ಬೆಂಗಳೂರು (ಏ.20): ಬೆಂಗಳೂರು ಬೃಹತ್ ನಗರ ಪಾಲಿಕೆ (ಬಿಬಿಎಂಪಿ) ಇಂದು 2020-21ನೇ ಸಾಲಿನ ಬಜೆಟ್ ಮಂಡನೆ ಮಾಡಿದೆ. ಈ ವೇಳೆ ಆರೋಗ್ಯ ಕ್ಷೇತ್ರಕ್ಕೆ ದೊಡ್ಡ ಮೊತ್ತ ಮೀಸಲಿಟ್ಟಿದೆ.
ಕೊರೋನಾ ವೈರಸ್ ಇಡೀ ವಿಶ್ವಕ್ಕೆ ಹೆಮ್ಮಾರಿಯಂತೆ ಕಾಡುತ್ತಿದೆ. ರಾಜ್ಯದಲ್ಲಿ 395 ಕೊರೋನಾ ವೈರಸ್ ಪ್ರಕರಣಗಳು ದಾಖಲಾಗಿವೆ. ಇನ್ನು, ಬೆಂಗಳೂರಿನಲ್ಲೂ ಕೊರೋನಾ ವೈರಸ್ ಹಾವಳಿ ಜೋರಾಗಿದೆ. ಹೀಗಾಗಿ ಈ ವೈರಸ್ ನಿಯಂತ್ರಣಕ್ಕಾಗಿ ಬಿಬಿಎಂಪಿ ತನ್ನ ಬಜೆಟ್ನಲ್ಲಿ 49.50 ಕೋಟಿ ರೂಪಾಯಿ ಮೀಸಲಿಟ್ಟಿದೆ. ಈ ಮೂಲಕ ವೈರಸ್ ನಿಯಂತ್ರಣಕ್ಕೆ ನಾವು ಬದ್ಧ ಎಂಬುದನ್ನು ತೋರಿಸಿಕೊಟ್ಟಿದೆ.
ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಹೆಸರಲ್ಲಿ 20 ಕೋಟಿ ರೂಪಾಯಿ ವೆಚ್ಚದಲ್ಲಿ ಮಕ್ಕಳ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ, ಉಚಿತವಾಗಿ ಡಯಾಲಿಸಿಸ್ ಸೇವೆ, ನಿರ್ವಹಣೆಗೆ 16 ಕೋಟಿ ರೂಪಾಯಿ ವೆಚ್ಛ ಮಾಡಲಾಗುತ್ತಿದೆ.
ಇನ್ನು, ಗೋವುಗಳ ರಕ್ಷಣೆಗೂ ಬಿಬಿಎಂಪಿ ಪಣತೊಟ್ಟಿದ್ದು, ಅವುಗಳಿಗೆ ಮೇವು ಒದಗಿಸಲು ಬಜೆಟ್ನಲ್ಲಿ 50 ಲಕ್ಷ ರೂ. ಮೀಸಲಿಟ್ಟಿದೆ. ಜನನ ಮತ್ತು ಮರಣ ಪ್ರಮಾಣದ ಪತ್ರಗಳನ್ನ ಉಚಿತವಾಗಿ ನೀಡಲು ನಿರ್ಧರಿಸಲಾಗಿದೆ.
ಇದನ್ನೂ ಓದಿ: ಬಿಬಿಎಂಪಿ ಬಜೆಟ್: ಏನಿರುತ್ತೆ, ಏನಿರಲ್ಲ? ಇಲ್ಲಿದೆ ಸಾಧ್ಯಾಸಾಧ್ಯತೆ
ಸೋಮವಾರ ಬೆಳಗ್ಗೆ 11 ಗಂಟೆಗೆ ಬಿಬಿಎಂಪಿ ಮಂಡಳಿ ಸಭೆಯಲ್ಲಿ ಬಜೆಟ್ ಮಂಡನೆಯಾಯಿತು. ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್. ಶ್ರೀನಿವಾಸ್ ಅವರು ಬಜೆಟ್ ಮಂಡಿಸಿದರು. ಇದರ ಗಾತ್ರ ಸುಮಾರು 11 ಸಾವಿರ ಕೋಟಿ ರೂ ಆಗಿದೆ.
ಮೇಯರ್, ಉಪಮೇಯರ್, ಬಿಬಿಎಂಪಿ ಕಮಿಷನರ್, ಸ್ಥಾಯಿ ಸಮಿತಿ ಅಧ್ಯಕ್ಷರು, ಆಡಳಿತ ಪಕ್ಷದ ನಾಯಕರು, ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಬಜೆಟ್ ಮಂಡನೆ ಮಾಡಲಾಯಿತು. ಕೊರೋನಾ ಸುರಕ್ಷೆ ದೃಷ್ಟಿಯಿಂದ ಕಾರ್ಪೊರೇಟರ್ಗಳು ಬಿಬಿಎಂಪಿ ಕಚೇರಿಗೆ ಆಗಮಿಸರಲಿಲ್ಲ. ಬಿಬಿಎಂಪಿಯ ಎಂಟೂ ವಲಯಗಳಲ್ಲಿ ಬಜೆಟ್ ವೀಕ್ಷಣೆಗೆ ವಿಡಿಯೋ ಕಾನ್ಫೆರೆನ್ಸ್ ಮಾಡಲಾಗಿತ್ತು. ಕಾರ್ಪೊರೇಟರ್ಗಳು ತಮ್ಮತಮ್ಮ ವ್ಯಾಪ್ತಿಯ ವಲಯಗಳಲ್ಲೇ ವಿಡಿಯೋ ಕಾನ್ಫೆರೆನ್ಸ್ ಮೂಲಕ ಬಜೆಟ್ ವೀಕ್ಷಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ