ಕಡಿಮೆ ಬೆಲೆಗೆ ಐಪಾಡ್ ಕೊಳ್ಳಲು ಹೋಗಿ ಬರೋಬ್ಬರಿ 19 ಲಕ್ಷ ರೂ. ಕಳೆದುಕೊಂಡ ಬೆಂಗಳೂರಿನ ವೈದ್ಯ

ಭಾರತದಲ್ಲಿ 80,000 ರೂ.ಗೆ ದೊರೆಯುವ ಐಪಾಡ್‌ ದುಬೈಯಿಂದ ನಿಮಗೆ 45,000 ರೂ.ಗೆ ಕಳುಹಿಸುತ್ತೇವೆ ಎಂದು ಆನ್‌ಲೈನ್‌ ವಂಚಕರು ವೈದ್ಯರನ್ನು ನಂಬಿಸಿದ್ದರು. ವಂಚಕರ ಮಾತನ್ನು ನಂಬಿ ವೈದ್ಯರು ಹಣ ವರ್ಗಾವಣೆ ಮಾಡಿದ್ದರು.

ಪ್ರಾತಿನಿಧಿಕ ಚಿತ್ರ (Photo:Google)

ಪ್ರಾತಿನಿಧಿಕ ಚಿತ್ರ (Photo:Google)

 • Share this:
  ಆನ್‌ಲೈನ್‌ ವಂಚಕರನ್ನು ನಂಬಿ ಬೆಂಗಳೂರಿನ ವೈದ್ಯರೊಬ್ಬರು ಬರೋಬ್ಬರಿ 19 ಲಕ್ಷ ರೂ. ಕಳೆದುಕೊಂಡಿದ್ದಾರೆ. ಭಾರತದಲ್ಲಿ 80,000 ರೂ. ಬೆಲೆಯ ಐಪಾಡ್ ಅನ್ನು ದುಬೈಯಿಂದ 45000 ರೂ.ಗೆ ನೀಡುತ್ತೇವೆ ಎಂದು ವಂಚಕರು ವೈದ್ಯರನ್ನು ನಂಬಿಸಿದ್ದರು. ಆನ್‌ಲೈನ್‌ ಮಾರುಕಟ್ಟೆಯಾದ ಕ್ವಿಕರ್‌ನಲ್ಲಿ ಐಪ್ಯಾಡ್‌ ಮೇಲೆ ಭಾರೀ ಡಿಸ್ಕೌಂಟ್‌ ನಂಬಿ ಖರೀದಿಸಲು ಹೋದ ವೈದ್ಯರು ಕೊನೆಗೆ ಮೋಸಕ್ಕೆ ಒಳಗಾಗಿದ್ದಾರೆ.

  ಭಾರತದಲ್ಲಿ 80,000 ರೂ.ಗೆ ದೊರೆಯುವ ಐಪಾಡ್‌ ದುಬೈಯಿಂದ ನಿಮಗೆ 45,000 ರೂ.ಗೆ ಕಳುಹಿಸುತ್ತೇವೆ ಎಂದು ಆನ್‌ಲೈನ್‌ ವಂಚಕರು ವೈದ್ಯರನ್ನು ನಂಬಿಸಿದ್ದರು. ವಂಚಕರ ಮಾತನ್ನು ನಂಬಿ ವೈದ್ಯರು ಹಣ ವರ್ಗಾವಣೆ ಮಾಡಿದ್ದರು. ಐಪಾಡ್‌‌ ಸಿಗದಕ್ಕೆ ವಂಚಕರನ್ನು ಸಂಪರ್ಕಿಸಿದಾಗ ಮಾರಾಟ ತೆರಿಗೆ ಸೇರಿದಂತೆ ಇತರ ತೆರಿಗೆಗಾಗಿ ಇನ್ನಷ್ಟು ಹಣ ಪಾವತಿಸಬೇಕೆಂದು ಕೇಳಿದ್ದರು ಎಂದು ಟೈಮ್ಸ್‌ ಆಫ್ ಇಂಡಿಯಾ ವರದಿ ಮಾಡಿದೆ.

  ಅಲ್ಲದೆ, ವಂಚಕರು ಆಕರ್ಷಕ ಬೆಲೆಗೆ ಐದು ಐಪಾಡ್‌, ಐದು ವಾಚ್‌ ಮತ್ತು ಎರಡು ಲ್ಯಾಪ್‌ಟಾಪ್‌ಗಳನ್ನು ನೀಡುವುದಾಗಿಯೂ ವೈದ್ಯರಿಗೆ ಆಸೆ ಹುಟ್ಟಿಸಿದ್ದರು. ಇದನ್ನು ನಂಬಿ ಮತ್ತಷ್ಟು ವಸ್ತುಗಳನ್ನು ಖರೀದಿಸಲು ಹೋದ ವೈದ್ಯರಿಗೆ ವಂಚಕರು ಉಂಡೆ ನಾಮ ಹಾಕಿದ್ದಾರೆ. ಡಿಸ್ಕೌಂಟ್‌ ಆಸೆಗೆ ಬಿದ್ದ ವೈದ್ಯ ಎರಡು ತಿಂಗಳಿನಲ್ಲಿ 19.2 ಲಕ್ಷ ರೂ. ಹಣವನ್ನು ವಂಚಕರಿಗೆ ವರ್ಗಾಹಿಸಿದರೂ ಯಾವುದೇ ವಸ್ತುಗಳು ಸಿಕ್ಕಿಲ್ಲ. ನಂತರ ವಂಚಕರಿಂದ ಮೋಸ ಹೋಗಿರುವ ಬಗ್ಗೆ ಅರಿತ ವೈದ್ಯರು ಮಾಗಡಿ ಪೊಲೀಸ್‌ ಠಾಣೆಯಲ್ಲಿ ಈ ಕುರಿತು ದೂರು ನೀಡಿದ್ದಾರೆ.

  ಮೊಬೈಲ್‌ ಬಳಕೆ ಹೆಚ್ಚಾದಂತೆ ಹೆಚ್ಚುತ್ತಿದೆ ಆನ್‌ಲೈನ್‌ ವಂಚನೆ

  ಇತ್ತೀಚೆಗೆ ಮೊಬೈಲ್‌ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ವಂಚಕರಿಗೆ ತಮ್ಮ ಕೆಲಸಗಳನ್ನು ಸಾಧಿಸಿಕೊಳ್ಳಲು ಸುಲಭ ಆಗುತ್ತಿದೆ. ಆನ್‌ಲೈನ್‌ನ ವ್ಯವಹಾರದ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಆನ್‌ಲೈನ್‌ನಲ್ಲಿ ದೊಡ್ಡ ಮೊತ್ತದ ವ್ಯವಹಾರ ನಡೆಸಬೇಡಿ ಎಂದು ಸರ್ಕಾರ ಹಾಗೂ ಹಲವು ಬ್ಯಾಂಕುಗಳು ಗ್ರಾಹಕರಿಗೆ ಮಾಹಿತಿ ನೀಡಿದರೂ ಆನ್‌ಲೈನ್‌ನಲ್ಲಿ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಕಳೆದ ವರ್ಷ ಆನ್‌ಲೈನ್‌ನಲ್ಲಿ ದ್ವಿಚಕ್ರ ವಾಹನವನ್ನು ವ್ಯಕ್ತಿಯೊಬ್ಬರು ಮಾರಾಟಕ್ಕೆ ಇಟ್ಟಿದ್ದರು. ಬೈಕ್‌ ಮಾರಾಟಕ್ಕೆ ಇಟ್ಟಿರುವುದು ಆನ್‌ಲೈನ್‌ನಲ್ಲಿ ನೋಡಿ ವಾಹನ ಖರೀದಿಸಲು ಬಂದ ಇಬ್ಬರು ಟೆಸ್ಟ್ ಡ್ರೈವ್‌ ಮಾಡುತ್ತೇವೆ ಎಂದು ವಾಹನದ ಕೀ ಪಡೆದಿದ್ದರು. ವಾಹನದ ಕೀ ಪಡೆದ ಇಬ್ಬರು ವಾಹನ ಸಮೇತ ಪರಾರಿಯಾಗಿದ್ದರು. ವಂಚಕರು ನಮಗೆ ಮೋಸ ಮಾಡಿದ್ದಾರೆ ಎಂದು ದ್ವಿಚಕ್ರ ವಾಹನದ ಮಾಲೀಕ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

  ಇದೇ ರೀತಿ, ಕಳೆದ ತಿಂಗಳು ಗುವಾಹತಿಯ ನಿವಾಸಿಯೊಬ್ಬರು ಕೂಡ ಬ್ಯಾಂಕಿಂಗ್‌ ಸೇವೆಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಇ-ಮೇಲ್‌ ಸಂಭಾಷಣೆಯಲ್ಲಿ ನೋಂದಣೆಗೆ 15,000 ಎಂದು ಸಂದೇಶ ಬಂದಿತ್ತು. ಆದರೆ, ಗೂಗಲ್‌ ಪೇ ಮೂಲಕ ಹೆಚ್ಚಿನ ಹಣ ವರ್ಗಾವಣೆಯಾಗಿತ್ತು.
  Published by:Harshith AS
  First published: