Bengaluru Air Pollution: ಬೆಂಗಳೂರಿನಲ್ಲಿ ವಾಯುಮಾಲಿನ್ಯ ನಿಯಂತ್ರಿಸದಿದ್ದರೆ 10 ವರ್ಷಗಳಲ್ಲಿ ಭಾರೀ ಆಪತ್ತು

Bangalore Air Pollution: ಈಗಾಗಲೇ ವಾಯುಮಾಲಿನ್ಯ ಮಟ್ಟವು ಬೆಂಗಳೂರು ನಗರದಲ್ಲಿ ಅಧಿಕಗೊಂಡಿದ್ದು, ಯಾವುದೇ ಕ್ರಮಗಳನ್ನು ಕೈಗೊಳ್ಳದೆ ಇದ್ದಲ್ಲಿ 2030ರ ಹೊತ್ತಿಗೆ ವಾತಾವರಣದಲ್ಲಿನ ಪಿಎಂ 2.5 ಮಟ್ಟವು 54%, ಪಿಎಂ10 ಮಟ್ಟವು 70%, ಸಲ್ಫರ್ ಡೈಆಕ್ಸೈಡ್ ಮಟ್ಟವು 35%, ನೈಟ್ರೋಜನ್ ಆಕ್ಸೈಡ್ ಮಟ್ಟವು 55%, ಕಾರ್ಬನ್ ಮೋನಾಕ್ಸೈಡ್ ಮಟ್ಟ 107% ಆಗಲಿದೆ.

ವಾಯುಮಾಲಿನ್ಯದ ಪ್ರಾತಿನಿಧಿಕ ಚಿತ್ರ

ವಾಯುಮಾಲಿನ್ಯದ ಪ್ರಾತಿನಿಧಿಕ ಚಿತ್ರ

 • Share this:
  (ವರದಿ : ಕಪಿಲ್ ‌ಕಾಜಲ್)

  ಬೆಂಗಳೂರು (ಆ. 19): ಬೆಂಗಳೂರಿನಲ್ಲಿನ ವಾಯು ಮಾಲಿನ್ಯವನ್ನು ನಿಯಂತ್ರಿಸಲು ಪರಿಸರವಾದಿಗಳ ತೀವ್ರ ಒತ್ತಡದ ನಡುವೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) 44 ಅಂಶಗಳ ಕ್ರಿಯಾ ಯೋಜನೆಯನ್ನು ರೂಪಿಸಿತ್ತು. ಅದಾಗಿ ಒಂದು ವರ್ಷ ಕಳೆದರೂ ನಗರಕ್ಕೆ ಈ ಕ್ರಿಯಾ ಯೋಜನೆಯಿಂದ ಯಾವುದೇ ಲಾಭವಾಗಿಲ್ಲ. ಈ ಬಗ್ಗೆ ಕೆಎಸ್‌ಪಿಸಿಬಿಯನ್ನು ಪ್ರಶ್ನಿಸಿದಾಗ ‘ನಿರಂತರವಾಗಿ ಸೂಚನೆಗಳನ್ನು ನೀಡಿದರೂ ಇತರ ಇಲಾಖೆಗಳು ಯಾವುದೇ ರೀತಿಯಲ್ಲೂ ನಿಯಮಗಳನ್ನು ಪಾಲಿಸುವಲ್ಲಿ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ’ ಎಂಬ ಉತ್ತರ ದೊರೆಯುತ್ತದೆ. ಬೆಂಗಳೂರಿನ ಜನಜೀವನ ಹಾಗೂ ಮೂಲಸೌಕರ್ಯ ನಿರ್ವಹಣೆಯ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗಳಿಗೆ ವಾಯುಮಾಲಿನ್ಯ ಕಡಿಮೆ ಮಾಡುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಯಿತು. ಇದರನ್ವಯ ಬಿಬಿಎಂಪಿಯು ಬೆಂಗಳೂರಿನ ರಸ್ತೆಗಳಲ್ಲಿರುವ ಹೊಂಡಗಳನ್ನು ಸರಿಪಡಿಸುವುದು ಹಾಗೂ ಈಗಾಗಲೇ ಕಾಮಗಾರಿ ಹಂತದಲ್ಲಿರುವ ರಸ್ತೆಗಳನ್ನು ಕೂಡಲೇ ಸರಿಪಡಿಸಬೇಕಿತ್ತು. ಆದರೆ ‘ಈ ಪ್ರಕ್ರಿಯೆಯು ನಿರಂತರ ನಿರ್ವಹಣೆಯ ಭಾಗವಾಗಿದೆ. ಈಗಾಗಲೇ ಆ ಕಾರ್ಯ ಪ್ರಗತಿಯಲ್ಲಿದೆ’ ಎಂದು ಬಿಬಿಎಂಪಿ ಉತ್ತರಿಸಿದೆ.

  ಬಿಬಿಎಂಪಿಯ ಪ್ರಕಾರ ರಸ್ತೆ ದಟ್ಟಣೆ ಸುಗಮಗೊಳಿಸುವ ನಿಟ್ಟಿನಲ್ಲಿ ಕಳೆದ ವರ್ಷ 1430 ರಸ್ತೆ ಹೊಂಡಗಳನ್ನು ಹಾಗೂ ಹಾನಿಗೊಳಗಾಗಿರುವ 1.6 ಲಕ್ಷ ಚದರ ಮೀಟರ್ ರಸ್ತೆ ಮೇಲ್ ಮೈಯನ್ನು ಸರಿಪಡಿಸಲಾಗಿದೆ. ಪ್ರಮುಖ ರಸ್ತೆಗಳು, ಒಳರಸ್ತೆಗಳ ಡಾಂಬರೀಕರಣ ಹಾಗೂ ಕಾಂಕ್ರಿಟೀಕರಣವನ್ನು ಶಬ್ಧ ಮಾಲಿನ್ಯವಾಗದ ರೀತಿಯಲ್ಲಿಯೇ ನಿರ್ವಹಿಸಲಾಗಿದ್ದು, ಸಂಚಾರ ದಟ್ಟಣೆಯ ನಿರ್ವಹಣೆಗೂ ಪ್ರಾಮುಖ್ಯತೆ ನೀಡಲಾಗಿದೆ ಎಂದು ಬಿಬಿಎಂಪಿ ಹೇಳಿದೆ.

  ಬಿಬಿಎಂಪಿಯ ಈ ರೀತಿಯಾಗಿ ಹೇಳಿಕೆ ನೀಡುತ್ತಿದ್ದರೂ ನಗರದ ರಸ್ತೆಗಳ ತುಂಬಾ ಹೊಂಡಗಳೇನೂ ಕಡಿಮೆಯಾಗಿಲ್ಲ. ಮಾಲಿನ್ಯ ಕಡಿಮೆಗೊಳಿಸುವ ಕ್ರಮದ ಭಾಗವಾಗಿ ಬಿಡಿಎ ಹಾಗೂ ಬಿಬಿಎಂಪಿಗೆ ಬೆಂಗಳೂರಿಗೆ ಬರುವ ಎಲ್ಲ ಪ್ರಮುಖ ಹೆದ್ದಾರಿಗಳಲ್ಲಿ ಹಂತಹಂತವಾಗಿ ಟ್ರಕ್ ಟರ್ಮಿನಲ್‌ಗಳನ್ನು ರಚಿಸುವ ಕುರಿತಾಗಿ ಹಾಗೂ ಎಲ್ಲಾ ಬಿಡಿಎ ಹಾಗೂ ಹೊಸ ಪ್ರಸ್ತಾವಿತ ಖಾಸಗಿ ಲೇಔಟ್‌ಗಳಲ್ಲಿ ಬಸ್‌ಬೇಗಳನ್ನು ನಿರ್ಮಾಣ ಮಾಡಬೇಕೆಂದು ಸೂಚನೆ ನೀಡಲಾಗಿತ್ತು.

  ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಡಿಎ ತನ್ನ ವ್ಯಾಪ್ತಿಯಲ್ಲಿರುವ ಎಲ್ಲಾ ಪ್ರಮುಖ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಿರ್ಮಿಸಬೇಕಾದ ಟ್ರಕ್‌ಟರ್ಮಿನಲ್‌ಗಳನ್ನು ಹಾಗೂ ಬಸ್‌ಬೇಗಳನ್ನು ಪ್ರಸ್ತಾವಿತ ಮಾಸ್ಟರ್ ಪ್ಲಾನ್ 2031 ನಕ್ಷೆಯಲ್ಲಿ ಗುರುತಿಸಲಾಗಿದೆ. ದುರದೃಷ್ಟವಶಾತ್ ಈ ಮಾಸ್ಟರ್ ಪ್ಲಾನ್ ಅನ್ನು ಬಿಡಿಎ ಮೊದಲಾಗಿ 2015ರಲ್ಲಿ ಸರಕಾರದ ಮುಂದಿಟ್ಟಿತ್ತು. ನಂತರ 2018ರಲ್ಲಿ ಪರಿಷ್ಕೃತ ಮಾಸ್ಟರ್ ಪ್ಲಾನ್ ಅನ್ನು ಕೂಡಾ ಸಿದ್ಧಪಡಿಸಿತ್ತು. ಆದರೆ ಈ ಮಾಸ್ಟರ್ ಪ್ಲಾಯನ್‌ಗೆ ಇದುವರೆಗೆ ಸರಕಾರದಿಂದ ಅಂತಿಮ ಅನುಮೋದನೆ ದೊರೆತಿಲ್ಲ.

  ಕ್ರಮ ಕೈಗೊಳ್ಳುವಂತೆ ತಜ್ಞರ ಆಗ್ರಹ:
  ಈಗಾಗಲೇ ವಾಯುಮಾಲಿನ್ಯ ಮಟ್ಟವು ಬೆಂಗಳೂರು ನಗರದಲ್ಲಿ ಅಧಿಕಗೊಂಡಿದ್ದು, ಯಾವುದೇ ಕ್ರಮಗಳನ್ನು ಕೈಗೊಳ್ಳದೆ ಇದ್ದಲ್ಲಿ 2030ರ ಹೊತ್ತಿಗೆ ವಾತಾವರಣದಲ್ಲಿನ ಪಿಎಂ 2.5 ಮಟ್ಟವು 54%, ಪಿಎಂ10 ಮಟ್ಟವು 70%, ಸಲ್ಫರ್ ಡೈಆಕ್ಸೈಡ್ ಮಟ್ಟವು 35%, ನೈಟ್ರೋಜನ್ ಆಕ್ಸೈಡ್ ಮಟ್ಟವು 55%, ಕಾರ್ಬನ್ ಮೋನಾಕ್ಸೈಡ್ ಮಟ್ಟ 107% ಮತ್ತು ಬಾಷ್ಪಶೀಲ ಸಾವಯವ ಸಂಯುಕ್ತ (ವಲಾಟೈಲ್ ಆರ್ಗಾನಿಕ್ ಕೌಂಪೌಡ್ಸ್) 133% ಹೆಚ್ಚಳಕ್ಕೆ ಕಾರಣವಾದೀತು ಎಂದು ನಗರದ ಬಗ್ಗೆ ವಾಯುಮಾಲಿನ್ಯ ಕುರಿತಾದ ಅಧ್ಯಯನವೊಂದು ತಿಳಿಸಿದೆ.

  ಸಾರಿಗೆ ವಲಯದಿಂದಲೇ ಅತಿಹೆಚ್ಚು ವಾಯುಮಾಲಿನ್ಯ ಸಂಭವಿಸುತ್ತಿದ್ದು, ವಾಹನಗಳ ಹೊಗೆ ಹೊರಸೂಸುವಿಕೆಯಿಂದ 50%, ರಸ್ತೆ ನಿರ್ಮಾಣ ಹಾಗೂ ನಿರ್ವಹಣೆಯಿಂದ 80% ಹಾಗೂ ಅದರ ಜೊತೆಗೆ ಒಟ್ಟು ವಾಹನಗಳ ಹೊರಸೂಸುವಿಕೆ ಹಾಗೂ ರಸ್ತೆಯ ಮೇಲಿನ ಧೂಳು ಸೇರಿದಾಗ ಪಿಎಂ2.5, ಪಿಎಂ10 ಕಣಗಳ ಹೊರಸೂಸುವಿಕೆಯು 60% ದಿಂದ 70%ವರೆಗಿರುತ್ತದೆ ಎಂದು ಅಧ್ಯಯನ ತಿಳಿಸಿದೆ.

  ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಸೈನ್ಸ್​ನ ಪರಿಸರ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಟಿ.ವಿ. ರಾಮಚಂದ್ರ ಅವರು ನಗರದ ಸುತ್ತಲೂ ಕಾಂಕ್ರೀಟ್ ಹಾಗೂ ಮಾಲಿನ್ಯವೇ ತುಂಬಿಕೊಳ್ಳುವುದರಿದಾಗಿ 2025ರ ಹೊತ್ತಿಗೆ ಪರಿಸ್ಥಿತಿ ಹದಗೆಡಲಿದ್ದು, ಈ ಬಗ್ಗೆ ತುರ್ತಾಗಿ ಕಾರ್ಯಕ್ರಮಗಳ ಅನುಷ್ಠಾನವಾಗಬೇಕಿದೆ’ ಎಂದು ಅಭಿಪ್ರಾಯಪಡುತ್ತಾರೆ.

  ನಗರದ ವಾಯುಮಾಲಿನ್ಯ ಕುರಿತಾದ ಅಧ್ಯಯನವು ನಗರದಲ್ಲಿ ಸಾರ್ವಜನಿಕ ಸಾರಿಗೆ ಬಳಸುವುದು ಹಾಗೂ ಸಾಧ್ಯವಾದಷ್ಟೂ ಪರಿಸರಪೂರಕ ವಾಹನಗಳನ್ನು ಬಳಸುವುದನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದು, ರಸ್ತೆಯಲ್ಲುಂಟಾಗುವ ಧೂಳಿನ ವಾಯುಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ರಸ್ತೆ ಮೂಲಸೌಕರ್ಯಗಳನ್ನು ಉತ್ತಮಗೊಳಿಸುವುದು ಹಾಗೂ ನಗರದಾದ್ಯಂತ ತ್ಯಾಜ್ಯಗಳನ್ನು ಸುಡುವುದನ್ನು ನಿಷೇಧಿಸಿ ಕಠಿಣ ಕ್ರಮಕೈಗೊಳ್ಳಬೇಕು ಎಂದಿದೆ.

  ಇಕಾಲಜಿಕಲ್ ಸೆಕ್ಯುರಿಟಿ ಆಫ್ ಇಂಡಿಯಾದ ಆಡಳಿತ ಮಂಡಳಿ ಸದಸ್ಯ ಡಾ. ಯಲ್ಲಪ್ಪ ರೆಡ್ಡಿಯವರು ಬೆಂಗಳೂರಿನಲ್ಲಿ ವಾಯುಮಾಲಿನ್ಯವು ಮಿತಿಮೀರಿದ್ದು, ಇದಕ್ಕಿಂತಲೂ ಹೆಚ್ಚಿನ ವಾಯುಮಾಲಿನ್ಯವನ್ನು ಮುಂದೆ ನಿರೀಕ್ಷಿಸಬಹುದಾಗಿದೆ. ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮಕೈಗೊಳ್ಳುವ ಮೂಲಕ ಬೆಂಗಳೂರು ನಗರ ಹಾಗೂ ಇಲ್ಲಿನ ಜನಜೀವನವನ್ನು ರಕ್ಷಿಸಬೇಕಿದೆ’ ಎನ್ನುತ್ತಾರೆ.
  ಸರಕಾರಿ ಇಲಾಖೆ ಅಧಿಕಾರಿಗಳು ತುರ್ತಾಗಿ ಕ್ರಮಕೈಗೊಳ್ಳಬೇಕು. ಸೂಚನೆಗಳನ್ನು ಪಾಲಿಸಬೇಕು. ಒಂದೊಮ್ಮೆ ಕೆಎಸ್‌ಪಿಸಿಬಿಯ ನಿರ್ದೇಶನಗಳನ್ನು ಸರಕಾರದ ಯಾವುದೇ ಇಲಾಖೆಯ ಅಧಿಕಾರಿಗಳು ಪಾಲಿಸದೇ ಇದ್ದಲ್ಲಿ ನೇರವಾಗಿ ಅವರ ವಿರುದ್ಧವೇ ಕ್ರಮ ಕೈಗೊಳ್ಳುವುದಕ್ಕೆ ಕೆಎಸ್‌ಪಿಸಿಬಿಯ ಆಡಳಿತಕ್ಕೆ ಅವಕಾಶವಿದೆ’ ಎನ್ನುತ್ತಾರೆ ಡಾ. ಯಲ್ಲಪ್ಪ ರೆಡ್ಡಿ.

  (ಲೇಖಕರು ಬೆಂಗಳೂರು ಮೂಲದ ಹವ್ಯಾಸಿ ಬರಹಗಾರರು ಹಾಗೂ ಭಾರತೀಯ ವರದಿಗಾರರ ಸಂಪರ್ಕ ಜಾಲವಾಗಿರುವ 101Reporters.com ನ ಸದಸ್ಯರು)
  Published by:Sushma Chakre
  First published: