news18-kannada Updated:January 28, 2021, 4:12 PM IST
ಕಾರಿನ ದೃಶ್ಯ
ಬೆಂಗಳೂರು (ಜ. 28): ನಿವೃತ್ತ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಒಬ್ಬರು ಉದ್ದೇಶ ಪೂರ್ವಕವಾಗಿ ಬೀದಿ ನಾಯಿ ಮೇಲೆ ಕಾರು ಹತ್ತಿಸಿದ್ದಾರೆ. ಅಮಾಯಕ ಬೀದಿ ಬದಿಯ ನಾಯಿ ಮೇಲೆ ಇವರು ದೌರ್ಜನ್ಯ ನಡೆಸಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಟೀಕೆ ಕೂಡ ವ್ಯಕ್ತವಾಗಿದೆ. ಈ ಪ್ರಕರಣಕ್ಕೆ ವ್ಯಾಪಕ ಖಂಡನೆ ವ್ಯಕ್ತವಾದ ಹಿನ್ನಲೆ ಈ ಕುರಿತು ಹುಳಿಮಾವು ಪೊಲೀಸರು ನಿವೃತ್ತ ಅಧಿಕಾರಿ ಮೇಲೆ ಪ್ರಕರಣ ದಾಖಲಿಸಿದ್ದಾರೆ. 65 ವರ್ಷದ ನಾಗೇಶಯ್ಯ ಈ ಕೃತ್ಯ ಎಸಗಿದವರು. ತಮ್ಮ ಮಗನೊಂದಿಗೆ ಕಾರಿನಲ್ಲಿ ಹೋಗಿದ್ದ ನಾಗೇಶಯ್ಯ, ರಸ್ತೆಯಲ್ಲಿ ಮಲಗಿದ್ದ ನಾಯಿ ಮೇಲೆ ಉದ್ದೇಶಪೂರ್ವಕವಾಗಿ ಗಾಡಿ ಹತ್ತಿಸಿದ್ದಾರೆ. ನಾಯಿಯನ್ನು ಹಾರನ್ ಮಾಡಿ ಓಡಿಸುವ ಯತ್ನ ನಡೆಸದೆ ಮೂಕ ಜೀವಿಯ ಮೇಲೆ ಈ ರೀತಿ ಅಮಾನವೀಯವಾಗಿ ವರ್ತಿಸಿದ ಅವರ ಕಾರ್ಯಕ್ಕೆ ವಿರೋಧ ವ್ಯಕ್ತವಾಗಿದೆ. ಇನ್ನು ನಿವೃತ್ತ ಅಧಿಕಾರಿ ಉದ್ದೇಶ ಪೂರ್ವಕವಾಗಿ ಈ ಕೃತ್ಯ ಎಸಗಿದ್ದಾರೆ ಎಂಬುದಕ್ಕೆ ಸಿಸಿಟಿವಿ ಸಾಕ್ಷಿಯಾಗಿದೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಕಾರು ಹತ್ತಿಸಿದ ಪರಿಣಾಮ ನಾಯಿ ಗಂಭೀರವಾಗಿ ಗಾಯಗೊಂಡಿತ್ತು. ಇದನ್ನು ಗಮನಿಸಿದ ಸ್ಥಳೀಯರೊಬ್ಬರು ತಕ್ಷಣಕ್ಕೆ ನಾಯಿಯನ್ನು ಸ್ಥಳೀಯ ಪಶುವೈದ್ಯರ ಬಳಿ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ. ವೈದ್ಯ ರಮೇಶ್ ಸಲ್ಲಿಸಿದ ಪ್ರಾಣಿಗಳ ಮೇಲಿನ ದೌರ್ಜನ್ಯದ ಆರೋಪದ ಮೇಲೆ ನಾಗೇಶಯ್ಯ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿವೃತ್ತ ಸಬ್ ಇನ್ಸ್ಪೆಕ್ಟರ್ ಆಗಿರುವ ನಾಗೇಶಯ್ಯ ತಮ್ಮ ವೃತ್ತಿಸ್ಥಾನದಿಂದಾಗಿ ಕಾನೂನು ಮತ್ತು ಜೀವದ ಮೇಲೆ ಗೌರವವಿಲ್ಲದಂತೆ ದುರಹಂಕಾರದಿಂದ ವರ್ತಿಸಿದ್ದಾರೆ ಎಂದು ಸಿಟಿಜನ್ ಫಾರ್ ಅನಿಮಲ್ ಬರ್ತ್ ಕಂಟ್ರೋಲ್ ಪರ ವಕೀಲರು ಅರೋಪಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ನಾಯಿ, ಸಾವು ಬದುಕಿನ ನಡುವೆ ಹೋರಾಡುತ್ತಿದೆ. ಇದು ತಣ್ಣಗಿನ ಕ್ರೌರ್ಯದ ವರ್ತನೆಯಾಗಿದೆ. ಈ ಹಿನ್ನಲೆ ಈ ಪ್ರಕರಣದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಘಟನೆ ಕುರಿತು ಕಾಂಗ್ರೆಸ್ ನಾಯಕಿ ಐಶ್ವರ್ಯಾ ಮಂಚನಹಳ್ಳಿ ಮಹದೇವ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಸಿಟಿಜನ್ ಫಾರ್ ಅನಿಮಲ್ ಬರ್ತ್ ಕಂಟ್ರೋಲ್, ಬಿಬಿಎಂಪಿ ಮತ್ತು ನಾಗೇಶ್ ವಿರುದ್ಧ ದೂರು ದಾಖಲಿಸಿ ಚಿಕಿತ್ಸೆ ನೀಡಿದ ವೈದ್ಯರ ಕ್ರಮವನ್ನು ಶ್ಲಾಘಿಸಿದ್ದಾರೆ.
Published by:
Seema R
First published:
January 28, 2021, 4:12 PM IST