ಕಳೆದ ಒಂದು ವರ್ಷದ ಹಿಂದೆ ಬೆಂಗಳೂರಿನ 2 ವರ್ಷ, 3 ತಿಂಗಳ ಮಗುವನ್ನು ಅಪಹರಿಸಿ ಮಕ್ಕಳಿಲ್ಲದ ಹಿಂದೂ ದಂಪತಿಗೆ ಮಾರಾಟ ಮಾಡಲಾಯಿತು. ಮತ್ತು ಈಗ ಮಗುವನ್ನು ಹೆತ್ತರಿವ ಪೋಷಕರೊಂದಿಗೆ ಮತ್ತೆ ಸೇರಿಸಲಾಗಿದೆ ಮತ್ತು ಅದರಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ಮಗುವನ್ನು ನೋಡಿಕೊಂಡ ಹಿಂದೂ ಪೋಷಕರು ಕೂಡ ಇದ್ದಾರೆ. ನವೆಂಬರ್ 2020 ರಲ್ಲಿ, ಬೆಂಗಳೂರಿನ ಬ್ಯಾಟರಾಯನಪುರ ಪೊಲೀಸ್ ವ್ಯಾಪ್ತಿಯಲ್ಲಿ ಮುಸ್ಲಿಂ ಮಗು ಕಾಣೆಯಾಗಿತ್ತು. ಈ ಸಂಬಂಧ ನಾಪತ್ತೆ ಪ್ರಕರಣವನ್ನು ದಾಖಲಿಸಲಾಗಿತ್ತು. ಆದರೆ ಇತ್ತೀಚೆಗೆ ಪೊಲೀಸರು ಪ್ರಕರಣದ ಮರು ತನಿಖೆ ಆರಂಭಿಸಿದರು. ಮತ್ತು ಹೊಸ ಸಾಕ್ಷ್ಯಗಳು ಹಾಗೂ ಸತ್ಯಗಳು ಹೊರಹೊಮ್ಮಿದವು. ಒಂದು ಸುಳಿವು ಆಧರಿಸಿ, ಮಗುವನ್ನು ಅಪಹರಿಸಿ 60,000 ರೂ. ಗೆ ಮಾರಾಟ ಮಾಡಿದ ಕಾರ್ತಿಕ್‌ನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾದರು.
ಬೆಂಗಳೂರಿನ ಬ್ಯಾಟರಾಯನಪುರದ ಮುಗುವಿನ ಮನೆಯ ಬಳಿ ಕಾರ್ತಿಕ್ ಗೆಳತಿ ವಾಸ ಮಾಡುತ್ತಿದ್ದಳು. ಕಾರ್ತಿಕ್ ಒಬ್ಬ ಸಾಮಾನ್ಯ ಅಪರಾಧಿಯಾಗಿದ್ದು, ಈ ಹಿಂದೆ ಬೈಕ್ ಕಳ್ಳತನ ಪ್ರಕರಣದಲ್ಲಿ ಬಂಧಿಸಿ ಆತನನ್ನು ನ್ಯಾಯಾಂಗ ಬಂಧನಕ್ಕೂ ಕಳಿಸಲಾಗಿತ್ತು. ಆದರೆ, ಜಾಮೀನಿನ ಮೇಲೆ ಬಿಡುಗಡೆಯಾದ ನಂತರ, ಕಾರ್ತಿಕ್ ತಮಿಳುನಾಡಿನ ಬೆಂಗಳೂರಿನ ಹೊರವಲಯದಲ್ಲಿರುವ ಹೊಸೂರಿನಲ್ಲಿ ತರಕಾರಿ ಅಂಗಡಿಯನ್ನು ಪ್ರಾರಂಭಿಸಿದನು.
ಮಗು ಇಲ್ಲದ ದಂಪತಿ ದತ್ತು ಪಡೆಯಲು ನೋಡುತ್ತಿದ್ದಾರೆ ಎಂದು ಆತನ ಸ್ನೇಹಿತರೊಬ್ಬರು ಹೇಳಿದರು. ಬ್ಯಾಟರಾಯನಪುರದ ತನ್ನ ಗೆಳತಿಯ ಮನೆಯ ಬಳಿ ಮಗು ಆಟವಾಡುತ್ತಿರುವುದನ್ನು ಕಾರ್ತಿಕ್ ಗಮನಿಸಿದ್ದ. ನಂತರ ಅವರು ಮಕ್ಕಳಿಲ್ಲದ ದಂಪತಿಯನ್ನು ಭೇಟಿಯಾಗಿ ಆ ಮಗುವನ್ನು ದತ್ತು ನೀಡುವ ಬಗ್ಗೆ ಹೇಳಿದರು. ಅಲ್ಲದೆ, ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಮಗುವಿನ ತಂದೆ-ತಾಯಿ ಇಬ್ಬರೂ ಮೃತಪಟ್ಟ ನಂತರ ಮಗು ಅನಾಥವಾಗಿದೆ ಎಂದೂ ಕಾರ್ತಿಕ್ ದತ್ತು ತೆಗೆದುಕೊಳ್ಳುವ ಪೋಷಕರಿಗೆ ಸುಳ್ಳು ಹೇಳಿದ್ದ. ಈ ಮಾತನ್ನು ನಂಬಿದ ದಂಪತಿ ಮಗುವನ್ನು ಪಡೆಯಲು ಒಪ್ಪಿಕೊಂಡರು.
ನಂತರ, ಮಗುವನ್ನು ಅಪಹರಿಸಿದ ಕಾರ್ತಿಕ್ ಹೊಸೂರಿಗೆ ಕರೆದೊಯ್ದಿದ್ದ. ಮಗುವನ್ನು ದತ್ತು ಪಡೆದ ದಂಪತಿಗೆ ತುಂಬಾ ಸಂತೋಷವಾಯಿತು. ಮತ್ತು ಅವರು ಆ ಮಗುವನ್ನು ಕಾನೂನುಬದ್ಧವಾಗಿ ದತ್ತು ಪಡೆಯಲು ಕಾರ್ತಿಕ್‌ಗೆ ದಾಖಲೆಗಳನ್ನು ನೀಡುವಂತೆ ಕೇಳಿದರು. ಆದರೆ, ಮರುದಿನ ದಾಖಲೆ ತೆಗೆದುಕೊಂಡುಬರುವುದಾಗಿ ಹೇಳಿದ ಕಾರ್ತಿಕ್ ಅವರ ಮನೆಗೆ ವಾಪಸ್ ಹೋಗಲೇ ಇಲ್ಲ.
ಅಲ್ಲದೆ, ಕಾರ್ತಿಕ್ ಆ ದಂಪತಿ ಬಳಿ 60,000 ರೂಪಾಯಿಗಳನ್ನು ತೆಗೆದುಕೊಂಡಿದ್ದ ಮತ್ತು ನಂತರ ಅವನ ಫೋನ್ ನಂಬರ್ ಅನ್ನು ಬದಲಾಯಿಸಿಕೊಂಡಿದ್ದನು. ಈ ಹಿನ್ನೆಲೆ ದಂಪತಿ ಒಂದು ತಿಂಗಳು ಕಾದಿದ್ದು, ಆತನನ್ನ ಸಂಪರ್ಕಿಸಲು ಪ್ರಯತ್ನ ಮಾಡಿದ್ದಾರೆ. ಆದರೆ ಅವನು ಅವರಿಗೆ ಎಲ್ಲೂ ಸಿಗಲಿಲ್ಲ. ನಂತರ ಅನುಮಾನಗೊಂಡ ದಂಪತಿ ಘಟನೆಯನ್ನು ವಿವರಿಸಿ ಹೊಸೂರು ಪೊಲೀಸರಿಗೆ ದೂರು ನೀಡಿದ್ದರು. ಆದರೆ, ಆ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಮತ್ತು ಮಗು ಹೊಸ ಪೋಷಕರೊಂದಿಗೆ ಬೆಳೆಯಲು ಪ್ರಾರಂಭಿಸಿತು.
ತನಿಖೆ ಆರಂಭಿಸಿದ ಪೊಲೀಸರು ಕಳೆದ ವರ್ಷದಲ್ಲಿ ಈ ಪ್ರದೇಶಕ್ಕೆ ಬರುವುದನ್ನು ನಿಲ್ಲಿಸಿದ ಜನರನ್ನು ಹುಡುಕಲು ಆರಂಭಿಸಿದರು. ಒಬ್ಬ ವ್ಯಕ್ತಿ ಹುಡುಗಿಯನ್ನು ಭೇಟಿಯಾಗಲು ಬರುತ್ತಿದ್ದನೆಂದು ಮತ್ತು ಅವನು ಇದ್ದಕ್ಕಿದ್ದಂತೆ ಭೇಟಿ ಮಾಡುವುದನ್ನು ನಿಲ್ಲಿಸಿದನು ಎಂಬುದನ್ನು ತಿಳಿದುಕೊಂಡರು. ಈ ಬಗ್ಗೆ ಪೊಲೀಸರು ಹುಡುಗಿಯನ್ನು ವಿಚಾರಿಸಿದಾಗ, ಆಕೆಯ ಗೆಳೆಯ ಬರುತ್ತಿದ್ದನೆಂದು ಮತ್ತು ಅವನು ನಂತರ ಅವಳೊಂದಿಗೆ ಸಂಪರ್ಕದಲ್ಲಿಲ್ಲ ಎಂದು ಹೇಳಿದಳು.
ಆರಂಭದ ದಿನಗಳಲ್ಲಿ, ಮಗುವಿನ ತಾಯಿಯ ಭಾಷೆಯಾದ ಉರ್ದುವನ್ನು ಮಗು ಗೊಣಗುತ್ತಿತ್ತು. ಮತ್ತು ನಂತರ ಅದು ಹಿಂದೂ ಮಗುವಾಗಿ ಪರಿವರ್ತನೆಗೊಳ್ಳಲು ಆರಂಭಿಸಿತು. ಮಗು ಕನ್ನಡದಲ್ಲಿ ಮಾತನಾಡಲು ಆರಂಭಿಸಿತು ಮತ್ತು ಈಗ ಅದು ಕನ್ನಡದಲ್ಲಿ ನಿರರ್ಗಳವಾಗಿ ಮಾತನಾಡುತ್ತಿದೆ ಹಾಗೂ ಉರ್ದುವಿನ ಒಂದು ಪದವೂ ನೆನಪಿಲ್ಲ ಎಂದು ಪೊಲೀಸರು ಹೇಳುತ್ತಾರೆ.
"ಇಬ್ಬರೂ ದಂಪತಿ ಈಗ ಬಲಿಪಶುಗಳಾಗಿದ್ದಾರೆ. ಮಗುವನ್ನು ತೆಗೆದುಕೊಂಡ ದಂಪತಿ ವಿರುದ್ಧ ನಾವು ಪ್ರಕರಣ ದಾಖಲಿಸಿಲ್ಲ, ಏಕೆಂದರೆ ಅವರು ಕಾನೂನುಬದ್ಧವಾಗಿ ದತ್ತು ಪಡೆಯಲು ಬಯಸಿದ್ದರು. ಅವರು ಮಗುವಿಗೆ ಎಂದಿಗೂ ಹಾನಿ ಮಾಡಿಲ್ಲ ಮತ್ತು ಅವರು ಮಗುವಿಗೆ ಎಲ್ಲವನ್ನೂ ನೀಡಿದ್ದಾರೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ