ಒಂದೂ ಹನಿ ರಕ್ತ ನೀಡದೇ ಲಿವರ್ ಟ್ರಾನ್ಸ್​ಪ್ಲಾಂಟ್; ಬೆಂಗಳೂರು ವೈದ್ಯರ ಅದ್ಭುತ ಸಾಧನೆ !

ರೋಗಿಯ ಧಾರ್ಮಿಕ ನಂಬಿಕೆಗೆ ಅಡ್ಡಿಯಾಗದಂತೆ ಲಿವರ್ ಟ್ರಾನ್ಸ್ ಪ್ಲಾಂಟ್ ನಂತಹ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿರುವುದು ವೈದ್ಯರ ತಂಡದ ಹೆಗ್ಗಳಿಕೆ. ಇದು ಒಟ್ಟಾರೆ ಚಿಕಿತ್ಸೆಯ ವೆಚ್ಚವನ್ನು ಕೂಡಾ ಕಡಿಮೆ ಮಾಡುತ್ತದೆ.

ಲಿವರ್ ಕಸಿಯಾದ ರೋಗಿಗಳೊಂದಿಗೆ ಬೆಂಗಳೂರಿನ ವೈದ್ಯರು

ಲಿವರ್ ಕಸಿಯಾದ ರೋಗಿಗಳೊಂದಿಗೆ ಬೆಂಗಳೂರಿನ ವೈದ್ಯರು

  • News18
  • Last Updated :
  • Share this:
ಬೆಂಗಳೂರು: ಸರ್ಜರಿ ಅಂದ್ಮೇಲೆ ಅಲ್ಲಿ ರೋಗಿಗೆ ಹೆಚ್ಚುವರಿಯಾಗಿ ರಕ್ತ ಕೊಡೋದು ಸರ್ವೇಸಾಮಾನ್ಯ. ಶಸ್ತ್ರಚಿಕಿತ್ಸೆ ಮಾಡುವಾಗ ಅನೇಕ ಬಾರಿ ರೋಗಿಗಳಿಗೆ ಸಾಕಷ್ಟು ರಕ್ತ ನಷ್ಟವಾಗಿರುತ್ತೆ. ಹಾಗಾಗಿ ರೋಗಿಯ ರಕ್ತಕ್ಕೆ ಹೊಂದುವಂಥ ರಕ್ತವನ್ನು ಮೊದಲೇ ರೆಡಿ ಇಟ್ಟುಕೊಂಡಿರ್ತಾರೆ ವೈದ್ಯರು. ಆದ್ರೆ ಜೆಹೋವಾ ಧರ್ಮದಲ್ಲಿ ಜೀವ ಹೋಗುವ ಸಂದರ್ಭ ಬಂದರೂ ರಕ್ತ ಕೊಡುವಂತಿಲ್ಲ ಮತ್ತು ಪಡೆಯುವಂತಿಲ್ಲ. ಇಂಥಾ ನಂಬಿಕೆಯುಳ್ಳ ರೋಗಿಗೆ ಒಂದೇ ಒಂದು ಹನಿ ರಕ್ತವನ್ನೂ ನೀಡದೇ ಲಿವರ್ ಟ್ರಾನ್ಸ್ ಪ್ಲಾಂಟ್ ಮಾಡಿ ಅಚ್ಚರಿ ಹುಟ್ಟಿಸಿದ್ದಾರೆ ಬೆಂಗಳೂರಿನ ವೈದ್ಯರು.

ನೈಜೀರಿಯಾ ಮೂಲದ ಗೆಹೊ ಜೆಡ್ಯಾಕ್ ಅವರು ಫೈನಾನ್ಸ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡ್ತಿದ್ರು. 2009ನೇ ಇಸವಿಯಿಂದ ಇವ್ರಿಗೆ ಒಂದಿಲ್ಲೊಂದು ಆರೋಗ್ಯ ಸಮಸ್ಯೆ ಕಾಡುತ್ತಲೇ ಇತ್ತು. ಹೊಟ್ಟೆ ಉಬ್ಬರಿಸಿಕೊಳ್ಳೋದು, ವಾಂತಿ, ಜ್ವರ ಮುಂತಾದ ನಾನಾ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಾ ಇದ್ದರು. ಲಿವರ್ ಟ್ರಾನ್ಸ್​ಪ್ಲಾಂಟ್ ಮಾಡದೇ ಇದ್ರೆ ಈತ ಬದುಕುಳಿಯೋ ಸಾಧ್ಯತೆ ಬಹಳ ಕಡಿಮೆ ಇತ್ತು. ಮೂಲ ಕ್ರಿಶ್ಚಿಯನ್ನರು ಎಂದು ತಮ್ಮನ್ನು ಗುರುತಿಸಿಕೊಳ್ಳುವ ಜೆಹೋವಾ ವಿಟ್ನೆಸ್ ಎಂಬ ಧರ್ಮಕ್ಕೆ ಸೇರಿದ ಇವರು ಜೀವ ಹೋಗುವಂತಿದ್ದರೂ ಇನ್ನೊಬ್ಬರಿಂದ ರಕ್ತ ಪಡೆಯುವುದಿಲ್ಲ. ತಮ್ಮದೇ ದೇಹದ ರಕ್ತ ಕೂಡಾ ಒಮ್ಮೆ ದೇಹದಿಂದ ಹೊರಹೋದ್ರೆ ಮತ್ತೆ ಅದನ್ನು ಪಡೆಯಲು ಇವರ ಧರ್ಮದಲ್ಲಿ ಅವಕಾಶವಿಲ್ಲ. ಹಾಗಾಗಿ ಬ್ಲಡ್ ಟ್ರಾನ್ಸ್ ಫ್ಯೂಶನ್ ಇಲ್ಲದೇ ಕಸಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಸಲುವಾಗಿ 2019ರಲ್ಲಿ ಬೆಂಗಳೂರಿಗೆ ಬಂದಿಳಿದರು.

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚುವರಿ ರಕ್ತ ನೀಡದೇ ಟ್ರಾನ್ಸ್ ಪ್ಲಾಂಟ್ ಸರ್ಜರಿ ಮಾಡಲು ಸಾಧ್ಯವಿದೆ ಎಂದು ತಿಳಿದು ಇಲ್ಲಿನ ವೈದ್ಯರ ಜೊತೆ ನಿರಂತರ ಸಂಪರ್ಕದಲ್ಲಿದ್ದರು ಗೆಹೊ ಜೆಡ್ಯಾಕ್. ಸಹೋದರ ಗುಡ್ ನ್ಯೂಸ್‌ ಅವರ ಲಿವರ್ ಮ್ಯಾಚ್ ಆಗುತ್ತದೆ ಎಂದು ತಿಳಿದು ಆತ ಮತ್ತು ಪತ್ನಿಯ ಜೊತೆಗೆ ಬೆಂಗ್ಳೂರಿಗೆ ಬಂದರು. ಶೇಕಡಾ 50ರಷ್ಟು ತನ್ನ ಲಿವರ್ ಅನ್ನು ಅಣ್ಣನಿಗೆ ದಾನ ಮಾಡಿ ಆತನ ಬದುಕಿಗೆ ಮತ್ತೊಂದು ಅವಕಾಶ ನೀಡಿದ್ದು ತನ್ನ ಸೌಭಾಗ್ಯ ಎನ್ನುತ್ತಾನೆ ಗುಡ್ ನ್ಯೂಸ್.

ಇದನ್ನೂ ಓದಿ: ಪೇಜಾವರ ಶ್ರೀಗೆ ಪದ್ಮವಿಭೂಷಣ, ಶಿಕ್ಷಣ ಸಂತ ಹಾಜಬ್ಬ ಸೇರಿ ರಾಜ್ಯದ 8 ಮಂದಿಗೆ ಪದ್ಮಶ್ರೀ ಗೌರವ

ಅಂದಹಾಗೆ, ದಾನಿ ಗುಡ್ ನ್ಯೂಸ್​ಗೆ ಕೂಡಾ ಒಂದೇ ಒಂದು ಹನಿ ರಕ್ತವನ್ನೂ ನೀಡದೇ ಯಕೃತ್ತಿನ ಭಾಗವನ್ನು ದೇಹದಿಂದ ಹೊರತೆಗೆಯಲಾಯ್ತು ಅನ್ನೋದು ಈ ಸರ್ಜರಿಯ ಮತ್ತೊಂದು ಅಚ್ಚರಿ ಅಂಶ. ಗೆಹೊ ಜೆಡ್ಯಾಕ್ ರೋಗಿ. ಹಾಗಾಗಿ ಆತನಿಗೆ ಇರುವ ಎಲ್ಲಾ ವೈದ್ಯಕೀಯ ಸವಾಲುಗಳೂ ಗೊತ್ತಿದ್ದವು. ಆದ್ರೆ ದಾನಿ ಗುಡ್ ನ್ಯೂಸ್ ಆರೋಗ್ಯವಂತ ವ್ಯಕ್ತಿ. ಹಾಗಾಗಿ ಆತನ ಆರೋಗ್ಯ ಮತ್ತು ರಕ್ತ ನೀಡದ ವಿಚಾರದಲ್ಲಿ ಸ್ವಲ್ಪ ಹೆಚ್ಚೇ ಎಚ್ಚರಿಕೆಯಿಂದ ಇದ್ದೆವು ಎನ್ನುತ್ತಾರೆ ಈತನಿಗೆ ಶಸ್ತ್ರಚಿಕಿತ್ಸೆ ನಡೆಸಿದ ಟ್ರಾನ್ಸ್ ಪ್ಲಾಂಟ್ ಸರ್ಜನ್ ಡಾ. ರಾಜೀವ್ ಲೋಚನ್ ನೇತೃತ್ವದ ತಂಡ.

ರೋಗಿಯ ಧಾರ್ಮಿಕ ನಂಬಿಕೆಗೆ ಅಡ್ಡಿಯಾಗದಂತೆ ಲಿವರ್ ಟ್ರಾನ್ಸ್ ಪ್ಲಾಂಟ್ ನಂತಹ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿರುವುದು ವೈದ್ಯರ ತಂಡದ ಹೆಗ್ಗಳಿಕೆ. ಇದು ಒಟ್ಟಾರೆ ಚಿಕಿತ್ಸೆಯ ವೆಚ್ಚವನ್ನು ಕೂಡಾ ಕಡಿಮೆ ಮಾಡುತ್ತದೆ. ಅಷ್ಟು ದೂರದ ದೇಶದಿಂದ ಆರೋಗ್ಯವನ್ನು ಅರಸಿ ಬಂದ ಗೆಹೊ ಜೆಡ್ಯಾಕ್ ಈಗ ಖುಷ್ ಖುಷಿಯಾಗಿ ತನ್ನೂರಿಗೆ ಮರಳಲು ಸಜ್ಜಾಗಿದ್ದಾನೆ. ಎಲ್ಲರಂತೆ ಆತ ಇನ್ಮುಂದೆ ಸಾಮಾನ್ಯ ಬದುಕನ್ನು ನಡೆಸಲು ಸಜ್ಜಾಗಿದ್ದಾನೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: