ನಿತ್ಯಾನಂದನಿಗೆ ಹೊಸ ಸಂಕಷ್ಟ; ಬೆಂಗಳೂರಿನ ಬಿಡದಿ ಆಶ್ರಮದಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಯುವತಿಯ ಕೇಸ್​ ಸಿಬಿಐಗೆ?

ಸಂಗೀತಾ ಎಂಬ 24 ವರ್ಷದ ಯುವತಿ 5 ವರ್ಷಗಳ ಹಿಂದೆ ಬೆಂಗಳೂರಿನ ಬಿಡದಿಯಲ್ಲಿರುವ ನಿತ್ಯಾನಂದ ಆಶ್ರಮದ ಬಳಿ ನಿಗೂಢವಾಗಿ ಸಾವನ್ನಪ್ಪಿದ್ದಳು. ತಮ್ಮ ಮಗಳ ಸಾವಿನ ಹಿಂದೆ ನಿತ್ಯಾನಂದ ಸ್ವಾಮಿಯ ಕೈವಾಡವಿದೆ ಎಂದು ಯುವತಿಯ ತಂದೆ-ತಾಯಿ ಅನುಮಾನ ವ್ಯಕ್ತಪಡಿಸಿದ್ದರು.

Sushma Chakre | news18-kannada
Updated:November 27, 2019, 7:31 AM IST
ನಿತ್ಯಾನಂದನಿಗೆ ಹೊಸ ಸಂಕಷ್ಟ; ಬೆಂಗಳೂರಿನ ಬಿಡದಿ ಆಶ್ರಮದಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಯುವತಿಯ ಕೇಸ್​ ಸಿಬಿಐಗೆ?
ನಿತ್ಯಾನಂದ ಸ್ವಾಮಿ
  • Share this:
ನವದೆಹಲಿ (ನ. 27): ಅತ್ಯಾಚಾರದ ಆರೋಪ ಹೊತ್ತು ದೇಶದಿಂದಲೇ ನಾಪತ್ತೆಯಾಗಿರುವ ಸ್ವಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. 2014ರ ಡಿಸೆಂಬರ್ 28ರಂದು ಬೆಂಗಳೂರಿನ ಬಿಡದಿ ಆಶ್ರಮದ ಬಳಿ ನಿಗೂಢವಾಗಿ ಸಾವನ್ನಪ್ಪಿದ್ದ 24 ವರ್ಷದ ಯುವತಿಯ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಮೃತ ಯುವತಿಯ ತಾಯಿ ಒತ್ತಾಯಿಸಿದ್ದಾರೆ.

ಸಂಗೀತಾ ಎಂಬ 24 ವರ್ಷದ ಯುವತಿ 5 ವರ್ಷಗಳ ಹಿಂದೆ ಬೆಂಗಳೂರಿನ ಬಿಡದಿಯಲ್ಲಿರುವ ನಿತ್ಯಾನಂದ ಆಶ್ರಮದ ಬಳಿ ನಿಗೂಢವಾಗಿ ಸಾವನ್ನಪ್ಪಿದ್ದಳು. ತಮ್ಮ ಮಗಳ ಸಾವಿನ ಹಿಂದೆ ನಿತ್ಯಾನಂದ ಸ್ವಾಮಿಯ ಕೈವಾಡವಿದೆ ಎಂದು ಯುವತಿಯ ತಂದೆ-ತಾಯಿ ಬೆಂಗಳೂರು ಪೊಲೀಸರಿಗೆ ದೂರು ನೀಡಿದ್ದರು. ಆಶ್ರಮದೊಳಗೆ ತಮ್ಮ ಮಗಳಿಗೆ ಹಿಂಸೆ ಕೊಟ್ಟು ಆಕೆಯನ್ನು ಕೊಂದು ಆಶ್ರಮದ ಬಳಿ ಎಸೆದಿದ್ದಾರೆ ಎಂಬ ಆರೋಪವನ್ನೂ ಮಾಡಿದ್ದರು. ನಂತರ ಆ ಪ್ರಕರಣ ಅಲ್ಲೇ ತಣ್ಣಗಾಗಿತ್ತು.

ಇದೀಗ ನಿತ್ಯಾನಂದ ಸ್ವಾಮಿಯ ವಿರುದ್ಧ ಹೊಸ ಹೊಸ ಆರೋಪಗಳು ಕೇಳಿಬರತೊಡಗಿರುವುದರಿಂದ ಹಳೆಯ ಪ್ರಕರಣಕ್ಕೂ ಮತ್ತೆ ಜೀವ ಬಂದಿದೆ. ನಿತ್ಯಾನಂದನ ಶಿಷ್ಯನ ಮಗಳ ಮೇಲೆ ನಿತ್ಯಾನಂದ ಆಶ್ರಮದಲ್ಲಿ ಅತ್ಯಾಚಾರ ನಡೆಸಲಾಗಿದೆ ಎಂದು ಆಕೆಯ ತಂದೆ ಕಳೆದ ವಾರ ಗಂಭೀರ ಆರೋಪ ಮಾಡಿದ್ದರು. ವಿದೇಶಿ ಯುವತಿ ಕೂಡ ತನ್ನ ಮೇಲೆ ನಿತ್ಯಾನಂದ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ಆರೋಪಿಸಿದ್ದಳು.

ಇದನ್ನೂ ಓದಿ: ಅತ್ಯಾಚಾರ ಆರೋಪಿ ನಿತ್ಯಾನಂದ ದೇಶದಿಂದ ಪರಾರಿ?; ಇಲ್ಲಿದೆ ಸ್ವಘೋಷಿತ ದೇವಮಾನವನ ಸಂಪೂರ್ಣ ಸ್ಟೋರಿ

ನನ್ನ ಮಗಳ ಸಾವಿನ ಪ್ರಕರಣವನ್ನು ಭೇದಿಸುವಲ್ಲಿ ಬೆಂಗಳೂರು ಪೊಲೀಸರು ವಿಫಲರಾಗಿದ್ದಾರೆ. ಹೀಗಾಗಿ, ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ನನ್ನ ಮಗಳು ಸಂಗೀತಾ ರೀತಿಯಲ್ಲೇ ಅನೇಕ ಮಕ್ಕಳು ಮತ್ತು ಯುವತಿಯರನ್ನು ಬೆಂಗಳೂರಿನ ನಿತ್ಯಾನಂದ ಆಶ್ರಮದಲ್ಲಿ ಹಿಂಸೆ ಕೊಟ್ಟು ಸಾಯಿಸಲಾಗಿದೆ. ಈ ರೀತಿಯ ಪ್ರಕರಣಗಳು ಮತ್ತೆ ನಡೆಯಬಾರದು ಎಂದರೆ ಸಿಬಿಐ ತನಿಖೆ ನಡೆಸಬೇಕು ಎಂದು ಮೃತ ಯುವತಿ ಸಂಗೀತಾ ಅವರ ತಾಯಿ ಝಾನ್ಸಿ ರಾಣಿ ನ್ಯೂಸ್​​18ಗೆ ಹೇಳಿದ್ದಾರೆ.

ತ್ರಿಚಿ ಜಿಲ್ಲೆಯವರಾದ ಸಂಗೀತಾ 2010ರಲ್ಲಿ ನಿತ್ಯಾನಂದ ಆಶ್ರಮಕ್ಕೆ ಸೇರಿದ್ದಳು. ಅದಾಗಿ 4 ವರ್ಷಗಳ ನಂತರ ಆಕೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಳು. ಆಕೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ ಎಂದು ಆಶ್ರಮದ ಸಿಬ್ಬಂದಿ ಸಂಗೀತಾ ಕುಟುಂಬಸ್ಥರಿಗೆ ಹೇಳಿದ್ದರು. ಆದರೆ, ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಆಕೆಯ ಕುಟುಂಬಸ್ಥರು ಇದು ಸಹಜ ಸಾವಲ್ಲ, ಪ್ಲಾನ್ ಮಾಡಿ ಮಾಡಲಾದ ಕೊಲೆ ಎಂದು ಅನುಮಾನ ವ್ಯಕ್ತಪಡಿಸಿದ್ದರು. ಈ ಬಗ್ಗೆ ಬೆಂಗಳೂರು ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು. ಆದರೆ, ಆ ಪ್ರಕರಣದ ತನಿಖೆಯಲ್ಲಿ ಯಾವುದೇ ಬೆಳವಣಿಗೆಗಳು ನಡೆದಿಲ್ಲ.

ಇದನ್ನೂ ಓದಿ: ನಿತ್ಯಾನಂದ ಆಶ್ರಮಕ್ಕೆ ಅಕ್ರಮವಾಗಿ ಭೂಮಿ ಲೀಸ್ ನೀಡಿದ ಅಹಮದಾಬಾದ್​ ಶಾಲೆ ಪ್ರಿನ್ಸಿಪಾಲ್ ಬಂಧನಆಕೆಯ ದೇಹದ ಮೇಲೆ ಗಾಯದ ಗುರುತುಗಳಿದ್ದವು. ಆಕೆಯ ಕಾಲಿನಲ್ಲಿ ರಕ್ತದ ಗುರುತಿತ್ತು. ನಮ್ಮ ಮಗಳನ್ನು ನಾವು ವಾಪಾಸ್ ಮನೆಗೆ ಕರೆದುಕೊಂಡು ಹೋಗಲು ಸಾಕಷ್ಟು ಪ್ರಯತ್ನ ಪಟ್ಟಿದ್ದೆವು. ಆದರೆ, ಅಲ್ಲಿನ ಸಿಬ್ಬಂದಿ ಅದಕ್ಕೆ ಅವಕಾಶ ನೀಡಿರಲಿಲ್ಲ. ಆಕೆಯನ್ನು ಒಂಟಿಯಾಗಿ ಭೇಟಿ ಮಾಡಲು ಕೂಡ ಬಿಡುತ್ತಿರಲಿಲ್ಲ. ಆಕೆಯ ಜೊತೆ ಮಾತನಾಡುವಾಗ ಆಕೆಯೊಂದಿಗೆ ಇನ್ನೂ ಕೆಲವು ಸನ್ಯಾಸಿನಿಯರನ್ನು ಕಳುಹಿಸಲಾಗುತ್ತಿತ್ತು. ಆಕೆ ನಮ್ಮೊಂದಿಗೆ ಏನು ಮಾತನಾಡುತ್ತಾಳೆ ಎಂಬುದನ್ನು ತಿಳಿಯುವ ಉದ್ದೇಶದಿಂದ ಹೀಗೆ ಮಾಡಲಾಗುತ್ತಿತ್ತು. ಕೊನೆಗೆ ಮಗಳ ಶವವನ್ನು ಕೊಂಡೊಯ್ಯಬೇಕಾದ ಪರಿಸ್ಥಿತಿ ಬಂದಿತು ಎಂದು ಝಾನ್ಸಿ ರಾಣಿ ಪೊಲೀಸರಿಗೆ ದೂರು ನೀಡಿದ್ದರು.

ಇದನ್ನೂ ಓದಿ: ನಿತ್ಯಾನಂದ ಆಶ್ರಮದ ಮತ್ತೊಂದು ರಹಸ್ಯ ಬಯಲು; ಅತ್ಯಾಚಾರದ ಆರೋಪ ಮಾಡಿದ ಗುರುಕುಲದ ಯುವತಿ ಏನಾದಳು?

ಈಗಾಗಲೇ ಬೇರೆ ದೇಶದಲ್ಲಿ ತಲೆ ಮರೆಸಿಕೊಂಡಿರುವ ನಿತ್ಯಾನಂದ ಸ್ವಾಮಿಯನ್ನು ವಶಕ್ಕೆ ಪಡೆಯಲು ಗುಜರಾತ್ ಪೊಲೀಸರು ಕೂಡ ಪ್ರಯತ್ನಿಸುತ್ತಿದ್ದಾರೆ. 2018ರಲ್ಲೇ ನಿತ್ಯಾನಂದ ಭಾರತದಿಂದ ಪರಾರಿಯಾಗಲು ಯತ್ನಿಸಿದ್ದ ಎನ್ನಲಾಗಿತ್ತು. 2018ರ ಮಧ್ಯದಲ್ಲಿ ಪಾಸ್​ಪೋರ್ಟ್​ ನವೀಕರಣಕ್ಕೆ ರಾಮನಗರ ಪೊಲೀಸರಿಗೆ ಮನವಿ ಮಾಡಿದ್ದ. ಆದರೆ ಅಂದು ಎಸ್​ಪಿಯಾಗಿದ್ದ ರಮೇಶ್​ ಬಾನೋತ್​ ಅದಕ್ಕೆ ಒಪ್ಪಿಗೆ ನೀಡಿರಲಿಲ್ಲ. ಹಲವು ಪ್ರಕರಣಗಳು ಬಾಕಿ ಇವೆ ಮತ್ತು ಕೋರ್ಟ್​ ಸಮನ್ಸ್​ ನೀಡಿದ ನಂತರವೂ ಕೋರ್ಟ್​ಗೆ ಹಾಜರಾಗಿಲ್ಲ ಎಂಬ ಕಾರಣಕ್ಕೆ ಪಾಸ್​ಪೋರ್ಟ್​ ನವೀಕರಣಕ್ಕೆ ಪೊಲೀಸರು ಪರವಾನಗಿ ನೀಡಿರಲಿಲ್ಲ. ಅದರ ಬೆನ್ನಲ್ಲೇ ಅವರು ಗುಜರಾತ್​ಗೆ ಹೋಗಿದ್ದರು. ಈ ಪ್ರಕರಣದ ತನಿಖೆ ನಡೆದರೆ ನಿತ್ಯಾನಂದ ಸ್ವಾಮಿಗೆ ಮತ್ತೊಂದು ಸಂಕಷ್ಟ ಎದುರಾಗಲಿದೆ.

(ವರದಿ: ನೀತು ರಘುಕುಮಾರ್)
First published:November 27, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading