ಬೆಂಗಳೂರು (ಫೆ. 28): ನಕಲಿ ದಾಖಲೆ ಸೃಷ್ಟಿಸಿ 45 ಬ್ಯಾಂಕ್ಗಳಿಗೆ ವಂಚನೆ ಮಾಡಿದ್ದ ಗ್ಯಾಂಗ್ ಅನ್ನು ಬೆಂಗಳೂರಿನ ಸಿಐಡಿ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಉದಯ್ ಪ್ರತಾಪ್, ಆಯೂಬ್ ಖಾನ್ ಅಲಿ, ಮಾದೇಶ, ರಾಮೇಗೌಡ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 1 ಕೋಟಿ ರೂ. ಹಣ, ಕಾರು, ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಆರೋಪಿಗಳು ಆ್ಯಕ್ಸಿಸ್ ಬ್ಯಾಂಕ್ನಲ್ಲಿ ಸಾಫ್ಟ್ವೇರ್ ಕಂಪನಿ ಹೆಸರಿನಲ್ಲಿ 1 ಕೋಟಿ ರೂ.ಗೂ ಹೆಚ್ಚು ಸಾಲ ಪಡೆದಿದ್ದರು. ಬ್ಯಾಂಕ್ಗೆ ಹಣ ಕಟ್ಟದೆ ಸತಾಯಿಸಿದ್ದರು. ಈ ವೇಳೆ ಅನುಮಾನಗೊಂಡು ಬ್ಯಾಂಕ್ ಅಧಿಕಾರಿಗಳು ಪರಿಶೀಲಿಸಿದಾಗ ನಕಲಿ ದಾಖಲೆಗಳ ವಿಚಾರ ಬೆಳಕಿಗೆ ಬಂದಿತ್ತು.
ಈ ಹಿನ್ನೆಲೆಯಲ್ಲಿ ಬ್ಯಾಂಕ್ ಅಧಿಕಾರಿಗಳು ಸೈಬರ್ ಕ್ರೈಂ ಎಸ್ಪಿ ಎಂ.ಡಿ. ಶರತ್ಗೆ ದೂರು ನೀಡಿದ್ದರು. ಆಧಾರ್ ಕಾರ್ಡ್, ಪಾನ್ ಕಾರ್ಡ್ ಮತ್ತು ಗುರುತಿನ ಚೀಟಿಗಳನ್ನು ನಕಲಿ ಮಾಡುತ್ತಿದ್ದ ಆರೋಪಿಗಳು ಅವುಗಳನ್ನೇ ಬಳಸಿ ಬ್ಯಾಂಕ್ಗಳಲ್ಲಿ ಅಕೌಂಟ್ ಓಪನ್ ಮಾಡುತ್ತಿದ್ದರು. ಸಾಲಕ್ಕೆ ಅರ್ಜಿ ಹಾಕಿ ಬ್ಯಾಂಕ್ ಅಧಿಕಾರಿಗಳನ್ನು ಪರಿಚಯ ಮಾಡಿಕೊಂಡು ಯಾಮಾರಿಸುತ್ತಿದ್ದರು.
ಇದನ್ನೂ ಓದಿ: 19 ವರ್ಷದ ಯುವತಿ ಜೊತೆ ಅವಧೂತ ಪರಾರಿ, ತಿರುಪತಿಯಲ್ಲಿ ಮದುವೆಯಾದ ದತ್ತಾತ್ರೇಯ ಸ್ವಾಮೀಜಿ
ಬ್ಯಾಂಕ್ನಲ್ಲಿ ನಕಲಿ ದಾಖಲೆ ತೋರಿಸಿ ಮೋಸ ಮಾಡಿದಂತೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿಯೂ ಗೋಲ್ಮಾಲ್ ಮಾಡುತ್ತಿದ್ದರು. ಒಮ್ಮೊಮ್ಮೆ ಬ್ಯಾಂಕ್ ಏಜೆಂಟ್ಗಳ ಮೂಲಕ ಸಾಲ ಪಡೆಯುತ್ತಿದ್ದರು. ಕೂಲಿ ಕಾರ್ಮಿಕರನ್ನೇ ಸಾಫ್ಟ್ವೇರ್ ಉದ್ಯೋಗಿಗಳು ಎಂದು ತೋರಿಸಿ ಅಧಿಕಾರಿಗಳನ್ನು ನಂಬಿಸುತ್ತಿದ್ದರು. ಬಾಡಿಗೆ ರೂಮನ್ನೇ ಕಂಪನಿಯಂತೆ ಮಾಡಿ ಕೂಲಿ ಕಾರ್ಮಿಕರನ್ನು ಉದ್ಯೋಗಿಗಳಂತೆ ಬಿಂಬಿಸುತ್ತಿದ್ದರು.
ಈ ಕೃತ್ಯಕ್ಕೆ ಸಹಚರಿಸುತ್ತಿದ್ದ ಕಾರ್ಮಿಕರಿಗೆ ಶೇ. 10ರಷ್ಟು ಕಮಿಷನ್ ಕೊಡುತ್ತಿದ್ದರು. ಆರಂಭದಲ್ಲಿ ಬ್ಯಾಂಕ್ನವರಿಗೆ ತಮ್ಮ ಮೇಲೆ ನಂಬಿಕೆ ಬರಲು ಕಂತು ಕಟ್ಟುತ್ತಿದ್ದ ಆರೋಪಿಗಳು ಆಮೇಲೆ ಟೋಪಿ ಹಾಕುತ್ತಿದ್ದರು ಎಂಬ ಸಂಗತಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ