ಬೆಂಗಳೂರು (ಆ. 19): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಬ್ಬ ಶಂಕಿತ ಉಗ್ರ ಸೆರೆ ಸಿಕ್ಕಿದ್ದಾನೆ. ನಗರದ ಬಸವನಗುಡಿಯ ಎಂಡಿ ಬ್ಲಾಕ್ ನಿವಾಸಿ ಅಬ್ದುಲ್ ರೆಹಮಾನ್ ಬಂಧಿತ ಶಂಕಿತ ವ್ಯಕ್ತಿ. ಸೋಮವಾರ ಬಸವನಗುಡಿಯಲ್ಲಿ ಆತ ನೆಲೆಸಿದ್ದ ಅಪಾರ್ಟ್ಮೆಂಟ್ ಮೇಲೆ ದಾಳಿ ನಡೆಸಿದ ದೆಹಲಿ ಎನ್ಐಎ ಆಧಿಕಾರಿಗಳು ಮನೆಯಲ್ಲಿ ಶೋಧ ನಡೆಸಿ ಆತನನ್ನು ಬಂಧಿಸಿದ್ದಾರೆ. ಬಂಧಿತ ಶಂಕಿತ ಉಗ್ರ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಆಪ್ತೋಲ್ಮಾಲಜಿಸ್ಟ್ ನಲ್ಲಿ ಪಿಜಿ ವ್ಯಾಸಂಗ ಮಾಡುತ್ತಿದ್ದು, ಇತ್ತೀಚೆಗೆ ಮೆರಿಟ್ ನಲ್ಲಿ ಉತ್ತೀರ್ಣನಾಗಿದ್ದ. ಆದರೆ, ಆರೋಪಿ ನಿಷೇಧಿತ ಇಸ್ಲಾಮಿಕ್ ಸ್ಟೇಟ್ ಕೊರೋಸನ್ ಪ್ರೋವಿನ್ಸ್ (ISKP) ಎಂಬ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದ ಎನ್ನಲಾಗಿದೆ.
ಬಾಂಗ್ಲಾದೇಶ ಮೂಲದ ನಿಷೇಧಿತ ಇಸ್ಲಾಮಿಕ್ ಸ್ಟೇಟ್ ಕೊರೋಸನ್ ಪ್ರೋವಿನ್ಸ್ ಸಂಘಟನೆಯ ಸದಸ್ಯನಾಗಿದ್ದ ಈತ ತಿಹಾರ್ ಜೈಲಿನಲ್ಲಿ ಅಬ್ದುಲ್ ಬಸೀತ್ ಎಂಬ ಉಗ್ರ ಹಾಗೂ ಪೂನಾ ಮೂಲದ ಸಾದಿಯಾ ಅನ್ವರ್, ನಬೀಲ್ ಸಿದ್ದಿಕಿ ಖತ್ರಿ ಜೊತೆ ಸಂಪರ್ಕ ಹೊಂದಿದ್ದನಂತೆ. ಈ ಮೂವರು ಶಂಕಿತರು ಐಸಿಸ್ ನಂಟು ಹೊಂದಿದ್ದು ಭಾರತದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದರು ಎನ್ನಲಾಗಿದೆ. ಭಾರತ ಮತ್ತು ಇತರ ದೇಶಗಳಲ್ಲಿ ಸಿಎಎ ಪ್ರತಿಭಟನೆ ವೇಳೆ ಗಲಭೆ ಸಂಚು ರೂಪಿಸಿ ಐಸಿಸ್ ಜೊತೆ ಸಂಪರ್ಕ ಹೊಂದಿದ್ದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. 2014 ರಲ್ಲಿ ಸಿರಿಯಾದ ಐಸಿಸ್ ಕ್ಯಾಂಪ್ ಗೆ ಭೇಟಿ ಕೊಟ್ಟಿದ್ದ ಅಸಾಮಿ 10 ದಿನಗಳ ಕಾಲ ಸಿರಿಯಾದ ಐಸಿಸ್ ಕ್ಯಾಂಪ್ ನಲ್ಲಿ ಉಳಿದಿದ್ದನಂತೆ. ಈ ವೇಳೆ ಐಸಿಸ್ ಕ್ಯಾಂಪ್ ನಲ್ಲಿ ಗಾಯಗೊಂಡ ಉಗ್ರರಿಗೆ ಚಿಕಿತ್ಸೆ ನೀಡುವ ಕೆಲಸ ಮಾಡುತ್ತಿದ್ದನಂತೆ. ಬಂಧಿತನಿಂದ ಲ್ಯಾಪ್ ಟಾಪ್, ಮೊಬೈಲ್, ಸೇರಿ ಡಿಜಿಟಲ್ ಸಾಕ್ಷಿ ಕಲೆ ಹಾಕಿದ ಎನ್ಐಎ ಶಂಕಿತನನ್ನ ಕೋರ್ಟ್ ಗೆ ಹಾಜರು ಪಡಿಸಿ ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಇದನ್ನೂ ಓದಿ: ನೂತನ ರಾಷ್ಟ್ರೀಯ ಶಿಕ್ಷಣ ನೀತಿ; ಅಧಿಕಾರಿಗಳೊಂದಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಚರ್ಚೆ
ಆರೋಪಿ ಅಬ್ದುಲ್ ರೆಹಮಾನ್ ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಎರಡು ದಿನಗಳ ಹಿಂದಷ್ಟೇ ಪಿಜಿ ಮುಗಿಸಿದ್ದನಂತೆ. Opthalmologyಯಲ್ಲಿ ಪಿಜಿ ಮಾಡುತ್ತಿದ್ದ ಅಬ್ದುಲ್ ರೆಹಮಾನ್ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದ. ಹಲವು ಸೆಮಿನಾರ್ ಗಳಲ್ಲಿ ಭಾಗವಹಿಸಿದ್ದ ಅಬ್ದುಲ್ ರೆಹಮಾನ್ ವಿದ್ಯಾವಂತ ಕುಟುಂಬದಿಂದ ಬಂದಿದ್ದ. ಅಬ್ದುಲ್ ರೆಹಮಾನ್ ಬಂಧನದ ವಿಷಯ ತಿಳಿದು ಕಾಲೇಜು ಆಡಳಿತ ಮಂಡಳಿ ದಿಗ್ಬ್ರಾಂತರಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ