ಸಿಬ್ಬಂದಿಯನ್ನು ಬೂಟಿನಿಂದ ತುಳಿದಿದ್ದ ಕೇಸ್; ಬೆಂಗಳೂರು ಸೆಕ್ಯುರಿಟಿ ಏಜೆನ್ಸಿಗೆ ಬೀಗ ಜಡಿದ ಕಾರ್ಮಿಕ ಇಲಾಖೆ

ಸೆಕ್ಯುರಿಟಿ ಫರ್ಮ್​ ಮಾಲೀಕ ಸಲೀಂ ಖಾನ್ ಸೆಕ್ಯುರಿಟಿ ಕಂಪನಿಯ ಸೆಕ್ಯುರಿಟಿ ಸೂಪರ್​ವೈಸರ್ ಪರೀಜುದ್ದೀನ್ ಲಷ್ಕರ್ ಅವರನ್ನು ಬೂಟು ಕಾಲಿನಿಂದ ತುಳಿದ ವಿಡಿಯೋ ವೈರಲ್ ಆಗಿತ್ತು. ಬಳಿಕ ಸಲೀಂ ಖಾನ್​ನನ್ನು ಪೊಲೀಸರು ಬಂಧಿಸಿದ್ದರು.

Sushma Chakre | news18-kannada
Updated:October 18, 2019, 9:17 AM IST
ಸಿಬ್ಬಂದಿಯನ್ನು ಬೂಟಿನಿಂದ ತುಳಿದಿದ್ದ ಕೇಸ್; ಬೆಂಗಳೂರು ಸೆಕ್ಯುರಿಟಿ ಏಜೆನ್ಸಿಗೆ ಬೀಗ ಜಡಿದ ಕಾರ್ಮಿಕ ಇಲಾಖೆ
ಸೆಕ್ಯುರಿಟಿಗಳನ್ನು ಥಳಿಸುತ್ತಿರುವ ಮಾಲೀಕ
  • Share this:
ಬೆಂಗಳೂರು (ಅ. 18): ನಗರದ ಸೆಕ್ಯುರಿಟಿ ಕಂಪನಿಯೊಂದರ ಮಾಲೀಕ ತನ್ನ ಸಿಬ್ಬಂದಿಯನ್ನು ಕಾಲಿನಿಂದ ತುಳಿದು ಅಮಾನವೀಯವಾಗಿ ನಡೆಸಿಕೊಂಡಿರುವ ವಿಡಿಯೋ ವೈರಲ್ ಆಗಿತ್ತು. ಹೆಚ್​.ಎಸ್​.ಆರ್​. ಲೇಔಟ್​ನ ಸೆಕ್ಯುರಿಟಿ ಫೋರ್ಸ್​ ಆ್ಯಂಡ್ ಹೌಸ್ ಕೀಪಿಂಗ್ ಸರ್ವಿಸಸ್ ಏಜೆನ್ಸಿಯ ನೋಂದಣಿಯನ್ನು ರದ್ದುಪಡಿಸಲಾಗಿದೆ.

ಈ ಬಗ್ಗೆ ಕಾರ್ಮಿಕ ಇಲಾಖೆ ಸಚಿವ ಎಸ್. ಸುರೇಶ್ ಕುಮಾರ್ ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದ್ದ ಸುದ್ದಿಯೊಂದು ನನ್ನ ಗಮನ ಸೆಳೆದಿತ್ತು. ಮಾಲೀಕರೊಬ್ಬರು ತನ್ನ ನೌಕರನನ್ನು ಬೂಟು ಕಾಲಲ್ಲಿ ಒದ್ದು ಹಾಕುವ ದೃಶ್ಯ ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತಷ್ಟೇ ಅಲ್ಲದೆ ಆಕ್ರೋಶ ಉಂಟು ಮಾಡಿತ್ತು. ನಾನು ಕೊಟ್ಟ ಸೂಚನೆಯ ಮೇರೆಗೆ ಬೆಂಗಳೂರು ಸೆಕ್ಯೂರಿಟಿ ಫೋರ್ಸ್ ಆ್ಯಂಡ್ ಹೌಸ್ ಕೀಪಿಂಗ್ ಸರ್ವೀಸಸ್ ಸಂಸ್ಥೆಯ ನೊಂದಣಿ ಪತ್ರವನ್ನು ರದ್ದು ಪಡಿಸಲಾಗಿರುತ್ತದೆ ಎಂದು ಟ್ವೀಟ್ ಮಾಡಿ ಆದೇಶ ಪ್ರತಿಯನ್ನೂ ಲಗತ್ತಿಸಿದ್ದಾರೆ.

ಸೆಕ್ಯುರಿಟಿ ಫರ್ಮ್​ ಮಾಲೀಕ ತನ್ನ ಕಂಪನಿಯ ಸಿಬ್ಬಂದಿ ಕೆಲಸದ ಅವಧಿಯಲ್ಲಿ ತಪ್ಪು ಮಾಡಿದನೆಂಬ ಕಾರಣಕ್ಕೆ ಮನಬಂದಂತೆ ಥಳಿಸಿರುವ ಘಟನೆ ನಡೆದಿತ್ತು. ಸಲೀಂ ಖಾನ್ ಎಂಬ ಮಾಲೀಕ ತನ್ನ ಸಿಬ್ಬಂದಿಯನ್ನು ಕೆಳಕ್ಕೆ ತಳ್ಳಿ ಕಾಲಿನಿಂದ ತುಳಿಯುತ್ತಿರುವ ವಿಡಿಯೋ ವೈರಲ್ ಆಗಿತ್ತು. ಸೆಕ್ಯುರಿಟಿ ಕಂಪನಿಯ ಸೆಕ್ಯುರಿಟಿ ಸೂಪರ್​ವೈಸರ್ ಪರೀಜುದ್ದೀನ್ ಲಷ್ಕರ್ ಅವರನ್ನು ಅಮಾನವೀಯವಾಗಿ ಹಲ್ಲೆ ನಡೆಸಿದ್ದ ಕಂಪನಿಯ ಮಾಲೀಕ ಸಲೀಂ ಖಾನ್​ನನ್ನು ಪೊಲೀಸರು ಬಂಧಿಸಿದ್ದರು.

ಕೆಳಗೆ ಬಿದ್ದ ಸೆಕ್ಯುರಿಟಿ ಸೂಪರ್​ವೈಸರ್ ಮುಖದ ಮೇಲೆ ಕಾಲನ್ನೊತ್ತಿ ತುಳಿಯುತ್ತಿರುವ ಮಾಲೀಕನ ವಿಡಿಯೋ ವೈರಲ್ ಆಗಿತ್ತು. 'ಆ ಸಿಬ್ಬಂದಿ ಹಿಂದಿ ಭಾಷೆಯಲ್ಲಿ ಬೇಡಿಕೊಳ್ಳುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿತ್ತು. ದಯವಿಟ್ಟು ಈ ಬಾರಿ ನಮ್ಮನ್ನು ಕ್ಷಮಿಸಿ. ಇನ್ನೊಮ್ಮೆ ನನ್ನ ಜೀವನದಲ್ಲಿ ಈ ರೀತಿಯ ತಪ್ಪನ್ನು ಮಾಡುವುದಿಲ್ಲ' ಎಂದು ಬೇಡಿಕೊಂಡಿದ್ದರು. ಸೆಕ್ಯುರಿಟಿ ಗಾರ್ಡ್​ ಮತ್ತು ಮಾಲೀಕ ಮೂವರೂ ಅಸ್ಸಾಂ ಮೂಲದವರು ಎನ್ನಲಾಗಿತ್ತು.

 

First published:October 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading