ಬೆಂಗಳೂರು ಡ್ರಗ್ಸ್​ ಕೇಸ್​: ನಿರ್ದೇಶಕ ಇಂದ್ರಜಿತ್ ಲಂಕೇಶ್ ಗೆ ಸಿಸಿಬಿ ಡಿಸಿಪಿ ಬುಲಾವ್‌

ಇಂದ್ರಜಿತ್ ಲಂಕೇಶ್ ಅವರನ್ನ ಮೂರನೇ ಬಾರಿ ಡಿಸಿಪಿ ವಿಚಾರಣೆಗೆ ಕರೆದಿದ್ದು ಚರ್ಚೆಗೆ ಗ್ರಾಸವಾಗಿದೆ. ಡಿಸಿಪಿ ಬಿ ಎಸ್ ಅಂಗಡಿಯವರು ಇಂದು ಕಮೀಷನರ್ ಕಚೇರಿಗೆ ವಿಚಾರಣೆಗೆ ಬರುವಂತೆ ತಿಳಿಸಿದ್ದು, ಅದರಂತೆ ಇಂದ್ರಜಿತ್ ಲಂಕೇಶ್ ಕಮೀಷನರ್ ಕಚೇರಿಗೆ ಅಗಮಿಸಿದ್ದರು.

ನಿರ್ದೇಶಕ ಇಂದ್ರಜಿತ್​ ಲಂಕೇಶ್.

ನಿರ್ದೇಶಕ ಇಂದ್ರಜಿತ್​ ಲಂಕೇಶ್.

  • Share this:
ಬೆಂಗಳೂರು: ಅದು ರಾಜ್ಯದಲ್ಲಿ ತೀವ್ರ ಸಂಚಲನ ಉಂಟು ಮಾಡಿದ್ದ ಪ್ರಕರಣ. ಆ ಒಂದು ಕೇಸ್ ನಿಂದಾಗಿ ಕನ್ನಡ ಚಿತ್ರರಂಗದ ಹಲವು ನಟ ನಟಿಯರ ಎದೆಯಲ್ಲಿ ನಡುಕ ಉಂಟಾಗಿದ್ದು ಯಾರಿಗೆ ಬೀಳುತ್ತೆ ಸಿಸಿಬಿ ಹುರುಳು ಅಂತ ಬೆಚ್ಚಿ ಬೀಳುವಂತೆ ಮಾಡಿತ್ತು. ಡ್ರಗ್ ಪ್ರಕರಣದ ತನಿಖೆ ವೇಳೆ ಹಲವು ಮಾಹಿತಿಗಳನ್ನ ಬಿಚ್ಚಿಟ್ಟು ಟ್ವಿಸ್ಟ್ ಕೊಟ್ಟಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಗೆ ಈಗ ಮತ್ತೆ ಸಿಸಿಬಿ ಬುಲಾವ್ ಬಂದಿದ್ದು ಡ್ರಗ್ಸ್ ಕೇಸ್ ಗೆ ಮರು ಜೀವ ಬಂತಾ ಅನ್ನೋ ಅನುಮಾನ ಶುರುವಾಗಿದೆ‌. ಹೌದು.. ಸ್ಯಾಂಡಲ್ ವುಡ್ ಡ್ರಗ್ ಡೀಲ್ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟು ಹಲವು ಸ್ಪೋಟಕ ಮಾಹಿತಿಗಳನ್ನ ಹೊರ ಹಾಕಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಗೆ ಸಿಸಿಬಿ ಡಿಸಿಪಿ ಮತ್ತೆ ಬುಲಾವ್ ನೀಡಿದ್ದಾರೆ. ನಿನ್ನೆ ಸಂಜೆ ಅಪರಾಧ ವಿಭಾಗದ ಎರಡನೇ ಡಿಸಿಪಿ ಬಸವರಾಜ ಅಂಗಡಿಯವರು ಇಂದ್ರಜಿತ್ ಲಂಕೇಶ್ ಗೆ ಕರೆ ಮಾಡಿ ಪ್ರಕರಣದ ಬಗ್ಗೆ ಕೆಲವು ಮಾಹಿತಿ ನೀಡುವಂತೆ ಬುಲಾವ್ ನೀಡಿದ್ದಾರೆ. ಅದ್ರಿಂದ ಮುಕ್ತಾಯ ಹಂತದಲ್ಲಿದ್ದ ಡ್ರಗ್ ಡೀಲ್ ಪ್ರಕರಣಕ್ಕೆ ಮರುಜೀವ ಬಂತಾ ಅನ್ನೋ ಶಂಕೆ ವ್ಯಕ್ತವಾಗುತ್ತಿದೆ.

ಸ್ಯಾಂಡಲ್ ವುಡ್ ಡ್ರಗ್ ಡೀಲ್ ಸಂಬಂಧ ಹಲವು ನಟ ನಟಿಯರ ಬಗ್ಗೆ ಪ್ರಸ್ತಾಪ ಮಾಡಿದ್ದ ಇಂದ್ರಜಿತ್ ಲಂಕೇಶ್ ತನಿಖೆ ವೇಳೆ ಮಹತ್ವದ ಮಾಹಿತಿಗಳನ್ನ ಹೊರ ಹಾಕಿದ್ದರು. ಇಂದ್ರಜಿತ್ ಲಂಕೇಶ್ ನೀಡಿದ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಎರಡು ಬಾರಿ ನೋಟಿಸ್ ನೀಡಿ ಅವರನ್ನು ವಿಚಾರಣೆಗೆ ಒಳಪಡಿಸಿದ್ದರು. ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ನಟಿಯರಾದ ಸಂಜನಾ ಗಲ್ರಾನಿ ಮತ್ತು ರಾಗಿಣಿಯನ್ನ ಬಂಧಿಸಿ ವಿಚಾರಣೆ ನಡೆಸಿ ಬಳಿಕ ಜೈಲಿಗೆ ಕಳಿಸಿದ್ದರು. ಅಲ್ದೆ ಪ್ರಕರಣದಲ್ಲಿ ಹಲವು ಪೇಜ್ ೩ ಪಾರ್ಟಿ ಆಯೋಜಕರು, ಡ್ರಗ್ ಪೆಡ್ಲರ್ ಗಳನ್ನ ಬಂಧನ ಮಾಡಿ ಜೈಲಿಗೆ ಕಳಿಸಿದ್ದ ಸಿಸಿಬಿ ಪೊಲೀಸರು ಚಾರ್ಜ್ ಶೀಟ್ ತಯಾರಿ ನಡೆಸಿದ್ದರು.

ಇದೇ ವೇಳೆ ಇಂದ್ರಜಿತ್ ಲಂಕೇಶ್ ಅವರನ್ನ ಮೂರನೇ ಬಾರಿ ಡಿಸಿಪಿ ವಿಚಾರಣೆಗೆ ಕರೆದಿದ್ದು ಚರ್ಚೆಗೆ ಗ್ರಾಸವಾಗಿದೆ. ಡಿಸಿಪಿ ಬಿ ಎಸ್ ಅಂಗಡಿಯವರು ಇಂದು ಕಮೀಷನರ್ ಕಚೇರಿಗೆ ವಿಚಾರಣೆಗೆ ಬರುವಂತೆ ತಿಳಿಸಿದ್ದು, ಅದರಂತೆ ಇಂದ್ರಜಿತ್ ಲಂಕೇಶ್ ಕಮೀಷನರ್ ಕಚೇರಿಗೆ ಅಗಮಿಸಿದ್ದರು. ಅದರೆ ವಿಧಾನ ಮಂಡಲ ಅಧಿವೇಶನ ಇರೋ ಹಿನ್ನೆಲೆಯಲ್ಲಿ ಡಿಸಿಪಿಯವರನ್ನ ಭದ್ರತೆಗೆ ನಿಯೋಜಿಸಿದ್ದು ಮತ್ತೊಮ್ಮೆ ಕರೆಯೋದಾಗಿ ತಿಳಿಸಿದ್ದರಂತೆ.

ಇದನ್ನೂ ಓದಿ: Union Budget 2021: ಬಜೆಟ್ ಅಧಿವೇಶನ, ರಾಷ್ಟ್ರಪತಿ ಭಾಷಣವನ್ನು ಬಹಿಷ್ಕರಿಸಲು ವಿರೋಧ ಪಕ್ಷಗಳ ನಿರ್ಧಾರ

ಇಂದು ಬೆಳಗ್ಗೆ 11 ಗಂಟೆಗೆ ಕಮೀಷನರ್ ಕಚೇರಿಗೆ ಅಗಮಿಸಿದ ಇಂದ್ರಜಿತ್ ಲಂಕೇಶ್ ಸಿಸಿಬಿ ಪೊಲೀಸರು ಈಗ ಸಣ್ಣ ಸಣ್ಣ ಮೀನುಗಳನ್ನ ಮಾತ್ರ ಹಿಡಿದಿದ್ದಾರೆ. ಇನ್ನೂ ದೊಡ್ಡ ದೊಡ್ಡ ತಿಮಿಂಗಿಲಗಳು ಬಾಕಿ ಉಳಿದಿದ್ದು ಅವುಗಳನ್ನ ಸಹ ಸಿಸಿಬಿ ಪೊಲೀಸರು ಪತ್ತೆ ಮಾಡಬೇಕು. ವಿರೋಧ ಪಕ್ಷದವರು ಅಧಿವೇಶನದಲ್ಲಿ ಈ ಬಗ್ಗೆ ಪ್ರಸ್ತಾಪಿಸಬೇಕು ಎಂದು ಆಗ್ರಹಿಸಿದರು. ಡ್ರಗ್ಸ್ ಸಮಾಜಕ್ಕೆ ಮಾರಕವಾಗಿದ್ದು ಅದನ್ನ ತಡೆಗಟ್ಟಲು ಎಲ್ಲರೂ ಮುಂದಾಗಬೇಕು ಎಂದು ಒತ್ತಾಯಿಸಿದರು.

ಪ್ರಕರಣದಲ್ಲಿ ಇನ್ನೂ ಹಲವು ಗಣ್ಯ ವ್ಯಕ್ತಿಗಳ ಮಕ್ಕಳು ಭಾಗಿಯಾಗಿದ್ದು ಅವರನ್ನು ಸಹ ವಿಚಾರಣೆ ನಡೆಸಬೇಕು. ಈಗ ಸಿಸಿಬಿ ಡಿಸಿಪಿಯವರು ಮತ್ತೆ ಕರೆದಿದ್ದಾರೆ ಅವರು ಏನೇ ಮಾಹಿತಿ ಕೇಳಿದರು ನೀಡುವುದಾಗಿ ತಿಳಿಸಿ ವಾಪಸ್ ಹೊರಟರು. ಸದ್ಯ ಸಿಸಿಬಿ ಡಿಸಿಪಿಯವರು ಇಂದ್ರಜಿತ್ ಲಂಕೇಶ್ ಗೆ ವಿಚಾರಣೆಗೆ ಕರೆದಿದ್ದು ಮತ್ತೆ ಕೇಸ್ ಗೆ ಮರುಜೀವ ಸಿಗುತ್ತಾ ಅನ್ನೋ ಗುಸು ಗುಸು ಕೇಳಿ ಬಂದಿದ್ದು, ಈ ಬಾರಿ ಯಾರಿಗೆ ಸಿಸಿಬಿ ಹುರುಳು ಅನ್ನೋದನ್ನ ಕಾದು ನೋಡಬೇಕಿದೆ.
Published by:MAshok Kumar
First published: