ಬೆಂಗಳೂರು: ನಗರದ ಹೆಚ್ಎಸ್ಆರ್ ಲೇಔಟ್ (HSR Layout) ಉದ್ಯಮಿ ಪ್ರದೀಪ್ ಆತ್ಮಹತ್ಯೆ ಪ್ರಕರಣ ಸಂಬಂಧಿಸಿದಂತೆ ಮಾಜಿ ಸಚಿವ, ಮಹದೇವಪುರ (Mahadevapura) ಕ್ಷೇತ್ರದ ಶಾಸಕ ಅರವಿಂದ ಲಿಂಬಾವಳಿ (Aravind Limbavali) ಸೇರಿ 6 ಜನರ ವಿರುದ್ಧ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ (FIR) ದಾಖಲು ಮಾಡಲಾಗಿದೆ. ಕೆ.ಗೋಪಿ, ರಾಘವ ಭಟ್, ಸೋಮಯ್ಯ, ರಮೇಶ್ ರೆಡ್ಡಿ, ಜಯರಾಮ್ ಸೇರಿ 6 ಜನರ ವಿರುದ್ಧ ಕೇಸ್ ದಾಖಲು ಮಾಡಲಾಗಿದ್ದು, ಮೃತ ಪ್ರದೀಪ್ ಪತ್ನಿ ನಮಿತಾ ದೂರಿನನ್ವಯ ಎಫ್ಐಆರ್ ದಾಖಲು ಮಾಡಲಾಗಿದೆ.
ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಎಲ್ಲರಿಗೂ ನೋಟಿಸ್ ನೀಡಿ ವಿಚಾರಣೆಗೆ ಕರೆಸುವ ಸಾಧ್ಯತೆ ಇದ್ದು, ಬಿಜೆಪಿ ಶಾಸಕ ಅರವಿಂದ ಲಿಂಬಾವಳಿಯನ್ನ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಇತ್ತ ಮೃತ ಪ್ರದೀಪ್ ಅವರ ಮರಣೋತ್ತರ ಪರೀಕ್ಷೆ ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ನಡೆಸಲಾಗಿದೆ. ಮೃತ ಪ್ರದೀಪ್ ಅವರು ಬರೆದಿದ್ದಾರೆ ಎನ್ನಲಾದ ಡೆತ್ನೋಟ್ನಲ್ಲಿ ಅರವಿಂದ್ ಲಿಂಬಾವಳಿ ಹೆಸರು ಉಲ್ಲೇಖಿಸಿದ್ದರು. ಈ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್ 306 (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.
ಏನಿದು ಪ್ರಕರಣ?
ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಹೆಸರು ಬರೆದಿಟ್ಟು ವ್ಯಕ್ತಿಯೊಬ್ಬರು ಕಾರಿನಲ್ಲೇ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಲ್ಲಿ ನಡೆದಿದೆ. ಹೆಚ್ಎಸ್ಆರ್ ಲೇಔಟ್ನ ಪ್ರದೀಪ್ ಡೆತ್ನೋಟ್ನಲ್ಲಿ ಮಹದೇವಪುರ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ, ಜಿ.ರಮೇಶ್ ರೆಡ್ಡಿ, ಕೆ.ಗೋಪಿ, ಜಯರಾಮ್ ರೆಡ್ಡಿ, ರಾಘವ ಭಟ್, ಸೋಮಯ್ಯ ಹೆಸರು ಉಲ್ಲೇಖಿಸಿದ್ದಾರೆ. ಈ 6 ಜನರ ಮೇಲೆ ಕ್ರಮ ಜರುಗಿಸಿ ನನ್ನ ಸಾವಿಗೆ ನ್ಯಾಯ ಒದಗಿಸಿ ಎಂದು ಪ್ರದೀಪ್ ಡೆತ್ನೋಟ್ನಲ್ಲಿ ಮನವಿ ಮಾಡಿದ್ದಾರೆ. ಹೆಸರಿನ ಮುಂದೆ ಮೊಬೈಲ್ ನಂಬರ್ ಬರೆದು ಪ್ರದೀಪ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಣಕಾಸಿನ ವ್ಯವಹಾರದಲ್ಲಿ ವಂಚನೆ ಸಂಬಂಧ ಪ್ರದೀಪ್ ಆತ್ಮಹತ್ಯೆ ಮಾಡಿಕೊಂಡಿದ್ದು, ಕೆ.ಗೋಪಿ ಮತ್ತು ಸೋಮಯ್ಯಗೆ ಅರವಿಂದ ಲಿಂಬಾವಳಿ ಬೆಂಬಲ ನೀಡಿದ್ದಾರೆ ಎಂದು ಪ್ರದೀಪ್ ಹೇಳಿದ್ದಾರೆ.
ಪ್ರದೀಪ್ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಇದರ ನಡುವೆ ಪ್ರದೀಪ್ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕೌಟುಂಬಿಕ ಕಲಹಕ್ಕೆ ಬೇಸತ್ತು ಪ್ರದೀಪ್ ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಪ್ರದೀಪ್ ಮೇಲೆ ಈ ಹಿಂದೆ ಪತ್ನಿ ನಮಿತಾ ದೂರು ನೀಡಿದ್ದರು. ಮದುವೆ ಅದಾಗಿನಿಂದಲೂ ಜಗಳ ಮಾಡುತ್ತಿದ್ದಾರೆ. ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾರೆ ಎಂದು ನಮಿತಾ, ಬೆಳ್ಳಂದೂರು ಠಾಣೆಯಲ್ಲಿ ಮೇನಲ್ಲಿ ದೂರು ಕೊಟ್ಟಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಎಲ್ಲಾ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸ್ತಿದ್ದಾರೆ.
ಇದನ್ನೂ ಓದಿ: Aravind Limbavali: ಶಾಸಕ ಲಿಂಬಾವಳಿಯಿಂದ ನಿಂದನೆ; ನ್ಯೂಸ್ 18 ಜೊತೆ ಮಹಿಳೆ ಮಾತು; FIR ದಾಖಲು
‘ನೋಡ್ತಿರಿ ಕೇಸ್ ಮುಚ್ಚಿಹಾಕ್ತಾರೆ’-ಸಿಎಂ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್ ಕಿಡಿ
ಪ್ರದೀಪ್ ಆತ್ಮಹತ್ಯೆ ಕೇಸ್ ಬಗ್ಗೆ ಕಾಂಗ್ರೆಸ್ ಕಿಡಿಕಾರಿದೆ. ಸರ್ಕಾರ ಅರವಿಂದ್ ಲಿಂಬಾವಳಿ ರಕ್ಷಣೆ ಮಾಡುತ್ತಿದೆ. ಸಿಎಂ ಬೊಮ್ಮಾಯಿ ಕ್ರಿಮಿನಲ್ಸ್ ಕೇರ್ಟೇಕರ್ ಆಗಿದ್ದಾರೆ ಎಂದು ಕಿಡಿಕಾರಿದೆ. ಸರ್ಕಾರ ಆದಷ್ಟೂ ಬೇಗ ಬಿ ರಿಪೋರ್ಟ್ ಹಾಕಿ, ಪ್ರಕರಣ ಮುಚ್ಚಿಹಾಕ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.
ಲಿಂಬಾವಳಿ ಬಂಧನಕ್ಕೆ ಆಗ್ರಹ
ಪ್ರದೀಪ್ ಆತ್ಮಹತ್ಯೆ ಪ್ರಕರಣವನ್ನು ಉನ್ನತ ಮಟ್ಟದಲ್ಲಿ ತನಿಖೆ ನಡೆಸಬೇಕು ಎಂದು ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದ ಎದುರು ಧರಣಿ ನಡೆಸಿದ ಕಾಂಗ್ರೆಸ್ ನಾಯಕರು, ಡೆತ್ ನೋಟ್ ನಲ್ಲಿ ಶಾಸಕ ಅರವಿಂದ ಲಿಂಬಾವಳಿ ಅವರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾಗಾಗಿ ಪ್ರಕರಣ ಬಹಳ ಸೂಕ್ಷ್ಮವಾಗಿದೆ. ರಾಜ್ಯದಲ್ಲಿ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ತಿದ್ದಾರೆ. ಪ್ರಕರಣದ ಸತ್ಯಾಸತ್ಯತೆ ಹೊರಗೆಬರಬೇಕು. ಕೂಡಲೇ ಲಿಂಬಾವಳಿ ಅವರನ್ನು ಬಂಧಿಸಬೇಕು ಎಂದು ಕಾಂಗ್ರೆಸ್ ಮುಖಂಡ ಮನೋಹರ್ ಒತ್ತಾಯ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ