ದ ಚಿನ್ನಾಭರಣ ಕಳ್ಳತನವಾಗಿದೆ.
ಹೌದು, ದೂರುದಾರರು 2022ರ ಜೂನ್ ನಲ್ಲಿ ಸುಮಾರು 30 ಲಕ್ಷ ರೂಪಾಯಿ ಮೌಲ್ಯದ ಸುಮಾರು 580 ಗ್ರಾಂ ತೂಕದ ಚಿನ್ನಾಭರಣವನ್ನು ಕರ್ನಾಟಕ ಬ್ಯಾಂಕ್ ಲಾಕರ್ನಲ್ಲಿಟ್ಟಿದ್ದರು. ಈ ಬಗ್ಗೆ ಬ್ಯಾಂಕ್ ಸಿಬ್ಬಂದಿಯ ಗಮನಕ್ಕೆ ತಂದು ರಿಜಿಸ್ಟಾರ್ನಲ್ಲಿ ಸಹಿ ಕೂಡ ಹಾಕಿದ್ದರು.
ಇದನ್ನೂ ಓದಿ: Bengaluru: ಪತ್ನಿಯ ಕಿರುಕುಳಕ್ಕೆ ಆತ್ಮಹತ್ಯೆಗೆ ಶರಣಾದ ಪತಿ; ನಾಲ್ಕು ತಿಂಗಳ ಹಿಂದೆ ಮದುವೆ
ದೂರುದಾರರ ಮಗ ಜರ್ಮನಿಯಲ್ಲಿ ಕೆಲಸ ಮಾಡುತ್ತಿದ್ದು, ಮಗನನ್ನು ನೋಡಲು ಪತ್ನಿ ಸಮೇತ ಜೂನ್ 21ರಂದು ಜರ್ಮನಿಗೆ ತೆರಳಿದ್ದರು. ಅಕ್ಟೋಬರ್ನಲ್ಲಿ ಮತ್ತೆ ಬೆಂಗಳೂರಿಗೆ ದಂಪತಿ ವಾಪಸ್ ಆಗಿದ್ದರು. ಆ ಬಳಿಕ ನವೆಂಬರ್ 11 ರಂದು ದೂರದಾರರು ಬ್ಯಾಂಕ್ಗೆ ತೆರಳಿ ಲಾಕರ್ನಲ್ಲಿಟ್ಟ ಚಿನ್ನಾಭರಣವನ್ನು ತೆಗೆದುಕೊಳ್ಳಲು ಆಗಮಿಸಿದ್ದಾರೆ.
ಲಾಕರ್ ಓಪನ್ ಮಾಡಿದ್ರೆ ಚಿನ್ನಾಭರಣ ಮಂಗಮಾಯ
ಆದರೆ, ಬ್ಯಾಂಕ್ ಲಾಕರ್ ಓಪನ್ ಮಾಡಿ ನೋಡಿದಾಗ ಚಿನ್ನಾಭರಣ ನಾಪತ್ತೆಯಾಗಿರೋದು ಕಂಡು ಬಂದಿದ್ದು, ಕೂಡಲೇ ಬ್ಯಾಂಕ್ ಮ್ಯಾನೇಜರ್ ಹಾಗೂ ಸಿಬ್ಬಂದಿ ಗಮನಕ್ಕೆ ತಂದಿದ್ದಾರೆ. ಅಲ್ಲದೇ ಒಡವೆ ನಾಪತ್ತೆ ಬಗ್ಗೆ ಬ್ಯಾಂಕ್ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದು, ದೂರು ಸಹ ನೀಡಿದ್ದಾರೆ.
ಇದನ್ನೂ ಓದಿ: Cheating: ಮ್ಯಾಟ್ರಿಮೊನಿ ಚೆಲುವೆಗಾಗಿ ಲಕ್ಷ ಲಕ್ಷ ಕಳೆದುಕೊಂಡ ಶಿಕ್ಷಕ; ಫೋನ್ನಲ್ಲಿಯೇ ಚಾಟಿಂಗ್, ಟಾಕಿಂಗ್
ಈ ವೇಳೆ ಬ್ಯಾಂಕ್ ಮ್ಯಾನೇಜರ್ ಆಗಿದ್ದ ಪ್ರದೀಪ್, ಮೂರು ದಿನಗಳ ಕಾಲ ಸಮಯ ಕೊಡಿ ನಿಮ್ಮ ಚಿನ್ನಾಭರಣ ವಾಪಸ್ ನೀಡುತ್ತೇವೆ ಎಂದು ತಿಳಿಸಿದ್ದಾರೆ. ಮ್ಯಾನೇಜರ್ ಮಾತಿನಂತೆ ದೂರುದಾರರು ಮೂರು ದಿನಗಳ ಬಳಿಕ ಬ್ಯಾಂಕ್ ಹೋಗಿದ್ದು, ಈ ವೇಳೆ ಮ್ಯಾನೇಜರ್, ನಿಮ್ಮ ಒಡವೆಗಳು ಇರುವ ಬಾಕ್ಸ್ ಏನಾಗಿದೆ ಗೊತ್ತಿಲ್ಲ. ನೀವು ಬೇಕಿದ್ದಲ್ಲಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿ ಎಂದು ಉಡಾಫೆಯಾಗಿ ಉತ್ತರಿಸಿದ್ದರಂತೆ.
ಬ್ಯಾಂಕ್ ಮ್ಯಾನೇಜರ್ ಸೇರಿ ಸಿಬ್ಬಂದಿ ವಿರುದ್ಧ ದೂರು ದಾಖಲು
ಇದರಿಂದ ಬೇರೆ ದಾರಿ ಕಾಣದೆ ಕೃಷ್ಣ ಕುಮಾರ್ ಅವರು ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಕೃಷ್ಣ ಕುಮಾರ್ ಅವರು ನೀಡಿದ ದೂರಿನ ಅನ್ವಯ ಪೊಲೀಸರು, ಬ್ಯಾಂಕ್ ಮ್ಯಾನೇಜರ್ ಪ್ರದೀಪ್, ಕಸ್ಟೋಡಿಯನ್ ಗಳಾದ ಸೌಮ್ಯ, ನಳನ ಎಂಬುವರ ವಿರುದ್ಧ ದೂರು ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ